ಅಪವಾದ
ಅಪವಾದ


ಸ್ಪಂದನಾ ಕುಡುಕ ಗಂಡನ ಕಿರುಕುಳ ತಾಳದೆ ಬೇಸತ್ತು ಕೊನೆಗೊಂದು ದಿನ ತವರಿಗೆ ತಿಳಿಸಿದಳು. ತವರಿಂದ ಬಂದ ಉತ್ತರ ಹೊಂದಿಕೊಂಡು ಹೋಗು, ಗಂಡನ ಮನೆ ತೊರೆದು ಬಂದು ತವರಿಗೆ ಅಪಕೀರ್ತಿ ತರಬೇಡವೆಂದು. ಉಸಿರು ಗಟ್ಟಿಸುವ ವಾತಾವರಣವಿದ್ದರೂ ಗಟ್ಟಿಯಾಗಿ ನೆಲೆಯೂರಬೇಕು ಎಂದು ಹೇಳಿದರು.ಜೀವನವೇ ಸಾಕೆಂದು ಅನ್ನಿಸಿದರು ಆತ್ಮಹತ್ಯೆ ಮಾಡಿಕೊಳ್ಳಲು ಅವಳಿಗೆ ಮನಸ್ಸು ಆಗಲಿಲ್ಲ ಅದೇ ಚಿಂತೆಯಲ್ಲಿ ಬೇಯುವಾಗ ಅತ್ತೆ ಗಂಡ ಸೇರಿ ಮನೆಯಿಂದ ಹೆಂಡತಿಯನ್ನು ಹೊರ ಹಾಕಿದರು. ಗಂಡ, ಅತ್ತೆ ಸೇರಿಕೊಂಡು ತಮ್ಮ ಸೊಸೆ ಓಡಿ ಹೋಗಿದ್ದಾಳೆ ಎಂದು ಅಪವಾದ ಹೊರಿಸಿದರು, ತವರಿಗೂ ಕೂಡಾ ಸುದ್ದಿ ಹಬ್ಬಿಸಿದರು.
ಹೆತ್ತವರು ರೋಷದಿಂದ ಗಂಡನ ಮನೆಗೆ ಬಂದು ಅಳಿಯನ ಕತ್ತು ಪಟ್ಟಿ ಹಿಡಿದು ಹೇಳಿದರು.
'ನಮ್ಮ ಮಗಳು ನೀತಿಗೆಟ್ಟವಳು ಅಲ್ಲ, ಸುಸಂಸ್ಕೃತ ಮನೆತನದ ರಕ್ತ ಅವಳ ಮೈಯಲ್ಲಿ ಹರಿಯುತ್ತಿದೆ'.
ನೀವೇ ಅವಳನ್ನು ಮನೆಯಿಂದ ಹೊರಗಡೆ ಹಾಕಿ ಈಗ ಹೀಗೆ ಸುಳ್ಳು ಸುದ್ದಿ ಹಬ್ಬಿಸಿ ನಮ್ಮ ಮನೆತನದ ಮರ್ಯಾದೆ ತೆಗೆಯುತ್ತಿರುವಿರಾ? ನಮ್ಮ ಮಗಳಿಗೆ ಏನಾದ್ರು ಆಗಿದ್ದರೆ ನೀವು ಯಾರೂ ಜೀವ ಸಹಿತ ಇರುವುದಿಲ್ಲ ನೆನಪಿರಲಿ ಎಂದು ಎಚ್ಚರಿಸಿ ಹೋದರು.
ಹೆತ್ತವರು ಮಗಳಿಗಾಗಿ ಹುಡುಕಾಡದ ಸ್ಥಳವಿಲ್ಲ ಆದ್ರೆ ಮಗಳು ಮಾತ್ರ ಸಿಗಲಿಲ್ಲ. ಕರೆ ಮಾಡಿದರು ಮೊಬೈಲ್ ಸ್ವಿಚ್ ಆಫ್, ಎಷ್ಟೇ ಹುಡುಕಿದರು ಮಗಳ ಸುಳಿವು ದೊರೆಯಲಿಲ್ಲ. ತಪ್ಪು ಮಾಡಿದೆವು ಸಮಾಜಕ್ಕೆ ಹೆದರಿ ಇರುವ ಒಬ್ಬಳೇ ಮಗಳು ತನ್ನ ಕಷ್ಟ ಹೇಳಿಕೊಂಡಾಗ ಸ್ಪಂದಿಸಿ ಸಾಂತ್ವನ ನೀಡದೆ ಬುದ್ಧಿ ಮಾತು ಹೇಳಲು ಹೋಗಿ ದಡ್ಡರಾದೇವು. ಪಾಪ ಅವಳು ಗಂಡನ ಮನೆಯಲ್ಲಿ ಆದೆಷ್ಟು ನರಕಯಾತನೆ ಅನುಭವಿಸಿರಬೇಡ?
ಅವಳೆಷ್ಟು ನೋವು ನುಂಗಿ ಬೇಸತ್ತಿರಬೇಡ ಹೆತ್ತವರಾಗಿ ನಾವು ಅರಿಯದೆ ಅವಳ ಬದುಕನ್ನು ಹಾಳು ಮಾಡಿದೆವು ಎಂದು ನೊಂದರು.
ಈಗ ಅವಳನ್ನು ಎಲ್ಲಿ ಎಂದು ಹುಡುಕಬೇಕು? ದೇವರೇ ನಮ್ಮ ಮಗಳು ಸ್ಪಂದನಾ ಎಲ್ಲಿದ್ದರು ಬೇಗ ಸಿಗಲಿ ಎಂದು ದೇವರಲ್ಲಿ ಮೊರೆಯಿಟ್ಟರು. ವರುಷಗಳು ಕಳೆದವು ಮಗಳು ಎಲ್ಲಿಯೂ ದೊರೆಯಲೇ ಇಲ್ಲ. ಅಳಿಯ ಮತ್ತೊಂದು ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದನು. ತುಂಬು ಗರ್ಭಿಣಿಯಾದ ಎರಡನೇ ಹೆಂಡತಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆ ತಂದನು.
ಆಸ್ಪತ್ರೆಯಲ್ಲಿ ವೈದ್ಯರನ್ನು ಕಂಡಾಗ ಕ್ಷಣ ದಂಗಾದನು. ನೂರಾರು ವೈದ್ಯರ ನಡುವೆ ಮುಖ್ಯ ವೈದ್ಯರ ಸ್ಥಾನದಲ್ಲಿ ಕಾಣಿಸಿದ್ದು ಮೊದಲ ಹೆಂಡತಿ ಸ್ಪಂದನಾ. ಮೊದಲ ಬಾರಿಗೆ ಗಂಡನನ್ನು ಕಂಡರು ಕಾಣದ ಹಾಗೇ ಸೂರ್ಯ ಬನ್ನಿ ಹೋಗೋಣ ಎಂದು ನಡೆದಳು.
ಸೂರ್ಯ ಯಾರಿರಬಹುದು? ಇವಳು ನಿಜಕ್ಕೂ ಓಡಿ ಹೋಗಿ ಇವನೊಂದಿಗೆ ಮದುವೆ ಆಗಿದ್ದಾಳಾ? ಅವಳ ಕತ್ತಲ್ಲಿಯ ತಾಳಿ ಅವನು ಕಟ್ಟಿದ್ದೆ ಇರಬಹುದೇ? ಇದನ್ನು ಹೇಗೆ ತಿಳಿದುಕೊಳ್ಳಲಿ ಎನ್ನುವಷ್ಟರಲ್ಲಿ ಸ್ಪಂದನಾಳಿಗೆ ಒಂದು ಮಗು ಅಮ್ಮ ಎಂದು ಕರೆಯುತ್ತಾ ಓಡಿ ಬಂತು. ಅವಳನ್ನು ಮುದ್ದಿಸಿ ಇಲ್ಲೇ ಕುಂತಿರು ನನ್ನದೊಂದು ಕೆಲಸ ಮುಗಿಸಿ ಬರುವೆ ಎಂದು ಹೇಳಿ ಹೋದಳು.
ಆ ಮಗುವಿನ ಬಳಿ ಬಂದು ಮಗು ನೀನು ಯಾರ ಮಗಳು ಎಂದನು? ಸ್ಪಂದನಾ ಪ್ರಕಾಶ್ ಎಂದಿತು ಮಗು. ಮಗು ತನ್ನ ಹೆಸರೇ ಹೇಳುತ್ತಿದೆಯಲ್ಲ ಎಂದು ಗಾಬರಿಯಾಗಿ ಯೋಚಿಸುತ್ತ ಹೊರಗಡೆ ಬಂದನು.
ಸ್ಪಂದನಾ ತನ್ನ ಗಂಡನ ಎರಡನೇಯ ಹೆಂಡತಿಯ ಮಗುವನ್ನು ಕೈಗಿಟ್ಟು ಅಭಿನಂದನೆಗಳು ನಿಮಗೆ ಗಂಡು ಮಗುವಾಗಿದೆ ಎಂದು ಖುಷಿಯಾಗಿ ಹೇಳಿದಳು.
ಅದಿರಲಿ ಅಲ್ಲಿ ಕುಂತಿರೋ ಮಗು ಯಾರದು ಎಂದನು ದರ್ಪದಲ್ಲಿ ? ಅವಳು ನನ್ನ
ಮಗಳು, ಹಾ ನಿಮ್ಮ ಮಗಳು ಕೂಡಾ ನೀವು ಮನೆಯಿಂದ ಹೊರಗಡೆ ಹಾಕುವಾಗ ನನ್ನ ಹೊಟ್ಟೆಯಲ್ಲಿ ಇದ್ದಳು ಈಗ ನಿಮ್ಮ ಕಣ್ಣು ಮುಂದೆ ಇದ್ದಾಳೆ ಅಂದಳು.
ಅಂದ್ರೆ ಸೂರ್ಯ? ಅವನ ಜೊತೆಗೆ ನೀನು ಮದುವೆ ಆಗಿಲ್ವ ಎಂದನು ಗಂಡ? ಹಳದಿ ಕಣ್ಣಿಗೆ ಎಲ್ಲವೂ ಹೀಗೆ ಕಾಣುತ್ತದೆ, ಇಲ್ಲ ಎಂದಳು ಸ್ಪಂದನಾ.
ಅವರು ನನ್ನ ಬಾಳಿಗೆ ಬೆಳಕಾದವರು. ನನಗೂ ನನ್ನ ಮಗಳ ಬದುಕಿಗೂ ದಾರಿ ತೋರಿಸಿದವರು. ಈ ವಿದ್ಯೆ ಅಂತಸ್ತು ಎಲ್ಲಾ ಅವರ ಕೊಡುಗೆ ನಿಮಗೊಂದು ವಿಷಯ ಗೊತ್ತಾ?
ಕೆ ಸಿ ಶಿವಪ್ಪ ನವರು ತಮ್ಮ ಮುಕ್ತಕದಲ್ಲಿ ಹೀಗೆ ಹೇಳಿದ್ದಾರೆ.
"ಬಿದ್ದ ಮಳೆ ಹನಿಯೆಲ್ಲ ಸ್ವಾತಿ ಮುತ್ತಾಗುವುದೇನು?
ಎನಿತೆಸಳೊ ಬಾಡುವುದು ಕಣ್ ಬಿಡುವ ಮೊದಲೇ!
ಹುಟ್ಟೆಂತು? ಸಾವೆಂತು? ಪೂರ್ಣತೆಯ ತಿಳಿವೆಂತು?
ಸೃಷ್ಟಿ ಕೌತುಕದೊಡಲು - ಮುದ್ದು ರಾಮ."
ಬಿದ್ದಿರುವ ಮಳೆ ಹನಿಯೆಲ್ಲವೂ ಸ್ವಾತಿ ಮುತ್ತುಗಳು ಆಗುವುದಿಲ್ಲ. ಚಿಗುರುವ ಎಸಳು ಕೂಡಾ ಒಮ್ಮೊಮ್ಮೆ ಕಣ್ ಬಿಡುವ ಮೊದಲೇ ಬಾಡಬಹುದು.
ಹುಟ್ಟು ಸಾವು ಎಲ್ಲವೂ ಸೃಷ್ಟಿಯ ವಿಸ್ಮಯ. ಮಾನವರಿಗೆ ತಿಳಿಯಲು ಅಸಾಧ್ಯ. ಹಾಗೆಯೇ ನನ್ನ ನಿಮ್ಮ ಬದುಕು ತಿಳಿಯಿರಿ ಎಂದಳು.
ಸೂರ್ಯ ನಿಮ್ಮ ಆತ್ಮೀಯ ಗೆಳೆಯ ಬಾಲ್ಯದಿಂದಲೂ ಅವರು ಹೇಗೆ ಎಂದು ನಿಮಗೆ ಚೆನ್ನಾಗಿ ಗೊತ್ತು. ಆದ್ರೂ ನಾನು ಸೂರ್ಯನನ್ನು ಮದುವೆಯಾಗಿರಬಹುದೆಂದು ಅನುಮಾನಿಸಿದಿರಿ ನಿಮ್ಮೊಟ್ಟಿಗೆ ಜೀವನ ಸಾಕೆಂದು ನೊಂದು ಅಂದಾಗ ಹೊರಹಾಕಿದಿರಿ. ಸಾಲದೆಂದು ಓಡಿ ಹೋದವಳು ಎಂದು ಪಟ್ಟ ಕಟ್ಟಿದಿರಿ. ಆಗ ನನ್ನನ್ನು ಸೋದರಿ ಎಂದು ಭಾವಿಸಿ ಆಶ್ರಯ ಕಲ್ಪಿಸಿ ವಿದ್ಯೆ ಕಲಿಯಲು ಅವಕಾಶ ಮಾಡಿಕೊಟ್ಟು ಮುಂದೆ ತಮ್ಮ ಆಸ್ಪತ್ರೆಯಲ್ಲಿ ನೇಮಿಸಿಕೊಂಡವರು ಈ ನಿಮ್ಮ ಸ್ನೇಹಿತ ಸೂರ್ಯಣ್ಣ.
ನೀವಿಬ್ಬರೂ ಸಹಪಾಠಿಗಳಾದರೂ ನಿಮ್ಮಿಬ್ಬರ ಗುಣಗಳು ಬೇರೆ ಬೇರೆ ಅವರು ಸಾವಿರಾರು ಕೋಟಿ ಜನರಿಗೆ ಆಶ್ರಯಧಾತರಾದವರು. ನೀವು ಹೆಂಡತಿಯನ್ನೇ ಓಡಿಸಿ, ಓಡಿ ಹೋದವಳೆಂಬ ಪಟ್ಟ ಕಟ್ಟಿದವರು. ಅವರು ಪರರ ಹೆಂಡತಿಯನ್ನು ಸೋದರಿ ಎಂದು ಭಾವಿಸಿ ವೈದ್ಯೆಯಾಗಿ ರೂಪಿಸಿ ಉನ್ನತ ಸ್ಥಾನಮಾನ ಕಲ್ಪಿಸಿಕೊಟ್ಟ ದೇವರು.ನೀವು ನಿಮ್ಮ ಹೆಂಡತಿಯನ್ನೇ ಅನುಮಾನಿಸಿ ಹೊರ ಹಾಕಿದವರು. ಎಷ್ಟು ವ್ಯತ್ಯಾಸ ಅಲ್ಲವೇ?
ಹೆತ್ತವರು ಹೆಣ್ಣೆಂದು ಹೆಚ್ಚಾಗಿ ಓದಿಸಲಿಲ್ಲ ಬಡತನವೆಂದು ಬಹಳ ತಡ ಮಾಡದೆ ಹೆಣ್ಣು ಹೊರೆಯೆಂದು ಮದುವೆ ಮಾಡಿ ಕೈ ತೊಳೆದುಕೊಂಡರು.ಕಷ್ಟವೆಂದು ಹೇಳಿದಾಗ ಅನುಸರಿಸಿ ನಡೆಯಂದು ನಯವಾಗಿ ಸರಿದುಕೊಂಡರು. ಹೆಣ್ಣು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು, ಯಾರ ದಯಯಲ್ಲಿಯೂ ಬಾಳಬಾರೆದೆಂದು ತಿಳಿಸಿ ವಿದ್ಯೆ ಎಂಬ ಆಸ್ತಿ ಕೊಟ್ಟು ವೈದ್ಯೆ ಸ್ಥಾನ ನೀಡಿ ಸ್ವತಂತ್ರ ಬಾಳು ನಡೆಸಲು ದಾರಿ ಮಾಡಿಕೊಟ್ಟವರು ಸೂರ್ಯಣ್ಣ ಎಂದಳು.
ಪ್ರಕಾಶಗೇ ತಪ್ಪಿನ ಅರಿವಾಯಿತು. ನಿಜ ನೀನು ಹೇಳಿದ ಮಾತು. ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳದೆ ಪ್ರತಿಕ್ಷಣವು ಅನುಮಾನಿಸಿ ಕಿರುಕುಳ ಕೊಟ್ಟ ಮಹಾಪಾಪಿ ಕ್ಷಮಿಸು ಎಂದು ತಪ್ಪು ಒಪ್ಪಿಕೊಂಡನು. ಆಗ ಸ್ಪಂದನಾ ನಿಮ್ಮೊಟ್ಟಿಗೆ ನಿಮ್ಮ ಎರಡನೇ ಹೆಂಡತಿ ಇದ್ದಾಳೆ ಅವರೊಟ್ಟಿಗೆ ಚೆನ್ನಾಗಿರಿ. ನಿಮ್ಮಿಂದ ನನಗೆ ಪರೋಕ್ಷವಾಗಿ ಒಳ್ಳೆಯದಾಗಿದೆ, ಚಿಂತಿಸದಿರಿ ಎಲ್ಲವೂ ದೈವದ ಇಚ್ಛೆ. ನನಗೆ ಎಂದು ಆ ದೇವರು ಮಗಳನ್ನು ಕೊಟ್ಟಿದ್ದಾನೆ ಅವಳನ್ನು ದೊಡ್ಡ ವ್ಯಕ್ತಿಯಾಗಿ ರೂಪಿಸುತ್ತ ನನ್ನ ಬದುಕು ಕಳೆಯುವೆ ಎಂದು ಹೊರಟ ಬಿಟ್ಟಳು.