Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಸಹೋದರ ನ ಬಾಲ್ಯದ ನೆನಪುಗಳು

ಸಹೋದರ ನ ಬಾಲ್ಯದ ನೆನಪುಗಳು

3 mins
280



ಥೀಮ್ : ಪರಸ್ಪರ ಬೆಂಬಲಿಸಿದ್ದು 


‘ಹೆಣ್ಣಿನಾ ಜನುಮಾಕೆ ಅಣ್ಣ ತಮ್ಮರು ಬೇಕು

ಬೆನ್ನು ಕಟ್ಟುವರು ಸಭೆಯೊಳಗೆ

ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ 

ಹೊನ್ನು ಕಟ್ಟುವರು ಉಡಿಯೊಳಗೆ


ಅಣ್ಣಾ ಬರುತಾನಂತ ಅಂಗಳಕೆ ಕೈಕೊಟ್ಟು 

ರನ್ನ ಬಚ್ಚಲಿಗೆ ಮಣೆ ಹಾಕಿ ಕೇಳೇನು

ತಣ್ಣಗಿರಲಣ್ಣ ತವರವರು 


ಪಂಚಮಿ ಹಬ್ಬ ಉಳಿದ್ಯಾವ ದಿನ ನಾಕ 

ಅಣ್ಣ ಬರಲಿಲ್ಲ ಯಾಕಾ ಕರ್ಯಾಕ‘


ಸಹೋದರ ಸಹೋದರಿಯರ ಸಂಬಂಧವನ್ನು ಈ ಮೇಲಿನ ಜನಪದಗೀತೆಗಳು ಬಹಳ ಸೊಗಸಾಗಿ ಬಿಂಬಿಸಿವೆ. "ಬ್ಲಡ್ ಈಸ್ ಥಿಕ್ಕರ್ ದ್ಯಾನ್ ವಾಟರ್" ಎಂಬ ಉಕ್ತಿಯಂತೆ, ಪ್ರಂಪಂಚದ ಎಲ್ಲಾ ಬಾಂಧವ್ಯಗಳಿಗಿಂತ, ಈ ಸೋದರ ಬಾಂಧವ್ಯ ತುಂಬಾ ಹತ್ತಿರವಾಗಿರುವಂತಹುದು. ಅದರಲ್ಲೂ ಒಬ್ಬ ಮದುವೆಯಾದ ಹೆಣ್ಣಿಗೆ ತನ್ನ ಸಹೋದರರ ಬಗ್ಗೆ ಎಂತಹ ಪ್ರೀತಿ ವಾತ್ಸಲ್ಯ ಹಾರೈಕೆಗಳಿರುತ್ತವೆ ಎಂಬುದನ್ನು ನಮ್ಮ ಜನಪದರು ತಮ್ಮ ಜಾನಪದ ಗೀತೆಗಳ ಮೂಲಕ ಸೊಗಸಾಗಿ ತಿಳಿಸಿದ್ದಾರೆ. ಇದರ ಆಧಾರದ ಮೇಲೆ ನಮ್ಮ ದೇಶದಲ್ಲಿ ಉತ್ತರದಿಂದ ದಕ್ಷಿಣದವರೆಗೂ,ಪೂರ್ವದಿಂದ ಪಶ್ಚಿಮದವರೆಗೂ ಈ ಸಹೋದರ ಸಹೋದರಿಯರ ಬಾಂಧವ್ಯವನ್ನು ಬೆಸೆಯುವ ನಾಗರ ಪಂಚಮಿ ಮತ್ತು ರಕ್ಷಾ ಬಂಧನ್ (ರಾಖಿ) ಎಂಬ ಹೆಸರಿನಲ್ಲಿ ಅದ್ದೂರಿಯಾದ ಹಬ್ಬದ ಆಚರಣೆ ರೂಢಿಗತವಾಗಿದೆ. ದಕ್ಷಿಣ ಭಾರತದಲ್ಲಿ, ನಾಗರಪಂಚಮಿಯ(ಶ್ರಾವಣ ಶುಕ್ಲ ಪಂಚಮಿ) ದಿನದಂದು ಹೆಣ್ಣು ಮಕ್ಕಳು ತಮ್ಮ ಸಹೋದರರಿಗೆ ಬೆನ್ನು ತೊಳೆದು ಸಿಹಿ ತಿನಿಸಿ, ಉಡುಗೊರೆಗಳನ್ನು ನೀಡುತ್ತಾರೆ. ಉತ್ತರ ಭಾರತ ದಲ್ಲಿ ಶ್ರಾವಣ ಪೂರ್ಣಿಮೆಯಂದು ಆಚರಿಸಲ್ಪಡುವ "ರಕ್ಷಾ ಬಂಧನ್" ಹಬ್ಬವು ,ನಮ್ಮ ನಾಗರಪಂಚಮಿಗೆ ಸಂವಾದಿಯಾಗಿ ನಡೆಯುವ ಹಬ್ಬ. ಇದರಲ್ಲಿಯೂ ಸಹೋದರಿ, ತನ್ನ ಸಹೋದರನಿಗೆ, "ರಾಖಿ" ಕಟ್ಟಿ ಉಡುಗೊರೆಗಳನ್ನು ನೀಡಿ, ಅವರಿಗೆ ಶುಭ ಕೋರುತ್ತಾರೆ. ಇದೊಂದು ಸಡಗರ ಸಂಭ್ರಮದ ಆಚರಣೆ. ಇತ್ತೀಚೆಗೆ ಈ ರಾಖಿ ಕಟ್ಟುವ ಸಡಗರ ಸಂಭ್ರಮಗಳು ಇಡೀ ಭಾರತದಲ್ಲಿ ವ್ಯಾಪಕವಾಗಿ ಹರಡಿದೆ. 


ಬಾಲ್ಯದ ನೆನಪುಗಳು


ಇಲ್ಲಿ ಮುಖ್ಯವಾಗಿ ನನಗೂ ನನ್ನ ಸಹೋದರನಿಗೂ ಇರುವ ಬಾಂಧವ್ಯದ ಬಗ್ಗೆ ತಿಳಿಸುವ ಒಂದು ಪುಟ್ಟ ಪ್ರಯತ್ನ ಮಾಡುತ್ತೇನೆ..ನನ್ನ ತಮ್ಮನ ಹೆಸರು ಶ್ರೀರಂಗಪ್ರಸಾದ. ವಯಸ್ಸಿನಲ್ಲಿ ನನಗಿಂತ ಹನ್ನೊಂದು ವರ್ಷ ಚಿಕ್ಕವನಾದ ನನ್ನ ತಮ್ಮನ ಜೊತೆ ಕಾಲೆಳೆದು ಜಗಳವಾಡುವ ಪ್ರಸಂಗ ನನಗೆ ಬರಲಿಲ್ಲ . ಆದರೆ ನಮ್ಮಿಬ್ಬರ ನಡುವೆ ಪರಸ್ಪರ ಪೀತಿ ವಿಶ್ವಾಸಗಳು, ಬೆಂಬಲಗಳಿಗೆ ಕೊರತೆ ಇಲ್ಲ . ನಾವು ಐವರು ಸಹೋದರಿಯರಿಗೆ ಇರುವವನು ಏಕೈಕ ಸಹೋದರ."ಸುಪುತ್ರಃ ಕುಲ ದೀಪಕಃ" ಎಂಬಂತೆ, ನನ್ನ ತಮ್ಮ,ಅತ್ಯಂತ ಒಳ್ಳೆಯ ಮನಸ್ಸಿನ, ಕುಲದ ಹೆಸರನ್ನು ಎತ್ತಿ ಹಿಡಿದ ಸುಪುತ್ರ. ನಮ್ಮೈವರಿಗೂ ಅತ್ಯಂತ ಪ್ರೀತಿ ಪಾತ್ರ. ಅವನೊಂದಿಗಿನ ನೆನಪುಗಳು ನನ್ನ ಮನದಲ್ಲಿ ಹಚ್ಚ ಹಸಿರು. 

ನಾವು ಚಿಕ್ಕವರಾಗಿದ್ದಾಗ ದೂರದರ್ಶನಗಳು ಮನೆ ಮನೆಯಲ್ಲಿ ಇರದಂತಹ ಸಮಯ. ಹೀಗಾಗಿ ನಾನು ನನ್ನ ಸಹೋದರ ಸಹೋದರಿಯರ ಜೊತೆ ಚೌಕಾಭಾರ, ಹಳಿಗೂಳಿಮಣೆ ,ಕುಂಟೆಪಿಲ್ಲೆ,ಟೆನಿಕಾಟ್, ಮುಂತಾದ ಆಟಗಳನ್ನು ಆಡಿದ ನೆನಪುಗಳು ನನ್ನ ಚಿತ್ತಭಿತ್ತಿಯಲ್ಲಿ ಭದ್ರವಾಗಿ ನೆಲೆಯೂರಿದೆ. ಆಟವೆಂದಾಗ ಸೋತವರು ಅಳುವುದು, ಗೆದ್ದವರು ಕೇಕೇ ಹಾಕುವುದು ಎಲ್ಲವೂ ನಮ್ಮಲ್ಲೂ ನಡೆಯುತ್ತಿದ್ದವು. ಅವನು ತುಂಬಾ ಹಠ ಮಾಡಿ, ನಮ್ಮ ತಂದೆಯವರಿಂದ ಏಟು ತಿಂದು ಅಳುತ್ತಿದ್ದಾಗ,ನಾನು ತುಂಬಾ ಅಳುತ್ತಾ, ಅವನನ್ನು ಎತ್ತಿಕೊಂಡು ಬೀದಿಗೆ ಕರೆದೊಯ್ದು, ಸಮಾಧಾನ ಮಾಡಿಕೊಂಡು ಮನೆಗೆ ಕರೆದುಕೊಂಡು ಬರುತ್ತಿದ್ದ,ಆ ಅವನ ಬಾಲ್ಯದ ನೆನಪು ನಾನೆಂದಿಗೂ ಮರೆಯಲಾರೆ. ಅವನೊಟ್ಟಿಗಿನ ಬಾಲ್ಯದ ಮತ್ತೊಂದು ನೆನಪೆಂದರೆ, ಒಮ್ಮೆ ಅವನು ನಾಲ್ಕು ವರ್ಷದವನಾಗಿದ್ದಾಗ, ಬೀದಿಯಲ್ಲಿ ಆಡುತ್ತಿದ್ದವನನ್ನು ಯಾರೋ ಇಬ್ಬರು ಹೆಂಗಸರು ಎತ್ತಿಕೊಂಡು ಹೋಗಿದ್ದು, ಅವನಿಗಾಗಿ ನಾವೆಲ್ಲಾ ಹುಡುಕಾಡಿ, ಕಡೆಗ ನಮ್ಮ ಕುಟುಂಬದ ಆಪ್ತಮಿತ್ರರ ದೆಸೆಯಿಂದ ಅವನು ನಮಗೆ ಮತ್ತೆ ಸಿಕ್ಕಿದ್ದು,......ಇಂದಿಗೂ ಮೈಜುಂ ಎನ್ನಿಸುವುದು ಅವನ ಈ ಬಾಲ್ಯದ ನೆನಪು.


ಪರಸ್ಪರ ಬೆಂಬಲಿಸುವಿಕೆ 


ನನಗೂ ನನ್ನ ತಮ್ಮನಿಗೂ ಹನ್ನೊಂದು ವರ್ಷದ ವಯಸ್ಸಿನ ದೊಡ್ಡ ಅಂತರವಿದ್ದರೂ ,ಸಹೋದರಿಯ ಕಷ್ಟಕ್ಕೆ ಸ್ಪಂದಿಸುತ್ತಾ, ಸಹಾಯ ಮಾಡುವ ಅವನ ದೊಡ್ಡ ಗುಣ ಮನಸ್ಸಿನಲ್ಲಿ ಸದಾ ಹಸಿರಾಗಿದೆ. ಅವನು ಓದು ಮುಗಿಸಿ,ಸೌದಿ ಅರೇಬಿಯ,ದುಬಾಯಿ,ಮುಂಬೈ ಗಳಿಗೆ ಹೊರಟಾಗ, ನನಗಾದ ಆನಂದ ಅಪಾರ. ಇಪ್ಪತ್ತು ವರ್ಷದ ಅವನು ನನ್ನ ಕಣ್ಣಿಗೆ ಚಿಕ್ಕಮಗು. ಅವನು ವಿದೇಶಕ್ಕೆ ಹೋಗುತ್ತಿರುವುದು ಒಂದು ಕಡೆ ಖುಷಿಯಾದರೆ ಮತ್ತೊಂದು ಕಡೆ ಆತಂಕ. ಇಷ್ಟು ಚಿಕ್ಕ ಹುಡುಗ ಹೊರದೇಶದಲ್ಲಿ ಏನೇನು ಕಷ್ಟ ಪಡುತ್ತಾನೋ? ಎಂಬ ನನ್ನ ಆತಂಕ, ಅವನು ಅಲ್ಲಿಗೆ ಹೋಗಿ ಅಲ್ಲಿ ಎಲ್ಲವೂ ಸರಿಯಾಗಿದೆ ಎಂದು ತಿಳಿಸುವ ತನಕ ಕಡಿಮೆಯಾಗಲಿಲ್ಲ . ಆದರೆ ಅವನು ಒಂದು ವರ್ಷ ಕಳೆದ ಬಳಿಕ ಭಾರತಕ್ಕೆ ಬಂದಾಗ, ತನ್ನ ಸಹೋದರಿಯರೆಲ್ಲರಿಗೂ ಗಿಫ್ಟ್ ಹಿಡಿದುಕೊಂಡು ಬಂದಾಗ, ತುಂಬಾ ಹೆಮ್ಮೆ ಎನಿಸಿತು .ನಂತರ ಅವನು ಹೋಗುವಾಗ,ವಿಮಾನ ಹತ್ತಿಸಿ ಬರುವುದು, ಅವನು ವಾಪಸ್ ಬರುವಾಗ ವಿಮಾನನಿಲ್ದಾಣದಿಂದ ಮನೆಗೆ ಕರೆದುಕೊಂಡು ಬರುವುದು ಎಲ್ಲವೂ ಇಂದಿಗೂ ಸಿಹಿ ಸಿಹಿ ನೆನಪುಗಳು. ಅವನ ಮದುವೆಯಲ್ಲಿ ಹಿರಿಯಕ್ಕನ ಪಾತ್ರದ ನನ್ನ ಓಡಾಟ ಸಂಭ್ರಮಗಳು, ಅವನು ತೆಗೆದುಕೊಳ್ಳುತ್ತಿದ್ದ ಪ್ರತಿ ನಿರ್ಧಾರವನ್ನೂ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದುದು , ಎಲ್ಲವೂ ಇಂದಿಗೂ ನನ್ನ ನೆನಪಿನ ಬುತ್ತಿಗಳಾಗಿ ಉಳಿದಿವೆ.

 


ನನ್ನ ಜೀವನದಲ್ಲಿ ಅನಿರೀಕ್ಷಿತವಾದ ಕಹಿ ಘಟನೆಗಳು ಜರುಗಿ, ನಾನು ಒಬ್ಬಂಟಿಯಾಗಿ ಕಂಗಾಲಾದಾಗ, ನನ್ನ ಜೊತೆ ಜೊತೆಗೆ ನಿಂತು, ಧೈರ್ಯ ತುಂಬಿ,ನನ್ನ ಮಗಳ ಮದುವೆ,ಮಗನ ಉಪನಯನ, ಎಲ್ಲಾ ಸಮಾರಂಭಗಳಲ್ಲೂ ನನಗೆ ಸಂಪೂರ್ಣ ಸಹಕಾರ ನೀಡಿದ, ನೀಡುತ್ತಿರುವ ನನ್ನ ತಮ್ಮನ ಬೆಂಬಲ ವಿಲ್ಲದಿದ್ದರೆ, ನಾನು ಹೇಗಿರುತ್ತಿದ್ದೆನೋ ನನಗೇ ಗೊತ್ತಿಲ್ಲ. ಬೀಗರ ಮನೆಗೆ ಹೋಗಿ ಮಾತನಾಡಿಕೊಂಡು ಬರುವುದರಿಂದ ಮೊದಲ್ಗೊಂಡು,ಹುಡುಗಿಯನ್ನು ಗಂಡನ ಮನೆ ಸೇರಿಸುವತನಕ,ನನ್ನ ಜೊತೆ ಜೊತೆಗೇ ನಿಂತು ಎಲ್ಲಾ ಜವಾಬ್ದಾರಿಯನ್ನೂ ಹೊತ್ತು ನನ್ನ ಮಗಳ ಮದುವೆಯನ್ನು ಯಶಸ್ವಿಯಾಗುವಂತೆ ಮಾಡಿದ ಅವನ ಈ ಬೆಂಬಲವನ್ನು ನಾನು ಮರೆಯುವಂತೆಯೇ ಇಲ್ಲ.ಮುಂದೆ ನನ್ನ ಮಗಳ ಡೆಲಿವೆರಿ ಸಮಯದಲ್ಲಿ, ನಾನು ಬೇಡ ಬೇಡವೆಂದರೂ,ನನ್ನ ಜೊತೆಗೆ ಅವನ ಹೆಂಡತಿಯನ್ನು ನಮ್ಮ ಮನೆಗೆ ಕಳುಹಿಸಿಕೊಟ್ಟು, ನನಗೆ ಸಹಕಾರ ನೀಡಿದ ಅವನ ಉಪಕಾರವನ್ನು ನಾನು ಮರೆಯುವುದುಂಟೆ ? ನಿಜಕ್ಕೂ ನಾವು ಐವರು ಸಹೋದರಿಯರಿಗೆ ಒಬ್ಬನೇ ತಮ್ಮನಾದರೂ, ಎಲ್ಲರ ಕಷ್ಟ ಸುಖಗಳಲ್ಲೂ ಮರುಗಿ ಸಹಾಯ ಹಸ್ತ ನೀಡಿ, ನಮಗೆ ಧೈರ್ಯ ತುಂಬುತ್ತಾ, ಬೆಂಬಲ ನೀಡುತ್ತಿರುವ ನನ್ನ ತಮ್ಮ ನಮಗೆ ದೇವರು ಕೊಟ್ಟ ವರವೆಂದೇ ಭಾವಿಸುತ್ತೇನೆ. ಅದೇ ರೀತಿ ಅವನ ಕಷ್ಟಸುಖಗಳಲ್ಲಿ ನಾವು ಐವರು ಸಹೋದರಿಯರೂ ಅವನಿಗೆ ಬೆಂಬಲ ನೀಡುತ್ತೇವೆ. ಈಗ ಎರಡು ತಿಂಗಳ ಹಿಂದೆ ಅವನಿಗೆ ಅನಾರೋಗ್ಯವಾಗಿ ಆಸ್ಪತ್ರೆ ಸೇರಿದಾಗ,ನಾವೆಲ್ಲರೂ ತುಂಬಾ ಸಂಕಟಪಟ್ಟು, ಹಲವು ದೇವರಿಗೆ ಹರಕೆಹೊತ್ತು, ಅವನು ಮನೆಗೆ ಬರುವವರೆಗೂ ಅವನ ಮನೆಯಲ್ಲೇ ಇದ್ದು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡೆವು.  


ನನ್ನ ಮಕ್ಕಳ ಪ್ರೀತಿಯ ಸೋದರಮಾವನಾಗಿ ಅವನು ಅವರಿಗೆ ತಂದುಕೊ ಡುತ್ತಿದ್ದಗಿಫ್ಟ್ ಗಳಂತೂ ಲೆಕ್ಕಕ್ಕಿಲ್ಲ. ಮುಂದೆ ನನ್ನ ಮಗಳ ಮದುವೆಯಾದ ಮೇಲೆ ನಡೆಯ ಬೇಕಾಗಿದ್ದ, ನಾಮಕರಣ ಮುಂತಾದ ಸಮಾರಂಭಗಳಲ್ಲೂ ನನಗೆ ಬೆಂಬಲವಾಗಿದ್ದು, ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವುದರಲ್ಲಿ, ಅದರ ಹಿಂದೆ ಇದ್ದ ನನ್ನ ತಮ್ಮನ ಸಹಕಾರವನ್ನು ನಾನೆಂದಿಗೂ ಮರೆಯಲಾರೆ. 


ಇಂತಹ ರಕ್ತ ಸಂಬಂಧದ ಕೊಂಡಿಯನ್ನು ಬಿಗಿಗೊಳಿಸುವ, ಈ ರಕ್ಷಾಬಂಧನವು ಅವನಿಗೆ ಶ್ರೀ ರಕ್ಷೆಯಾಗಿ, ದೇವರು ಅವನಿಗೆ ಆಯುರಾರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.



Rate this content
Log in

Similar kannada story from Abstract