STORYMIRROR

JAISHREE HALLUR

Horror Action Thriller

4  

JAISHREE HALLUR

Horror Action Thriller

ಸೆಂಟಿನಾವಾಂತರ--ಭಾಗ- 0೫

ಸೆಂಟಿನಾವಾಂತರ--ಭಾಗ- 0೫

3 mins
221

ಸೆಂಟಿನಾವಾಂತರ

ಭಾಗ- 0೫


  " ಇನ್ನೂ ಗಂಟೆ ಏಳೂವರೆ ಅಲ್ವಾ ಅಮ್ಮಾ..ಊಟಕ್ಕೆ ಟೈಮಿದೇ..." ದನಿ ರೂಂ ನಿಂದ ಬಂತು.


  ಅಮ್ಮ ಅಡಿಗೆ ಮನೇಲಿದ್ದರು ಅನಿಸುತ್ತೆ. ಮಗಳಿಗೇಂತ ಬಿಸಿ ಬಿಸಿ ಕೇಕ್ ತಯಾರಿಸಿ, ಅದಕ್ಕೆ ಕ್ರೀಮ್ ಮತ್ತು ಡ್ರೈ ಫ್ರೂಟ್ಸ್ಗಳ ಅಲಂಕಾರ ಮಾಡಿ ಊಟದ ಮೇಜಿನ ಮೇಲಿಟ್ಟರು. ಅದಕೊಂದು ಮುಚ್ಚಳ ಮುಚ್ಚಿ, ಟೀವಿ ಆನ್ ಮಾಡಿ ಯಾವುದೋ ಚಾನಲ್ಗೆ ಚಾಲನೆಯಿತ್ತರು.


    ರೀಟಾ ರೂಮಿನಲ್ಲಿ ಬಹಳ ಬಿಜೀ ಹುಡುಗಿ. ಬೇಕಾದ ಬೇಡದ ಕಾಗದ ಪತ್ರಗಳನ್ನೆಲ್ಲಾ ಹಾಸಿಗೆ ತುಂಬಾ ಹರಡಿಕೊಂಡು, ಲ್ಯಾಪ್ ಟಾಪ್ನಲ್ಲಿ ಏನೋ ಟೈಪಿಸುತಿದ್ದಳು. ತನ್ನ ಪಹರೆಯೊಳಗೆ ಸಿಕ್ಕ ಎಲ್ಲ ಮಾಹಿತಿಗಳನ್ನೂ ಕಲೆ ಹಾಕಿ ಒಂದು ದೀರ್ಘ ರಿಪೋರ್ಟ್ ತಯಾರಿಸುವ ಶ್ರಮದ ಕೆಲಸ ಅವಳದು. ಹಾಗೂ ಇಷ್ಟದ ಕೆಲಸವಾಗಿತ್ತು. 


   ಅಮ್ಮನ ಕರೆ ಕೇಳಿದರೂ, ಹೊಟ್ಟೆ ಚುರುಗುಟ್ಟಿದರೂ, ಊಟದ ಬಗ್ಗೆ ಮುತುವರ್ಜಿಯಿಲ್ಲ ಅವಳಿಗೆ. ಸಮಯಕ್ಕೆ ಸರಿಯಾಗಿ, ಹೊಟ್ಟೆಗೊಂದಿಷ್ಟು ಬಿದ್ದರೆ ಸಾಕಿತ್ತು. ಇಂತಹ ಮಕ್ಕಳು ಎಷ್ಟಿದ್ದರೂ ಸಲೀಸಾಗಿ ಸಾಕಿಬಿಡಬಹುದೆಂದು ಅಮ್ಮ ತನ್ನ ಗೆಳತಿಯರೆದುರು ಜಂಭ ಕೊಚ್ಚಿಕೊಂಡಿದ್ದೂ ಅವಳಿಗೆ ಗೊತ್ತು. 

    

   ರೀಟಾ, ಅಪ್ಪನಿಲ್ಲದ ಪಾಪದ ಹುಡುಗಿ. ಚುರುಕಿನ ಚಕೋರಿ. ದಿಟ್ಟೆ. ಅಪ್ಪನಿಲ್ಲದ ನೋವನ್ನು ಹೊರಗೆಡುವದೆ ಬೇಸರ ಪಟ್ಟುಕೊಳ್ಳದೆ ಅಮ್ಮನಿಗೆ ಒತ್ತಾಸೆಯಾಗಿ ನಿಂತವಳು. ಮುಂದಿನ ಜೀವನದ ಜವಾಬ್ದಾರಿಯನ್ನು ಲೆಕ್ಕಾಚಾರ ಹಾಕಿ, ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಅವಳಿಲ್ಲಿತ್ತು. ತಾಯಿಗೆ ಮಗಳ ಮೇಲೆ ಹೆಮ್ಮೆ, ಅಕ್ಕರೆ. ರೀಟಾಗೂ ಅಮ್ಮಾಂದರೆ ಅಷ್ಟೆ ಗೌರವ, ಪ್ರೀತಿ.


   ಟೈಪಿಂಗ್ ಕೆಲಸ ಒಂದು ಹಂತಕ್ಕೆ ಬಂತೆನಿಸಿತು. ಕೈಗಳು ಸೋತ ಅನುಭವ. ಲ್ಯಾಪ್ ಟಾಪ್ ಆಫ್ ಮಾಡಿದಳು. ಕಾಗದ ಪತ್ರ , ದಾಖಲೆಗಳನ್ನು ಆಯಾ ಫಾಯಿಲಿಗೆ ಜೋಡಿಸಿ, ಅಲ್ಮೇರಾನಲ್ಲಿಟ್ಟು ಬೀಗ ಜಡಿದಳು. ತಲೆಗೂದಲನ್ನು ಎತ್ತಿ ಗಂಟುಕಟ್ಟಿಕೊಂಡು, ಅಮ್ಮನನ್ನು ಹುಡುಕುತ್ತಾ ಹಾಲ್ ಗೆ ಬಂದಳು...


  " ಅಮ್ಮಾ...ಹೊಟ್ಟೆ ಹಸೀತಿದೆ, ಊಟ ಕೊಡಮ್ಮಾ..." ಎನ್ನುತ, ಡೈನಿಂಗ್ ಟೇಬಲ್ ಬಳಿ ಕುರ್ಚಿಯೆಳೆದು ಕೂಡುವುದಕ್ಕೂ , ಘಮಘಮಿಸುವ ಕೇಕ್ನ ಸುವಾಸನೆ ಮೂಗಿನ ಹೊಳ್ಳೆಗಳನರಳಿಸಿದ್ದಕ್ಕೂ ಸರಿಯಾಗಿತ್ತು...


  " ಆಹಾ! ಕೇಕ್ ಮಾಡಿದ್ದೀನಿಂತಾ ಹೇಳಬಾರದಾಮ್ಮಾ..ಆಗಲೇ ಬರ್ತಿದ್ದೆ....ಸೋ ಸ್ವೀಟ್ ಮಾಂ. ಲವ್ ಯೂ ಫಾರ್ ದಿಸ್..." ಎನ್ನುತಾ ಅಲ್ಲೆ ಇದ್ದ ಚಾಕೂವಿನಿಂದ ಒಂದು ಹೋಳು ಕತ್ತರಿಸಿದಳು. ಕೈಯಿಂದ ಹೊರತಂದು, ಅಮ್ಮನ ಬಾಯಿಗಿಟ್ಟಳು. 

" ನೀ ತಿನ್ನು ತಾಯಿ ನನಗೆ ಸಿಹಿ ಇಷ್ಟ ಆಗೋಲ್ಲ" ಅಂದರೂ ಮಗಳ ಪ್ರೀತಿಯ ತುತ್ತಿಗೆ ಇಲ್ಲ ಎನ್ನದೇ ಬಾಯಾಡಿಸಿದ್ದರು. 

  ಇವಳಂತೂ ಆ ಕೇಕು ಅರ್ದ ಭಾಗ ಮುಗಿಯುವಷ್ಟನ್ನೂ ತಿಂದು....ತೃಪ್ತಿಯಿಂದ...ಆಹಾ! ಎಂದು ಉದ್ಗರಿಸುತ್ತ, ಅಲ್ಲಿಂದ ಎದ್ದು ಹೊರಗೆ ನಡೆದಳು. ತಣ್ಣನೆಯ ಗಾಳಿ ಮೈ ಸೋಕಿತು...ಇರುಳ ಸೆರಗೂ ಗಾಳಿಯ ತಂಪಲಿ ಹಾರಿದಂತೆ ತೋರಿತು. ಕಟ್ಟಿದ ಮುಡಿ ಗಾಳಿಗೆ ಹಾರುವಾಸೆಯಲಿ ಬಿಚ್ಚಿಕೊಂಡಿತು...ಸುಂದರಿಯ ಮೊಗವ ನೋಡಲೆಂದೇ ಎಲ್ಲೋ ಅಡಗಿದ್ದ ಚಂದ್ರ ಕಾಣಿಸಿಕೊಂಡ....ಅವಳಿಗೂ ನಗು ಬಂತು...

   ಅಂದು ಮಧ್ಯ ರಾತ್ರಿ, ತಾನು ಅಮ್ಮನ ಕಣ್ತಪ್ಪಿಸಿ ಶ್ಯಾಂ ಸುಂದರ್ ಮನೆಗೆ ದಾಳಿಯಿಟ್ಟದ್ದು ನೆನಪಾಗಿ, ಒಂದು ಕ್ಷಣ ತುಟಿಯ ಮೇಲೆ ತುಂಟತನದ ನಗು ಮತ್ತೆ ಹಾದುಹೋಯಿತು. ಛೇ ಪಾಪ, ಎಷ್ಟು ಹೆದರಿರಬೇಕಲ್ವಾ...ತಾನು ಹಾಗೆ ಮಾಡದೇ ವಿಧಿಯಿರಲಿಲ್ಲ. ಯಾರು ಹೇಳಿದ್ದರು, ಅಷ್ಟೊತ್ತಿನಲ್ಲಿ ಎದ್ದು ಬರಲು? ತಾನು ಹೋಗಿದ್ದು ಆ ಸ್ಟೋರ್ ರೂಮಿನ ಬೀಗದ ಕೈ ಹುಡುಕಿಕೊಂಡು. ಅದು ಸಿಗದೇ ಇದ್ದಾಗ ಈ ಪಜೀತಿಯಾಗಿತ್ತು. ಆಮೇಲೆ ಏನಾಯಿತೋ ಇವಳಿಗೆ ಬೇಡದ ಸಂಗತಿ. ಈಗ ಎಲ್ಲವೂ ಸುಸೂತ್ರವಾಗಿ ಇವಳ ಕೈ ಸೇರಿದ್ದವು. ನೆಮ್ಮದಿಯಿಂದ ನಿದ್ದೆ ಮಾಡಬಹುದು ಎನ್ನುತಾ ಒಳಗೆ ಬಂದಾಗ ಗಂಟೆ ಒಂಬತೂವರೆಯಾಗಿತ್ತು.


   "ಅಮ್ಮಾ...ನಾ ಬೇಗ ಮಲಕೋತೀನಿ. ಬೆಳಿಗ್ಗೆ ಅರ್ಜಂಟ್ ಮೀಟಿಂಗ್ ಇದೆ. ಬಾಸ್ ನಂಗೆ ಬೇಗ ಬಾ ಎಂದಿದ್ದಾರೆ. ಡೆಲಿಗೇಟ್ಸ್ ಬಹಳ ಜನ ಬರ್ತಾರೆ. ಸ್ವಲ್ಪ ತಯಾರಿ ಮಾಡ್ಕೋಬೇಕು" ಎಂದಳು.


 " ಸರಿ ಕಣೆ..ಹೋಗು ಮಲಕೋ..‌ನಂಗಿನ್ನೂ ನಿದ್ದೆ ಬಂದಿಲ್ಲಾ..."

 ಬಂದು ಹಾಸಿಗೆಗೆ ತಲೆಗೊಟ್ಟಳು...

ಅಮ್ಮ ಅವಳ ಹಿಂದೆಯೇ ಬಂದು, ನೀರಿನ ಬಾಟಲ್ ತಂದಿಟ್ಟರು. ಅವಳಿನ್ನೂ ಆ ಶ್ಯಾಂ ಸುಂದರಂ ನ ಮನೆಯಲ್ಲಿ ಮೋಹಿನಿಯಾಗಿ ಕಾಡಿಸಿ ಅವನಿಗೆ ಮತ್ತೇರಿಸಿ ತಾನಲ್ಲಿಂದ ಪರಾರಿಯಾಗಿ ಓಡಿ ಬಂದದ್ದನ್ನು ನೆನೆಸಿಕೊಂಡು ನಗುತ್ತಿರುವುದನ್ನು ಕಂಡು, ಅಮ್ಮಾ..

" ಯಾಕೆ ಹುಡುಗೀ, ಒಬ್ಳೇ ನಗ್ತಿದೀಯಾ...ನಂಗೂ ಹೇಳಬಾರದಾ.." ಕೆಣಕಿದರು.

ಏನಿಲ್ಲಮ್ಮಾ...ಸುಮ್ನೆ. " ಎಂದಿದ್ದರೂ, ತನ್ನ ಕಿತಾಪತಿ ಅಮ್ಮನಿಗೆ ಗೊತ್ತಾಗೋದು ಬೇಡವಾಗಿತ್ತು ಅವಳಿಗೆ. ಅಪರ ರಾತ್ರಿ ಹೀಗೆ ಎಲ್ಲೆಲ್ಲಿಗೋ ಹೋದರೆ, ಅವರು ಗಾಭರಿಗಿಂತ ಹೆಚ್ಚು ಆತಂಕಕ್ಕೊಳಗಾಗ್ತಾರೇಂತ ಗೊತ್ತು ಅವಳಿಗೆ.  ಯೋಚಿಸುತ್ತಲೇ ಯಾವಾಗ ನಿದ್ದೆ ಬಂತೋ ತಿಳಿಯಲಿಲ್ಲ...ಅಮ್ಮ ದೀಪ ಆರಿಸಿ ಬಾಗಿಲು ಮುಂದೆ ಮಾಡಿಕೊಂಡು ತನ್ನ ರೂಮಿಗೆ ತೆರಳಿದ್ದರು...

  ಸುಮಾರು ಹನ್ನೆರಡು ದಾಟಿರಬಹುದೇನೋ..ಆಗ, ಇವಳ ರೂಮಿನ ಬಾಗಿಲು ಕಿರ್ ಎಂದು ಸದ್ದಾಯಿತು. ಹೊರಗಿನ ಚಂದ್ರ ಬೆಳಕು ಕಿಟಕಿಯಿಂದ ತೂರಿ ಕೊಂಚ ಕತ್ತಲು ತಿಳಿಯಾಗಿತ್ತು. ಪರದೆಗಳು ಹಾರಾಡಿದರೂ ನಿಶಬ್ದ ಇತ್ತು. ಬಾಗಿಲಿನ ಕೀರಲು ದನಿ ಮತ್ತೆ ಕೇಳಿತು. ಈ ಸಲ ತೆರೆದಂತೇಯೇ ಅನಿಸಿತ್ತು. ರೀಟಾಳ ಕಿವಿ ಬಹಳ ಸೂಕ್ಷ್ಮ. ಕಣ್ಬಿಟ್ಟು ಅತ್ತಿತ್ತ ನೋಡಿದಳು.ಯಾರೂ ಕಾಣಲಿಲ್ಲ. ಬಾಗಿಲ ಬಳಿ ಯಾರದೋ ನೆರಳಿನ ಸುಳಿವು ...ಕಿಟಕಿಯ ಬಳಿ ಯಾರದೋ ಹೆಜ್ಜೆಗಳ ಸದ್ದು...ಬೂಟುಗಾಲಿನದ್ದು. ತಟ್ಟನೆ ಎದ್ದಳು. ಅವಳು ಹೆದರುವ ಹುಡುಗಿಯಲ್ಲ. ಅಮ್ಮನಿಗೆ ಎಚ್ಚರವಾದೀತೆಂದು ಮೆಲ್ಲನೆ ಹಾಸಿಗಿಯಿಂದೆದ್ದು ಹೊರಬಂದಳು. ಕೈಯಲ್ಲಿ ಯಾವಾಗಲೋ ದಿಂಬಿನಡಿಯಿಂದ ಸಣ್ಣ ಪಿಸ್ತೂಲು ಅವಳ ಕೈ ಸೇರಿತ್ತು. 


   ಯಾರೂ ಕಾಣಲಿಲ್ಲ. ಅಮ್ಮನ ರೂಮಲ್ಲಿ ಇಣುಕಿದಳು. ಅವರು ಶಾಂತವಾಗಿ ಮಲಗಿದ್ದರು. ಹೊರಗೆ ಹಾಲ್ ಗೆ ಬಂದಳು. ಸುತ್ತಲೂ ಕಣ್ಣಾಡಿಸಿದಳು. ಯವ ಸುಳಿವೂ ಸಿಗಲಿಲ್ಲ. ಅಡಿಗೆ ಮನೆಯಲ್ಲೂ ಯಾರೂ ಇರಲಿಲ್ಲ. ಮುಂಬಾಗಿಲು ತೆರೆದು ಹೊರಗೆ ನಡೆದಳು...ಕತ್ತಲು ರಾಚಿತು, ವರಾಂಡದ ಲೈಟು ಹಾಕದೇ ಒಂದು ಸುತ್ತು ಅಲ್ಲೆಲ್ಲಾ ಹುಡುಕಿದಳು..ತಕ್ಷಣ ಏನೋ ನೆನಪಾಗಿ, ಆತುರದಲ್ಲಿ ರೂಮಿಗೆ ಧಾವಿಸಿದಳು..ಅವಳ ಊಹೆ ನಿಜವಾಗಿತ್ತು. ಬಂದ ವ್ಯಕ್ತಿ, ಮುಸುಕಿನ ಮನುಷ್ಯ ತನ್ನ ರೂಮಿನಲ್ಲಿ ಅಲ್ಮೇರಾ ತೆರೆದು ಯಾವುದೋ ಫೈಲ್ಗಳನ್ನು ನೋಡುತ್ತಿದ್ದುದ್ದು ಕಂಡಿತು. ಹಿಂದಿನಿಂದಲೆ ಬಂದು,


" ಹ್ಯಾಂಡ್ಸ್ ಅಪ್, ಡೋಂಟ್ ಮೂವ್, ಐ ವಿಲ್ ಶೂಟ್ ಯೂ".. ಗುರಿಯಿಟ್ಟು ಗುಡುಗಿದಳು..


  ಆ ವ್ಯಕ್ತಿಯ ಕೈಯಿಂದ ಫೈಲ್ ನೆಲಕ್ಕೆ ಜಾರಿತು. ಅವಳು ಆ ಫೈಲನ್ನು ಬಗ್ಗಿ ಎತ್ತಿಕೊಳ್ಳುವಷ್ಟರಲ್ಲಿ ಮುಸುಕಿನ ಮನುಷ್ಯ ತೆರೆದ ಕಿಟಕಿಯಿಂದ ಪರಾರಿಯಾಗಿದ್ದ. ಗುಂಡು ಹಾರಿದರೆ, ಅಮ್ಮ ಎಚ್ಚರವಾಗುವಳೆಂದು ಹಾರಿಸದೆ ಪೇಚಾಡಿಕೊಂಡಳು...ಆದರೂ ಸಮಾಧಾನ ಇತ್ತು. ಬೇಕಾದ ಫೈಲ್ ತನ್ನ ಬಳಿಯೇ ಉಳಿಯಿತು. ‌ ನಾಳೆಯೇ ಇದನ್ನು ತಲುಪಿಸಬೇಕಾದ ಸ್ಥಳಕ್ಕೆ ಕೊಟ್ಟುಬಿಡಬೇಕು. ಇಲ್ಲವಾದಲ್ಲಿ ಇಂತಹ ಅಪಾಯಗಳು ತಪ್ಪಿದ್ದಲ್ಲ. ಯೋಚಿಸುತ್ತಲೇ ಬಾಗಿಲು ಕಿಟಕಿಗಳನ್ನು ಭದ್ರ ಪಡಿಸಿ, ಬಂದು ಮಲಗಿದಳು. ಬಂದ ವ್ಯಕ್ತಿಯ ಬಗ್ಗೆ ಸುಳಿವು ಕಂಡು ಹಿಡಿಯಬೇಕು. ಶ್ಯಾಂ ಸುಂದರ್ ಇರಬಹುದೇ...ಎಂಬ ಸಂಶಯ ಹಾದು ಹೋಯಿತು..ಮನೀಶ್ ಏನಾದರೂ ಇದರಲ್ಲಿ ಶಾಮೀಲಾಗಿರಬಹುದೇ...ಯಾಕೋ...ಒಂದೂ ತಿಳಿಯದೆ ಎಲ್ಲವೂ ಅಸ್ಪಷ್ಟ ಇನ್ನೂ.....


  ತಟ್ಟನೆ ನೆನಪಾಯಿತು. ತಾನು ಹಿಂದಿನ ದಿನ ಸ್ಟೋರ್ ರೂಮಿನಲ್ಲಿದ್ದಾಗ, ಬಹಳ ತಡವಾಗಿದ್ದ ಕಾರಣ, ಮೇಲೇರಿ ಬಂದ ಸೆಕ್ಯೂರಿಟಿಗೆ ತಾನಲ್ಲಿದ್ದ ಸುಳಿವು ಸಿಕ್ಕಿರಲಿಲ್ಲ. ಯಾರೋ ಮರೆತು ಹೋದ ಹಾಗಿದೆಯೆಂದು ತಿಳಿದು ಹೊರಗಿಂದ ಬೀಗ ಹಾಕಿ ಹೋದಾಗ ಜೀವ ಬಾಯಿಗೆ ಬಂದಿತ್ತು. ಹೇಗೆ ಪಾರಾಗೋದು ಎನ್ನುವಷ್ಪರಲ್ಲೇ ಮೇಲಿನ ಸಣ್ಣ ಕಿಟಕಿ ದಾರಿ ತೋರಿ ಸಹಕರಿಸಿತ್ತು...ಈಗ ಆ ಬೀಗದ ಕೈ ಅವನ ಬಳಿಯೆ ಇರಬಹುದು. ನಾಳೆ ಬೆಳಿಗ್ಗೆ ಬೇಗ ಹೋಗಿ ಅದನ್ನು ಇಸಿದುಕೋಬೇಕು. ಸ್ಟಾಫ್ ಗಳೆಲ್ಲಾ ಬರುವ ಮುನ್ನವೇ ತಾನು ಅಲ್ಲಿರಬೇಕು. ಇಲ್ಲವಾದರೆ ಯಾರಿಗಾದರೂ ನನ್ನ ಮೇಲೆ ಗುಮಾನಿ ಬರಬಹುದು...ಎಂಬ ಆಲೋಚನೆ ಆಯಿತು...


( ಮುಂದುವರಿಯುವುದು....)



Rate this content
Log in

Similar kannada story from Horror