Vijaya Bharathi

Abstract Children Stories Others

4  

Vijaya Bharathi

Abstract Children Stories Others

ಕನಸು ನನಸು

ಕನಸು ನನಸು

1 min
457


ದಿನ ೧೫

ವಿಷಯ :ಹಣ


ಕನಸು ನನಸು 

ರಾಮು ಮಾತು ಸೋಮು ಗೆಳೆಯರು.ರಾಮುವಿನ ಅಪ್ಪ ಊರಿನ ಸಾಹುಕಾರ. ಸೋಮುವಿನ ಅಪ್ಪ ಒಂದು ಶಾಲೆಯ ಉಪಾಧ್ಯಾಯರು. ರಾಮು ಪ್ರತಿದಿನ ಇಸ್ತ್ರಿ ಮಾಡಿದ ಬಟ್ಟೆಗಳು , ಪಾಲೀಶ್ ಮಾಡಿದ ಲಕಲಕನೆ ಹೊಳೆಯುವ  ಶೂಗಳನ್ನು ಧರಿಸಿ, ಟ್ರಿಮ್ ಆಗಿ ಸ್ಕೂಲಿಗೆ ಬರುತ್ತಿದ್ದನ್ನು ನೋಡಿದರೆ, ಸೋಮುವಿಗೂ ಅವನ ರೀತಿ ಟ್ರಿಮ್ ಆಗಿರಬೇಕೆಂದು ಆಸೆ ಪಡುತ್ತಿದ್ದ. ಆದರೆ ಅವನ ಮನೆಯಲ್ಲಿ ಇಸ್ತ್ರಿ ಪೆಟ್ಟಿಗೆಯಾಗಲೀ ಶೂ ಪಾಲೀಶ್ಗಳಾಗಲೀ ಇರಲಿಲ್ಲ. ಅವರಮ್ಮ ನೀಟಾಗಿ ಒಗೆದು ಮಡಿಸಿಟ್ಟಿದ್ದ ಬಟ್ಟೆಯನ್ನು ಹಾಕಿಕೊಂಡು ಬರುತ್ತಿದ್ದ. ಇವರಿಬ್ಬರಲ್ಲಿ ಅಂತಸ್ತಿನ ವ್ಯತ್ಯಾಸವಿದ್ದರೂ ಸ್ನೇಹಕ್ಕೆ ಯಾವ ಕೊರತೆಯೂ ಇರಲಿಲ್ಲ. ಸೋಮು ಮನೆಯಲ್ಲಿ ವಿದ್ಯುದ್ದೀಪ ಇರಲಿಲ್ಲವಾಗಿ, ಅವನು ಪ್ರತಿದಿನ ರಾಮುವಿನ ಮನೆಗೆ ಹೋಗಿ ಓದಿಕೊಳ್ಳುತ್ತಿದ್ದನು. 


ಅವನು ರಾಮುವಿನ ಮನೆಯಲ್ಲಿ ಓದುತ್ತಾ ಇದ್ದಾಗ, ಕೆಲವು ದಿನ ರಾಮುವಿನ ಅಮ್ಮ ಮಾಡಿಕೊಡುತ್ತಿದ್ದ ಕೇಸರಿ ಬಾತ್, ಉಪ್ಪಿಟ್ಟು, ಮಸಾಲೆ ದೋಸೆ, ಪೂರಿ ಸಾಗು ಮುಂತಾದ ತಿಂಡಿಗಳನ್ನು ತಿನ್ನುವಾಗ,ಅವನಿಗೂ ಎಷ್ಟೋ ಬಾರಿ ತಾನೂ ರಾಮುವಿನ ಮನೆಯಲ್ಲಿ ಹುಟ್ಟಬಾರದಿತ್ತಾ ಎಂದುಕೊಳ್ಳುತ್ತಿದ್ದ. ಎಷ್ಟೋ ಸಲ ರಾಮುವಿನ ಮನೆಯ ತಿಜೋರಿಯಲ್ಲಿಟ್ಟಿದ್ದ ನೋಟಿನ ಕಂತೆಗಳನ್ನು ನೋಡಿದಾಗ, ಅವನಿಗೆ ತನ್ನ ಮನೆಯಲ್ಲಿ ತನ್ನ ಅಪ್ಪ ಪೈಸೆ ಪೈಸೆಗೆ ಕಷ್ಟಪಡುವುದು ಕಂಡಾಗ ತುಂಬಾ ಬೇಸರವಾಗುತ್ತಿತ್ತು. ತಾನು ಚೆನ್ನಾಗಿ ಓದಿ ದೊಡ್ಡವನಾದ ಮೇಲೆ ನೋಟಿನ ಕಂತೆಗಳನ್ನು ತನ್ನ ಮನೆಯಲ್ಲಿ ಇರುವಂತೆ ಆಗಬೇಕು ಎಂದು ಕನಸು ಕಾಣುತ್ತಿದ್ದ. 

ಸೋಮು ಕಷ್ಟಪಟ್ಟು ಚೆನ್ನಾಗಿ ಓದುತ್ತಾ ಓದಿನಲ್ಲಿ ರಾಮುವಿಗಿಂತ ಮುಂದೆ ಬಂದು, ಪದವೀಧರನಾದಾಗ ರಾಮುವಿನ ತಂದೆಗೂ ತುಂಬಾ ಸಂತೋಷವಾಗಿತ್ತು. ಅವರ ಮಗ ರಾಮು, ಪಿ.ಯು.ಸಿ‌ಯಲ್ಲಿ ಫೇಲ್ ಆಗುತ್ತಲೇ ಇದ್ದ. ಕಡೆಗೆ ಓದಿಗೆ ತಿಲಾಂಜಲಿ ಕೊಟ್ಟು, ಅಪ್ಪನ ಕೈಕೆಳಗಿನ ವ್ಯವಹಾರ ನೋಡಿಕೊಳ್ಳತೊಡಗಿದ.


ಸೋಮು ಎಂ.ಕಾಂ. ಪದವಿ ಪಡೆದು ಬ್ಯಾಂಕನಲ್ಲಿ ಉದ್ಯೋಗ ಪಡೆದಾಗ, ಸೋಮುವಿನ ತಂದೆ ತಾಯಿಗೆ ತುಂಬಾ ಖುಷಿಯಾಯಿತು.ಈಗ ಸೋಮು ಬ್ಯಾಂಕನಲ್ಲಿ ದಿನಾ ಕ್ಯಾಶ್ ಬಂಡಲ್ನ್ ಗಳನ್ನು ಕಣ್ಣು ತುಂಬಾ ನೋಡುತ್ತಾ, ಕೈಯ್ಯಿಂದ ಆ ಹಣವನ್ನು ಮುಟ್ಟಿ ಎಣಿಸುವಾಗಲೆಲ್ಲಾ, ಅವನ ಚಿಕ್ಕ ವಯಸ್ಸಿನ ಕನಸು ಹೀಗೆ ನನಸಾಗಿರುವುದನ್ನು ನೆನಪಿಸಿಕೊಳ್ಳುವಾಗ ಅವನ ಮುಖದಲ್ಲಿ ಕಿರುನಗೆಯೊಂದು ಹಾದು ಹೋಗುತ್ತದೆ.


ದುಡ್ಡಿದ್ದವನೇ ದೊಡ್ಡಪ್ಪ ಎಂಬ ಮಾತು ಅವನ ಅನುಭವ.



Rate this content
Log in

Similar kannada story from Abstract