ವೆಂಕಜ್ಜಿಯ ಬುದ್ಧಿವಂತಿಕೆ- ೨
ವೆಂಕಜ್ಜಿಯ ಬುದ್ಧಿವಂತಿಕೆ- ೨
ವೆಂಕಜ್ಜಿ ಮೊಬೈಲ್ ಹಿಡಿದು ಕಾಲ ಕಳೆದರೂ ಮನೆಯ ಆಗುಹೋಗುಗಳನ್ನು ಗಮನಿಸುತ್ತಿದ್ದರು. ನಾಲ್ಕು ದಿನ ಮಗನ ಮನೆಯಲ್ಲಿ ಇದ್ದು ಪುನಹ ತನ್ನ ಹಳ್ಳಿ ಮನೆಗೆ ಹೋದ ವೆಂಕಜ್ಜಿ ಮಗ ಸೊಸೆಯ ಮಧ್ಯೆ ಏನೋ ಸರಿ ಇಲ್ಲ ಎಂಬ ಭಾವ ಮೂಡಿತು. ಎರಡು ದಿನಕೊಮ್ಮೆ ಫೋನ್ ಮಾಡುವ ರೂಢಿಯನ್ನು ಬೆಳೆಸಿಕೊಂಡಿದ್ದ ಸೊಸೆ ಈ ಬಾರಿ ಕರೆ ಮಾಡಿದಾಗ ಮೌನ ಮುರಿದು ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಬೇಕೆಂದು ವೆಂಕಜ್ಜಿ ತೀರ್ಮಾನಿಸಿದ್ದರು.
ವೆಂಕಜ್ಜಿಗೆ ವರ್ಷ 60ರ ಗಡಿಯಲ್ಲಿದ್ದರೂ ಅಚ್ಚುಕಟ್ಟಾಗಿ ಸೀರೆ ಉಟ್ಟು ದಿನಕ್ಕೆರಡು ಬಾರಿ ತಲೆ ಬಾಚಿಕೊಂಡು ಉದ್ದವಾಗಿದ್ದ ಕೂದಲನ್ನು ತುರುಬಿನ ರೂಪದಲ್ಲಿ ಕಟ್ಟಿ ಹಣೆಗೆ ಕಪ್ಪು ಬಿಂದಿಯನ್ನು ಇಟ್ಟು ಎರಡು ಕೈಯಲ್ಲಿ ಒಂದೊಂದು ಚಿನ್ನದ ಬಳೆಯನ್ನು ಧರಿಸಿ ಅಚ್ಚುಕಟ್ಟಾಗಿರುತ್ತಿದ್ದರು. ಗಂಟೆಗೆ ಒಮ್ಮೆ ಎಲೆ ಅಡಿಕೆ ಹಾಕುವ ಅಭ್ಯಾಸದಿಂದ ತುಟಿ ಸದಾ ರಂಗಾಗಿಯೇ ಇರುತ್ತಿತ್ತು. ಯಾವುದೇ ಲಿಪ್ಸ್ಟಿಕ್ ನ ಅವಶ್ಯಕತೆ ವೆಂಕಜ್ಜಿಗೆ ಇರಲಿಲ್ಲ.ಮಗನ ಮನೆಯೆಂದು ನಾಲ್ಕು ದಿನದ ಮಟ್ಟಿಗೆ ಹೋದ ವೆಂಕಜ್ಜಿ ಸೊಸೆ ಲಕ್ಷ್ಮಿಯನ್ನು ಗಮನಿಸಿದ್ದರು. ಮನೆ ಹಾಗೂ ಮಕ್ಕಳ ಕೆಲಸದಲ್ಲಿ ತನ್ನನ್ನು ತಾನು ಮರೆತು ಬಹಳ ಕಳೆಗುಂದಿದ್ದನ್ನು ಕಂಡು ವೆಂಕಜ್ಜಿಯ ಮನಸ್ಸು ಮರುಗಿತ್ತು. ಸೊಸೆಯನ್ನು ಮಗಳಂತೆ ಕಾಣುತ್ತಿದ್ದ ವೆಂಕಜ್ಜಿ ಮುಚ್ಚು ಮರೆ ಇಲ್ಲದೆ ಸೊಸೆಯ ಬಳಿ ಎಲ್ಲವನ್ನು ಮುಕ್ತವಾಗಿ ಮಾತನಾಡುತ್ತಿದ್ದರು. ಯಾವುದೇ ರೀತಿಯ ಕೊಂಕು ಮಾತುಗಳಾಗಲಿ ಅಥವಾ ಮನ ನೋವಾಗುವಂತೆ ಮಾತನಾಡುವ ಪರಿಪಾಠ ಇಬ್ಬರ ಬಳಿಯಲ್ಲಿಯೂ ಇರಲಿಲ್ಲ.
ಸೊಸೆಯ ಫೋನ್ಗಾಗಿ ಕಾಯುತ್ತಿದ್ದ ವೆಂಕಜ್ಜಿ ಕುಶಲೋಪರಿ ವಿಚಾರಿಸಿ ನೇರವಾಗಿ ಮಾತಿಗಿಳಿದರು.
ಅಲ್ವೇ ಲಕ್ಷ್ಮಿ.. "ನಾನಿದ್ದ ಒಂದು ವಾರ ನೀವು ಗಂಡ ಹೆಂಡತಿ ಸರಿಯಾಗಿ ಕೂತು ಮಾತನಾಡಿದ್ದನ್ನು ಗಮನಿಸಲೇ ಇಲ್ಲ. ಎಲ್ಲವೂ ಸೌಖ್ಯ ತಾನೇ ಇಬ್ಬರ ಮಧ್ಯೆ ಏನಾದರೂ ಮನಸ್ತಾಪ ಉಂಟೇ"?
ಅತ್ತೆಯ ಮಾತಿಗೆ ಮೊದಲು ಇಲ್ಲವೆಂದು ಮಾತು ತೇಲಿಸಲು ಪ್ರಯತ್ನಿಸಿದ ಲಕ್ಷ್ಮಿಯ ಧ್ವನಿಯಲ್ಲಿ ಇದ್ದ ನೋವಿನ ಛಾಯೆ ಗಮನಿಸಿದ ವೆಂಕಜ್ಜಿ.."ಏನು ಮುಚ್ಚಿಡುತ್ತಿರುವ ಹೇಳು ಮಗಳೇ, ಸರಿ ಮಾಡುವ ಪ್ರಯತ್ನ ಮಾಡುತ್ತೇನೆ" ಎಂಬ ಮಾತಿಗೆ ಜೋರಾಗಿ ಅಳುತ್ತಾ" ಅತ್ತೆ ನಿಮ್ಮ ಮಗ ಮುಂಚಿನ ಹಾಗೆ ಇಲ್ಲ. ಮನೆಗೆ ಬರುವುದೇ ತಡವಾಗಿ... ಬಂದವರು ಮಕ್ಕಳೊಡನೆ ಕೊಂಚ ಮಾತನಾಡಿ ಊಟ ಮಾಡಿ ಮಲಗುತ್ತಾರೆ ನನ್ನೊಡನೆ ಮುಂಚಿನಂತೆ ಅವರು ಸಮಯ ಕಳೆಯಲು ಇಚ್ಚಿಸುತ್ತಿಲ್ಲ" ಎಂದು ಮನದಲ್ಲಿ ಅಡಗಿಸಿಟ್ಟ ಮಾತುಗಳನ್ನು ಹೊರ ಹಾಕಿದಳು.
"ಅಯ್ಯೋ ಹುಚ್ಚಿ! ಇಷ್ಟೇನಾ ವಿಚಾರ. ಇದಕ್ಕೆ ಪರಿಹಾರ ಬಹಳ ಸುಲಭ. ನಗುಮುಖದಿಂದ ಸ್ವಾಗತಿಸುವ ಹೆಂಡತಿಯ ಮುಖವನ್ನು ಕಂಡಾಗ ದುಡಿದು ಬರುವ ಗಂಡನ ದಣಿವಾರುವುದು ಎಂಬ ಮಾತನ್ನು ನನ್ನಮ್ಮ ಯಾವಾಗಲೂ ನನಗೆ ಹೇಳುತ್ತಿದ್ದರು. ಅದರಂತೆಯೇ ನಿಮ್ಮ ಮಾವ ಮನೆಗೆ ಬರುವ ಹೊತ್ತಿಗೆ ಶುಭ್ರವಾಗಿ ಮುಖ ತೊಳೆದು ಲಕ್ಷಣವಾಗಿ ತೆಳ್ಳಗಿನ ಅಲಂಕಾರ ಮಾಡಿಕೊಂಡು ಹೂ ಮುಡಿದು ನನ್ನನ್ನು ಶೃಂಗರಿಸಿಕೊಳ್ಳುತ್ತಿದ್ದೆ. ಕನ್ನಡಿಯ ಮುಂದೆ ನಿಂತಾಗ ನನ್ನ ದಣಿವು ನನ್ನ ಅಲಂಕಾರ ಕಂಡು ಮಾಯವಾದರೆ ನನ್ನನ್ನು ಕಂಡು ನನ್ನ ಗಂಡ ಆಯಾಸ ಮರೆಯುತ್ತಿದ್ದರು. ಮಕ್ಕಳಾದ ಮೇಲೆ ಅಲಂಕಾರವೇಕೆ ?ಎಂದು ನಮ್ಮನ್ನು ನಾವು ನಿರ್ಲಕ್ಷಿಸಿ ಕೊಂಡು ಗಂಡನಿಂದ ದೂರವಾಗುತ್ತೇವೆ. ಮೊದಲು ಮಕ್ಕಳಾದ ಮೇಲೂ ನಮ್ಮನ್ನು ನಾವು ಮೊದಲಿನಂತೆ ಇರಿಸಿಕೊಳ್ಳಲು ಪ್ರಯತ್ನಿಸಿದರೆ ಗಂಡ ಹೆಂಡತಿಯ ನಡುವಿನ ಸಂಬಂಧ ಮದುವೆಯಾದ ಹೊಸದರಲ್ಲಿ ಇದ್ದಂತೆಯೇ ಇರುತ್ತದೆ.
ಹೆಣ್ಣಿಗೆ ಶೃಂಗಾರ ಬಹಳಾ ಮುಖ್ಯ. ಮದುವೆಯಾದ ಮೇಲೆ ಗಂಡನನ್ನು ತಪ್ಪದೆಯ ಮನೆಗೆ ಬರುವಂತೆ ಮಾಡುವುದೇ ಹೆಂಡತಿಯ ಶೃಂಗಾರ.ಶೃಂಗಾರದ ಹಿಂದಿರುವ ವೈಯಾರ. ಮೊದಲು ಆ ನಿನ್ನ ನೈಟಿ ಹಾಗೂ ಆ ದೊಗಲೇ ಟಿ-ಶರ್ಟ್ ಪ್ಯಾಂಟ್ ಗಳನ್ನು ಬದಿ ಹಾಕಿ ಲಕ್ಷಣವಾದ ಬಟ್ಟೆಗಳನ್ನು ಹಾಕಿಕೊಂಡು ನಿನ್ನನ್ನು ನೀನು ಖುಷಿಯಾಗಿರಿಸಿಕೊ.ಆಗ ಮಾತ್ರ ನಿನ್ನ ಗಂಡ ನಿನ್ನನ್ನು ಕಂಡು ಖುಷಿಯಾಗಿರುತ್ತಾನೆ. ಹಾಗಿದ್ದಾಗ ಸಂಸಾರದಲ್ಲಿ ಅಪಶ್ರುತಿ ಬರದು. ಇಲ್ಲವಾದಲ್ಲಿ ಚಂದ ಕಾಣುವ ಹುಡುಗಿಯರ ಕಡೆ ಮನಸೋಲುವ ಸಂಭವವಿರುತ್ತದೆ. ನನ್ನ ಮಗ ನಂಬಿಕೆಗೆ ದ್ರೋಹ ಮಾಡಲಾರ. ಮೊದಲು ನೀನು ನಿನ್ನೆಲ್ಲಾ ಕೆಲಸದ ಮಧ್ಯದಲ್ಲಿ ನಿನಗೂ ಕೊಂಚ ಸಮಯ ಕೊಟ್ಟುಕೊಂಡು ಮೊದಲಿನಂತಿರಲು ಪ್ರಯತ್ನಿಸು"ಎಂದು ಮಕ್ಕಳಾದ ನಂತರ ಗಂಡ ಹೆಂಡಿರ ಬಾಂಧವ್ಯ ಗಟ್ಟಿಯಿರಲು ಹೆಂಡತಿಯ ಶೃಂಗಾರ ಬಹು ಮುಖ್ಯ ಎಂದು ತಿಳಿ ಹೇಳಿದ ವೆಂಕಜ್ಜಿಯ ಮಾತಿಗೆ ಬೆಲೆ ಕೊಟ್ಟ ಸೊಸೆ ಅತ್ತೆ ಹೇಳಿದ್ದೆಲ್ಲವನ್ನು ಪಾಲಿಸಿ "ತಮ್ಮಿಬ್ಬರ ಮಧ್ಯ ಇದ್ದ ಕಂದಕ ಮರೆಯಾಗಿದೆ"ಎಂದು ಸಂತಸದಿಂದ ಇನ್ನೊಮ್ಮೆ ಫೋನ್ ಮಾಡಿದಾಗ ವೆಂಕಜ್ಜಿಯ್ಯ ಮನಸ್ಸಿಗೆ ನಿರಾಳ ಎನಿಸಿತು..
ಶೃಂಗಾರ ಎಂಬುದು
ಹೆಣ್ಣೊಬ್ಬಳಿಗೆ ಆಸ್ತಿ
ಮಕ್ಕಳಾದ ನಂತರ
ತಮ್ಮ ಇರುವಿಕೆಯ ಸ್ಥಿತಿಯನು
ಮರೆಯುವವರೇ ಜಾಸ್ತಿ...
ಮುಂದುವರೆಯುವುದು.....
