ತೊಟ್ಟಿ ಮನೆ
ತೊಟ್ಟಿ ಮನೆ
ಅಂದಿಗೆ ಆ ಮನೆಯಲ್ಲಿ ಜಮೀನುದಾರ ಸೀನಪ್ಪನವರು ಕಾಲವಾಗಿ ತಿಂಗಳು ಕಳೆದಿತ್ತು.
ಹತ್ತು ಅಂಕಣದ ದೊಡ್ಡ ತೊಟ್ಟಿಮನೆಯ ತೊಂಭತ್ತರ ಹರೆಯದ ಒಡೆಯ ಸೀನಪ್ಪನವರು ನೂರಾರು ಎಕರೆ ಜಮೀನು, ತೋಟ ,ದೊಡ್ಡ ತೊಟ್ಟಿ ಮನೆ , ಹೆಂಡತಿ, ಇಬ್ಬರು ಗಂಡು ಮಕ್ಕಳು , ಸೊಸೆಯಂದಿರು, ಮೊಮ್ಮಕ್ಕಳು ಎಲ್ಲವನ್ನೂ ಬಿಟ್ಟು ಮೇಲಿನ ಲೋಕಕ್ಕೆ ಹೋಗಿಬಿಟ್ಟರು.
ಇವನ ನಂತರದ ಯಜಮಾನಿಕೆಯ ಪಟ್ಟ
ಹಿರಿಯ ಮಗ ವೆಂಕಟೇಶನ ಪಾಲಿಗೆ ಬಂತು. ತಂದೆಯ ವಹಿವಾಟುಗಳನ್ನೆಲ್ಲಾ ವೆಂಕಟೇಶ ನೋಡಿಕೊಳ್ಳ
ತೊಡಗಿದ.ಅವನ ತಮ್ಮ ಶ್ರೀನಿವಾಸ ಅಣ್ಣ ಹೇಳಿದಂತೆ ಕೇಳುತ್ತಾ, ಅವನಿಗೆ ಸಹಾಯಕನಾಗಿದ್ದ.ಈ ಇಬ್ಬರೂ ಅಣ್ಣ ತಮ್ಮಂದಿರು ಒಟ್ಟಾರೆ ಆ ದೊಡ್ಡ ಜಮೀನುದಾರರ ಮನೆಯನ್ನು ಅಪ್ಪನಂತೆಯೇ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ತನ್ನ ಗಂಡು ಮಕ್ಕಳು ಹೊಂದಿಕೊಂಡು ಕೆಲಸ ಮಾಡುತ್ತಿರುವುದನ್ನು ಕಂಡ ಅವರ ತಾಯಿ ಸೀತಮ್ಮನಿಗೆ ಸಮಾಧಾನವಾಯಿತು.
ಹೀಗೇ ಒಂದು ವರುಷದವರೆಗೂ ಎಲ್ಲವೂ ಸಲೀಸಾಗಿ ನಡೆಯಿತು. ಆದರೆ ಮನೆಯ ಇಬ್ಬರು ಸೊಸೆಯರ ನಡುವೆ ಒಂದು ಸಣ್ಣ ಬಿರುಕು ಕಾಣಿಸತೊಡಗಿತು. ಹಿರಿಸೊಸೆ ಸುಶೀಲ ತುಂಬಾ ಸಾಧು ಸ್ವಭಾವದವಳು. ಅಂತಹವಳಿಗೂ ಸಹ ಇತ್ತೀಚೆಗೆ ತನ್ನ ಓರಗಿತ್ತಿ ಸಂಧ್ಯಾಳ ಜಬರ್ದಸ್ತು, ಸೋಂಬೇರಿ ತನ ಮತ್ತು ದಬ್ಬಾಳಿಕೆಗಳಿಂದ ರೋಸಿ ಹೋಗುವಂತಾಗಿತ್ತು. ಅವಳಿಗೂ ಸಹ ಈ ಒಟ್ಟು ಸಂಸಾರದಿಂದ ಹೊರಬಂದರೆ ಸಾಕೆನ್ನುವಂತೆ ಆಗಿತ್ತು. ಜೊತೆಗೆ ಇಷ್ಟು ದೊಡ್ಡ ಆಸ್ತಿ ಇಬ್ಬರಿಗೂ ಸಮಪಾಲಾಗಿ ಭಾಗವಾದರೆ,ನಮ್ಮ ನಮ್ಮ ಪಾಡಿಗೆ ನಾವು ಸುಖವಾಗಿದ್ದು ಬಿಡಬಹುದು, ಈ ಒಟ್ಟು ಸಂಸಾರದಲ್ಲಿ ಎಷ್ಟು ದುಡಿದರೂ ಹೊಳೆಯಲ್ಲಿ ಹುಣಸೇಹಣ್ಣು ತೇಲಿಬಿಟ್ಟ ಹಾಗೆ,ಅದೂ ಅಲ್ಲದೆ ನಾಳೆ ನಮ್ಮ ಮಕ್ಕಳಿಗೆ ನಾವು ಏನು ಬೇಕೋ ಅದನ್ನು ಸ್ವತಂತ್ರವಾಗಿ ಮಾಡಿಕೊಳ್ಳಬಹುದು ಎಂಬ ಯೋಚನೆ ಸುಶೀಲ ಮತ್ತು ಸಂಧ್ಯಾ ರ ತಲೆಯಲ್ಲಿ ಸುಳಿದಾಡತೊಡಗಿತು.
ಸುಶೀಲ ಮತ್ತು ಸಂಧ್ಯಾ ಇಬ್ಬರೂ ತಮ್ಮ ತಮ್ಮ ಗಂಡಂದಿರ ಕಿವಿಗಳನ್ನು ಹಿಂಡತೊಡಗಿದರು. ಇದರ
ಪರಿಣಾಮವಾಗಿ ದೊಡ್ಡದಾಗಿದ್ದ ತೊಟ್ಟಿ ಮನೆಯ ಮಧ್ಯೆ ದೊಡ್ಡ ಗೋಡೆ ಎದ್ದಿತು. ಅಣ್ಣ ತಮ್ಮಂದಿರ ಸಂಸಾರಗಳು ಬೇರೆಯಾದವು. ಇವೆಲ್ಲಕ್ಕೂ ಸೀತಮ್ಮ ಮೂಕ ಸಾಕ್ಷಿಯಾದ ರು. ಅವರು ತಮ್ಮ ಮನಸ್ಸಿನಲ್ಲಿ
"ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು"ಅನ್ನೋ ಗಾದೆ ಸುಳ್ಳಾಗದು ಎಂದು ಕೊಂಡರು. ಆದರೆ ಅವರಿಗೆ ವಯಸ್ಸಾಗಿದ್ದರಿಂದ ತಮ್ಮ ದೊಡ್ಡ ಮನೆ ಭಾಗವಾಗುವುದನ್ನು ತಡೆಯಲಾಗದೆ,
ಕೇವಲ ಮೂಕ ಸಾಕ್ಷಿಯಾಗಿರಬೇಕಾಯಿತು. ಆದರೆ ಅವರ ಮನಸ್ಸಿನಲ್ಲಿ ನೀರವ ಮೌನ ಆವರಿಸಿ, ಮಾತನಾಡುವುದನ್ನು ನಿಲ್ಲಿಸಿ ಬಿಟ್ಟರು. ಅವರ ಮೂಕವೇದನೆ ಮಗ ಸೊಸೆ ಯರಿಗೆ ಅರ್ಥವಾಗಲಿಲ್ಲವೋ?ಅರ್ಥವಾದರೂ ಆಗದಂತೆ ಇದ್ದರೋ?
ಅಂತೂ ಆ ಹಳ್ಳಿಯಲ್ಲಿ ನಾಲ್ಕಾರು ದಿನ ಈ ದೊಡ್ಡ ತೊಟ್ಟಿಮನೆ ಇಬ್ಭಾಗವಾದ ವಿಷಯ ಎಲ್ಲರ ಬಾಯಲ್ಲೂ
ಗುಸು ಗುಸು ಪಿಸು ಪಿಸು ಹರಿದಾಡಿತು.
ವಿಜಯಭಾರತೀ.ಎ.ಎಸ್.
