ಮನಸು ಮುರಿದ ಗಾಳಿಮಾತು
ಮನಸು ಮುರಿದ ಗಾಳಿಮಾತು
" ಪ್ರತಿಭಾ ಇನ್ನು ಬಂದಿಲ್ವಾ .. ಇಷ್ಟು ಹೊತ್ತಿಗೆ ಬರಬೇಕಿತ್ತು ಅಲ್ವಾ" ಎನ್ನುತ್ತಾ ಗೆಳತಿಯರ ಗುಂಪು ಮಾತನಾಡುತ್ತಾ ಕುಳಿತಿರುವ ವೇಳೆಗೆ ವಿಶಾಲ್ ಓಡಿ ಬಂದ..
"ಏಯ್ ಏನಾಯ್ತು? ಯಾಕಾ ಹೀಗೆ ಓಡೋಡಿ ಬರ್ತಿದ್ಯಾ, ನಿಧಾನ ಬಾ ಮರೆಯಾ".
"ಸುಮಾ ನಿಂಗೆ ವಿಷಯ ಗೊತ್ತಿಲ್ವಾ.. ಪ್ರತಿಭಾ ಗೆ ಮನೆಯಲ್ಲಿ ಗಂಡು ನೋಡಿದ್ದಾರಂತೆ..ಇವತ್ತೇ ನಿಶ್ಚಿತಾರ್ಥವಂತೆ..ಪಾಪ ಅವಳನ್ನ ಪ್ರಮೋದ್ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಾನೆ .ಅವನಿಗೆ ಏನಾದರೂ ವಿಷಯ ಗೊತ್ತಾದ್ರೆ ಏನಾದ್ರೂ ಹೆಚ್ಚು ಕಡಿಮೆ ಮಾಡಿಕೊಳ್ಳೋದು ಗ್ಯಾರಂಟಿ"
"ಏನ್ ಹೇಳ್ತಿದ್ದೀಯೋ? ನಾನ್ ನಂಬಲ್ಲ ಚಾನ್ಸೇ ಇಲ್ಲ ಪ್ರಮೋದ್ ಪ್ರೀತ್ಸೋದ್ಕಿಂತ ಎರಡರಷ್ಟು ಜಾಸ್ತಿ ಪ್ರೀತಿ ಮಾಡ್ತಾಳೆ ಪ್ರತಿಭಾ .. ಅವಳು ಮನೇಲೂ ಕೂಡ ಈ ವಿಷಯ ಗೊತ್ತು .. ಹಾಗಿದ್ದ ಮೇಲೆ ಪ್ರಮೋದ್ನ ಬಿಟ್ಟು ಅದು ಹೇಗೆ ಬೇರೆ ಮದುವೆ ಮಾಡುತ್ತಾರೆ ನೀನು ಎಲ್ಲೋ ಕನ್ಫ್ಯೂಸ್ ಆಗಿದ್ಯಾ"
"ಇಲ್ಲ ಸುಮಾ ನಾನು ನಿನ್ನೆ ಸಂಜೆ ಅವಳ ಮನೆ ಹತ್ರ ಹೋಗಿದ್ದೆ ನೋಟ್ಸ್ ಬೇಕಿತ್ತು ಅಂತ.. ಅವಳ ಪಕ್ಕದ್ಮನೆ ಆಂಟಿ, ನನಗೆ ಪರಿಚಯದವ್ರು ಅವ್ರು ಹೇಳಿದ್ರು ಪ್ರತಿಭಾಗೆ ಮದುವೆ ಅಂತ."
"ಪ್ರತಿಭಾ ಗೆ ಮದುವೆ ಅಂತಾನೇ ಹೇಳಿದ್ರೆನೋ"?
"ನಾನು ಪ್ರತಿಭಾ ಕ್ಲಾಸ್ಮೇಟ್ಸ್ ಅಂತ ಅವರಿಗೆ ಗೊತ್ತು.. ಅವಳ ಮನೆಯ ಬಾಗಿಲಲ್ಲಿ ನಿಲ್ಲುತ್ತಿದ್ದಂತೆ ಇವತ್ತು ಅವರ ಮನೆಗೆ ಗಂಡಿನ ಕಡೆಯವರು ಬಂದಿದ್ದಾರೆ ನೀನು ನಾಳೆ ಬಾ ಅಂತ ನನ್ನ ವಾಪಸ್ ಕಳ್ಸಿದ್ರು. ಪ್ರತಿಭಾ ಒಬ್ಬಳೇ ಮಗಳು ತಾನೇ ..ಅವಳನ್ನು ನೋಡಕ್ಕಲ್ದೆ ಇನ್ಯಾರಿಗೆ ಅಂತ ಗಂಡಿನ ಮನೆಯವರು ಬರ್ತಾರೆ"?.
"ನೀನು ಹೇಳೋದು ಸರಿ .ಆದರೆ ಈ ವಿಷಯಾನ ಪ್ರಮೋದ್ ಗೆ ಗೊತ್ತಾಗದೆ ಇರೋ ಹಾಗೆ ನೋಡಿಕೊಳ್ಳೋಣ ನಾಳೆ ಪ್ರತಿಭಾ ಬಂದ್ಮೇಲೆ ಕೇಳಿದ್ರಾಯ್ತು".
ಎರಡು ದಿನವಾದರೂ ಪ್ರತಿಭಾ ಕಾಲೇಜ್ ಕಡೆಗೆ ಬರಲಿಲ್ಲ ಕಾಲೇಜ್ ತುಂಬಾ ಗುಸು ಗುಸು ಎಂಬ ಗಾಳಿ ಸುದ್ದಿ ಹಬ್ಬಿಯಾಗಿತ್ತು.. ಪ್ರತಿಭಾ ಪ್ರಮೋದ್ ಗೆ ಕೈ ಕೊಟ್ಳಂತೆ ಯಾರೋ ಫಾರಿನ್ ಹುಡುಗನ್ನ ಮದುವೆ ಆಗ್ತಿದ್ದಾಳಂತೆ, ಪಾಪ ಪ್ರಮೋದ್ ಮೂರು ವರ್ಷದಿಂದ ಅವಳ ಹಿಂದೇನೆ ಸುತ್ತುತ್ತಿದ್ದ .ಅವಳು ಚೆನ್ನಾಗಿ ಇವನ್ನ ದುಡ್ಡಿಗೋಸ್ಕರ ಯೂಸ್ ಮಾಡಿಕೊಂಡ್ಲು ಎಂಬ ಮಾತುಗಳು ಕಾಲೇಜು ತುಂಬಾ ಸುದ್ದಿ ಆಗಿತ್ತು..
ಎರಡು ದಿನಗಳ ನಂತರ ಕಾಲೇಜಿಗೆ ಬಂದ ಪ್ರತಿಭಾ ಪ್ರಮೋದ್ ಗಾಗಿ ಹುಡುಕಾಡಿದಳು...ಎಲ್ಲಿಯೂ ಕಾಣಲಿಲ್ಲ.. ಎರಡು ದಿವಸದಿಂದ ಅದೆಷ್ಟೇ ಪ್ರಯತ್ನ ಪಟ್ಟರು ಅವನ ಫೋನ್ ಗೆ ಕಾಲ್ ಕನೆಕ್ಟ್ ಆಗುತ್ತಿರಲಿಲ್ಲ.. ಗಾಬರಿಯಿಂದ ಸ್ನೇಹಿತರನ್ನು ವಿಚಾರಿಸಲು ಮುಂದಾದಳು... ಮುಂಚಿನಾಗೆ ಯಾರು ಅವಳೊಂದಿಗೆ ಮುಖಕೊಟ್ಟು ಮಾತನಾಡದಿರುವುದನ್ನು ಗಮನಿಸಿ ನೊಂದಳು.. ಅಲ್ಲಿ ಇಲ್ಲಿ ಮಾತನಾಡುತ್ತಿದ್ದ ಸುದ್ದಿ ಅಂತೂ ಅವಳ ಕಿವಿಗೂ ಬಿತ್ತು.. ವಿಷಯ ತಿಳಿದು ನಗಬೇಕು ಅಳಬೇಕು ತಿಳಿಯದೆ ಪ್ರತಿಭಾ ಮೌನವಾದಳು.. ವಿಷಯ ಹಬ್ಬಿಸಿದ ವಿಶಾಲ್ ನನ್ನು ಹುಡುಕಿ ಹೊರಟಳು.
"ವಿಶಾಲ್ ಪ್ರಮೋದ್ ಎಲ್ಲಿ ಹೇಳು.. ನಾನು ಅವನ ಜೊತೆ ಮಾತನಾಡಬೇಕಿತ್ತು ಫೋನ್ ಮಾಡಿದರೆ ಸಿಗುತ್ತಿಲ್ಲ.."
"ಏನಮ್ಮ ಇವತ್ತು ಕಾಲೇಜ್ ಕಡೆಗೆ ಬಂದಿದ್ದೀಯಾ ಏನಂತನೆ ನಿನ್ನ ಫಾರಿನ್ ಗಂಡ..?? ಪ್ರಾಮಾಣಿಕವಾಗಿ ಪ್ರೀತಿ ಮಾಡಿದವನಿಗೆ ಮೋಸ ಮಾಡಿದ್ಯಲ್ಲ?? ನಿನ್ನ ಪ್ರೀತಿಸಿದ ತಪ್ಪಿಗೆ ಇವತ್ತು ಆಸ್ಪತ್ರೆಯಲ್ಲಿ ಮಲಗಿದ್ದಾನೆ. ಹೋಗಿ ನೋಡು".
"ಏನ್ ಹೇಳ್ತಾ ಇದ್ಯಾ?? ಏನಾಯ್ತು ಹೇಗೆ ಆಯ್ತು?"
"ನೀನ್ ಮದುವೆ ಆಗ್ತಿದ್ಯಾ ಅಂತ ಸುದ್ದಿ ಕೇಳಿ ಅದೇ ಟೆನ್ಶನ್ ನಲ್ಲಿ ನಿನ್ನ ನೋಡಕ್ಕೆ ಅಂತ ನಿಮ್ಮನೆಗೆ ಬರುವಾಗ ಆಕ್ಸಿಡೆಂಟ್ ಆಯ್ತು..ಸದ್ಯ ಜೀವ ಹೋಗಿಲ್ಲ ನಿಮ್ಮಂಥವರಿಗೆಲ್ಲ ಪ್ರೀತಿ ಬೆಲೆ ಏನ್ ಗೊತ್ತು"
"ನಾನ್ ಮದುವೆ ಆಗ್ತಿದ್ದೀನಿ ಅಂತ ಯಾರು ಹೇಳಿದ್ದು?"
"ಏನ್ ತಮಾಷೆ ಮಾಡ್ತಿದ್ದೀಯಾ ನಾನು ನಿಮ್ಮನೆ ಹತ್ರ ಬಂದಾಗ ನಿಮ್ ಪಕ್ಕದ್ ಮನೆಯವರು ಹೇಳಿದ್ರು ನಿಮ್ ಮನೆಗೆ ಗಂಡಿನ ಕಡೆಯವರು ಬಂದಿದ್ದಾರೆ ಅಂತ"
"ಹೌದು ಬಂದಿದ್ರು ಆದರೆ ನನ್ನ ಮದುವೆ ಅಂತ ಯಾರು ಹೇಳಿದ್ದು..?"
"ಅಂದ್ರೆ ನಿಮ್ಮ ಮಾತಿನ ಅರ್ಥ ಏನು?"
" ವಿಷಯ ಹಬಿಸಿದವನು ನೀನೇ ಅಲ್ವಾ..
ಪೂರ್ತಿ ಗೊತ್ತಿಲ್ಲ ಅಂದೆ ಮೇಲೆ ಸುಮ್ಮನೆ ಇರೋದು ಬಿಟ್ಟು ನಮ್ಮ ಮಧ್ಯೆ ತಂದಿಟ್ಟು ತಾಮಾಷೆ ನೋಡಿತಿದ್ಯ??ನಿನ್ನತ್ರ ಮಾತಾಡಿ ಪ್ರಯೋಜನ ಇಲ್ಲ ಮೊದಲು ನಾನು ಪ್ರಮೋದ್ನ ಭೇಟಿ ಆಗಬೇಕು" ..
ಆಸ್ಪತ್ರೆಗೆ ಹೋದಳು..ಕೈ ಕಾಲಿಗೆ ಹಾಕಿದ ಬ್ಯಾಂಡೇಜ್ ನೋಡಿ ಅಳಲಾರಂಭಿಸಿದಳು..ಅವಳ ಅಳು ಮಲಗಿದವನ್ನನ್ನು ಎಚ್ಚರಿಸಿತು..
"ನೀನ್ ಯಾಕ್ ಬಂದೆ..? ಮದುವೆ ಇನ್ವಿಟೇಶನ್ ಕೊಡಕ್ಕ? ನೀವು ಹುಡ್ಗೀರ್ ಎಲ್ಲ ನಮ್ಮಂತ ಹುಡುಗರು ಬಾಳಲ್ಲಿ ಅದು ಯಾಕೆ ಹೀಗೆ ಆಟ ಆಡ್ತೀರಾ? ನಾನು ಏನ್
ಅನ್ಯಾಯ ಮಾಡಿದ್ದೆ ನಿಂಗೆ ..ನಾನೊಬ್ಬ ಅನಾಥ ಅಂತ ಗೊತ್ತಿದ್ರೂ ಹಿಂದೆ ಬಿದ್ದು ಪ್ರೀತಿಸಿದವಳು ನೀನು. ನನ್ನ ಅಪ್ಪ ಅಮ್ಮ ನನ್ನ ಹೆಸರಿಗೆ ದುಡ್ಡು ಇಟ್ಟಿದ್ದಾರೆ ಅನ್ನೋ ಕಾರಣಕ್ಕೆ ಅಲ್ವಾ " ಎಂದು ಮಾತು ಮುಗಿಸುವಷ್ಟರಲ್ಲಿ
"ಪ್ರಮೋದ್ ಪ್ಲೀಸ್ ವಿಷಯ ತಿಳಿದೇ ಮಾತಾಡಬೇಡ.. ನಾನು ಮದುವೆ ಆಗ್ತಿಲ್ಲ ..ಮದುವೆ ನನಗೆ ಗೊತ್ತಾಗಿದ್ದಲ್ಲ..ನನ್ನ ದೊಡ್ಡಪ್ಪನ ಮಗಳಿಗೆ.. ನಮ್ಮ ಮನೆಯಲ್ಲಿ ಹೆಣ್ಣು ನೋಡುವ ಶಾಸ್ತ್ರ ಇಟ್ಕೊಂಡಿದ್ವಿ ಅಷ್ಟೇ.. ಮನೆ ಬಾಗಿಲಿಗೆ ಬಂದ ವಿಶಾಲ್ ಪೂರ್ತಿ ವಿಷಯ ಕೇಳಿಸಿಕೊಳ್ಳದೆ ಹಬ್ಬಿಸಿದ ಗಾಳಿ ಸುದ್ದಿ ಇಷ್ಟಕ್ಕೆಲ್ಲ ಕಾರಣ.. ನನ್ನ ಬಗ್ಗೆ ತಿಳಿದು ಆ ಗಾಳಿ ಮಾತನ್ನು ನಂಬಿ ನನ್ನನ್ನು ದುಡ್ಡಿಗಾಗಿ ನಿನ್ ಹಿಂದೆ ಇರೋಳು ಅಂತ ಅಂದು ಬಿಟ್ಟಿಯಲ್ಲ.. ಬೇರೆಯವರಿಗೆ ನನ್ನ ಬಗ್ಗೆ ಗೊತ್ತಿಲ್ಲ ನಿನಗೂ ನಾನೇನು ಅಂತ ಗೊತ್ತಿಲ್ವಾ ??ಅವರೆಲ್ಲಾ ಹೇಳೋತರ ದುಡ್ಡಿಗಾಗಿ ಇರೋಳು ಅಂದುಬಿಟ್ಯಲ್ಲ ಇಷ್ಟೇನಾ ನೀನನ್ನ ಅರ್ಥಮಾಡಿಕೊಂಡಿದ್ದು" ಎಂದು ಅಳಲಾರಂಭಿಸಿದಳು.. ಮನಸು ನೊಂದಿತು..ಒಂದು ಕ್ಷಣ ಅಲ್ಲಿ ನಿಲ್ಲುವ ಮನಸ್ಸಾಗದೆ ಹೊರಟು ಹೋದಳು..
ವಿಷಯ ತಿಳಿದು ಪಶ್ಚಾತಾಪ ಪಟ್ಟು ಪ್ರಮೋದ್ ನೊಂದುಕೊಂಡ..ಪ್ರತಿಭಾ ಪ್ರೀತಿಯನ್ನು ಅನುಮಾನಿಸಿ ಅವಮಾನಿಸಿದಕ್ಕೆ ಕ್ಷಮೆ ಕೇಳಲು ಪ್ರಯತ್ನಿಸಿದ...ಆದರೆ ಪ್ರತಿಭಾ ಮನಸು ಒಡೆದು ಚೂರಾಗಿತ್ತು... ಮೌನ ಹೊಕ್ಕಿತು
ಪೂರ್ಣ ವಿಷಯ ತಿಳಿಯದೇ ಇನ್ನೊಬ್ಬರಲ್ಲಿ ಹೇಳುವುದಕ್ಕಿಂತ ಹೇಳಿದೆ ಇರುವುದು ಲೇಸು ..ಒಂದು ಸುದ್ದಿಗೆ ರೆಕ್ಕೆ ಪುಕ್ಕ ಸೇರಿ ಗಾಳಿಯಂತೆ ಹಬ್ಬುವ ಸುದ್ದಿಗಳು ಅನಾಹುತವನ್ನು ಸೃಷ್ಟಿಸುತ್ತದೆ..ಹಬ್ಬುವ ಗಾಳಿ ಸುದ್ದಿ ಅಥವಾ ಗಾಳಿ ಮಾತು ಸಾವಿಗೂ ನೂಕಬಹುದು..ತಿಳಿಯದ ವಿಚಾರದ ಬಗ್ಗೆ ಅಥವಾ ಅರ್ಧ ತಿಳಿದ ವಿಚಾರದ ಬಗ್ಗೆ ಮಾತನಾಡದಿರುವುದು ಎಲ್ಲರಿಗೂ ಒಳಿತು ಅಲ್ಲವೇ...!
