Vijaya Bharathi

Abstract Classics Others

2  

Vijaya Bharathi

Abstract Classics Others

ಕವಲು ದಾರಿ

ಕವಲು ದಾರಿ

3 mins
193


ಕಾಫಿ ಬ್ರೇಕ್ ನಲ್ಲಿ ಕ್ಯಾಂಟೀನ್ ನಲ್ಲಿ ಕಾಫಿ ಕುಡಿಯುತ್ತಿದ್ದಾಗ , ಕಿರಣ್ ಕುಸುಮಳನ್ನು ಒಂದೇ ಸಮನೆ ಗಮನಿಸುತ್ತಿದ್ದ. ಕುಸುಮಳ ಕಣ್ಣುಗಳು ಕೆಂಡದುಂಡೆಗಳಾಗಿದ್ದವು. ಅವಳು ಸಧ್ಯಕ್ಕೆ ಯಾವ ರೀತಿಯ ನಿರ್ಧಾರವನ್ನೂ ತೆಗೆದುಕೊಳ್ಳಲಾಗದ ಸ್ಥಿತಿಯಲ್ಲಿದ್ದಾಳೆಂಬುದು ಅವನಿಗೆ ಗೊತ್ತು. ಇವಳ ಪರಿಸ್ಥಿಯನ್ನು ನೋಡುತ್ತಿದ್ದ ಕಿರಣ್ ಗೆ ಅವಳ ಮೇಲೆ ಕನಿಕರವಿದ್ದರೂ ತಮ್ಮ ಮುಂದಿನ ಬದುಕು ಕಟ್ಟಿಕೊಳ್ಳುವುದು ಯಾವಾಗ? ಎಂಬ ಪ್ರಶ್ನೆ ಅವನೊಳಗೆ ಯಾವಾಗಲೂ ಕಾಡುತ್ತಿತ್ತು. 

ಆದರೆ ತನ್ನ ಗಂಡನ ಇರುವಿಕೆಯ ಬಗ್ಗೆ ಸರಿಯಾಗಿ ನಿಶ್ಚಯವಾಗದೆ, ಕುಸುಮ ಕಿರಣ್ ಗೆ ಏನೂ ಹೇಳಲಾರದ ಇಬ್ಬಗೆಯಲ್ಲಿದ್ದಳು. 

’ಕಿರಣ್ ಐ ಆಮ್ ಸಾರಿ, ನನಗೆ ನನ್ನ ಗಂಡ ಕೀರ್ತಿಯ ಅಸ್ಥಿತ್ವದ ಬಗ್ಗೆ ಸರಿಯಾಗಿ ಗೊತ್ತಾಗದೆ,ಪೋಲಿಸರಿಂದ ಕನ್ಫರ್ ಮೇಶನ್ ದೊರಕದೆ ನಿಮಗೆ ಹೇಗೆ ಪ್ರಾಮಿಸ್ ಮಾಡಲಿ? ರಾತ್ರಿಇಡೀ ನಿದ್ರೆಇಲ್ಲದೆ ತುಂಬಾ ಸಾಕಾಗಿ ಹೋಗಿದೆ. ಇವತ್ತು ಆಫೀಸ್ ಗೆ ರಜ ಹಾಕಿ

ಬಿಡಬೇಕೆಂದಿದ್ದೆ, ಆದರೆ ನಾನು ಮಧ್ಯಾಹ್ನದ ಮೇಲೆ ಪೋಲಿಸ್ ಸ್ಟೇಷನ್ ಗೆ ಹೋಗಲೇ ಬೇಕು. ನೋಡೋಣ. ಇಂದೇನಾದರೂ ಅವರಿಂದ ಕ್ಲಿಯರೆನ್ಸ್ ಸಿಕ್ಕ ಬಹುದು"

ಅವಳ ಬೇಗುದಿಯನ್ನು ನೋಡಲಾಗದೆ ಕಿರಣ್ ಅವಳ ಕೈ ಮೇಲೆ ತನ್ನ ಕೈ ಇಡುತ್ತಾ, 

" ಡೋಂಟ್ ವರಿ ಕುಸುಮ್, ನಾನು ನಿಮ್ಮ ಜೊತೆ ಇದ್ದೇನೆ. ಈ ಏಳು ವರ್ಷಗಳು ನಿಮಗಾಗಿ ಕಾದಿರುವ ನನಗೆ ಇನ್ನೊಂದೆರೆಡು ದಿನಗಳು ಕಾಯಲಾಗುವುದಿಲ್ಲವೆ? ನಾನು ನಿಮ್ಮ ಜೊತೆ ಪೊಲೀಸ್ ಸ್ಟೇಷನ್ ಗೆ ಬರುತ್ತೇನೆ." ಎಂದಾಗ ಕುಸುಮ "ಥ್ಯಾಂಕ್ಸ್" ಎಂದಳು .


ಅಂದು ಮಧ್ಯಾಹ್ನ ಇಬ್ಬರೂ ರಜ ಹಾಕಿ ಪೊಲೀಸ್ ಸ್ಟೇಷನ್ ಗೆ ಹೊರಟರು. ಈಗ ಮೂರು ನಾಲ್ಕು ವರ್ಷಗಳಿಂದ ಇವರಿಬ್ಬರ ಪರಿಚಯ ವಿದ್ದ ಸಬ್ ಇನ್ಸ್ಪೆಕ್ಟರ್ ಇವರನ್ನು ನೋಡಿ ಪರಿಚಯದ ನಗೆ ಬೀರಿ,ಕುರ್ಚಿಯಲ್ಲಿ ಕೂರಲು ಹೇಳಿದಾಗ, ಇಬ್ಬರೂ ಕುಳಿತರು.

"ಇಂದಿಗೆ ಸರಿಯಾಗಿ, ಕೀರ್ತಿ ಕಾಣೆಯಾಗಿ ಏಳು ವರ್ಷಗಳಾಗಿವೆ.ಇನ್ನು ನಿಮ್ಮ ದಾರಿ ಸುಗಮವಾಯಿತು. ನೀವು ಇನ್ನು ಮುಂದೆ ಕಳೆದು ಹೋದ ವ್ಯಕ್ತಿಗಾಗಿ ಕಾಯದೆ ನಿಮ್ಮ ಮುಂದಿನ ಹೆಜ್ಜೆ ಇಡಬಹುದು.ನಮ್ಮ ಆಫೀಸ್ ನ ಕಡೆಯಿಂದ ಈ ಕಂಪ್ಲೆಂಟ್ ಕ್ಲೋಸ್ ಆಗಿರುವ ಬಗ್ಗೆ ಒಂದು ಲೆಟರ್ ಕೊಡುತ್ತೇವೆ." ಎನ್ನುತ್ತ, ಕುಸುಮಳ ಕೈಗೆ ಒಂದು ಪತ್ರವನ್ನು ಕೊಟ್ಟಾಗ, ಕುಸುಮ ಮತ್ತು ಕಿರಣ್ ಅಲ್ಲಿಂದ ಹೊರಟರು. ಇಬ್ಬರಿಗೂ ರಿಲೀಫ್ ಸಿಕ್ಕಿದಂತಾಯಿತು. 


ಒಂದೇ ಆಫೀಸ್ ನಲ್ಲಿ ಕೆಲಸ ಮಾಡುತ್ತಿರುವ ಕುಸುಮ ಮತ್ತು ಕಿರಣ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರೂ ಇಬ್ಬರೂ ಮದುವೆಯಾಗುವುದಕ್ಕೆ ಕುಸುಮಳ ಗಂಡ ಕೀರ್ತಿ ಅಡ್ಡವಾಗಿದ್ದ. ಏಳು ವರ್ಷಗಳಿಂದ ಕಾಣೆಯಾಗಿದ್ದ ಅವನ ಬಗ್ಗೆ ಪೊಲಿಸ್ ಸ್ಟೇಷನ್ ನಲ್ಲಿ ದೂರು ಇದ್ದುದ್ದರಿಂದ, ಅದು ಇತ್ಯರ್ಥವಾಗುವವರೆಗೂ ಅವರು ಕಾನುನು ರೀತ್ಯಾ ಮದುವೆಯಾಗಲು ಸಾಧ್ಯವಿರಲಿಲ್ಲ. ಇತ್ತ ಕಾಣೆಯಾದ ಅವಳ ಗಂಡನ ಬಗ್ಗೆ ಏನೂ ತಿಳಿಯದೆ, ಕುಸುಮ ಮುಂದಿನ ಹೆಜ್ಜೆ ಇಡಲು ಆಗಿರಲಿಲ್ಲ. ಹೀಗಾಗಿ ಕುಸುಮ ಮತ್ತು ಕಿರಣ್ ಅಸಹಾಯಕ ರಾಗಿದ್ದರು.

ಕೀರ್ತಿ ಕಾಣೆಯಾಗಿ ಇಂದಿಗೆ ಸರಿಯಾಗಿ ಏಳು ವರ್ಷಗಳು ಮುಗಿದು ಹೋಗಿದ್ದರಿಂದ, ಇನ್ನು ಅವನ ಇರುವಿಕೆಯ ಬಗ್ಗೆ ಯಾರೂ ಭರವಸೆ ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇರಲಿಲ್ಲವೆಂಬುದು ಧೃಢ ಪಟ್ಟಿತ್ತು. ಹೀಗಾಗಿ ಕುಸುಮ ಮತ್ತು ಕಿರಣ್ ಮದುವೆಯಾಗಲು ಯಾವ ಅಡ್ಡಿಯೂ ಇರಲಿಲ್ಲ. ಇಂದು ಇಬ್ಬರೂ ನಿಶ್ಚಿಂತರಾದರು.


ಮುಂದೆ ಕಿರಣ್ ಮತ್ತು ಕುಸುಮಳ ಮದುವೆಯ ತಯಾರಿಗಳು ನಡೆಯಿತು. ಮದುವೆಗೆ ಕೇವಲ ಒಂದು ದಿನವಿರುವಾಗ, ಕುಸುಮಳಿಗೆ ಇದ್ದಕ್ಕಿದ್ದಂತೆ ಪೋಲಿಸ್ ಸ್ಟೇಷನ್ ನಿಂದ ಫೋನ್ ಬಂದಾಗ, ತುಂಬಾ ಆತಂಕವಾಯಿತು. ಅವಳು ಕಿರಣ್ ಗೆ ಫೋನ್ ಮಾಡಿ, ಇಬ್ಬರೂ ಪೋಲಿಸ್ ಸ್ಟೇಷನ್ ಗೆ ಹೋದಾಗ, ಅವರಿಬ್ಬರಿಗೂ ಶಾಕ್ ಆಗುವಂತಹ ಸುದ್ದಿಯನ್ನು ಪೋಲಿಸ್ ಸಬ್ಇನ್ಸ್ಪೆಕ್ಟರ್ ತಿಳಿಸಿದರು. 

ಕೀರ್ತಿಯ ಚಹರೆಯನ್ನೇ ಹೋಲುವ ಒಬ್ಬ ಗಂಡಸು ಸಬ್ ಇನ್ಸ್ಪೆಕ್ಟರ್ ಮುಂದೆ ಕುಳಿತಿರುವುದನ್ನು ತೋರಿಸುತ್ತಾ, 

"ನಿಮ್ಮ ಪತಿ ಕೀರ್ತಿಇವರೇನಾ? ಗುರುತಿಸಿ" ಎಂದಾಗ,ಆ ವ್ಯಕ್ತಿಯನ್ನು ನೋಡಿದ ಕುಸುಮಳಿಗೆ ಜಂಗಾಬಲವೇ ಉಡುಗಿ ಹೋಯಿತು. 'ಸಂಸಾರದಲ್ಲಿ ಕಿಂಚಿತ್ತೂ ಆಸಕ್ತಿ ಯಿಲ್ಲದೆ ವಿಲಕ್ಷಣ ವ್ಯಕ್ತಿಯಂತಿದ್ದ, ಮದುವೆಯಾದ ಒಂದು ವಾರಕ್ಕೇ ಮನೆಯಿಂದ ಕಾಣೆಯಾಗಿದ್ದ ತನ್ನ ಗಂಡ ಎನಿಸಿಕೊಂಡ ಪ್ರಾಣಿ ,ಏಳು ವರ್ಷಗಳ ನಂತರ ಈಗೆಲ್ಲಿಂದ ವಕ್ಕರಿಸಿದ ? ತನ್ನ ಜೀವನ ಇನ್ನೇನು ಕಿರಣ್ ಜೊತೆ ಸರಿಹೋಗುತ್ತದೆ ಎನ್ನುವ ಸಮಯದಲ್ಲಿ ಈ ಗೂಬೆ ಈಗೇಕೆ ಕಾಣಿಸಿಕೊಂಡ' ಯೋಚಿಸುತ್ತಾ ಹೆದರಿದ ಅವಳಿಗೆ ಶಾಕ್ ಆಗಿ ಪ್ರಜ್ಞೆ ತಪ್ಪಿದಾಗ, ಕಿರಣ್ ಅವಳನ್ನು ಆಸ್ಪತ್ರೆಗೆ ಕರೆದೊಯ್ದ. 


ಒಂದೆರಡು ಗಂಟೆಗಳ ನಂತರ, ಕುಸುಮಳಿಗೆ ಪ್ರಜ್ಞೆ ಬಂದಾಗ, ಅವಳಿಗೆ ಮುಂದೇನೆಂಬುದೇ ತಿಳಿಯದೆ ಅವಳ ತಲೆ ಗೊಂದಲದ ಗೂಡಾಯಿತು.

ಅವಳೀಗ ಕವಲು ದಾರಿಯಲ್ಲಿ ನಿಂತಿದ್ದಳು.ಅವಳ ಮುಂದೆ ಮೂರು ದಾರಿಗಳಿದ್ದವು.

ಮೊದಲನೆಯದು ತನ್ನ ಗಂಡನೆನಿಸಿಕೊಂಡ ಆ ಹೇಡಿಯನ್ನು ತನಗೆ ಗೊತ್ತಿಲ್ಲವೆಂದು ಹೇಳಿಬಿಡುವುದು.

ಎರಡನೆಯದು ಹಳೆ ಗಂಡನ ಪಾದವೇ ಗತಿಯೆಂದು ಒಪ್ಪಿಕೊಳ್ಳುವುದು.ಇದು ಅಸಾಧ್ಯವೆನಿಸಿತು.

ಮೂರನೆಯದು ತನ್ನ ಗಂಡನೆಂದು ಒಪ್ಪಿಕೊಂಡು, ಅವನಿಂದ ವಿಚ್ಚೇದನ ಪಡೆದು, ಕಿರಣ್ ನನ್ನು ಮದುವೆಯಾಗುವುದು. ಇದು ತುಂಬಾ ಸಮಯ ಹಿಡಿಯುವ ದಾರಿ.ಮುಂದೇನು?


ಅವಳಿಗೆ ಯೋಚಿಸಿ ಯೋಚಿಸಿ ಸಾಕಾಗಿ ಕಡೆಗೆ ಮೊದಲನೇ ದಾರಿಯೇ ಸರಿಯಾದದ್ದು ಎಂದು ನಿರ್ಧರಿಸಿ, "ಆ ಅಪರಿಚಿತ ತನ್ನ ಗಂಡನಲ್ಲ"ವೆಂದು ಇನ್ಸ್ಪೆಕ್ಟರ್ ಗೆ ಹೇಳಿಬಿಟ್ಟಳು. ಗುರುತಿಸಲಾರದಷ್ಟು ಬದಲಾಗಿದ್ದ ಕೀರ್ತಿ, ತನ್ನ ಹೆಂಡತಿ ಕುಸುಮಳೊಂದಿಗೆ ಏನೋ ಹೇಳಲು ಬಂಡಾಗ, ಅವಳು ಅವನನ್ನು ತಡೆಯುತ್ತಾ, ’ತನಗೆ ಇವನಾರೋ ಗೊತ್ತಿಲ್ಲ"ವೆಂದು ಮತ್ತೆ ಮತ್ತೆ ಹೇಳಿ ಲಿಖಿತ ಹೇಳಿಕೆಯನ್ನು ಬರೆದು ಕೊಟ್ಟು, ಕಿರಣ್ ಜೊತೆಗೆ ಪೋಲಿಸ್ಸ್ಟೇಷನ್ ನಿಂದ ಹೊರ ಬಂದಳು. ಈಗ ಅವಳ ಮನಸ್ಸು ಹಗುರವಾಗಿತ್ತು.ಏಳು ವರ್ಷ ಗಳ ತೊಳಲಾಟಕ್ಕೆ ತೆರೆ ಎಳೆದಾಗಿತ್ತು. ಇದುವರೆಗೂ ಕವಲು ದಾರಿಯಲ್ಲಿ ನಿಂತಿದ್ದ ಅವಳ ಮುಂದೆ ನಿಶ್ಚಿತ ವಾದ ದಾರಿ ಕಾಣುತ್ತಿತ್ತು.


ಈಗಾಗಲೇ ನಿಶ್ಚಿತವಾದ ಮುಹೂರ್ತದಲ್ಲಿ ಕುಸುಮ ಮತ್ತು ಕಿರಣ್ ಸತಿಪತಿಗಳಾದರು. ಅವರ ಹಲವಾರು ವರ್ಷಗಳ ಪ್ರೀತಿ ಸಾಫಲ್ಯಗೊಂಡಿತ್ತು.


Rate this content
Log in

Similar kannada story from Abstract