Vijaya Bharathi

Abstract Romance Others

2.6  

Vijaya Bharathi

Abstract Romance Others

ರಸಸಂಜೆ

ರಸಸಂಜೆ

2 mins
491


ತನ್ನ ಅಮ್ಮನ ಮನೆಯಿಂದ ಮಕ್ಕಳನ್ನು ಕರೆದುಕೊಂಡು ಬರಲು ಹೊರಡಲು ರೆಡಿಯಾಗಿದ್ದ ಅವನಿ, ಕಾರು ಕೀ ತೆಗೆದುಕೊಂಡು ಮನೆಯಿಂದ ಹೊರಗಡೆ ಬರುವ ವೇಳೆಗೆ ಸರಿಯಾಗಿ ಪಟಪಟನೆ ಹನಿಗಳು ಶುರುವಾಯಿತು. ಸಂಜೆಯ ಮಳೆ ನಿಲ್ಲುವುದೋ ಇಲ್ಲವೋ ಹೇಳಲಾಗದು. ಒಂದರ್ಧ ಗಂಟೆ ಕಾದರೂ ಮಳೆ ನಿಲ್ಲುವ ಸೂಚನೆ ಕಾಣುವುದಿರಲಿ, ಧೋ ಎಂದು ಸುರಿಯತೊಡಗಿತು


ಜೊತೆಗೆ ಗುಡುಗು ಸಿಡಿಲು ಬೇರೆ. ಕಡೆಗೆ ಅಮ್ಮ ನ ಮನೆಗೆ ಫೋನ್ ಮಾಡಿ ಮಕ್ಕಳು ಇಂದು ಅಲ್ಲೇ ಇರಲಿ ಎಂದು ಹೇಳಿ ಹಾಗೇ ಕುಳಿತಳು. ಅದೇನೋ ಇಂದು ಅಪರೂಪವಾಗಿ ಅವಳ ಗಂಡ ಸೂರ್ಯ ನೂ ಮಳೆ ಬರುವುದಕ್ಕೆ ಹತ್ತು ನಿಮಿಷ ಮೊದಲು ಮನೆಗೆ ಬಂದಿದ್ದ.

ಇತ್ತೀಚೆಗೆ ಮ್ಯಾನೇಜರ್ ಪದವಿಗೆ ಪ್ರಮೋಷನ್ ಆದ ಮೇಲೆ ಅವನು ರಾತ್ರಿ ಹತ್ತಾದರೂ ಮನೆ ಸೇರುತ್ತಿರಲಿಲ್ಲ. ಇಂದೇನೋ ಬೇಗ ಬಂದಿದ್ದ.

ಮಳೆಯ ಆರ್ಭಟವನ್ನು ಕಿಟಕಿಯಲ್ಲಿ ನೋಡುತ್ತಾ ನಿಂತಿದ್ದ ಅವನಿಯನ್ನು ಸೂರ್ಯ ನೋಡಿದ. ಈ ರೀತಿಯ ಸಂಜೆಯ ಮಳೆಯಲ್ಲಿ ಹೆಂಡತಿಯನ್ನು ನೋಡಿದಾಗ ಅವನಿಗೆ ತಮ್ಮ ಮದುವೆಯಾದ ಹೊಸತರಲ್ಲಿ ಹನಿಮೂನ್ ಗೆ ಹೋದಾಗ ಮಳೆಯಲ್ಲಿ ಇಬ್ಬರೂ ಸಿಕ್ಕಿಹಾಕಿಕೊಂಡು ಪರದಾಡಿದ ನೆನಪುಗಳಾಗಿ,

ಹಿಂದಿನಿಂದ ಸದ್ದಿಲ್ಲದೆ ಬಂದು ಅವನಿಯನ್ನು ಬಳಸಿ ನಿಂತಾಗ , ಅವಳಿಗೆ ಆಶ್ಚರ್ಯವಾಯಿತು. ಅವಳು ಹಿಂತಿರುಗಿ ನೋಡಿ,' ಏನ್ ಸಮಾಚಾರ , ರಾಯರು ಇಂದೇಕೋ ಒಳ್ಳೆಯ ಮೂಡ್ ನಲ್ಲಿ ಇದ್ದ ಹಾಗಿದೆ',ಎಂದು ಹೇಳುತ್ತಾ ಅವನ ಕಡೆಗೆ ತಿರುಗಿದಾಗ, ಅವನ ಕಣ್ಣುಗಳಲ್ಲಿ ಇಣುಕುತ್ತಿದ್ದ ಪ್ರೇಮ ಲಹರಿಯನ್ನು ಗಮನಿಸಿದ ಅವಳ ಮುಖ ನಾಚಿಕೆಯಿಂದ ರಂಗೇರಿತು.


ಗಂಡನಿಗೆ ಕಾಫಿ ಕೊಡುವ ನೆಪ ಹೇಳಿ, ಅವನ ಬಂಧನದಿಂದ ಬಿಡಿಸಿಕೊಳ್ಳಲು ಹೋದಾಗ, ಸೂರ್ಯ ಅವಳನ್ನು ಇನ್ನಷ್ಟು ಹತ್ತಿರಕ್ಕೆ ಹೊಡೆದುಕೊಂಡು, ಅವಳ ಕಿವಿಯಲ್ಲಿ ಪಿಸುಗುಟ್ಟಿದ.

'ಹಾಯ್ ಸ್ವೀಟಿ, ಈ ಮಳೆಯ ಸಿಂಚನ ಕ್ಕಾಗಿ ಭೂಮಿ ಎಷ್ಟು ಹಂಬಲಿಸಿ ಕಾಯುತ್ತಾ ಇರುತ್ತದಂತೆ ಗೊತ್ತಾ?ಅಂತಹುದರಲ್ಲಿ ನಾವು ಈ ಸಂಜೆ ಮಳೆಯ ಏಕಾಂತದಲ್ಲಿ ಸುಮ್ಮನೆ ಇರುವುದಕ್ಕಾಗತ್ತಾ?ಎಷ್ಟೋ ದಿನಗಳಾದ ನಂತರ ನಮಗಿಬ್ಬರಿಗೆ ಈ ರೀತಿ ಏಕಾಂತ ಸಿಕ್ಕಿದೆ. ಇದನ್ನು ಮಿಸ್ ಮಾಡಿಕೊಳ್ಳಲಾಗುತ್ತದಾ?ಈ ಸುಂದರ ಸಂಜೆಯನ್ನು ರಸಮಯವಾಗಿಸೋಣ ಮೇಡಂ, ನೀವೇನಂತೀರಿ?'

'ಅಯ್ಯೋ ಏನ್ರಿ ಬ್ಯಾಂಕ್ ಲೆಕ್ಕಾಚಾರ ಹಾಕುವವರು ಕವಿಯಾಗುತ್ತಿದ್ದೀರಿ. ಈಗ ನನ್ನ ಬಿಡಿಪ್ಪಾ, ಕಾಫಿ ತರುತ್ತೀನಿ.' ಅವಳು ಹುಸಿಮುನಿಸಿನಿಂದ ಹೇಳುತ್ತಿದ್ದಂತೆ, ಜೋರಾಗಿ ಸಿಡಿಲು ಗುಡುಗುಗಳು ಹೊಡೆದು, ಕರೆಂಟ್ ತಟ್ಟನೆ ನಿಂತಾಗ, ಅವನಿ ಹೆದರುತ್ತಾ ಗಂಡನನ್ನು ಬಲವಾಗಿ  ಅಪ್ಪಿಕೊಂಡಾಗ, ಅವನು ಅವಳನ್ನು ಹಿಡಿದುಕೊಂಡೇ ಮೆಲ್ಲಗೆ ಬೆಡ್ ರೂಂ ನತ್ತ ನಡೆದ.

ಹೊರಗಡೆ ಸಂಜೆಯ ಮಳೆಯು ಭೂಮಿಯನ್ನು ತಣಿಸುತ್ತಿದ್ದರೆ, ಒಳಗಡೆ ಯ ಸೂರ್ಯ ತನ್ನ ಅವನಿಯನ್ನು ತಣಿಸುತ್ತಿದ್ದ. ಇಬ್ಬರೂ ಸಂಜೆ ಮಳೆಯ ಏಕಾಂತವನ್ನು ರಸಮಯವಾಗಿಸಿಕೊಳ್ಳುತ್ತಿದ್ದರು.



Rate this content
Log in

Similar kannada story from Abstract