ಕಿಟಕಿಯ ಸರಳುಗಳ ಹಿಂದೆ ನಿಂತು, ತನಗಾಗಿ ಇಂದು ಬರಲಿರುವ ಹುಡುಗನನ್ನು ನೋಡಲು ಕಾತರಳಾಗಿದ್ದಳು ರೂಪ. ಹೆಸರಿಗೆ ತಕ್ಕಂತೆ ರೂಪವತಿಯಾಗಿರುವ ಅವಳಿಗೆ ಇದುವರೆಗೂ ಯಾವ ಗಂಡುಗಳೂ ತನಗೆ ತಕ್ಕ ಜೋಡಿ ಎನಿಸಿರಲಿಲ್ಲ. ಹೀಗಾಗಿ ಅವಳು ಸುಮಾರು ಜನ ಹುಡುಗರನ್ನು ತಿರಸ್ಕರಿಸುತ್ತಲೇ ಬಂದಿದ್ದಳು. ಇದರಿಂದ ಅವಳು ಅವಳ ಅಮ್ಮನ ಆಗ್ರಹಕ್ಕೂ ಒಳಗಾಗಿದ್ದಳು. ರೂಪಳ ತಾಯಿಗೆ ಮಗಳಿಗೆ ಬುದ್ಧಿ ಹೇಳಿ ಸಾಕಾಗುತ್ತಿತ್ತು. ಸ್ವತಃ ಸಾಫ಼್ಟ್ವೆ ಇಂಜಿನಿಯರ್ ಆಗಿರುವ ಅವಳು, ತನಗೆ ಅನುಗುಣವಾಗಿರುವ ವರನಿಗಾಗಿ ಅರಸುತ್ತಿದ್ದಳು. ಅವಳ ದೃಷ್ಟಿಯಲ್ಲಿ ಹುಡುಗ ತುಂಬಾ ಸ್ಮಾರ್ಟ್ ಆಗಿರಬೇಕೆನ್ನುವುದು. ಆದರೆ ಇಪ್ಪತ್ತೆಂಟು ತುಂಬಿರುವ ಅವಳಿಗೆ ತುಂಬಾ ಸ್ಮಾರ್ಟ್ ಆಗಿರುವ ಹುಡುಗರು ಸಿಕ್ಕುವುದೇ ಕಷ್ಟವಾಗಿತ್ತು. ರೂಪಳ ತಾಯಿ ಅವಳಿಗೆ,’ಜೀವನ ನಡೆಸುವುದಕ್ಕೆ ಗುಣ ಮುಖ್ಯವೇ ಹೊರತು ರೂಪವಲ್ಲ, ಈ ಬಾಹ್ಯ ಸೌಂದರ್ಯವೆನ್ನುವುದು
ಶಾಶ್ವತವಲ್ಲ, ವಯಸ್ಸು ಕಳೆದಂತೆ ಮಾಸಿ ಹೋಗುತ್ತದೆ. ಇದರ ಬಗ್ಗೆ ಯೋಚಿಸು’ ಅಂತ ಹೇಳುತ್ತಿದ್ದರು.
ಹೀಗೆ ಅಮ್ಮನ ಉಪದೇಶ ಕೇಳಿ ಕೇಳಿ ರೂಪಳಿಗೂ ಸಾಕಾಗಿತ್ತು. ಆದರೆ ತನ್ನ ಮನಸ್ಸು ಬಯಸುವ ಹುಡುಗ ಸಿಕ್ಕದೇ ಮದುವೆಯಾಗುವುದು ಸಾಧ್ಯವೇ ಇಲ್ಲ ವೆಂದು ಅವಳು ನಿರ್ಧರಿಸಿದ್ದಳು.
ಇಂದು ಬರುತ್ತಿರುವ ಹುಡುಗ ಎಂ .ಟೆಕ್.ಮಾಡಿ ಎಂ.ಎನ್.ಸಿ.ಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ, ಸಾಕಷ್ಟು ಸಿರಿವಂತರೂ ಸಹ. ವಿದ್ಯೆ,ಹುದ್ದೆ,ಹಣ ಎಲ್ಲವೂ ಇರುವಾಗ ಇನ್ನೇನು? ಅನ್ನುವುದು ರೂಪಳ ಅಮ್ಮನ ವಾದ. ಆದರೆ ಫೋಟೊ ದಲ್ಲಿ ಅವನನ್ನು ನೋಡಿದ್ದ ರೂಪಳಿಗೆ ಅವನು ನೋಡಲು ಸುಮಾರು ಅನ್ನಿಸುತ್ತಿತ್ತು.
ಯಾವುದಕ್ಕೂ ಒಮ್ಮೆ ಮುಖಾಮುಖಿಯಾಗಿ ನೋಡಿ ಬಿಟ್ಟರೆ ಎಲ್ಲವೂ ಕ್ಲಿಯರ್ ಆಗಿ ಹೋಗುತ್ತದೆ ಎಂದುಕೊಂಡು, ಹುಡುಗನನ್ನು ನೋಡಲು ಕಿಟಿಕಿಯ ಹತ್ತಿರ ನಿಂತಿದ್ದಳು.
ತನ್ನದೇ ಕಲ್ಪನೆಯಲ್ಲಿ ಕನಸು ಕಾಣುತ್ತಾ ನಿಂತಿದ್ದ ರೂಪಳಿಗೆ ಮನೆಯ ಮುಂದೆ ಕಿಯಾ ಕಾರ್ ನಿಂತಾಗ, ಅವಳ ದೃಷ್ಟೀ ಇದ್ದಕ್ಕಿದ್ದಂತೆ ಕಾರಿನ ಕಡೆ ನಿಂತಿತು. ಮೊದಲು ಕಾರಿನಿಂದ ಹುಡುಗನ ತಂದೆ,ತಾಯಿ, ಮತ್ತೊಬ್ಬ ಹುಡುಗಿ ಇಳಿದಾಗ, ಅವಳ ಕಣ್ಣು ಹುಡುಗನನ್ನು ಅರಸುತ್ತಿತ್ತು. ಕಡೆಗೂ ಕಾರಿನ ಕೀ ತಿರುಗಿಸುತ್ತಾ, ಕಣ್ಣಿಗೆ ತಂಪು ಕನ್ನಡಕ ಹಾಕಿಕೊಂಡು, ಬರುತ್ತಿದ್ದ ವ್ಯಕ್ತಿಯನ್ನು ನೋಡಿ, ಅವನೇ ಹುಡುಗ ಇರಬಹುದು ಅಂದುಕೊಂಡು, ಅವನ ಕಡೆಗೇ ದಿಟ್ಟಿಸಿದಳು. ಅವಳಿಗೆ ನಿರಾಸೆಯಾಯಿತು. ಕಪ್ಪು ಬಣ್ಣದ ಹುಡುಗ, ಸುಮಾರಾದ ರೂಪ, ಈಗ ಏನು ಮಾಡುವುದು? ನಿರಾಸೆಯಿಂದ ಹಾಗೇ ಸಪ್ಪೆಯಾಗಿ ಕುಳಿತು ಬಿಟ್ಟಳು.
ಸ್ವಲ್ಪ ಹೊತ್ತಿನ ನಂತರ ಅವಳ ಅಮ್ಮ ರೂಮಿನೊಳಗೆ ಬಂದು, ರೂಪಳನ್ನು ಹೊರಗೆ ಕರೆದುಕೊಂಡು ಹೊರಟಾಗ, ರೂಪ ತಾನು ಈ ಹುಡುಗನನ್ನು ಮದುವೆಯಾಗುವುದಿಲ್ಲವೆಂದು ಕಡಾ ಖಂಡಿತವಾಗಿ ಹೇಳಿ ಬಿಟ್ಟಾಗ, ರೂಪಳ ಅಮ್ಮ ಅವಳಿಗೆ ಹೇಗೋ ಸಮಾಧಾನ ಪಡಿಸಿ ಕರೆದುಕೊಂಡು ಹೋದರು.
ರೂಪ ಹುಡುಗನನ್ನು ಸರಿಯಾಗಿ ನೋಡಲೂ ಇಲ್ಲ, ಮಾತನಾಡಿಸಲೂ ಇಲ್ಲ. ಬಂದವರೆಲ್ಲ ಹೊರಟ ನಂತರ ತನಗೆ ಈ ಹುಡುಗ ಇಷ್ಟವಿಲ್ಲವೆಂದು ಹೇಳಿ ಬಿಟ್ಟು ಹಗುರವಾದಳು.ಮಗಳ ಖಡಾಖಂಡಿತವಾದ ಮಾತುಗಳಿಂದ ರೂಪಳ ಅಮ್ಮನಿಗೆ ಮಗಳ ಮೇಲೆ ತುಂಬಾ ಬೇಸರವಾಯಿತು.
***********
ಮುಂದೆ ಒಂದೆರಡು ತಿಂಗಳು ಕಳೆಯಿತು. ಶ್ಯಾಂ ಬಂದು ಹೋದ ನಂತರ ರೂಪಳಿಗೆ ಮತ್ತೆ ಯಾವ ಪ್ರಪೋಸಲ್ ಬರಲಿಲ್ಲ. ಅವಳು ನೆಮ್ಮದಿಯಿಂದ ಆಫ಼ೀಸ್ ಮನೆ ಅಂತ ಇದ್ದು ಬಿಟ್ಟಳು.
ಒಂದು ದಿನ ರೂಪ ಆಫ಼ೀಸ್ ಮುಗಿಸಿ ಹೊರಟಾಗ ಒಂಭತ್ತು ಗಂಟೆಯಾಗಿತ್ತು. ಅಂದು ಅವಳಿಗೆ ಕ್ಯಾಬ್ ಸಿಗುವುದೂ ಕಷ್ಟವಾಗಿ, ಅದನ್ನು ಹುಡುಕುತ್ತಾ ನಿಂತಿದ್ದಾಗ, ಪಟಪಟನೆ ಮಳೆಯೂ ಶುರುವಾಗಿ ಹೋಯಿತು.
ಅವಳಿಗೂ ಸ್ವಲ್ಪ ಆತಂಕ ಶುರುವಾಯಿತು. ಈ ಮಳೆಯಲ್ಲಿ ಯಾವ ಕ್ಯಾಬ್ ಸಿಗುತ್ತದೋ ಇಲ್ಲವೋ ಅಂತ ಯೋಚನೆಯಾಗಿ ಅಲ್ಲೇ ಇದ್ದ ಮರದ ಕೆಳಗೆ ನಿಂತು, ಆಟೊಗಾಗಿ ಕೈ ಬೀಸುತ್ತಾ ನಿಂತಿದ್ದಳು. ಸುಮಾರು ಅರ್ಧ ಗಂಟೆಯಾದರೂ ಒಂದು ಆಟೊವಾಗಲೀ ಕ್ಯಾಬ್ ಆಗಲೀ ಸಿಗದಿದ್ದಾಗ, ಅವಳಿಗೆ ದಿಕ್ಕು ತೋಚದೇ ಪರದಾಡುತ್ತಿದ್ದಳು.
ಆ ವೇಳೆಗೆ ಅವಳ ಮುಂದೆ ಒಂದು ಕಿಯೋ ಬಂದು ನಿಂತಾಗ ಅವಳಿಗೆ ಭಯವಾಯಿತು. ಆದರೆ ಡ್ರೈವರ್ ಸೀಟಿನಿಂದ ಶ್ಯಾಂ ಇವಳನ್ನು ಕಾರು ಹತ್ತುವಂತೆ ಹೇಳಿದಾಗ, ಅವಳಿಗೆ ಏನು ಮಾಡುವುದೆಂದು ತಿಳಿಯಲಿಲ್ಲ.
ಸ್ವಲ್ಪ ಹೊತ್ತು ಯೋಚಿಸುತ್ತಾ ನಿಂತಿದ್ದಾಗ, ಶ್ಯಾಂ ತಾನೇ ಕಾರಿನಿಂದ ಕೆಳಗಿಳಿದು ಛತ್ರಿ ಹಿಡಿದು ಅವಳನ್ನು ಒಳಗೆ ಕೂರುವಂತೆ ಹೇಳಿದಾಗ, ರೂಪಳಿಗೆ ಅವನು ಹೇಳಿದಂತೆ ಕೇಳದೆ ವಿಧಿ ಇರಲಿಲ್ಲ. ಅವನ ಹಿಂದೆಯೇ ಹೋಗಿ ಕಾರು ಹತ್ತಿ ಕುಳಿತು,
"ಥ್ಯಾಂಕ್ಯು" ಅಂತ ಹೇಳಿದಳು.
ಮನೆಯ ಹತ್ತಿರ ಅವಳನ್ನು ಡ್ರಾಪ್ ಮಾಡಿದಾಗ, ಅವನಿಗೆ ಮತ್ತೊಮ್ಮೆ ಥ್ಯಾಂಕ್ಸ್ ಹೇಳುವಾಗ ಅವನ ನೋಟ ಇವಳೊಂದಿಗೆ ಬೆರೆಯಿತು. ಇವಳ ಮುಖದಲ್ಲಿ ನಾಚಿಕೆ ತುಂಬಿ ಹೋಯಿತು,
ಅವನು ಇವಳಿಗೆ ಕೈ ಬೀಸಿ ಕಾರ್ ಸ್ಟಾರ್ಟ್ ಮಾಡಿ ಹೊರಟಾಗ, ರೂಪ ಅವನು ಹೋದ ದಿಕ್ಕನ್ನೇ ಒಂದು ಕ್ಷಣ ನೋಡುತ್ತಾ ನಿಂತಿದ್ದಳು. ಅವನ ಬಗ್ಗೆ ಅವಳ ಅಭಿಪ್ರಾಯ ಬದಲಾಗಿತ್ತು. ಅವನೊಬ್ಬ ಒಳ್ಳೆಯ ವ್ಯಕ್ತಿ ಎನ್ನಿಸಿತ್ತು. ಮೊದಲ ಬಾರಿ, ಅವಳಿಗೆ ಹೊರಗಿನ ಬಾಹ್ಯ ಸೌಂದರ್ಯಕ್ಕಿಂತ,ಒಳ್ಳೆಯ ಹೃದಯ ಮುಖ್ಯವೆನ್ನುವುದು ತಿಳಿಯಿತು. ಇಂದು ಅವನು ಸಮಯಕ್ಕೆ ಸರಿಯಾಗಿ ಸಿಗದಿದ್ದರೆ, ತನ್ನ ಕಥೆ ಏನಾಗುತ್ತಿತ್ತೋ?
ತಾನು ಅವನನ್ನು ತೊಇರಸ್ಕರಿಸಿದರೂ, ಅವನು ತನಗೆ ಸಹಾಯ ಮಾಡಿದ್ದ. ಹಿತಮಿತವಾದ ಮಾತುಗಳು ಅವಳಿಗೆ ತುಂಬಾ ಹಿಡಿಸಿತ್ತು. ಇಂತಹ ವ್ಯಕ್ತಿಯನ್ನು ತಾನು ತಿರಸ್ಕರಿಸಿದ್ದರ ಬಗ್ಗೆ ಅವಳಿಗೇ ನಾಚಿಕೆಯಾಗುತ್ತಿತ್ತು.
************
ಹೀಗೆ ಶುರುವಾದ ಅವರಿಬ್ಬರ ಸ್ನೇಹ ಮುಂದುವರಿಯುತ್ತಾ ಹೋಗಿ, ಕಡೆಗೆ ಒಂದು ದಿನ ರೂಪ ತಾನು ಶ್ಯಾಮ್ ನನ್ನೆ ಮದುವೆಯಾಗುತ್ತೇನೆ ಅಂತ ತನ್ನ ಅಮ್ಮನೊಂದಿಗೆ ಹೇಳಿದಾಗ, ಮಗಳ ಮಾತನ್ನು ಕೇಳಿ ಅವರಿಗೆ ಆಶ್ಚರ್ಯವಾಯಿತು. ಅಂತೂ ತಮ್ಮ ಮಗಳಿಗೆ ಬಿಳಿ ತೊಗಲಿನ ಬಗ್ಗೆ ವ್ಯಾಮೋಹ ಹೋಯಿತಲ್ಲ ಎಂದು ಕೊಂಡ ಅವರು, ಮುಂದೆ ಒಂದು ದಿನ ಶ್ಯಾಂ ನ ಮನೆಗೆ ಹೋಗಿ ಮದುವೆಯ ಮಾತುಕತೆಗಳನ್ನು ಮುಗಿಸಿ ಬಂದರು.
ಬ್ರಹ್ಮಗಂಟನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲವೆನ್ನುವುದು ನಿಜವಾದರೂ, ರೂಪಳಿಗೆ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವನ್ನು ಗುರುತಿಸುವುದು ಸಾಧ್ಯವಾಗಿದ್ದರಿಂದ, ಅವಳು ಶ್ಯಾಂ ನ ಕಪ್ಪು ಬಣ್ಣವನ್ನು ಮರೆತು ಅವನ ಒಳ್ಳೆಯ ಹೃದಯವನ್ನು ಮೆಚ್ಚಿಕೊಂಡದ್ದು ಎಲ್ಲರಿಗೂ ಸಂತೋಷವಾಗಿತ್ತು.
ಶುಭ ಮುಹೂರ್ತದಲ್ಲಿ ರೂಪಳ ಮದುವೆಯನ್ನು ನೀಲಮೇಘ ಶ್ಯಾಮನ ಜೊತೆ ಅದ್ಧೂರಿಯಾಗಿ ನಡೆಸಿಕೊಟ್ಟರು.
ಮದುವೆಯಾಗಿ ಶ್ಯಾಂ ನ ಮನೆಯನ್ನು ಪ್ರವೇಶಿಸಿದ ರೂಪಳಿಗೆ ’ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ’
ಸಿನಿಮಾಗೀತೆ ನೆನಪಾಗುತ್ತಿತ್ತು.
ವಿಜಯಭಾರತೀ ಎ.ಎಸ್.