Vijaya Bharathi.A.S.

Abstract Inspirational Others

4.0  

Vijaya Bharathi.A.S.

Abstract Inspirational Others

ರಹಸ್ಯ

ರಹಸ್ಯ

2 mins
237


ಅದೊಂದು ವಿಶಾಲವಾದ ಬಂಗಲೆಯಂತಹ ಮನೆಯಲ್ಲಿ ಉಗ್ರಾಣಕ್ಕೆ ಸೇರಿದಂತೆ ಒಂದು ಕೋಣೆ. ಅದರ ಬಾಗಿಲು ಯಾವಾಗಲೂ ಮುಚ್ಚಿರುತ್ತಿತ್ತು. ಆ ಮುಚ್ಚಿದ ಕದವನ್ನುಯಾರೂ ತೆಗೆಯುವ ಸಾಹಸವೇ ಮಾಡುತ್ತಿರಲಿಲ್ಲ.

ಆ ಮನೆಗೆ ಬಂದ ಆಧುನಿಕ ಸೊಸೆ ಸುಷ್ಮಾಳಿಗೆ ಬಹಳ ದಿನಗಳಿಂದಲೂ ಈ ಮುಚ್ಚಿದ ಕದದ ಹಿಂದಿರುವ ರಹಸ್ಯವನ್ನು ಭೇದಿಸುವ ಕುತೂಹಲ. ಇದರ ಬಗ್ಗೆ ಗಂಡನೊಂದಿಗೆ ಚರ್ಚಿಸಿದಳು . ಅವನು

" ತನಗೇನೂ ಗೊತ್ತಿಲ್ಲ,ತನಗೆ ಬುದ್ಧಿ ತಿಳಿದಾಗಲಿಂದ ಆ ಕೊಠಡಿಯ ಬಾಗಿಲನ್ನು ತೆಗೆದೇ ಇಲ್ಲ. ನಮ್ಮ ಮನೆಯಲ್ಲಿ ಆ ರೂಮಿಗೆ ಯಾರೂ ಹೋಗಬಾರದೆಂದು ಕಟ್ಟಪ್ಪಣೆ ಇದೆ. ಅಲ್ಲಿಗೇನಾದರೂ ಹೋದರೆ, ಮನೆಗೆ ಕೆಡಕಾಗುತ್ತದೆ ಎಂದು ಅಪ್ಪ ಅಮ್ಮ ಹೇಳಿದ್ದಾರೆ. ಹೀಗಾಗಿ ಆ ಕೊಠಡಿಯ ಮುಚ್ಚಿದ ಕದವನ್ನು ತೆಗೆಯಲು ಯಾರೂ ಮುಂದಾಗಿಲ್ಲ"ಎಂದು ಹೇಳಿ ಸುಮ್ಮನೆ ಆದಾಗ, ಸುಷ್ಮಾಳ ಕುತೂಹಲ ಮತ್ತೂ ಹೆಚ್ಚಾಗಿ, ಆ ಮುಚ್ಚಿದ ಕದದ ಹಿಂದೆ ಇರುವ ರಹಸ್ಯವನ್ನು ಹೇಗಾದರೂ ಪತ್ತೆ ಹಚ್ತಬೇಕೆಂದು , ಅದಕ್ಕಾಗಿ ಒಂದು ಒಳ್ಳೆಯ ಯೋಜನೆಯನ್ನು ಮನಸ್ಸಿನಲ್ಲೇ ಹಾಕಿಕೊಳ್ಳುತ್ತಿದ್ದಳು.

ಬಹಳ ದಿನಗಳ ಶ್ರಮದಿಂದ ಆ ರೂಮಿನ ಬೀಗದ ಕೈ ಪತ್ತೆ ಹಚ್ಚಿದಳು. ಇನ್ನು ಅದನ್ನು ಯಾರಾದರೂ ತೆಗೆಯುತ್ತಾರಾ ? ಎಂಬುದನ್ನು ನಿಗಾ ಇಟ್ಟು ಗಮನಿಸುತ್ತಾ ಹೋದಳು.

ರಾತ್ರಿ ಗಂಡನಿಗೆ ನಿದ್ರೆ ಬಂದ ನಂತರ,‌ಮೆಲ್ಲಗೆ ತನ್ನ ರೂಮಿನಿಂದ ಹೊರಗೆ ಬಂದು, ಆ ಕೋಣೆಯ ಕಡೆಯೇ

ದೃಷ್ಟಿ ಇರಿಸಿ ಕಾಯುತ್ತಾ ಹೋದಳು. ಅವಳು ಕಲ್ಪಿಸಿ ಕೊಂಡಂತೆ ಆ ರೂಮಿಗೆ ಯಾರೂ ಹೋಗುತ್ತಿರಲಿಲ್ಲ.

ಒಂದು ದಿನ ಮಧ್ಯ ರಾತ್ರಿ ಶಬ್ದವಾದಂತಾಗಿ ತನ್ನ ರೂಮಿನಿಂದ ಹೊರಬಂದ ಸುಷ್ಮಾ , ಮನೆಯಲ್ಲಿ ಎಲ್ಲಾ ಕಡೆ ನೋಡಿದಾಗ, ಆ ಮುಚ್ಚಿದ ಕದ ತೆಗೆದಂತೆ ಕಂಡು, ಸದ್ದು ಮಾಡದೆ ಅತ್ತ ಕಡೆ ಹೋಗಿ, ಆ ರೂಂ ಬಾಗಿಲ ಬಳಿ ಬರುವಷ್ಟರಲ್ಲಿ, ಅವಳ ತಲೆಗೆ ಬಲವಾದ ಪೆಟ್ಟು ಬಿದ್ದಂತಾಗಿ ನೆಲಕ್ಕೆ ಉರುಳಿದಳು.  

ಅವಳು ಕಣ್ಣು ಬಿಟ್ಟಾಗ ಆಸ್ಪತ್ರೆಯ ಮಂಚದ ಮೇಲೆ ಇರುವುದು ಅವಳಿಗೆ ಗೊತ್ತಾಯಿತು. ಅವಳ ಎದುರಿಗೆ ಅವಳ ಗಂಡ, ಅತ್ತೆ, ಮಾವ,ಎಲ್ಲರೂ ಆತಂಕದಿಂದ ಇರುವುದು ಗೊತ್ತಾಗಿ, ತನಗೇನಾಗಿದೆ ? ಎಂದು ಕೇಳುತ್ತಾಳೆ. ಆಗ ಅವಳ ಗಂಡ

"ನಾನೆಷ್ಟು ಬೇಡವೆಂದು ಹೇಳಿದರೂ ನೀನು ನಿನ್ನ ಹಠವನ್ನು ಬಿಡದೆ, ಆ ಮುಚ್ಚಿದ ಕದದ ರಹಸ್ಯ ‌ಭೇದಿಸುವ ಸಾಹಸ ಮಾಡಿದೆ, ಅದರ ಫಲವಾಗಿ ನೀನು ಹೀಗೆ ಆಸ್ಪತ್ರೆಗೆ ಸೇರುವಂತೆ ಆಗಿರುವುದು.ಮುಂದಾದರೂ ನಾನು ಹೇಳಿದಂತೆ ಕೇಳುವುದನ್ನು ಕಲಿತುಕೊ"ಎಂದು ಅಸಮಾಧಾನದಿಂದ ಹೇಳಿದಾಗ, ಇವಳಿಗೂ ಅವನ ಮಾತಿನ ಹಿಂದೆ ಇರುವ ಕಾಳಜಿ ಅರ್ಥ ವಾಗಿ ಸುಮ್ಮನಾದಳು.

ಈ ಘಟನೆಯ ನಂತರ ‌, ಸುಷ್ಮಾ ಆ ರೂಮಿನ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಮುಂದೆ ಒಂದು ದಿನ ಆ ರೂಮಿನ ರಹಸ್ಯ ಅವಳಿಗೆ ಆ ಮನೆಯ ಸೇವಕನಿಂದ ತಿಳಿಯಿತು.

"ಆ ಮನೆಯ ಹಿಂದಿನ ತಲೆಮಾರಿನ ಒಂದು ಅತೃಪ್ತ ಆತ್ಮ ಆ ರೂಮಿನಲ್ಲಿ ಸೇರಿರುತ್ತದೆ, ಅದು ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಹೊರಗಡೆ ಸಂಚಾರ ಮಾಡುತ್ತದೆ. ಆದರೆ ಅದರ ತಂಟೆಗೆ ಹೋಗದಿದ್ದರೆ ಅದು ಯಾರಿಗೂ ತೊಂದರೆ ನೀಡುವುದಿಲ್ಲ".....ಈ ಒಂದು ಕಥೆ ಆ ಮುಚ್ಚಿದ ಕದದ ಹಿಂದೆ ಇದೆ ಎಂಬುದನ್ನು ತಿಳಿದ ನಂತರ ಸುಷ್ಮಾ, ಆ ಮನೆಯಲ್ಲಿ ಒಂದು ಗಳಿಗೆಯೂ ಇರಲು ಇಷ್ಟ ಪಡದೆ, ತನ್ನ ಗಂಡನೊಂದಿಗೆ ಬೇರೆ ಮನೆಗೆ ಹೋಗೋಣ ವೆಂದು ಪಟ್ಟು ಹಿಡಿದು ಕುಳಿತಳು. ಇದುವರೆಗೂ ಕಾಡದ ಭಯ ಈಗ ಅವಳನ್ನು ಕಾಡತೊಡಗಿತು. ಆ ರೂಮಿನಲ್ಲಿರುವ ಪ್ರೇತಾತ್ಮದ ವಿಷಯ ತಿಳಿದ ದಿನದಿಂದ, ಸುಷ್ಮಾ ಒಂದು ದಿನವೂ ನೆಮ್ಮದಿಯಿಂದ ನಿದ್ದೆ ಮಾಡಲಿಲ್ಲ.

ಹೆಂಡತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಚಿಂತಿತನಾದ ಅವಳ ಗಂಡ ಸೂರಜ್ , ಆದಷ್ಟು ಬೇಗ ಬೇರೆ ಮನೆ ಮಾಡಿ, ಅವಳನ್ನು ಹೊಸ ಮನೆಗೆ ಕರೆದುಕೊಂಡು ಹೋದ. ಕಾಲಕ್ರಮೇಣ ಸೂರಜ್ ನ ತಂದೆ ಮತ್ತು ಅವರ ಸಹೋದರರು ಆ ಬಂಗಲೆಯನ್ನು ಬೇರೆಯವರಿಗೆ ಮಾರಾಟ ಮಾಡಿ ಬಿಟ್ಟರು. ಒಟ್ಟಿನಲ್ಲಿ ಆ ಬಂಗಲೆಯ ಮುಚ್ಚಿದ ಕದದ ರಹಸ್ಯ ಭೇದವಾಗಿತ್ತು.



Rate this content
Log in

Similar kannada story from Abstract