ರೂಬಿಯ ಸ್ವಗತ
ರೂಬಿಯ ಸ್ವಗತ
ನಾನ್ ಸ್ಟಾಪ್ ನವೆಂಬರ್ 3
ದಿನ 25
ವಿಷಯ: ಅನ್ಯಲೋಕ
ಚಂದ್ರ ಲೋಕಕ್ಕೆ ಮನುಷ್ಯ ಕಾಲಿಡುವ ಮೊದಲು ಜೀವಿಗಳ ವಾಸದ ಪರೀಕ್ಷೆಗಾಗಿ ಮೊದಲು ಒಂದು ರೂಬಿಯೆಂಬ ಶ್ವಾನವನ್ನು ಪ್ರಯೋಗ ಶಿಶುವಾಗಿ ಕಳುಹಿಸಿದರು.
ಚಂದ್ರ ಲೋಕಕ್ಕೆ ಕರೆ ತಂದ ರೂಬಿಯನ್ನು ರಾಕೆಟ್ನಿಂದ ಕೆಳಗಿಳಿಸಿ ಬಿಟ್ಟರು ವಿಜ್ಞಾನಿಗಳು. ಚಂದ್ರನ ಅಂಗಳದಲ್ಲಿಳಿದ ರೂಬಿ ಬಹಳ ಹೊತ್ತು ವಿಸ್ಮಯದಿಂದ ಸುತ್ತಲೂ ನೋಡಿತು. ಅದಕ್ಕೆ' ಇದು ತನ್ನ ಭೂಲೋಕವಲ್ಲ, ಅನ್ಯಲೋಕವೆಂದು ಅರಿವಾಗುತ್ತಿತ್ತು.
"ಕೇವಲ ಹಳ್ಳ ಕುಳಿಗಳ ನೆಲ, ಜನ ಸಂಚಾರವಿಲ್ಲ. ನನ್ನನ್ನೇಕೆ ಇಲ್ಲಿಗೆ ತಂದು ಬಿಟ್ಟಿದ್ಡಾರೆ? ನನ್ನ ಒಡನಾಡಿಗಳಿಲ್ಲ, ನನಗಂತೂ ತುಂಬಾ ಪರದಾಡುವಂತಾಗಿದೆ . ಯಾಕೋ ಸರಿಯಾಗಿ ಉಸಿರಾಡಲೂ ಆಗುತ್ತಿಲ್ಲವೆಂದುಕೊಂಡು ಸುತ್ತಮುತ್ತ ಕತ್ತು ತಿರುಗಿಸಿ ನೋಡುತ್ತಲೇ ಇತ್ತು. ನನ್ನ ಲೋಕದಲ್ಲಿ ಹಾಯಾಗಿ ಎಲ್ಲೆಂದರಲ್ಲಿ ತಿರುಗುತ್ತಿದ್ದ ನನಗೆ ಇದೆಂತಹ ದುರ್ಗತಿ ಬಂತು. ನನ್ನ ಕತ್ತಿನ ಸುತ್ತಾ ಬಲವಾದ ಪಟ್ಟಿಗಳು, ಮೈಗೆಲ್ಲ ದೊಡ್ಡ ದೊಡ್ಡ ಪಟ್ಟಿಗಳು. ಅಬ್ಬ ಸಾಕಾಗಿದೆ ನನಗೆ ಈ ಅನ್ಯಲೋಕ ಯಾತ್ರೆ. ಯಾಕೋ ಊಟ ಮಾಮೂಲಿನಂತೆ ಇಲ್ಲ. ನನ್ನ ಲೋಕಕ್ಕೆ ನಾನು ಎಂದು ಹೋಗುವೆನೋ? ನನ್ನ ಗೆಳೆಯರನ್ನು ನಾನು ಎಂದು ನೋಡುವೆನೋ? ನನಗೆ ಈ ಅನ್ಯಲೋಕ ಬೇಡ. ಈ ಮಾನವರು ನನ್ನಂತಹ ಶ್ವಾನಗಳನ್ನೇ ಏಕೆ ಪ್ರಯೋಗ ಪಶುಗಳನ್ನಾಗಿ ಮಾಡುತ್ತಾರೋ? ಇಲ್ಲಿ ಎಲ್ಲೆಲ್ಲೋ ಓಡಾಡಿಸುತ್ತಾರೆ. ಆದರೆ ಸುತ್ತಲೂ ಕತ್ತಲೇ. ಸದಾ ವಿದ್ದ್ಯುದ್ದೀಪಗಳಿಂದ ಜಗಮಗಿಸುತ್ತಿದ್ದ ನಗರಗಳಲ್ಲಿ ಓಡಾಡುತ್ತಿದ್ದ ನಾನು ಈ ಕತ್ತಲ ಲೋಕದಲ್ಲಿರಬೇಕೆಂದರೆ ನನಗೆಷ್ಟು ಕಷ್ಟವಾಗುತ್ತಿದೆಯೆಂದು ಈ ಮನುಷ್ಯರೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ? ಇನ್ನೆಷ್ಟು ದಿನಗಳು ಇಲ್ಲಿರಬೇಕೋ?"
ರೂಬಿ ತನ್ನ ಮನದಲ್ಲೇ ಹೇಳಿಕೊಳ್ಳುತ್ತಿತ್ತು. ಅಂತೂ ಇಂತೂ ಒಂದು ದಿವಸ ರೂಬಿಯನ್ನು ಹೊತ್ತ ರಾಕೇಟ್ ಅಲ್ಲಿಂದ ಹೊರಟಾಗ ಅದಕ್ಕೆ ತುಂಬಾ ಖುಷಿಯಾಯಿತು. ಆ ಅನ್ಯಲೋಕದಿಂದ ಭೂಲೋಕಕ್ಕೆ ಬಂದು ಇಳಿದಾಗ ರೂಬಿ ಕುಣಿದಾಡಿತು.ತನ್ನ ಗೂಡು,ತನ್ನ ಮನೆ, ತನ್ನ ಮುದ್ದಿನ ಮರಿಗಳೊಂದಿಗೆ ಕೂಡಿತು.
