ಅನುಮಾನದ ಹುತ್ತಗಳು
ಅನುಮಾನದ ಹುತ್ತಗಳು


ಅನು ಮುದ್ದಾದ ಹುಡುಗಿ ತಂದೆ ತಾಯಿ ಇಲ್ಲದ ಅನಾಥೆ ಅದೃಷ್ಟಕ್ಕೇ ರಘುವಿನ ಕೈ ಹಿಡಿದು ಖುಷಿಯ ಜೀವನ ನಡೆಸುತ್ತಿದ್ದಳು.ಅವಳಿಗೆ ಗಂಡನ ಮನೆಯೇ ಸ್ವರ್ಗವಾಗಿತ್ತು. ರಘು ಅಪಘಾತದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಅವನೂ ಕೂಡಾ ಒಂದು ರೀತಿಯಲ್ಲಿ ಅನಾಥನೇ ಆಗಿದ್ದನು.
ಅವರಿಬ್ಬರ ನಡುವೆ ಯಾವ ರಹಸ್ಯಗಳು ಇರಲಿಲ್ಲ ಅನು ರಘು ಆದರ್ಶ ಜೋಡಿಯಾಗಿದ್ದರು.
ಆದರೆ ಇತ್ತೀಚಿಗೆ ರಘು ತನ್ನ ಫೋನ್ ಲಾಕ್ ಇಟ್ಟಿದ್ದರು
ಯಾವತ್ತೂ ಫೋನು ಲಾಕ್ ಇಡದವರು ಇಂದೇಕೆ ಎಂಬ ಸಂಶಯದ ಬೀಜ ತಲೆಯಲ್ಲಿ ಕೊರೆಯತೊಡಗಿತ್ತು.
ಇದಕ್ಕೆ ಪೂರಕವಾಗಿ ರಘು ಮಧ್ಯರಾತ್ರಿಯಲ್ಲಿ ಎದ್ದು ಮರೆಯಲ್ಲಿ ನಿಂತು ತಾಸುಗಟ್ಟಲೆ ಮೊಬೈಲ್ ನೋಡುತ್ತಿದ್ದರು. ಒಮ್ಮೊಮ್ಮೆ ಖುಷಿಯಿಂದ ನಕ್ಕರೆ ಮತ್ತೊಮ್ಮೆ ಬೇಸರದ ಛಾಯೇ ಏನಿರಬಹುದು ಆ ಫೋನಿನಲ್ಲಿ? ಎಂಬ ಆತಂಕ ಮನದಲ್ಲಿ ಕಾಡುತಿತ್ತು.
ರಘು ಏನಾದ್ರು ಬೇರೆ ಹುಡುಗಿ ಜೊತೆಗೆ ಸ್ನೇಹ ಬೆಳೆಸಿರಬಹುದೇ? ಛೇ ಛೇ ರಘು ಅಂಥವರು ಅಲ್ಲಾ ಅನುಮಾನ ಪಡುವುದು ಸರಿಯಲ್ಲ ಎಂದು ಸುಮ್ಮನಾಗಿ ಬಿಟ್ಟಳು.
ಅದೊಂದು ದಿನ ರಘು ಹೆಸರಿಗೆ ಪೋಸ್ಟ್ ಬಂತು ಅನು ಏನಿರಬಹುದೆಂದು ನೋಡಲು ಹೋದರೆ ರಘು ಓಡೋಡಿ ಬಂದು ಕಸಿದುಕೊಂಡರು.
ಅದರೊಳಗೆ ಅಂಥದ್ದು ಏನಿತ್ತು ಯಾಕೆ ಹೀಗೆ ಬದಲಾಗಿರುವರು ಅನುಮಾನದ ಒಂದೊಂದೇ ಹುತ್ತಗಳು ಅನುವಿನ ಮನಸಿನಲಿ ಮನೆ ಮಾಡಿದವು.
ರಾತ್ರಿ ರಘು ಮಲಗಿದ ಮೇಲೆ ನೋಡಬೇಕೆಂದು ನಿರ್ಧರಿಸಿದಳು.
ದಿನನಿತ್ಯದ ಹಾಗೇ ರಾತ್ರಿ ಹೊತ್ತು ಫೋನ್ ನೋಡಿ ಮಲಗಿದ ರಘು ಆಗ ದಿಢೀರ ಎಂದು ಎದ್ದ ಅನು ಪೋಸ್ಟ್ ಕವರ್ ಹುಡುಕಲು ಹೊರಟಳು.
ಎಷ್ಟು ಹುಡುಕಿದರೂ ಸಿಗದ ಕವರ್ ರಘುವಿನ ದಿಂಬಿನ ಕೆಳಗೆ ಕಂಡಿತು.
ಅಬ್ಬಾ ಉಷ್ ಕೊನೆಗೂ ಸಿಕ್ಕಿತಲ್ಲ ಎಂದು ಹಿಗ್ಗಿ ತೆಗೆಯಲು ಹೊರಟಳು.
ಆ ಕ್ಷಣಕ್ಕೆ ರಘುವಿಗೆ ಎಚ್ಚರವಾಯಿತು ಅನು ಏಕೆ ಏನಾಯ್ತು ಕೆಟ್ಟ ಕನಸು ಬಿತ್ತಾ? ಯಾಕ್ ಈ ಸಮಯದಾಗ ಎದ್ದು ಕುಳಿತೆ ಎಂದಾಗ ಗಾಬರಿಯಿಂದ ಅನು ಇಲ್ಲ ರಘು ನೀರು ಬೇಕಿತ್ತು ಅಷ್ಟೇ ಎಂದಳು.
ಹೌದಾ ತಗೋ ನೀರು ಎಂದು ಕೊಟ್ಟು, ಕುಡಿದು ಮಲಗು ನಾಳೆ ಬೆಳಗ್ಗೆ ಬೇಗ ಎದ್ದು ತಿಂಡಿ ಮಾಡಿಕೊಡು ಬೇಗ ಹೋಗಬೇಕು ಎಂದು ಹೇಳಿ ರಘು ಮಲಗಿದ.
ಬೆಳಗಾಯ್ತು ರಘುವಿಗಾಗಿ ಬಿಸಿ ಬಿಸಿ ಇಡ್ಲಿ ಸಾಂಬಾರ ಕೂಡಾ ರೆಡಿ ಆಯ್ತು ಗಂಡ ತನಗೆ ಶುಭಾಶಯ ಕೋರಿ ಹೊರಗೆ ಕರೆದುಕೊಂಡು ಹೋಗಬಹುದು ಆವಾಗಲೇ ಎಲ್ಲಾ ಅನುಮಾನ ಕೇಳಿ ಪರಿಹರಿಸಿಕೊಳ್ಳುವೆ ಎಂದು ತುದಿಗಾಲಿನಲಿ ಕನಸಿನ ರಂಗೋಲಿ ಹಾಕುತ್ತ ನಿಂತಿದ್ದಳು.
ರಘು ಅವಸರದಿಂದ ಬಂದ ತುಂಬಾ ಚೆನ್ನಾಗಿ ಬೇರೆ ರೆಡಿಯಾಗಿದ್ದರು. ಅನು ತಿಂಡಿ ಬೇಡ ಲೇಟ್ ಆಯ್ತು ನಾನು ಹೋಗಿ ಬರುವೆ ಎಂದು ಕ್ಷಣವೂ ನಿಲ್ಲದೆ ಓಡಿ ಹೋದರು.
ಅಷ್ಟಕ್ಕೂ ರಘು ಇಷ್ಟು ಬೇಗ ತಿಂಡಿ ತಿನ್ನದೇ ಎಂದೂ ಹೋದವರಲ್ಲ, ಮದುವೆಯಲ್ಲೂ ಇಷ್ಟು ರೆಡಿಯಾದವರು ಅಲ್ಲಾ ಹಾಗಿದ್ದರೆ ರಘು ಎಲ್ಲಿ ಹೋಗಿರಬಹುದು? ಎಂದು ಕೂಡಲೇ ರಘುವನ್ನು ಹಿಂಬಾಲಿಸಿ ಹೋದಾಗ ಅಲ್ಲಿ ಅನುವಿಗೆ ಕಾಣಿಸಿದ್ದು ರಘುವಿನ ಜೊತೆಗೆ ಅಪ್ಸರೆಯ ಹಾಗಿರುವ ಹುಡುಗಿ ಕುಳಿತಿದ್ದಳು. ಯಾರೋ ಅಪರಿಚಿತಳು ರಘುವಿನೊಟ್ಟಿಗೆ ತುಂಬಾ ಆತ್ಮೀಯತೆಯಿಂದ ಮಾತಾ
ಡುತ್ತಿದ್ದಳು.
ಅವರ ಮಾತು ಕೇಳಿಸಿಕೊಳ್ಳಬೇಕೆಂದು ಹಿಂದಿನ ಟೇಬಲ್ ಕೆಳಗೆ ಕುಳಿತಾಗ ಆ ಹುಡುಗಿ ರಘುವಿಗೆ
ನಿಮ್ಮ ಹೆಂಡತಿಯನ್ನು ಏನು ಮಾಡುವುದು? ನಾವಿಬ್ಬರೂ ಮದುವೆಯಾಗಲು ಅವಳೊಬ್ಬಳೇ ಅಡ್ಡಿ ಎನ್ನುತ್ತಿದ್ದಳು.
ಅದಕ್ಕೆ ಪ್ರತಿಯಾಗಿ ಖುಷಿಯಾಗಿ ನಗುತ್ತಾ ರಘು ಸಿಂಪಲ್ ಕುಡಿಯುವ ಹಾಲಿಗೆ ನಿದ್ರೆ ಮಾತ್ರೆ ಹಾಕಿ ಕೊಡೋದು ಅಷ್ಟೇ..
ಆದಷ್ಟು ಬೇಗ ಆ ಕೆಲಸ ಮಾಡಿ ಎಂದಳು ಅವಳು.
ಆ ಮಾತುಗಳು ಕೇಳಿದಾಗ ಅನುವಿಗೆ ಸಿಡಿಲು ಬಡಿದ ಹಾಗೇ ಆಯ್ತು, ಆಕ್ಷಣವೇ ಭೂಮಿ ಬಾಯಿ ತೆರೆಯಬಾರದೆ ಅನ್ನಿಸಿತು.
ತನ್ನ ಗಂಡ ಮೋಸ ಮಾಡಿರುವನು ಎಂದು ಮನವರಿಕೆ ಆಯ್ತು. ಮನೆಗೆ ಓಡೋಡಿ ಬಂದಳು.
ಅಳುತ್ತಲೇ ಮಾಡಿದ ಇಡ್ಲಿ ಸಾಂಬಾರು ಅಡುಗೆ ಮನೆಯ ತುಂಬಾ ಚೆಲ್ಲಾಡಿದಳು.
ರಘು ನನ್ನ ಸಾಯಿಸುವ ಕಷ್ಟ ನಿನಗೆ ಬೇಡ ನೀನು ಅವಳೊಟ್ಟಿಗೆ ಖುಷಿಯಾಗಿರು ಎಂದು ಪತ್ರ ಬರೆದಿಟ್ಟು
ನಿದ್ರೆ ಮಾತ್ರೆ ಹಾಕುವ ಕಷ್ಟ ನಿಮಗೆ ಬೇಡ ಎನ್ನುತಾ ಡಬ್ಬಿಯಲ್ಲಿರುವ ಅಷ್ಟೂ ಮಾತ್ರೆಗಳನ್ನು ತೆಗೆದುಕೊಂಡಳು.
ಅಷ್ಟರಲ್ಲಿ ರಘು ಅನು ಅನು ಎನ್ನುತ್ತಾ ಬಂದಾಗ ಮನೆಯ ವಾತಾವರಣ ಕಂಡು ಗಾಬರಿಯಾಗಿ ಅನುವಿನ ಬಳಿ ಓಡಿ ಹೋದಾಗ ಪತ್ರ ಕಾಣಿಸಿತು.
ಅಯ್ಯೋ ಅನು ಎಂಥಾ ಹುಚ್ಚು ಕೆಲಸ ಮಾಡಿದೆ ಎಂದು ಅಳುತ್ತಾ ಅನುವನ್ನು ಎತ್ತಿಕೊಂಡು ಹತ್ತಿರದ ಆಸ್ಪತ್ರೆಗೆ ಬಂದನು.
ವೈದ್ಯರ ಕಾಲು ಹಿಡಿದು ದಯವಿಟ್ಟು ನನ್ನ ಹೆಂಡತಿಯನ್ನು ಉಳಿಸಿಕೊಡಿ ಎಂದಾಗ ವೈದ್ಯರು ನಮ್ಮ ಕರ್ತವ್ಯ ನಾವು ಮಾಡುತ್ತೇವೆ.
ದೇವರಿದ್ದಾನೆ ಎಂದರು.
ರಘು ಪತ್ನಿಗಾಗಿ ದೇವರಲ್ಲಿ ಹರಕೆ ಕಟ್ಟಿ ಉರುಳು ಸೇವೆ ಮಾಡಿ ಬರುವಷ್ಟರಲ್ಲಿ ಅನು ಸಾವಿನ ದವಡೆಯಿಂದ ಪಾರಾಗಿದ್ದಳು. ಸ್ವಲ್ಪ ಹೊತ್ತು ಆದ ಮೇಲೆ ಪ್ರಜ್ಞೆ ಬರುತ್ತೆ ಆಗ ಹೋಗಿ, ನಿಮ್ಮ ಹರಕೆ ಫಲಿಸಿದೆ ನೀವು ತುಂಬಾ ಅದೃಷ್ಟವಂತರು ಎನ್ನುತ ವೈದ್ಯರು ಹೊರಟರು.
ರಘುವಿಗೆ ಸ್ವರ್ಗವೇ ದೊರೆತಂತಾಯಿತು ಅನುವಿನ ಬಳಿ ಹೋದಾಗ ಯಾಕೆ ಹೀಗೆ ಮಾಡಿದ್ದೂ ನಿನ್ನ ಗಂಡನ ಮೇಲೆ ನಂಬಿಕೆ ಇಲ್ವಾ? ಎಂದು ಕೈಗೆ ಆ ಪೋಸ್ಟ್ ಕವರ್ ಕೊಟ್ಟನು ಅದರಲ್ಲಿ ರಘು ಅಭಿನಯಿಸುವ ನಾಟಕದ ಡೈಲಾಗ್ಸ್ ಇತ್ತು. ಅಲ್ಲಿದ್ದ ಹುಡುಗಿ ಡ್ರಾಮಾ ನಾಯಕಿ ಅವಳು ಹುಟ್ಟು ಕಲಾವಿದೆ ಅವಳೊಂದಿಗೆ ಹವ್ಯಾಸಿ ಕಲಾವಿದನಾದ ನಾನು ನಟಿಸುವುದು ತುಸು ಕಷ್ಟವೇ ಇತ್ತು. ಅದಕ್ಕೆ ನನ್ನ ಪಾತ್ರದ ಡೈಲಾಗ್ಸ್ ಅವಳು ಮಾಡಿ ತೋರಿಸಿ ಅದನ್ನು ನನ್ನ ಕಡೆಯಿಂದ ಮಾಡಿಸುತ್ತಿದ್ದಳು. ಇವತ್ತು ಡ್ರಾಮಾ ಮುಗಿತು,ಸಂಭಾವನೆಯಾಗಿ 10,000 ರೂಪಾಯಿ ಕೊಟ್ಟರು.
ಇದಕ್ಕಾಗಿ ರಾತ್ರಿ ಹಗಲು ಫೋನು ನೋಡಿದ್ದು ಅದರಲ್ಲಿ ಡ್ರಾಮಾ ಡೈಲಾಗ್ಸ್ ಇತ್ತು.
ಆ ಹತ್ತು ಸಾವಿರ ರೂಪಾಯಿ ಇಂದಾನೆ ಈ ರಿಂಗ್ ತಂದಿದ್ದು, ರಿಂಗ್ ಜೊತೆಗೆ ವಿಶ್ ಮಾಡಬೇಕೆಂದು ಬೆಳಗ್ಗೆ ಹಾಗೇ ಬಂದಿದ್ದು.
ನಿನಗೆ ಸರ್ಪ್ರೈಜ್ ಕೊಡೋಕೆ ಹೋಗಿದ್ದಕ್ಕೆ ನೀನೂ ಇಷ್ಟು ದೊಡ್ಡ ಶಾಕ್ ಕೊಡೋದಾ ನನ್ನ ಕ್ಷಮಿಸು ಅನು.
ರಘು ನನ್ನದೇ ತಪ್ಪು ನಿಮ್ಮ ಮೇಲೆ ಅನಗತ್ಯ ಅನುಮಾನ ಪಟ್ಟು ನಿಮ್ಮಿಂದ ದೂರಾಗುತ್ತಿದ್ದೆ ನನ್ನನ್ನೂ ಕ್ಷಮಿಸಿ ಎನ್ನುತ್ತಾ ಇಬ್ಬರು ಮನೆಗೆ ಬಂದು ಖುಷಿಯಿಂದ ವಿವಾಹ ವಾರ್ಷಿಕೋತ್ಸವ ಸಂತೋಷದಿಂದ ಆಚರಿಸಿದರು.