STORYMIRROR

Gireesh pm Giree

Abstract Children Stories Action

4  

Gireesh pm Giree

Abstract Children Stories Action

ಕೀಕಾನ ಎಂಬ ಕನ್ನಡದ  ತವರು ಮನೆ*

ಕೀಕಾನ ಎಂಬ ಕನ್ನಡದ  ತವರು ಮನೆ*

2 mins
271

*ಕೀಕಾನ ಎಂಬ ಕನ್ನಡದ ತವರು ಮನೆ*


ನನ್ನದು ಗಡಿನಾಡ ಗೂಡು, ಕನ್ನಡಿಗರ ಬೀಡು, ಸಪ್ತ ಭಾಷೆಗಳ ಗೂಡೆಂದು ಕರೆಯಲ್ಪಡುವ ಕಾಸರಗೋಡು ಜಿಲ್ಲೆಯ ಬೇಕಲಕೋಟದಿಂದ 4-5 ಕಿಲೋಮೀಟರ್ ನಷ್ಟು ದೂರದ ಒಂದು ಚಿಕ್ಕಗ್ರಾಮ. ಆ ಗ್ರಾಮದ ಹೆಸರು ಕೀಕಾನ. ನಾನು ಓದಿದ ಪ್ರಾಥಮಿಕ ಶಿಕ್ಷಣ ಕೇಂದ್ರ ಇರುವುದು ಇಲ್ಲೇ. 


ನನ್ನಂತಹ ಮಧ್ಯಮವರ್ಗದ ಸಹಸ್ರಾರು ವಿದ್ಯಾರ್ಥಿಗಳಿಗೆ ಕನ್ನಡ ಬೋಧಿಸಿದ ಸುತ್ತಲ ಗ್ರಾಮದವರಿಗೆ ವಿದ್ಯೆ ಧಾರೆಯೆರೆದ ಕನ್ನಡ ಮಾಧ್ಯಮ ಶಾಲೆ ಕೀಕಾನ. ನನ್ನ ಮತ್ತು ಈ ಶಾಲೆಯ ಅನುಬಂಧ ಏಳೆಂಟು ವರ್ಷಗಳದ್ದು. ಶಿಕ್ಷಕರ ದಿನಾಚರಣೆ ಎಂದಾಕ್ಷಣ ಈ ಶಾಲೆಯಲ್ಲಿ ನಾನು ಕಳೆದ ದಿನಗಳ ಸವಿನೆನಪುಗಳು ಮನಸ್ಸಲ್ಲಿ ಹಾದುಹೋಗುತ್ತವೆ. 


ಮಳೆಗಾಲ ನಮ್ಮ ಶಾಲಾ ದಿನಗಳಿಗೆ ರಂಗು ತುಂಬುತ್ತಿತ್ತು. ಬಿಡುವಿನ ವೇಳೆಯಲ್ಲಿ ಟೀಚರ್ ಕಣ್ಣುತಪ್ಪಿಸಿ ಮಳೆಯಲ್ಲಿ ನೆನೆದದ್ದು, ಹಂಚಿನ ಸೂರಿನ ಮಳೆಯ ನೀರಲ್ಲಿ ಬಟ್ಟಲು ತೊಳೆದದ್ದು, ಅಂಗಡಿಗೆ ಹೋಗಿ ತಡಮಾಡಿ ತರಗತಿಗೆ ಹಾಜರಾದದ್ದು, ಆಗ ಟೀಚರ್ ಪೆಟ್ಟುಕೊಟ್ಟದ್ದು, ಮರುದಿನ ಮನೆಯಲ್ಲೇ ತಲೆನೋವೆಂದು ಸುಮ್ಮನೆ ಮಲಗಿದ್ದು…ಹೀಗೆ. ಕಾಪಿ ಪುಸ್ತಕಕ್ಕೆ ಟೀಚರ್‌ ಹಾಕಿದ್ದ ಕೆಂಪು ರೈಟನ್ನು ಉಜ್ಜಿ ದಿನಾಂಕವನ್ನು ಬದಲಾವಣೆ ಮಾಡಿದ್ದ ಭೂಪರು ನಾವು. ಪಾಪ, ಟೀಚರ್‌ಗೆ ಅದು ಗೊತ್ತೇ ಆಗಿರಲಿಲ್ಲ! 


ನಮ್ಮ ಶಾಲೆಯಲ್ಲಿ ರಾಷ್ಟ್ರಹಬ್ಬದಿಂದ ಹಿಡಿದು ನಾಡಹಬ್ಬದ ತನಕ ಎಲ್ಲವನ್ನೂ ತುಂಬಾನೇ ಸಾಂಪ್ರದಾಯಿಕವಾಗಿ ಆಚರಿಸಿ ಸಂಭ್ರಮಿಸುತ್ತಿದ್ದೆವು. ವರ್ಷಕ್ಕೊಮ್ಮೆ ಬರುವ ಸ್ವಾತಂತ್ರ್ಯ ದಿನವೆಂದರೆ ನಮಗಂತೂ ತುಸು ಹೆಚ್ಚೇ ಸಡಗರ. ಹಿಂದಿನ ದಿನವೇ ತರಗತಿಗೆ ಅಲಂಕಾರ ಮಾಡಿ ಶಾಲೆಯನ್ನು ಮದುವಣಗಿತ್ತಿಯಂತೆ ರಂಗೇರಿಸುತ್ತಿದ್ದೆವು. ಆ ದಿನ ಟೀಚರ್ ಹೇಳುತ್ತಿದ್ದ ಮಾತು ಇಂದು ಕೂಡಾ ನೆನಪಲ್ಲಿದೆ. “ಮಕ್ಕಳೇ ಆದರೆ ನಾಳೆ ತೆಂಗಿನಕಾಯಿ ತನ್ನಿ,” ಎಂದು. ಆ ದಿನ ನಮಗೆ ಬಗೆಬಗೆಯ ಸಿಹಿ ತಿಂಡಿ, ರುಚಿಯಾದ ಹಾಲುಪಾಯಸ ಸವಿಯುವುದೆಂದರೆ ಎಲ್ಲಿಲ್ಲದ ಆಸೆ.


ನೆನಪಿನ ಪುಟಗಳನ್ನು ಒಂದೊಂದಾಗಿ ತೆರೆಯುತ್ತಾ ಹೋದಂತೆ ನಲಿವಿನ ಕ್ಷಣಗಳು ದುಃಖದ ದಿನಗಳು ಎಲ್ಲವೂ ಕಣ್ಣ ಮುಂದೆ ಬರುತ್ತವೆ. ನನ್ನ ಅಕ್ಷರ ತಪ್ಪುಗಳನ್ನು ತಿದ್ದಿ ಏನಾದರೂ ತಪ್ಪು ಮಾಡಿದರೆ ಬುದ್ಧಿ ಹೇಳಿ , ಭಾವಗೀತೆ ಕಂಠಪಾಠ ಗಳನ್ನು ಹೇಳಿಕೊಟ್ಟು, ವೇದಿಕೆಯಲ್ಲಿ ಧೈರ್ಯವಾಗಿ ಹೇಳುವಂತೆ ಪ್ರೇರೇಪಿಸಿದವರು ನನ್ನ ಶಿಕ್ಷಕರು. ಅಲ್ಲಿ ಗೆದ್ದರೆ ನನಗಿಂತ ಸಂಭ್ರಮ ಅವರಿಗಾಗುತ್ತಿತ್ತು. ಸೋತರೆ ಇನ್ನು ಗೆಲ್ಲಲು ತುಂಬಾನೇ ಇದೆ ಎಂದು ಹೇಳಿ ನೋವು ಮರೆಸುತ್ತಿದ್ದರು!


ನನ್ನ ಮನದಲ್ಲಿ ಅಂದು ಎಂದೂ ಮರೆಯಲಾಗದ ದಿನ. ಏಳೆಂಟು ವರ್ಷಗಳ ಒಡನಾಟ ಮುಗಿದು ನಮ್ಮನ್ನು ಬೀಳ್ಕೊಟ್ಟ ಕ್ಷಣ. ಬೀಳ್ಕೊಡುಗೆಯ ದುಃಖ ಅಂದು ಶಾಲೆಯ ತುಂಬಾ ಮನೆಮಾಡಿತ್ತು. ತರಗತಿಗೆ ಕಾರ್ಮೋಡ ಕವಿದಂತಾಗಿತ್ತು. ಸುಖ ಪಯಣಕ್ಕೆ ವಿರಾಮ ಹಾಡುವ ಸಮಯ. ಒಬ್ಬರನ್ನೊಬ್ಬರು ಕೈ ಕುಲುಕುವಾಗ ಕಣ್ಣಿನಿಂದ ಕಂಬನಿ ಇಳಿಯುತ್ತಿತ್ತು. ಗದರಿ ಬುದ್ಧಿ ಹೇಳಿ ಪ್ರೋತ್ಸಾಹಿಸಿದ ಗುರುಗಳನ್ನು ಬಿಟ್ಟು ಹೋಗುವ ದುಃಖ ಕಾಡುತ್ತಿತ್ತು. ಕೀಕಾನ ಶಾಲೆಯಲ್ಲಿ ಇನ್ನೂ ನಾಲ್ಕೈದು ವರುಷ ಇರುತ್ತಿದ್ದರೆ…ಎಂದೆನಿಸುತ್ತಿತ್ತು. 

ನಿಜಕ್ಕೂ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಕಲಿತ ನಾವುಗಳೇ ಧನ್ಯರು. ನಮ್ಮ ಊರಿನ ವಿದ್ಯಾರ್ಥಿಗಳ ಬಾಳ ಬೆಳಗಿದ ಪಾಠಶಾಲೆ ಅದು. ಗಡಿನಾಡ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡದ ಪೂಜೆಯಲ್ಲಿ ತೊಡಗಿರುವವರೇ ಅಲ್ಲಿನ ಶಿಕ್ಷಕರು. 



Rate this content
Log in

Similar kannada story from Abstract