ಮೋಜು ತಂದ ಮರಣ
ಮೋಜು ತಂದ ಮರಣ
ಹಲೋ..!
ಹಲೋ(ನಿದ್ದೆ ಕಣ್ಣಿನಲ್ಲಿ ಯಾರೆಂದು ನೋಡದೆ ವಿಕ್ರಾಂತ್ ಫೋನ್ ರಿಸೀವ್ ಮಾಡಿದ್ದ)
ಹಲೋ ಕೇಳುತ್ತಾ ಮಗು…. ನಾನು ನಿಮ್ಮಮ್ಮ… ಆರಾಮ್ ಇದ್ಯಾ.? ಒಂದು ವಾರ ಆಯ್ತು ನೀನು ಫೋನ್ ಮಾಡಲೇ ಇಲ್ಲ ..ಮೆಸೇಜ್ ಮಾಡಿದ್ರು ರಿಪ್ಲೈ ಮಾಡ್ಲಿಲ್ಲ..!ಆರಾಮ್ ಇದ್ಯಾಲ್ವಾ?
ಹಾ ಮಾ ಆರಾಮ್ ಇದೀನಿ ..ಕಾಲೇಜು ಪರೀಕ್ಷೆ ಅಸೈನ್ಮೆಂಟ್ ಅಂತ ರಾಶಿ ಕೆಲಸ ಹಾಗಾಗಿ ಫೋನ್ ಮಾಡಕಾಗಿಲ್ಲ ನೀವೆಲ್ಲ ಆರಾಮ್ ಅಲ್ವಾ..?
ಹಾ ವಿಕ್ಕಿ ನಾವೆಲ್ಲ ಆರಾಮ್ ಇದ್ದೀವಿ.. ವಿಪರೀತ ಮಳೆ.. ತೋಟಕ್ ಹೋಗೋಕು ಆಗ್ತಾ ಇಲ್ಲ.. ಅಲ್ಲಿ ಮಳೆ ಇದ್ಯಾ?
ಆಗಾಗ ಬರುತ್ತೆ ..
ಅದೇನು ಅಷ್ಟು ಗದ್ದಲ ಕೇಳ್ತಾ ಇದೆ ರೂಮ್ನಲ್ಲೇ ಇದ್ಯಾ..?
ರೋಡ್ ಸೈಡಲ್ಲಿ ಏನೋ ಮೆರವಣಿಗೆ ಹೋಗ್ತಾ ಇದೆ.. ಅದರ ಗಲಾಟೆ.
ಈ ಮಳೆಗಾಲದಲೆಂತದ ಮೆರವಣಿಗೆ?
ಅಮ್ಮ ಇಲ್ಲಿ ಹಳ್ಳಿ ತರಹ ಮಳೆ ಬರಲ್ಲ ಯಾವಾಗ ಏನ್ ಬೇಕಾದ್ರೂ ನಡೆಯುತ್ತೆ ..ನಿಂಗ್ ಅದೆಲ್ಲ ಗೊತ್ತಾಗಲ್ಲ ಸುಮ್ನಿರು…
ಸರಿ ಬಿಡು ಮಗ ನೀನು ಮನೆಗೆ ಯಾವಾಗ ಬರ್ತಿ.?ಮೂರು ತಿಂಗಳಾಯ್ತು. ನೀನು ಮನೆ ಕಡೆಗೆ ಬರಲೇ ಇಲ್ಲ.?.ಮನೆಯಿಂದ ಓದಕ್ಕೆ ಹೋದವ ಪ್ರತಿ ತಿಂಗಳು ಬರ್ತಿದ್ದೆ …ಈ ಸತಿ ಕೇಳಿದಾಗೆಲ್ಲ ರಜಾ ಇಲ್ಲ.. ಭಾನುವಾರನು ಕ್ಲಾಸ್ ಮಾಡ್ತಾರೆ ಅಂತ ಹೇಳ್ತಿದ್ದೆ.. ಈ ವಾರನಾದರೂ ಮನೆಗೆ ಬರ್ತೀಯಾ?? ಯಾಕೋ ತುಂಬಾ ನಿನ್ನ ನೋಡಬೇಕು ಅಂತ ಅನ್ನಿಸ್ತಾ ಇದೆ.
ಈ ವಾರ ಎಕ್ಸಾಮ್ ಮುಗಿಯುತ್ತೆ ಗ್ಯಾರಂಟಿ ಮನೆಗೆ ಬರ್ತೀನಿ… ನಂಗೆ ಅಂತ ಮೈಸೂರ್ ಪಾಕ್ ಮಾಡಿಟ್ಟಿರು..
ನಿಜವಾಗಲೂ ಬರ್ತಿ ಅಲ್ವಾ..?ಕಳೆದ ತಿಂಗಳು ಹೀಗೆ ಹೇಳಿದ್ದೆ ನಾನು ಕಾಯ್ತಾ ಇದ್ದೆ ನೀನು ಬರಲಿಲ್ಲ..!
ಅದು ಅರ್ಜೆಂಟ್ ಅಸೈನ್ಮೆಂಟ್ ಸಬ್ಮಿಟ್ ಮಾಡಕ್ಕಿತ್ತು ಅಮ್ಮ..ಈ ಸತಿ ಹಾಗಾಗಲ್ಲ.. ಗ್ಯಾರೆಂಟಿ ಬರ್ತೀನಿ..ಸರಿ ನಂಗೆ ಸ್ವಲ್ಪ ಬರೆಯೋಕೆ ಇದೆ.. ಸಂಜೆ ಫೋನ್ ಮಾಡ್ತೀನಿ. ಅಪ್ಪನ ಕೇಳ್ದೆ ಅಂತ ಹೇಳು. ಬಾಯ್ ಅಮ್ಮ..
ಬೇಗ ಬೇಗ ರೆಡಿಯಾಗಿ ಟ್ರಕ್ಕಿಂಗ್ ಹೋಗೋಣ ಇವತ್ತು ಲಾಸ್ಟ ಡೇ ಮತ್ತದೇ ಹಾಸ್ಟೆಲಿಗೆ ಹೋಗಬೇಕು..ಎಂದು ಹೇಳಿದವ ಬೇಗ ತಯಾರಾಗಿ ಗೆಳೆಯರನ್ನೆಲ್ಲ ಹೊರಡಿಸಿಕೊಂಡು ಟ್ರಕ್ಕಿಂಗ್ ಹೊರಟ..
ಲೋ ಮಚ್ಚಾ ಬಾರೋ ಆ ಬಂಡೆ ಹತ್ತೊಣ..
ಲೋ ಮಗ ನಾವೆಲ್ಲ ಮನೆಯಲ್ಲಿ ಹೇಳಿ ಬಂದಿದ್ದೇವೆ. ನೀನು ಮನೇಲಿ ಹೇಳಿಲ್ಲ ಮನೆಯವರಿಗೆ ಟೂರ್ಗೆ ಹೋಗಿದ್ದೇವೆ ಅಂತ ಹೇಳು ಮಚ್ಚಾ ಸುಮ್ನೆ ಆಮೇಲೆ ಗೊತ್ತಾದ್ರೆ ಬೇಜಾರ್ ಆಗುತ್ತೆ..
ಏ ಸುಮ್ನಿರ ಮನೇಲಿ ಹೇಳಿದ್ರೆ ಹೋಗೋದೆ ಬೇಡ ಅಂತ ಹೇಳ್ತಾರೆ ಅದಕ್ಕೆ ನಾನು ಹೇಳಿಲ್ಲ.. ಈಗ ಮಜಾ ಮಾಡಲು ಬಂದಿದ್ದೇವೆ ಮನೆ ಸುದ್ದಿ ಯಾಕೆ..? ಬಾ ಸೆಲ್ಫಿ ತಗೊಳೋಣ ನಾನ್ ಆ ಬಂಡೆ ಮೇಲೆ ನಿಲ್ತೀನಿ..ರೀಲ್ಸ್ ಮಾಡು ಓಕೆ ನಾ..?
ಲೋ ಬೇಡ ಕಣೋ ಬಂಡೆ ಪಾಚಿ ಕಟ್ಟಿದೆ..ಜಾರೊ ಹಾಗೆ ಕಾಣ್ತಾ ಇದೆ..
ನೀನೆಂತ ಹೆದ್ರು ಪುಕ್ಲ ಮಾರಾಯ.. ಲೈಫ್ ನ ಎಂಜಾಯ್ ಮಾಡಕ್ಕೆ ಬರಲ್ಲ… ನೀನು ಇಲ್ಲೇ ಇರು ನಾನು ಹೋಗ್ತೀನಿ..
ಮಗ ಉಷಾರು ಕಣೋ ಎಂದು ಹೇಳುತ್ತಿದ್ದಂತೆ ವಿಕ್ರಂತ್ ಬಂಡೆಯಿಂದ ಕಾಲು ಜಾರಿ ಕೆಳಕ್ಕೆ ಬಿದ್ದ.. ಅವನನ್ನು ಬದುಕಿಸಲು ಎಷ್ಟೇ ಪ್ರಯತ್ನ ಪಟ್ಟರು ಅವನ ಗೆಳೆಯರಿಂದ ಸಾಧ್ಯವಾಗಲಿಲ್ಲ.. ಅವನ ಮನೆಗೆ ವಿಷಯ ಮುಟ್ಟಿಸಿದಾಗ ತಂದೆ ತಾಯಿಗೆ ದೊಡ್ಡ ಆಘಾತವಾಗಿತ್ತು..
ಮಗನ ಮೇಲೆ ಬಲವಾದ ವಿಶ್ವಾಸವನ್ನು ಇಟ್ಟಿದ್ದ ತಂದೆತಾಯಿಯ ಹೃದಯ ಕಂಪಿಸಿತು.. ಇದ್ದೊಬ್ಬ ಮಗ ನಮ್ಮ ಕಣ್ಣಿಗೆ ಮಣ್ಣೆರೆಚಿ ತನ್ನ ಬದುಕನ್ನು ಹುಚ್ಚಾಟದಿಂದ ಅಂತ್ಯ ಮಾಡಿಕೊಂಡ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಕುಗ್ಗಿದರು… ಮೈಸೂರು ಪಾಕ್ ಮಾಡಲು ಬೇಕಾದ ವಸ್ತುಗಳನ್ನು ಅಮ್ಮ ಪಟ್ಟಿ ಮಾಡಿಟ್ಟಿದ್ದಳು…. ಮಗನ ಕೊಳೆತ ಹೆಣ ಮನೆಯ ಬಾಗಿಲಿಗೆ ಬಂದಿಳಿಯಿತು… ಹುಚ್ಚಾಟ ಎನ್ನಬೇಕೋ ವಿಧಿಯಾಟ ಎನ್ನಬೇಕೋ ತಿಳಿಯದೆ ಕಣ್ಣೀರ ಹರಿಸಿದರು.
ಮೋಜು ಮರಣದೆಡೆ ಸೆಳೆದಿತ್ತು..
ಬೈದು ಹೇಳುವವರು ಜೀವನದ ಒಳಿತಿಗಾಗಿ ಹೇಳುತ್ತಾರೆ.. ತಂದೆ ತಾಯಿಯ ಬೈಗುಳದ ಹಿಂದಿನ ಪ್ರೀತಿ ಕಾಳಜಿಯನ್ನು ಅರಿಯದೆ ಅವರ ಕಣ್ಣಿಗೆ ಮಣ್ಣೆರಚಿ ಸುಳ್ಳು ಹೇಳಿ ಸಂತೋಷವಾಗಿರಲು ಸಾಧ್ಯವೇ??
ಜೀವಕ್ಕಿಂತ ಮೋಜು ಮಸ್ತಿ ದೊಡ್ಡದಲ್ಲ.. ನಮಗಾಗಿ ಒಂದಿಷ್ಟು ಜೀವಗಳು ಕಾಯುತ್ತಿರುತ್ತಾರೆ ಎಂಬ ಚಿಕ್ಕ ಜವಾಬ್ದಾರಿ ಇದ್ದರೆ ಸಾಕು ಇಂತಹ ಹುಚ್ಚಾಟಗಳಿಗೆ ಬದುಕಿನಲ್ಲಿ ಅವಕಾಶವನ್ನು ಕೊಡಲಾರೆವು …ಅಲ್ಲವೇ..?
