ಮಾತೃ ಹೃದಯ
ಮಾತೃ ಹೃದಯ


ಅಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದ ದಿನಕರ ಕ್ಷಣವು ಬಿಡುವಿರದೆ ದುಡಿಯುತ್ತಿದ್ದನು.
ಒಂದು ದಿನ ಹೆಂಡತಿ ಗರ್ಭಿಣಿ ಎಂಬ ವಿಷಯ ಕೇಳುತ್ತಿದ್ದ ಹಾಗೇ ತನ್ನ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಪತ್ನಿಯ ಆರೈಕೆಯಲ್ಲಿ ಮುಳುಗಿದ. ಬಹುಷಃ ತನ್ನ ಪತ್ನಿ ದಿವ್ಯಾಳಿಗೆ ತಾಯಿ ಇದ್ದರು ಕೂಡಾ ಇಷ್ಟು ಆರೈಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ನೂರಕ್ಕೆ ನೂರು ಪ್ರತಿಶತ ಸತ್ಯವಾಗಿತ್ತು.ತಾಯಿ ಇಲ್ಲದ ಕೊರಗು ನೀಗಿಸಿದ್ದ ದಿನಕರ.
ದಿವ್ಯಾಳಿಗೆ ಹೆರಿಗೆ ಆಯಿತು,ದಿನಕರನಿಗೆ ಗಂಡು ಮಗುವಾಯಿತು ದುರಾದೃಷ್ಟಕ್ಕೇ ಮಗು ತಾಯಿಯನ್ನು ಕಳೆದುಕೊಂಡು ತಬ್ಬಲಿ ಆಯಿತು. ಮಗು ಹುಟ್ಟಿತೆಂದು ಖುಷಿಪಡುವ ಸಮಯದಲ್ಲಿ ಹೆಂಡತಿಯನ್ನು ಕಳೆದುಕೊಂಡ ನೋವು ಕಾಡಿದರು ಮಗುವಿನ ಜವಾಬ್ದಾರಿಯಿಂದ ಮಗುವಿನ ನಗುವಲ್ಲಿ ನೋವು ಮರೆಯಲು ಪ್ರಯತ್ನ ಪಡುತ್ತಿದ್ದ.ಮಗುವಿಗೆ ಸಾಗರ್ ಎಂದು ನಾಮಕರಣ ಮಾಡಿದನು. ಮಗುವಿಗೆ ಆಕಳು ಹಾಲು ಕುಡಿಸಲು ಸಾಕಷ್ಟು ಪರದಾಡುತ್ತಿದ್ದ ಎಷ್ಟೇ ಶ್ರೀಮಂತನಾದರೂ ಆತನಿಗೆ ತಾಯಿಯ ಹಾಲಿನ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ.
ಅದೇ ಸಮಯಕ್ಕೆ ಸರಿಯಾಗಿ ಮನೆಯ ಕೆಲಸದವಳಾದ ಗಿರಿಜಾ ಹೆರಿಗೆ ಸಮಯದಲ್ಲಿ ಮಗುವನ್ನು ಕಳೆದುಕೊಂಡಿದ್ದಳು.ಆಕೆಯನ್ನು ಕೇಳಬೇಕು ಎಂದುಕೊಂಡ ಆದ್ರೆ ಆಕೆಯೇ ನೋವಿನಲ್ಲಿರುವಾಗ ಹೇಗೆ ಕೇಳುವುದು ಎಂದು ಸುಮ್ಮನಾದನು. ಕೊನೆಗೆ ಮಗು ಅನಾರೋಗ್ಯದಿ ಆಸ್ಪತ್ರೆಗೆ ಸೇರಿದಾಗ ಮಗುವಿಗೆ ಏನೇ ಚಿಕಿತ್ಸೆ ನೀಡಿದರು ವ್ಯರ್ಥ. ಸ್ವಲ್ಪವಾದರು ತಾಯಿಯ ಹಾಲಿನ ವ್ಯವಸ್ಥೆ ಮಾಡಿದರೆ ಮಗು ಬದುಕುಳಿಯುತ್ತದೆ ಇಲ್ಲವಾದರೆ ಇಲ್ಲ ಎಂದು ಹೇಳಿ ಕೈ ಚೆಲ್ಲಿ ಕುಳಿತರು. ವಿಧಿ ಇರದೆ ದಿನಕರ ಗಿರಿಜಾಳ ಬಳಿ ಬಂದು ನೋಡು ಗಿರಿಜಾ ನಾನು ಹೆಂಡತಿಯನ್ನು ಕಳೆದುಕೊಂಡು ಅರ್ಧ ಜೀವವಾಗಿದ್ದೇನೆ, ಈಗ ಮಗುವು ಕೈ ಬಿಟ್ಟು ಹೋದರೆ ನಾನು ಬಾಳಲಾರೆ.
ನಿನ್ನ ಈ ಪರಿಸ್ಥಿತಿಯಲ್ಲಿ ಕೇಳುವುದು ತಪ್ಪು ಆದ್ರೆ ಅನಿವಾರ್ಯ ಮಗುವಿಗೆ ತಾಯಿ ಹಾಲು ದೊರೆಯದಿದ್ದರೆ ಮಗು ಉಳಿಯಲಾರದು ಪರಿಸ್ಥಿತಿ ಅರ್ಥ ಮಾಡಿಕೊಂಡು ನನ್ನ ಮಗುವಿಗೆ ಜೀವ ಭಿಕ್ಷೆ ಕೊಡು, ಸಮಸ್ತ ಆಸ್ತಿಯನ್ನು ಬೇಕಾದ್ರೆ ನಿನಗೆ ಬರೆದುಬಿಡುವೆ ಎಂದನು. ಅವಳ ಮಾತೃ ಹೃದಯ ಕರಗಿತು, ಆದ್ರೆ ಕೀಳು ಕುಲದವಳಾದ ನಾನು ಎಂದು ತಡವರಿಸಿದಳು ಗಿರಿಜಾ?
ಪರವಾಗಿಲ್ಲ ಸೋದರಿ,ಯಾವ ಜಾತಿ ಆದರೇನು ತಾಯಿ ಹಾಲು ಅಮೃತವೇ, ಮಗು ಉಳಿದರೆ ಸಾಕು ಎಂದನು.
ಈ ವಿಷಯ ಹೊರಗೆ ತಿಳಿಯದ ಹಾಗೇ ನೋಡಿಕೋ ಇಂದಿನಿಂದ ಮಗುವಿನ ಸಂಪೂರ್ಣ ಜವಾಬ್ದಾರಿ ನಿನ್ನದೇ ಎನ್ನುತ್ತಾ ಸಾಗರನ್ನು ಅವಳ ಕೈಲಿಟ್ಟನು.
ಅಣ್ಣಯ್ಯ, ನಿಮ್ಮ ಆಸ್ತಿ ಯಾವುದು ಬೇಡ ಹೆತ್ತ ಮಗುವನ್ನು ಕಳೆದುಕೊಂಡು ನೋವಿನಲ್ಲಿ ನರಳುತ್ತಿರುವಾಗ ನನಗೆ ದೇವರು ಇನ್ನೊಂದು ಮಗುವನ್ನು ನೀಡಿದ್ದಾನೆ ಎಂದು ತಿಳಿದು ನನ್ನ ಸ್ವಂತ ಮಗುವಾಗಿ ಬೆಳೆಸುತ್ತೇನೆ ನಿಮ್ಮ ಮೇಲಾಣೆ ಎಂದಳು. ದಿನಗಳು ಕಳೆದ ಹಾಗೇ ಸಾಗರ ವಯಸ್ಸಿಗೆ ಬಂದ ಆತನಿಗಾಗಿ ದಿನಕರ ನೂರೆಂಟು ಹುಡುಗಿಯರನ್ನು ತೋರಿಸಿದರು ಏನೋ ಒಂದು ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದನು.
ಸಾಗರ ಗಿರಿಜಾಳ ಅಣ್ಣನ ಮಗಳನ್ನು ತುಂಬಾ ದಿನಗಳಿಂದ ಪ್ರೀತಿಸುತ್
ತಿದ್ದ, ಅದೆಷ್ಟು ಸಲ ರಾಧಾ ನಿಮ್ಮ ಕುಲಕ್ಕೆ ನಾನು ಹೊಂದುವುದಿಲ್ಲ ನಮ್ಮ ಮದುವೆ ಕನಸು ಎಂದು ಹೇಳಿದರು, ನನ್ನನು ಮರೆತು ನಿಮ್ಮತಂದೆ ತೋರಿಸುವ ಹುಡುಗಿಯನ್ನು ಮದುವೆ ಆಗಿ ಸುಖವಾಗಿರಿ ಎಂದರು ಕೇಳದೆ ರಾಧಾಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ ಸರಳವಾಗಿ ಮದುವೆಯಾಗಿ ಮನೆಗೆ ಕರೆದುಕೊಂಡು ಬರುತ್ತಾನೆ.
ದಿನಕರ ಮಗನನ್ನು ನೋಡಿ, ಸಾಗರ ಏನಿದು? ನಾನು ಬದುಕಿರುವಾಗಲೇ ನನಗೆ ಒಂದು ಮಾತು ತಿಳಿಸದೆ ಈ ಕೀಳು ಕುಲದ ಹುಡುಗಿಯನ್ನು ಮದುವೆಯಾಗಿ ಮನೆತನದ ಮರ್ಯಾದೆ ತೆಗೆಯುತ್ತಿರುವೆಯಾ?
ಏನಮ್ಮಾ ಗಿರಿಜಾ ತಂಗಿ ಎಂದು ನಂಬಿದ್ದಕೆ ನೆಂಟಸ್ತಿಕೆ ಬೆಳೆಸಿ ಸಮಾಜದಲ್ಲಿ ತಲೆ ಎತ್ತಿ ತಿರುಗದ ಹಾಗೇ ಮಾಡಿದೆಯಲ್ಲವೆ?
ಅಣ್ಣಾವ್ರೇ ಇದು ಯಾವುದು ತಿಳಿಯದು ನನಗೆ ನನಗೂ ಇದು ಆಶ್ಚರ್ಯ ಆಗುತ್ತಿದೆ ಎಂದಳು. ಮುಚ್ಚು ಬಾಯಿ ಮಗುವನ್ನು ಚೂಟಿ ತೊಟ್ಟಿಲು ತೂಗುವ ನಾಟಕವಾಡಬೇಡ. ಅಪ್ಪ, ಗಿರಿಜಮ್ಮನದು ಏನು ತಪ್ಪಿಲ್ಲ, ಅವರಿಗೂ ಇದೆ ಮೊದಲ ಬಾರಿಗೆ ವಿಷಯ ಗೊತ್ತಾಗಿದ್ದು. ಅಪ್ಪ ಮಾತಿಗೆ ಮುಂಚೆ ಕೀಳು ಕುಲದವಳು ನನ್ನ ಸೊಸೆಯಾಗಲು ಲಾಯಕ್ಕಿಲ್ಲ ಎನ್ನುತ್ತಿರುವಿರಲ್ಲ? ಅದೇ ಕೀಳುಕುಲದ ಗಿರಿಜಮ್ಮ ಎದೆಹಾಲು ನೀಡುವಾಗ ಕುಲ ಮುಖ್ಯವೆನಿಸಲಿಲ್ಲ ನಿಮ್ಮ ಮಗನ ಜೀವ ಮುಖ್ಯವಾಯಿತು.ಗಿರಿಜಮ್ಮ ನಿಮ್ಮ ಮಗನನ್ನು ಸ್ವಂತ ಮಗನ ಹಾಗೇ ಬೆಳೆಸಿದಾಗ ಜಾತಿ ಮುಖ್ಯವಾಗಲಿಲ್ಲ ನಿಮ್ಮ ಮಗ ಮುಖ್ಯವಾದನು.
ಈಗ ಅದೇ ಜಾತಿಯ ಹುಡುಗಿಯನ್ನು ಮದುವೆಯಾದಾಗ ಕುಲ ಮುಖ್ಯವಾಯಿತೇ?
ಅಪ್ಪ ನನಗೆಲ್ಲವೂ ತಿಳಿದಿದೆ,ಈ ಜೀವ ಗಿರಿಜಮ್ಮನ ಮಾತೃ ಹೃದಯದಿಂದ ಉಳಿದಿದೆ.ಆಕಸ್ಮಿಕವಾಗಿ ರಾಧಾಳನ್ನು ಪ್ರೀತಿಸಿದೆ ನಾವಿಬ್ಬರು ಸಹಪಾಠಿಯಾದರು ರಾಧಾ ಗಿರಿಜಮ್ಮಳ ಸೊಸೆ ಎಂದು ತಿಳಿದಿರಲಿಲ್ಲ,.
ಮದುವೆ ವಿಷಯ ಪ್ರಸ್ತಾಪವಾದಗಲೇ ಗೊತ್ತಾಗಿದ್ದು ರಾಧಾ ಗಿರಿಜಮ್ಮಳ ಅಣ್ಣನ ಮಗಳು ಎಂದು ಅವಳು ಸಾವಿರ ಸಲ ಹೇಳಿದಳು ಗೊತ್ತಿಲ್ಲದೇ ತಪ್ಪಾಗಿದೆ ನೀವು ಬೇರೊಂದು ಮದುವೆಯಾಗಿ ಎಂದು.ಆದರೆ
ಕುಲದ ಕಾರಣಕ್ಕೆ ಪ್ರೀತಿಸಿದ ಹುಡುಗಿಯನ್ನು ತ್ಯಜಿಸಲು ಸಾಧ್ಯವಾಗದೆ ಮದುವೆಯಾದೆ, ನಿಮಗೆ ಹೇಳಿದ್ದರೆ ನೀವು ಎಲ್ಲಿ ದೂರ ಮಾಡುವಿರಿ ಎಂಬ ಭಯಕ್ಕೆ ಹೀಗೆ ಮಾಡಿದೆ ಅಪ್ಪ ನನ್ನ ಕ್ಷಮಿಸಿ.
ಅಲ್ಲದೆ ಕೆ ಸಿ ಶಿವಪ್ಪನವರು ಒಂದು ಮುಕ್ತಕದಲ್ಲಿ ಹೀಗೆ ಹೇಳಿದ್ದಾರೆ.
ಋತವೊಂದೆ, ಮತ ಬೇರೆ...ಅಭಿಮತಕೆ ಕೊನೆಯೆಲ್ಲಿ?
ಒಬ್ಬರೊಬ್ಬರ ನೋಟ ಒಂದೊಂದು ರೀತಿ.
ನಿಜಪೊರುಳಿನೊಳ ನೋಟ ಅರಿಯದಿರೆ ಅದು ತಪ್ಪು
ಅರಿವು ಸತ್ಯದ ಮೂಲ....ಮುದ್ದುರಾಮ ||
ಜಾತಿ ಮತ ಎಂದು ತಾರತಮ್ಯ ಮಾಡುವ ಅಗತ್ಯವೇನಿದೆ?ಎಲ್ಲರೂ ಒಂದೇ ಆದ್ರೆ
ಒಬ್ಬೊಬ್ಬರ ದೃಷ್ಟಿಯು ಒಂದೊಂದು ರೀತಿಯಿರುತ್ತದೆ ಅಷ್ಟೇ.ಸರಿಯಾಗಿ ಸತ್ಯವನ್ನು ಅರಿತು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕೆಂದು ಹೇಳಿದಾಗ ಮಗನ ಮಾತು ಕೇಳಿದ ದಿನಕರಗೇ ವಾಸ್ತವತೆ ಅರಿವು ಆಗುತ್ತದೆ.
ತನ್ನ ತಪ್ಪು ಅರಿತುಕೊಂಡು ದಿನಕರ ತನ್ನ ಮಗ ಸೊಸೆಯನ್ನು ಮನೆ ತುಂಬಿಸಿಕೊಳ್ಳುತ್ತಾನೆ.
ಎಲ್ಲರೂ ಒಂದೇ ಸೂರಿನಡಿಯಲ್ಲಿ ಸುಖ ಜೀವನ ನಡೆಸುತ್ತಾರೆ.