ಆಡಿದ ಮಾತು ಒಡೆಯದ ಮನಸ್ಸು
ಆಡಿದ ಮಾತು ಒಡೆಯದ ಮನಸ್ಸು


ಸಿದ್ದಪ್ಪ ಸೀತಮ್ಮಳಿಗೆ ಒಬ್ಬನೇ ಮಗ ರಾಹುಲ್ ಇಬ್ಬರಿಗೂ ಅವನೇ ಪ್ರಪಂಚ. ಬಹು ಮುದ್ದಿನಿಂದ ಸಾಕಿದ್ದರು ಅವನೇನು ಕೇಳಿದರು ಅದೆಷ್ಟೇ ಸಮಸ್ಯೆ ಕಷ್ಟವಿದ್ದರು ತಂದು ಕೊಡುತ್ತಿದ್ದರು. ಹುಟ್ಟಿನಿಂದಲೇ ಬುದ್ಧಿವಂತನಾದ ರಾಹುಲ್ ಚೆನ್ನಾಗಿ ಓದುತ್ತಾ ಶಾಲೆಗೆ ಫಸ್ಟ್ ಬಂದನು. ಮಗನ ಯಶಸ್ಸು ಕಂಡು ಇನ್ನೂ ಚೆನ್ನಾಗಿ ಓದಲಿ ಎಂದು ವಿಜ್ಞಾನ ವಿಭಾಗಕ್ಕೆ ಸೇರಿಸಿದರು
ಹಗಲು- ರಾತ್ರಿ ದುಡಿದು ಬಂದ ಹಣವೆಲ್ಲ ಮಗನಿಗೆ ಕಳುಹಿಸಿ ಮಗ ದೊಡ್ಡ ವ್ಯಕ್ತಿ ಆಗಲಿ ಎಂದು ನಿತ್ಯವು ಕನಸು ಕಾಣುತಿದ್ದರು. ರಾಹುಲ್ ಕೂಡಾ ತಂದೆ ತಾಯಿಯರ ಕನಸು ನನಸು ಮಾಡಲು ಓದಿದನು.
ಪ್ರತಿಫಲವಾಗಿ ಕಾಲೇಜಿಗೆ ಮೊದಲು ಬಂದು ಅಪ್ಪನ ಆಸೆ ಈಡೇರಿಸುತ್ತಾನೆ. ಆದ್ರೆ ಸಿದ್ದಪ್ಪ ಬಡವ ಸಣ್ಣ ವ್ಯಾಪಾರಸ್ಥ ಅವನಿಗೆ ಮಗನ ಉನ್ನತ ಅಭ್ಯಾಸಕ್ಕೇ ಹಣ ಹೊಂದಿಸುವುದು ಕಷ್ಟವಾದಾಗ ಆಪ್ತ ಸ್ನೇಹಿತ ನಂದೀಶನ ಸಹಾಯ ಕೇಳಲು ಹೋಗುತ್ತಾನೆ.
ನೋಡು ಸಿದ್ದಪ್ಪ ನಮ್ಮ ಮಕ್ಕಳು ಅಂತಾ ಹೆಚ್ಚಿಗೆ ಕಷ್ಟ ಮಾಡ್ಕೊಂಡು ಓದಿಸಿ ಮುಂದೆ ನಿನಗೆ ಕೈ ಕೊಟ್ಟು ಹೋಗ್ತಾರೆ ನಿನ್ನ ಕೊನಿ ಕ್ಷಣದಾಗ ಯಾರು ಇರಲ್ಲ ನಾಲ್ಕು ದುಡ್ಡು ಉಳಿಸಿಕೋ ಎಲ್ಲಾ ಮಗನಿಗೆ ಸುರಿದು ಬೀದಿಗಿ ಬೀಳ್ತಿಯಾ? ಅಷ್ಟಕ್ಕೂ ನಿನ್ನ ಮಗ ಹೆಚ್ಚು ಅಂಕ ತೊಗೊಂಡಿದ್ದು ಎಸ್ ಎಸ್ ಎಲ್ ಸಿ, ಪಿ ಯು ಸಿ ದಾಗ ಅಷ್ಟೇ.
ಮುಂದೆ ಬಹಳ ಹೈರಾಣ ಆಗ್ತದೆ ಅದೆಲ್ಲಾ ನಮ್ಮ ಹಳ್ಳಿ ಹುಡುಗರಿಗೆ ಆಗಿ ಬರಲ್ಲ ಅಷ್ಟೊಂದು ಹಣ ಖರ್ಚು ಮಾಡಿ ಡಾಕ್ಟರ್ ಆಗದಿದ್ದರೆ ಎಲ್ಲಾ ರೊಕ್ಕಾ ನೀರಿನ್ಯಾಗ ಹಾಕಿದಂಗ ಆಗ್ತದೆ ಅದು ಸಾಧ್ಯ ಇಲ್ಲ ಭ್ರಮೆಯಿಂದ ಆಚಿ ಬಾ.ನಿಲುಕದ ನಕ್ಷತ್ರಕ್ಕೇ ಕೈ ಹಾಕುವ ವ್ಯರ್ಥ ಪ್ರಯತ್ನ ಮಾಡಿ ಕೈ ಸುಟ್ಟುಗೊಂಡು ಅಳಬೇಡ.
ಸುಮ್ನೆ ನನ್ನ ಮಾತು ಕೇಳಿ ನಮ್ಮ ಅಂಗಡಿ ಕೆಲಸಕ್ಕೆ ಕಳಿಸು ನಿನಗೂ ಸಹಾಯ ಆಗ್ತದೆ ತಿಂಗಳಿಗೆ 5000 ಕೊಡ್ತೀನಿ ಅಂದಾಗ ಸಿದ್ದಪ್ಪನ ಕೋಪ ನೆತ್ತಿಗೇರಿ ನೋಡು ಸಹಾಯ ಮಾಡೋಕೆ ಆಗಲಿಲ್ಲ ಅಂದ್ರೆ ಸುಮ್ನೆ ಇದ್ದುಬಿಡು ಅದು ಬಿಟ್ಟು ಹೀಯಾಳಿಸಿ ಮಾತಾಡಬ್ಯಾಡ ನನ್ನ ಪ್ರಾಣ ಒತ್ತಿ ಇಟ್ಟಾದರು ನನ್ನ ಮಗನನ್ನು ಡಾಕ್ಟರ್ ಮಾಡಿ ತೀರುವೆ.
ಸಿದ್ದಪ್ಪ ತಾವಿದ್ದ ಸೂರನ್ನು ಮತ್ತೊಬ್ಬ ಗೆಳೆಯನಿಗೆ ಮಾರಿ ಬಂದ ಹಣದಿಂದ ಮಗನಿಗೆ ವೈದ್ಯಕೀಯ ಕೋರ್ಸ್ ಮಾಡಿಸುತ್ತಾನೆ.
ವರ್ಷಗಳು ಕಳೆಯುತ್ತಿದ್ದ ಹಾಗೆಯೇ ರಾಹುಲ್ ತಂದೆ ತಾಯಿಯ ಆಸೆಯನ್ನು ಈಡೇರಿಸಿ ತನ್ನ ಹಳ್ಳಿಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಲು ಆಸ್ಪತ್ರೆ ತೆಗೆದು ಜನರ ಸೇವೆಯಲ್ಲಿ ಸಂತೃಪ್ತಿ ಕಂಡನು.
ಅದೇ ಸಮಯಕ್ಕೇ ಸರಿಯಾಗಿ ಸಿದ್ದಪ್ಪನ ಆಪ್ತ ಗೆಳೆಯ ನಂದೀಶ್ ಹಾಸಿಗೆ ಹಿಡಿ
ದಿದ್ದ ಆತನ ಮಗ ರಾಹುಲ್ ಬಳಿ ಕರೆ ತಂದಾಗ, ರಾಹುಲ್ ಅವರನ್ನು ತನ್ನ ತಂದೆ ಎಂಬ ಭಾವದಲ್ಲಿಯೇ ಚೆಕ್ ಮಾಡಿ ಎಲ್ಲಾ ತಪಾಸಣೆ ಮಾಡಿಸಿದಾಗ ಅವರ ಒಂದು ಕಿಡ್ನಿ ವಿಫಲವಾಗಿದ್ದು ತುರ್ತಾಗಿ ಬೇರೊಂದು ಕಿಡ್ನಿ ನೀಡದಿದ್ದರೆ ಬದುಕುಳಿಯುವ ಸಾಧ್ಯತೆ ಇಲ್ಲ ಎಂಬುದು ತಿಳಿಯುತ್ತದೆ. ಕಿಡ್ನಿ ವ್ಯವಸ್ಥೆ ನಾನು ಮಾಡುವೆ ನೀನು ಹಣದ ವ್ಯವಸ್ಥೆ ಮಾಡು ಎಂದಾಗ
ಮಗ 'ಸಾಯೋ ಮುದುಕ ಎರಡು ಕಿಡ್ನಿ ತೊಗೊಂಡು ಏನು ಮಾಡ್ತಾನೆ '? ಒಂದೇ ಕಿಡ್ನಿ ಮೇಲೆ ಎಷ್ಟು ದಿನ ಬದುಕುತ್ತಾನೋ ಬದುಕಲಿ ಬಿಡಿ ಸಾಯೋ ಮುದುಕನಿಗೆ ಅಷ್ಟು ಹಣ ಖರ್ಚು ಮಾಡುವ ಅಗತ್ಯ ಇಲ್ಲ ಎಂದು ಹೇಳಿ ಹೊರಟು ಹೋಗ್ತಾನೆ.
ಅಂಕಲ್ ಅಳಬೇಡಿ ನಾನು ನಿಮ್ಮನ್ನ ಉಳಿಸಿಕೊಳ್ಳುವೆ ಚಿಂತಿಸಬೇಡಿ. ಕಿಡ್ನಿ ವ್ಯವಸ್ಥೆ, ಹಣದ ವ್ಯವಸ್ಥೆ ಎಲ್ಲಾ ನನ್ನದೇ ನಾಡಿದ್ದುವರೆಗೂ ನೀವೂ ಇಲ್ಲೇ ರೆಸ್ಟ್ ಮಾಡಿ. ನಂತರ
ಎಲ್ಲಾ ವ್ಯವಸ್ಥೆ ಮಾಡಿ ರಾಹುಲ್ ಕಿಡ್ನಿ ವರ್ಗಾಯಿಸುವ ಪ್ರಕ್ರಿಯೆ ಪೂರ್ಣಗೊಳಿಸಿ ಸಾವಿನ ದವಡೆಯಿಂದ ನಂದೀಶನನ್ನು ಕಾಪಾಡುತ್ತಾನೆ.
ಯಾವ ಮಗ ನೋಡುವುದಿಲ್ಲ ಎಂದಿದ್ದೆನೋ ಅವನಿಂದಲೇ ಇಂದು ನಾನು ಉಸಿರಾಡುತ್ತಿದ್ದೇನೆ.
ಯಾಕಪ್ಪ ನಿನಗೆ ನನ್ನ ಮೇಲೆ ಪ್ರೀತಿ? ಅದು ನಿನ್ನ ವಿದ್ಯಾಭ್ಯಾಸಕ್ಕೇ ಸಹಾಯ ಮಾಡದೇ ಆಡಿಕೊಂಡು ಅವಮಾನಸಿದ ಕಿರಾತಕನ ಮೇಲೇಕೆ ಅನುಕಂಪ?
ನಾನು ವೈದ್ಯನಾಗಲು ಪರೋಕ್ಷವಾಗಿ ನೀವೂ ಕಾರಣರೇ ಅದು ಅಲ್ಲದೆ ನಾನು ಕೆ ಸಿ ಶಿವಪ್ಪನವರ ಅಭಿಮಾನಿ ಅವರ ಬರಹಗಳನ್ನು ನನ್ನ ಬಾಳಲ್ಲಿ ಆದರ್ಶವಾಗಿ ಇಟ್ಟುಕೊಂಡಿರುವೆ
ಅಂಕಲ್, ಕೆ ಸಿ ಶಿವಪ್ಪನವರು ಒಂದು ಮುಕ್ತಕದಲ್ಲಿ ಹೀಗೆ ಹೇಳಿದ್ದಾರೆ
"ಕೋಪ ಅಡರದ ತೆರದಿ ಪಾಪ ಮುತ್ತದ ಹಾಗೆ
ಪರರ ನಿಂದಿಸದಂತೆ ಇರಲಿ ಮನಸು
ಆಗ ಮತ್ಸರವಿಲ್ಲ ಕಾಮ ಲೋಭಗಳಿಲ್ಲ
ನಿರ್ಮಲತೆ ನಿತ್ಯಸುಖ -ಮುದ್ದುರಾಮ "
ಎಂದು,
ಕೋಪಿಸಿಕೊಳ್ಳದೆ ಬಾಳಿದರೆ ಪಾಪ ನಮ್ಮನ್ನು ಬೆನ್ನು ಹತ್ತಲ್ಲ, ಪರರನ್ನು ನಿಂದಿಸದೆ ಜೀವಿಸಿದರೆ ಯಾವ ಮತ್ಸರ ಕಾಮ ಲೋಭಗಳು ಹತ್ತಿರವು ಸುಳಿಯುವದಿಲ್ಲ ನಿರ್ಮಲವಾದ ಮನಸ್ಸು ನಮ್ಮದಾಗಿದ್ದಾರೆ ಪ್ರತಿ ನಿತ್ಯವೂ ಸುಖ ಸಂತೋಷ ತುಂಬಿ ತುಳುಕುವುದೆಂದು.
ಅಂಕಲ್ ಇದನ್ನು ಅರಿತುಕೊಂಡು ನಾನು ಸುಖವಾದ ಜೀವನ ಸಾಗಿಸುತ್ತಿರುವೆ. ಇಷ್ಟವಾದರೆ ನೀವೂ ಅನುಸರಿಸಿ ಎಂದಾಗ
ಮಗ ಚಿಕ್ಕ ವಯಸ್ಸಿಗೆ ಎಷ್ಟು ತಿಳಿದುಕೊಂಡಿರುವೆ ಖಂಡಿತವಾಗಿಯೂ ಇನ್ಮೇಲೆ ನಿನ್ನ ಹಾಗೆಯೇ ಅವರ ಬರಹಗಳ ಸಂದೇಶ ನನ್ನ ಜೀವನದಲ್ಲಿ ಅಳವಡಿಸಿಕೊಂಡು ಬಾಳುವೆ ಎಂದು ಧನ್ಯವಾದ ಅರ್ಪಿಸಿ ಹೋಗುತ್ತಾನೆ.