ಬೇಸಿಗೆ ರಜೆ ಬಂದ ಕೂಡಲೇ ಸೋಮನಹಳ್ಳಿಯ ಅಜ್ಜನ ತೋಟದ ಮನೆಗೆ ಬಂದಿಳಿದರು ಸುಮಂತ್, ಶರತ್, ಸೋನು, ಮೋನು. ಅಜ್ಜ ಅಜ್ಜಿಗೂ ತಮ್ಮ ಮೊಮ್ಮಕ್ಕಳನ್ನು ನೋಡಿ ಅದೆಷ್ಟು ಸಂತೋಷವೋ? ಮೊಮ್ಮಕ್ಕಳನ್ನೇ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಅಜ್ಜ ಅಜ್ಜಿಗೆ ಮಹದಾನಂದವಾಯಿತು. ಎಪ್ಪತ್ತರ ಹರೆಯದ ನರಸಮ್ಮನವರು ಇಪ್ಪತ್ತರಹರೆಯದವರಾದರು. ಎಪ್ಪತ್ತೈದರ ಹರೆಯದ ನಾಗಯ್ಯ ನವರು ಯುವಕರನ್ನು ನಾಚಿಸುವಂತೆ ಚುರುಕಾದರು.
ತಮ್ಮ ಮೊಮ್ಮಕ್ಕಳಿಗೆ ಹಳ್ಳಿಯ ತಿಂಡಿ ತಿನಿಸುಗಳಾದ ಕೊಟ್ಟೆ ಕಡುಬು, ಕಾಯಿ ಕಡುಬು, ಅಕ್ಕಿ ರೊಟ್ಟಿ, ಅವರೆಕಾಳಿನ ಉಪ್ಪಿಟ್ಟು ,ಹುರಿಟ್ಟು,ರಾಗಿ ಮುದ್ದೆ ,ಕಾಳು ಸಾರು ಎಲ್ಲವನ್ನೂ ಮಾಡಿಕೊಡುತ್ತಿದ್ದರು ನರಸಮ್ಮ. ನಾಗಯ್ಯನವರು ಮೊಮ್ಮಕ್ಕಳಿಗೆ ಹೊಲ, ಗದ್ದೆ, ತೋಟ, ಹೊಳೆ ದಂಡೆ ಅಂತ ಸುತ್ತಾಡಿಸಿಕೊಂಡು, ಅವ ಹಳ್ಳಿಯ ಹಳೆ ಕಥೆಗಳನ್ನು ಮೊಮ್ಮಕ್ಕಳಿಗೆ ಹೇಳುತ್ತಿದ್ದರು. ನಗರದ ನಾಗಾಲೋಟದ ಜೀವನದಿಂದ ಬೇಸೆತ್ತ ಮಕ್ಕಳಿಗೂ ಅಜ್ಜನ ಹಳ್ಳಿ, ತೋಟ,ಹೊಳೆ ಎಲ್ಲವೂ ಇಷ್ಟವಾಗುತ್ತಿತ್ತು. ಒಟ್ಟಿನಲ್ಲಿ ಮಕ್ಕಳು ಸಹ ತುಂಬಾ ಸಂತೋಷದಿಂದ ಅಜ್ಜ ಅಜ್ಜಿಯ ಜೊತೆ ಕಾಲ ಕಳೆಯುತ್ತಿದ್ದರು.
ಒಂದು ದಿನ ಹತ್ತು ವರ್ಷದ ಸುಮಂತ್ ಮತ್ತು ಶರತ್ ಇಬ್ಬರೂ ಮಧ್ಯಾಹ್ನದ ಹೊತ್ತು ತಮ್ಮ ಮನೆಯ ಹತ್ತಿರದಲ್ಲೇ ಇದ್ದ
ಹೊಳೆ ತೀರಕ್ಕೆ ಹೋಗಿ, ನೀರಿಗಿಳಿದು ಮನಸೋ ಇಚ್ಚೆ ಆಟವಾಡಿಕೊಂಡು ಬಂದರು. ಆದರೆ ಅವರಿಬ್ಬರು ತಾವು ನದೀತೀರಕ್ಕೆ ಹೋಗಿದ್ದ ವಿಷಯವನ್ನು ಮನೆಯಲ್ಲಿ ಅಜ್ಜ ಅಜ್ಜಿಯ ಮುಂದೆ ಹೇಳಲೇ ಇಲ್ಲ.
ಮುಂಗಾರು ಮಳೆ ಶುರುವಾಯಿತು. ಮೊದಲ ಮಳೆಯ ಹನಿಯಲ್ಲಿ ಹುಡುಗರೆಲ್ಲರೂ ಕುಣಿದಾಡಿದರು. ನಾಗಯ್ಯನವರಾಗಲೀ, ನರಸಮ್ಮನವರಾಗಲೀ ಮಕ್ಕಳನ್ನು ತಡೆಯಲಿಲ್ಲ. ಮಳೆಯ ಹನಿಯ ಸೊಬಗನ್ನು ಮಕ್ಕಳು ಅನುಭವಿಸಲಿ ಎಂದು ಸುಮ್ಮನಾದರು. ಆದರೆ ಇನ್ನು ಮುಂದೆ ಇದೇ ಅಭ್ಯಾಸವನ್ನು ಮುಂದುವರಿಸಬಾರದೆಂದು ಮಕ್ಕಳಿಗೆ ಎಚ್ಚರಿಕೆಯನ್ನು ಕೊಡುವುದನ್ನೂ ಸಹ ಮರೆಯಲಿಲ್ಲ.
ಹೀಗೆ ಶುರುವಾದ ಮುಂಗಾರು ಮಳೆ ಹೆಚ್ಚಾಗುತ್ತಾ ಹೋಗಿ, ಕೆರೆ,ಕಟ್ಟೆ ,ಭಾವಿಗಳು ತುಂಬತೊಡಗಿದವು. ಆ ಹಳ್ಳಿಯಲ್ಲಿ ಎಲ್ಲರ ಮುಖಗಳೂ ಅರಳತೊಡಗಿದವು. ಸ್ವಲ್ಪ ತಡವಾಗಿಯಾದರೂ ಮಳೆ ಬಂತಲ್ಲ ಅನ್ನುವುದೇ ಎಲ್ಲರಿಗೂ ಸಮಾಧಾನ ತಂದ ವಿಷಯವಾಗಿತ್ತು. ಆ ಊರಿನ ಹೊಳೆ ತುಂಬಿ ಹರಿಯ ತೊಡಗಿತು.
ಒಂದು ದಿನ ಮಧ್ಯಾಹ್ನ ಸುಮಂತ್ ಮತ್ತು ಶರತ್ ಇಬ್ಬರೂ ಸೋನು ಮತ್ತು ಮೋನುವಿನ ಕಣ್ಣು ತಪ್ಪಿಸಿ, ಅಜ್ಜ ಅಜ್ಜಿಗೂ ಸುಳಿವು ಕೊಡದೇ, ತುಂಬಿ ಹರಿಯುತ್ತಿರುವ ಹೊಳೆಯನ್ನು ನೋಡಲು ಹೊರಟೇ ಬಿಟ್ಟರು. ಹೇಮಾವತಿ ತುಂಬಿ ಹರಿಯುತ್ತಿತ್ತು.
ದಡದಲ್ಲೇ ನಿಂತು ನೋಡುತ್ತಿದ್ದ ಇಬ್ಬರೂ, ಇದ್ದಕ್ಕಿದ್ದಂತೆ ಒಂದೊಂದೇ ಮೆಟ್ಟಿಲನ್ನು ಇಳಿಯುತ್ತ, ಭರಸದಿಂದ ಹರಿಯುತ್ತಿದ್ದ ನೀರಿಗೆ ಕಾಲಿಟ್ಟೇ ಬಿಟ್ಟರು. ಒಂದೆರಡು ಹೆಜ್ಜೆ ಮುಂದಿದ್ದ ಸುಮಂತ್ ಶರತ್ ಕೈಯ್ಯನ್ನು ಬಿಟ್ಟು, ನೀರಿನಲ್ಲಿ ತೇಲುತ್ತ ಮುಂದೆ ಮುಂದೆ ಹೋಗುತ್ತಿದ್ದಾಗ, ಅಲ್ಲೇ ಇದ್ದ ಶರತ್ ಭಯದಿಂದ ಜೋರಾಗಿ ಕೂಗಿಕೊಂಡ. ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಸುಮಂತ್ ಗೂ ಅಲ್ಲಿಂದ ಹೇಗೆ ಬಚಾವ್ ಆಗಬೇಕೆಂದು ಗೊತ್ತಿರದೆ, ತಾನು ಈಗ ತಾನೇ ಕಲಿಯುತ್ತಿದ್ದ ಸ್ವಿಮ್ಮಿಂಗ್ ಅನ್ನು ಮಾಡುತ್ತಿದ್ದ. ಆದರೂ ನೀರಿನ ರಭಸದ ಮುಂದೆ ಅವನ ಸ್ವಿಮ್ಮಿಂಗ್ ಸಹಾಯ ಮಾಡದಿದ್ದಾಗ ದೂರದಿಂದಲೇ ಶರತ್ ಕಡೆ ಕೈ ಬೀಸುತ್ತಿದ್ದ ಭಯದಿಂದ ಕಿರುಚಿಕೊಳ್ಳುತ್ತಿದ್ದಾಗ, ಶರತ್ ಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಕಡೆಗೆ ಆಗ ತಾನೇ ಹೊಳೆಯ ಹತ್ತಿರ ಬಂದಿದ್ದ ಇಬ್ಬರು ತೋಟದ ಆಳುಗಳು, ಮುಳುಗುತ್ತಿದ್ದ ಸುಮಂತ್ ನನ್ನು ,ಎಳೆದುಕೊಂಡು ಬಂದು ದಡಕ್ಕೆ ಬಿಟ್ಟರು.
ಅವರಿಗೆ ಈ ಮಕ್ಕಳು ತಮ್ಮ ಮಾಲಿಕರ ಮೊಮ್ಮಕ್ಕಳೆಂದು ಗೊತ್ತಾದಾಗ, ಇಬ್ಬರನ್ನೂ ಗದರಿಕೊಳ್ಳುತ್ತಾ, ಮನೆಗೆ ತಂದು ಬಿಟ್ಟು, ಯಜಮಾನರ ಮುಂದೆ ನಡೆದ ವಿಷಯ ತಿಳಿಸಿದಾಗ, ನಾಗಯ್ಯ ಹಾಗೂ ನರಸಮ್ಮ ಇಬ್ಬರಿಗೂ ಗಾಬರಿಯಾಗಿ, ಮೊಮ್ಮಕ್ಕಳಿಗೆ ಚೆನ್ನಾಗಿ ಬಯ್ದು, ಇನ್ನು ಮುಂದೆ ತಮಗೆ ಹೇಳದೆ ಮನೆ ಬಿಟ್ಟು ಹೋಗದಂತೆ ತಾಕೀತು ಮಾಡಿದರು.
ಅಂದು ರಾತ್ರಿಯೇ ನಾಗಯ್ಯನವರು ತಮ್ಮ ಮೊಮ್ಮಕ್ಕಳನ್ನು ಅವರವರ ಮನೆಗೆ ಕಳುಹಿಸಿಬಿಡುವುದೇ ಸರಿ ಎಂದು ತೀರ್ಮಾನಿಸಿದರು. ಈ ಇಳಿ ವಯಸ್ಸಿನಲ್ಲಿ ತಮಗೆ ಈ ಮೊಮ್ಮಕ್ಕಳ ಜವಾಬ್ದಾರಿ ಸಾಕೆನಿಸಿತು. ಒಂದು ವೇಳೆ ಸುಮಂತ್ ಗೆ ಏನಾದರೂ ಹೆಚ್ಚು ಕಡಿಮೆಯಾಗಿದ್ದಿದ್ದರೆ,ತಾವು ತಮ್ಮ ಮಗನಿಗೆ ಹೇಗೆ ಮುಖ ತೋರಿಸುವುದಕ್ಕೆ ಆಗುತ್ತಿತ್ತು? ಎಂದು ಕೊಂಡರು.
ಮತ್ತೆ ಎರಡು ದಿನಗಳು ಮೊಮ್ಮಕ್ಕಳನ್ನು ಕಣ್ಣೆ ಕಾವಲು ಕಾದಿದ್ದು, ಮೂರನೆ ದಿನ ಮೊಮ್ಮಕ್ಕಳನ್ನು ಕರೆದುಕೊಂಡು, ಮೈಸೂರಿಗೆ ಹೊರಟೆ ಬಿಟ್ಟರು. ಮೊಮ್ಮಕ್ಕಳನ್ನು ಬೀಳ್ಕೊಟ್ಟ ನರಸಮ್ಮನವರು, ’ಈ ಇಳಿ ವಯಸ್ಸಿನಲ್ಲಿ ಮೊಮ್ಮಕ್ಕಳ ಜೊತೆ ಇರಬೇಕಿನಿಸುವುದು ತಮಗೆ ಸಹಜವೆನಿಸಿದರೂ, ಇವರ ಚೇಷ್ಟೇ ತುಂಟಾಟಗಳಿಂದ ಇವರು ಮಾಡಿಕೊಳ್ಳುವ ಅನಾಹುತಗಳ ಜವಾಬ್ದಾರಿ ಹೊರುವುದು ಸುಲಭದ ಕೆಲಸವಲ್ಲ’ ಎಂದುಕೊಂಡರು.
ವಿಜಯಭಾರತೀ ಎ.ಎಸ್.