Gireesh pm Giree

Abstract Action Inspirational

4  

Gireesh pm Giree

Abstract Action Inspirational

ಪಟಾಕಿ ತಂದ ಅವಾಂತರ!!

ಪಟಾಕಿ ತಂದ ಅವಾಂತರ!!

2 mins
418


ಹೊಸ ವರ್ಷದ ಶಾರದಾ ಕ್ಯಾಲೆಂಡರ್ ಮನೆಗೆ ಬರುವುದೇ ತಡ ಅದನ್ನು ತಿರುಗಿ ಮಗುಚಿ ಯಾವಾಗ ದೀಪಾವಳಿ ದಿನವೆಂದು ಕಣ್ಣು ಹಾಯ್ಸುತಿದ್ದೆ. ಇನ್ನೆಷ್ಟು ದಿನ ಕಾಯಬೇಕೆಂದು ಕ್ಯಾಲೆಂಡರ್ ಅಲ್ಲೇ ಇಟ್ಟು ಕಳೆದು ಹೋದ ದೀಪಾವಳಿಯ ರಸ ನಿಮಿಷದ ಸವಿ ನೆನಪನ್ನು ಮನದ ಕಿಟಕಿಯಲ್ಲಿ ಇಣುಕಿ ನೋಡಲು ಶುರು ಮಾಡಿದೆ.

  ದೀಪಾವಳಿ ಅದು ಬಾಲ್ಯದ ದಿನಗಳಲ್ಲಿ ನನ್ನ ನೆಚ್ಚಿನ ಹಬ್ಬಗಳಲ್ಲಿ ಒಂದು . ಮನೆ ಅಂಗಳ ತುಂಬಾ ರಂಗೋಲಿ ಚಿತ್ತಾರ. ಅದರ ಮೇಲೆ ದೀಪಗಳ ವಿಧ ವಿಧದ ಶೃಂಗಾರ. ಕರ್ಪೂರ -ದೂಪವನ್ನು ಬೆಳಗಿ ದೇವರಿಗೆ ಆರತಿಯ ಎತ್ತುವ ಸಡಗರ. ನರಕ ಚತುರ್ದಶಿಯ ಬೆಳಗಿನ ಎಣ್ಣೆ ಸ್ನಾನ. ಬೇಡ ಬೇಡವೆಂದರು ಕಿವಿಗೆ ತೈಲ ಹೊಯ್ಯುವ ಅಪ್ಪ. ಪಟಾಕಿಗೆ ಹಣ ಕೊಡುವೆಂದರೂ ಅದು ಹಾಳೆನ್ನುವ ಅಮ್ಮ. ಹೊಸ ಬಟ್ಟೆಗಾಗಿ ಹಠ ಹಿಡಿಯೋ ಅಕ್ಕ . ಇದನ್ನೆಲ್ಲ ನೋಡುವ ಮನೆಯ ನಾಲ್ಕು ಗೋಡೆಗಳು . ಅಬ್ಬಾ ಎಂಥ ಮಜಾ!.

    ದೀಪಗಳ ಹಬ್ಬ ಎಂದ ಕೂಡಲೇ ನೆನಪಾಗುವುದು ಸಾಮಾನ್ಯರಿಗೆ ದೀಪಗಳ ಸಾಲು ನನಗೆ ಮಾತ್ರ ಪಟಾಕಿ ಹೊಡೆಯೋ ಆತುರ. ಅಪ್ಪನ ಕೋಣೆಯ ಮೇಲೆ ತೂಗಿಸಿದ ಪಟಾಕಿಯ ಕಟ್ಟು ನನ್ನ ಕಣ್ಣನ್ನು ಕುಕ್ಕುತ್ತಿತ್ತು . ಯಾವುದೇ ಕಾರಣಕ್ಕೂ ಅದನ್ನು ತೆಗೆಯಬಾರದೆಂಬ ಅಪ್ಪನ ಷರತ್ತಿಗೆ ನನ್ನ ಮರ್ಕಟ ಮನಸ್ಸು ಒಪ್ಪಲಿಲ್ಲ . ಹೇಗಾದರು ಮಾಡಿ ಆ ಪ್ಲಾಸ್ಟಿಕ್ ಲಕೋಟಿಯಲ್ಲಿನ ಪಟಾಕಿ ಹೊಡೆಯಲೇಬೇಕೆಂಬ ದೃಢನಿರ್ಧಾರಕ್ಕೆ ಬಂದೆ. ಮನೆಯವರು ಹಬ್ಬದ ತಯಾರಿಯಲ್ಲಿ ತಲ್ಲೀನರಾಗಿದ್ದ ಸಮಯ ನೋಡಿ ಲಕೊಟ್ಟೆಯಲ್ಲಿನ ಬಾಂಬ್ ನ ಪೊಟ್ಟಣ ಹೊರಗೆ ತೆಗೆದೆ. ಅದನ್ನು ನೋಡುವಾಗ ಹೆದರಿಕೆ ಮೂಡಲಾರಂಭಿಸಿತು. ಅಪ್ಪ ಕೆಲಸದಿಂದ ಬರುವ ಹೊತ್ತು ಆಗಿದೆ ಬೇರೆ . ಅಂದುಕೊಂಡ ಕೆಲಸ ಬೇಗ ಮುಗಿಸುವುದು ಉಚಿತವೆಂದು ಎರಡು ಬಾಂಬ್ ತೆಗೆದು ಕಿಸೆಯಲ್ಲಿ ಹಾಕಿ ಹೊರಗೆ ನಡೆದೆ. ಇದನ್ನು ನೇರ ಹೊಡೆಯಲು ನನ್ನಿಂದ ಆಗದು ಇನ್ನೇನು !ಚಿಂತೆಯಲ್ಲಿ ಮುಳುಗಿರುವಾಗ ಹಿತ್ತಲ ಕಡೆಯಲ್ಲಿ ಉರಿಯುತ್ತಿದ್ದ ನೀರ ಒಲೆಗೆ ಪಟಾಕಿ ಹಾಕಿದೆ. ಎಸೆದ ಮರು ಕ್ಷಣವೇ ಜೋರಾದ ಸದ್ದು ಮೂಡಿತ್ತು . ಕಿವಿ ಕೆಲವು ಸೆಕೆಂಡು ಕುಯಿಯಿಯಿಯಿಯಿ ಎಂದಿತು. ಮೆಲ್ಲನೇ ಅಲ್ಲಿಂದ ಜಾರುವಷ್ಟರಲ್ಲಿ ಕುಯಿಗುಟ್ಟುವ ಶ್ರವಣಕ್ಕೆ ಅಪ್ಪನ ಮೆಟ್ಟಿನ ಸದ್ದು ಅಮ್ಮನ ಬೈಗುಳ ಕೇಳಿತು. ನನ್ನ ಗತಿ ಗೋವಿಂದ್ ಇಲ್ಲಿ ಇದ್ದರೆ ಬೆನ್ನು ಕಾಯಬಹುದು ಇದನ್ನು ತಪ್ಪಿಸಲು ಪಕ್ಕದ ಮನೆಗೆ ಓಡುವಷ್ಟರಲ್ಲಿ ಅಸಲಿ ಕಥೆ ತಿಳಿದ ಅಪ್ಪ ನನ್ನ ಬೆನ್ನಿಗೆ ಎರಡು ಏಟು ಹೊಡೆದು ಬುದ್ಧಿ ಮಾತು ಹೇಳಿದರು."ನೋಡು ಕಂದ ಪಟಾಕಿ ಮುಂಜಾಗ್ರತೆ ಕ್ರಮ ಇಲ್ಲದೆ, ನಿನ್ನಂತಹ ಪ್ರಾಯದಲ್ಲಿ ಹೊಡೆಯುವುದು ತಪ್ಪು . ಈ ದೀಪಾವಳಿಯ ಸಮಯದಲ್ಲಿ ಅದೆಷ್ಟೋ ಬಣ್ಣ ಬಣ್ಣದ ಜಗವ ನೋಡಬೇಕಾದ ಬಾಲಕರ ಕಣ್ಣು ಅರೆ ಕ್ಷಣದ ಮೋಜಿಗಾಗಿ ಬದುಕನ್ನೇ ಕತ್ತಲು ಮಾಡುತ್ತಾರೆ. ಎಷ್ಟೋ ಯುವಕರು ಶಾಶ್ವತ ಕುರುಡಾಡ ಉದಾಹರಣೆ ಕಣ್ಣ ಮುಂದೆಯೇ ಇದೆ. ದೀಪಗಳ ಹಬ್ಬವು ಎಲ್ಲರ ಬಾಳನ್ನು ಬೆಳಗುವ ಜ್ಯೋತಿಯಾಗಬೇಕು. ಅದು ಹಗಲಿರುಳಿನ ರಂಗನ್ನು ಕಳೆಯದಿರಲಿ". ಇದನ್ನು ಕೇಳುತಲೇ ಯಾಕೆ ಬೇಕಿತ್ತು, ಪಟಾಕಿಯ ಸಹವಾಸ ?. ಬೇಕಿತ್ತಾ ಅಪ್ಪನ ಉಪದೇಶವೆನ್ನುತ್ತಾ ಒಳ ನಡೆದೆ.

 ಇಂದಿಗೂ ಅಕ್ಕ ಪಕ್ಕದವರ ಮನೆಯಲ್ಲಿ ಪಟಾಕಿ ಸದ್ದು ಕೇಳುವಾಗ ಸ್ವತಃ ನಾನೇ ಪಟಾಕಿ ಹೊಡೆಯುವಾಗ ಅಪ್ಪನ ಮಾತುಗಳು ನೆನಪಾಗುತ್ತದೆ. ಆದ್ರೂ ಆ ದಿನಗಳಲ್ಲಿ ಕದ್ದು ಪಟಾಕಿ ಹೊಡೆಯೋ ಮಜಾನೇ ಬೇರೆ ಆದ್ರೆ ಪಟಾಕಿ ಸದ್ದು ಮಾತ್ರ ನನ್ನನ್ನು ಸಿಕ್ಕಿ ಹಾಕಿಸುತ್ತಿತ್ತು.


Rate this content
Log in

Similar kannada story from Abstract