ಒಡಲ ನೋವು
ಒಡಲ ನೋವು


ಜೀವನದ ಕೊನೆಯ ದಿನಗಳನ್ನು ನೋಡುತ್ತ ರಾಮಕ್ಕ ಮಠದಲ್ಲಿ ಇದ್ದು ಬಂದವರ ಸೇವೆ ಮಾಡುತ್ತ ಜೀವನ ನಡೆಸುತ್ತಿದ್ದಳು.
ಒಂದು ದಿನ ಅಲ್ಲಿಗೆ ಪತಿ ಪತ್ನಿಯರಿಬ್ಬರು ದೇವರ ದರುಶನಕೆ ಬಂದರು.
ಅವಳ ಕೊರಳ ತಾಳಿ ನೋಡಿದರೆ ಅವರು ಮದುವೆಯಾಗಿ ತುಂಬಾ ದಿನ ಆಗಿದೆ ಎಂದು ರಾಮಕ್ಕನಿಗೆ ಅನ್ನಿಸಲಿಲ್ಲ..
ಇಬ್ಬರೂ ತಣ್ಣೀರು ಮೈಮೇಲೆ ಸುರಿದುಕೊಂಡರು. ಒದ್ದೆ ಬಟ್ಟೆಯಲ್ಲಿ ಶಿವಲಿಂಗಗಳಿಗೆ ಮತ್ತು ನವದುರ್ಗೆಯರಿಗೆ ಪೂಜೆ ಮಾಡಿ,ಅಭಿಷೇಕ ಮಾಡಿ, ಉರುಳು ಸೇವೆ ಮಾಡಿದರು ಜೊತೆಗೆ ಹೆಜ್ಜೆ ನಮಸ್ಕಾರ ಹಾಕಿದರು.
ಅಲ್ಲದೆ ಸಾವಿರಾರು ಜನ ನಡೆದಾಡುವ ದಾರಿಯಲ್ಲಿ ನೆಲದ ಮೇಲೆ ಇಬ್ಬರು ಪ್ರಸಾದ ಸೇವಿಸಿದರು. ಮನಸ್ಸು ತಡೆಯದೇ ಕೇಳಿಯೇ ಬಿಟ್ಟಳು ರಾಮಕ್ಕ.
ಇಷ್ಟು ಕಠಿಣ ವೃತ ಯಾಕೆ ಮಾಡಿದಿರಿ ಏನು ನಿಮ್ಮ ಹರಕೆ ಎಂದು? ಅಮ್ಮ ನನ್ನ ಹೆಸರು ಕಾವ್ಯ ಇವರು ನನ್ನ ಪತಿ ಪ್ರಸಾದ್ ನಾವು ಮೆಚ್ಚಿ ಮನೆಯವರ ವಿರುದ್ಧ ಮದುವೆಯಾದವರು. ನಂತರ ಗಂಡನ ಮನೆ ಸೇರಿದೆ.
ನಮಗೆ ಮದುವೆಯಾಗಿ ಎರಡು ವರ್ಷವಾದರು ಮಕ್ಕಳಾಗಲಿಲ್ಲ. ಆಸ್ಪತ್ರೆ ಅಲಿದು ಚಪ್ಪಲಿ ಹರಿದವು ಹೊರತು ಮಡಿಲು ತುಂಬಲಿಲ್ಲ. ಬಂಜೆ ಎಂಬ ಪಟ್ಟ ಅಳಿಯಲಿಲ್ಲ.
ಆಗ ನಮಗೆ ಯಾರೋ ಹೇಳಿದರು ಇಲ್ಲಿ ಹರಕೆ ಕಟ್ಟಿದೆವು ವರುಷದಲ್ಲಿಯೇ ನಮಗೆ ಅವಳಿ ಜವಳಿ ಹೆಣ್ಣು ಮಕ್ಕಳಾದವು. ಹಾಗಾಗಿ ಈಗ ಹರಕೆ ತೀರಿಸುತ್ತಿದ್ದೇವೆ.
ಅಲ್ಲಾ, ಎರಡು ವರುಷಕ್ಕೆ ಇಷ್ಟು ನಿರಾಸೆಯ ಭಾವ ಯಾಕೆ ಹುಟ್ಟಿತಮ್ಮ?
ಅಮ್ಮ ನಾನು ತುಂಬು ಕುಟುಂಬದ ಸೊಸೆ ನಾನೇ ಹಿರಿಯಳು. ಕಿರಿಯವಳಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ.
ದಿನವು ನನ್ನ ಅತ್ತೆ "ಬಂಜೆಯಾಗಿ ನೂರು ವರುಷ ಬಾಳುವುದಕ್ಕಿಂತ ಸಾಯುವುದು ಲೇಸೆಂದು" ದಿನವು ಹಂಗಿಸುತ್ತಾರೆ. ಅದಲ್ಲದೆ ನಮ್ಮದು ಪ್ರೇಮವಿವಾಹ ಆಗಿರುವುದಕ್ಕೆ ನಮ್ಮ ಮೇಲೆ ಅಷ್ಟಾಗಿ ಪ್ರೀತಿ ಇಲ್ಲ.
ಹೆಂಡತಿ ಗುಲಾಮ ಎಂದು ಅವರಿಗೂ ಚುಚ್ಚಿ ಮಾತಾಡುತ್ತಾರೆ. ಕಿರಿಯ ಸೊಸೆಯ ಮಗು ನನ್ನ ಬಳಿ ಬಂದರೆ ಬಂಜೆಯ ಬಳಿ ಮಗು ಬಿಡಬೇಡ ಎನ್ನುತ್ತಾ ನನ್ನ ಕೈಯಿಂದ ಕಿತ್ತುಕೊಂಡು ಅವಳಿಗೆ ಕೊಡುತ್ತಾರೆ.
ಎರಡೇ ವರುಷಕ್ಕೆ ಎರಡು ಜನ್ಮದ ನರಕ ತೋರಿಸಿ ಬಿಟ್ಟಳು ನನ್ನ ಅತ್ತೆ.
ದೇವರ ದಯೆಯಿಂದ ಈಗ ನಾನು ಅವಳಿ ಜವಳಿ ಹೆಣ್ಣು ಮಕ್ಕಳನ್ನು ಹೆತ್ತಿರುವೆ ಆದ್ರೆ ಈಗ ಈ ಸಂತೋಷ ಕಣ್ಣು ತುಂಬಿಕೊಳ್ಳೋಕೆ ಇಂದು ನನ್ನ ಅತ್ತೆ ಜೀವಂತವಿಲ್ಲ ಎಂದಳು.
ಕಾವ್ಯಳ ಕಥೆ ಕೇಳಿದ ರಾಮಕ್ಕ ಅಳುವುದು ನಗುವುದು ತಿಳಿಯದಾದಳು?
ತನಗೆ ಮಕ್ಕಳಿರುವುದು ಮುಳುವಾದರೇ? ಇವಳಿಗೆ ಮಕ್ಕಳಿಲ್ಲದಿರುವುದು ಮುಳುವಾಯಿತು ಎಂದು ಮನದಲಿ ನೊಂದಳು.
ಅಮ್ಮ ಯಾಕೆ ಸುಮ್ಮನಾದಿರಿ? ನಿಮ್ಮನ್ನು ನೋಡಿದ್ರೆ ನೀವು ಜೀವನದಲ್ಲಿ ತುಂಬಾ ನೊಂದಿರುವಿರಿ ಅನ್ನಿಸುತ್ತೆ.
ನನಗೆ ತಾಯಿ ಇಲ್ಲ ನಿಮ್ಮಲ್ಲಿ ಆ ಭಾವ ಕಂಡು ಮನದ ನೋವು ಹಂಚಿಕೊಂಡ
ೆ, ನೀವು ಮಗಳೆಂದು ಭಾವಿಸಿ ಇಷ್ಟವಿದ್ದರೆ ಹೇಳಿ ಅಂದಳು.
ಕಾವ್ಯ ನನಗೆ 10 ವರುಷವಾದರು ಮಕ್ಕಳು ಆಗಿರಲಿಲ್ಲ ನಾನು ನಿಮ್ಮ ಹಾಗೇ ಇಲ್ಲಿ ಹರಕೆ ಕಟ್ಟಿ ಅವಳಿ ಜವಳಿ ಗಂಡು ಮಕ್ಕಳನ್ನು ಹೆತ್ತೆ, ಚೆನ್ನಾಗಿ ಬೆಳೆಸಿದೆವು, ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಮಾಡಿದೆವು, ವಯಸ್ಸಿಗೆ ಬಂದ ಮೇಲೆ ಅವರು ಇಷ್ಟ ಪಟ್ಟ ಹುಡುಗಿಯರೊಂದಿಗೆ ವಿವಾಹವನ್ನು ಮಾಡಿದೆವು.
ವರ್ಷದಲ್ಲಿಯೇ ಯಜಮಾನ್ರು ಆಕಸ್ಮಿಕ ಹೃದಯಘಾತದಿಂದ ಅಗಲಿದರು. ಅವರಿದ್ದಾಗ ಜೀವನ ಸಂತೋಷದಿಂದ ತುಂಬಿ ತುಳುಕುತಿತ್ತು. ಈಗ ಆ ಸಂತೋಷ ಮರೀಚಿಕೆ ಆಗಿದೆ.
ಇಬ್ಬರೂ ಅಣ್ಣ ತಮ್ಮಂದಿರು ಆಸ್ತಿಗಾಗಿ ಜಗಳವಾಡಿದರು ಅವರಿಗೆ ಅಪ್ಪ ತೀರಿದ ನೋವಿಗಿಂತ ಆಸ್ತಿ ಸಿಗುವುದಲ್ಲ ಎಂಬ ಸಂತೋಷವೇ ಹೆಚ್ಚಾಗಿತ್ತು.
ದೊಡ್ಡ ಮಗ ನನಗೆ ನೂರೆಂಟು ಕೆಲಸ ಅಮ್ಮನನ್ನು ನೋಡಿಕೊಳ್ಳುವಷ್ಟು ಸಮಯ ನನಗೆ ಸಿಕ್ಕುವುದಿಲ್ಲ
ಎಂದು ಮುಖಕ್ಕೇ ಹೊಡೆದ ಹಾಗೇ ಹೇಳಿದನು.
ಕಿರಿಯವನು ನಾನು ನೋಡಿಕೊಳ್ಳುತ್ತೇನೆ ನನಗೆ ಹೆಚ್ಚಿನ ಪಾಲು ಕೊಡು ಎಂದನು.
ನಾನೇ ಹೆರದಿದ್ದರೆ ಅವರೇ ಆಸ್ತಿ ಮಾಡದಿದ್ದರೆ ನೀವು ನೋಡಿಕೊಳ್ಳುವ ಹೀನ ಪರಿಸ್ಥಿತಿಯೇ ನನಗೆ ಬರುತ್ತಿರಲಿಲ್ಲ ಅಲ್ಲವೇ?
ನನಗಾಗಿ ನೀವು ಕಚ್ಚಾಡುವುದು ಬೇಡ ನಿಮ್ಮ ದಯೆಯ ಭಿಕ್ಷೆಯು ಬೇಡ ನನ್ನ ಬದುಕನ್ನು ನಾನು ನೋಡಿಕೊಳ್ಳುತ್ತೇನೆ. ನಿಮ್ಮ ಬಾಳು ನೀವು ನೋಡಿಕೊಳ್ಳಿ ಎಂದು ಹೇಳುತ್ತಾ ಖುದ್ದಾಗಿ ಸ್ವಇಚ್ಛೆಯಿಂದ ಬಿಡುಗಡೆ ಬಯಸಿ ಮನೆ ಬಿಟ್ಟು ಬಂದು ಇಲ್ಲಿ ಕೆಲಸ ಮಾಡುತ್ತ ದೇವರು ಕೊಟ್ಟ ತುತ್ತಿನ ಚೀಲ ತುಂಬಿಸುತ್ತಿರುವೆ. ಆ ಕಾರಣಕ್ಕೆ ಮಕ್ಕಳು ಬೇಕೆ ಎಂದು ಒಂದು ಕ್ಷಣ ಆ ಯೋಚನೆಯಲ್ಲಿ ಮುಳುಗಿದೆ.
ಅಮ್ಮ ನಿಮ್ಮ ಕಥೆ ಕೇಳಿ ಕರುಳು ಕತ್ತರಿಸಿ ಬಂತು.
ನಿಮಗೆ ತೊಂದರೆ ಆಗಲ್ಲ ಎಂದರೆ ನೀವು ನಮ್ಮ ಮನೆಯಲ್ಲಿ ರಾಣಿಯಾಗಿರಿ.ನಾನು ನಿಮ್ಮನ್ನ ನನ್ನ ಸ್ವಂತ ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುವೆ ಎಂದಳು.
ನನ್ನ ಹೆತ್ತ ಮಕ್ಕಳೇ ನನಗೆ ಆಗಲಿಲ್ಲ ನೀನು ತೋರಿಸಿದ ಪ್ರೀತಿಗೆ ನಾನು ಆಭಾರಿ ಆದ್ರೆ ಕಾವ್ಯ ನನಗೆ ನಿನ್ನ ಪ್ರೀತಿ ಮಾತ್ರ ಸಾಕು ದಯೆ ಬೇಡ.
ದಯೆಯ ಭಿಕ್ಷೆ ಬೇಡವೆಂದೆ ಮಠದಲ್ಲಿ ದುಡಿದು ತಿನ್ನುತ್ತಿರುವೆ. ನೀನು ನಿನ್ನ ಮನೆಯಲ್ಲಿ ಒಂದು ಕೆಲಸ ಕೊಟ್ಟರೆ ಬರುವೆ ಅಂದಳು.
ಋಣದ ಊಟ ಮಾಡಲಾರೆ ಮಗಳೇ ತಪ್ಪಾಗಿ ಭಾವಿಸದಿರು.
ಸರಿ ಅಮ್ಮ ನಿಮ್ಮ ಸ್ವಾಭಿಮಾನಕ್ಕೇ ಪೆಟ್ಟು ಕೊಡಲಾರೆ ನಾವಿಬ್ಬರೂ ಕೆಲಸಕ್ಕೆ ಹೋಗುತ್ತೇವೆ. ಕೆಲಸ ಮುಗಿಸಿ ಬರುವರೆಗೂ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂದಳು.
ರಾಮಕ್ಕ ಒಪ್ಪಿಕೊಂಡು ಖುಷಿಯಿಂದ ಅವರೊಟ್ಟಿಗೆ ಅವರ ಮನೆಗೆ ಹೋದಳು.
ಮಕ್ಕಳ ಮುಖ ನೋಡುತ್ತಿದ್ದ ಹಾಗೇ ಅನುಭವಿಸಿದ ನೋವು ಕಷ್ಟ ಎಲ್ಲಾ ಮರೆತಳು.
ಅವರನ್ನೇ ತನ್ನ ಮೊಮ್ಮಕ್ಕಳು ಎಂದು ಭಾವಿಸಿ ಸಂತೋಷದಿಂದ ಬದುಕು ನಡೆಸಿದಳು.