JAISHREE HALLUR

Horror Action Thriller

4  

JAISHREE HALLUR

Horror Action Thriller

ಕೆಂಪು ಬ್ಯಾಗು

ಕೆಂಪು ಬ್ಯಾಗು

4 mins
280



ಕೆಂಪು ಬ್ಯಾಗು

ಸಂಧ್ಯಾ ಗಡಿಯಾರ ನೋಡಿಕೊಂಡಾಗ ಆಗಲೇ ಆರು ತೋರಿಸುತ್ತಿತ್ತು. 

ಅಯ್ಯೋ! ಟೈಮಾಯಿತಲ್ಲಾ, ಬಸ್ ಮಿಸ್ ಆದೀತು ಅಂತ ಆತುರಾತುರವಾಗಿ, ಬ್ಯಾಗನ್ನು ಬಗಲಿಗೇರಿಸಿ, ಫೈಲ್ಗಳನ್ನು ಮೇಜಿಂದ ಪಕ್ಕಕ್ಕೆ ಸರಿಸಿ, ಆಫೀಸಿಂದ ಹೊರಡಲುನುವಾದಳು.


ಆಗ , ಬಾಸ್ ಕೂಡ ಕ್ಯಾಬಿನ್ ಇಂದ ಹೊರಬಂದು, ಸಂಧ್ಯಾ ಮೇಡಂ, ನಾಳೆ ಆ ಕಾರೀಡಾರ್ ಮೆಶ್ಗಳ ಬಗ್ಗೆ ಎಮ್ ಇ ಎಸ್ ಗೆ ಪೋನ್ ಮಾಡಿ ಬೇಗ ಕೆಲಸ ಮುಗಿಸುವಂತೆ ತಿಳಿಸಿ. ಬಹಳ ದಿನ ಕಾರೀಡಾರ್ ಓಪನ್ ಇಡೋದು ಸರಿಯಲ್ಲ. .ಎಂದು ನೆನಪಿಸಿದರು.

ಯಸ್ ಸರ್ , ಎಂದು ತಲೆ ಅಲ್ಲಾಡಿಸುತ್ತಾ ಹೊರಬಂದಳು..


ಬಾಸ್ ಮುಂದೆ ಮುಂದೆ ಹೆಜ್ಜೆ ಹಾಕಿದರೆ ತಾ ಹಿಂದೆ ನಡೆದಳು..

ಕಾರ್ ಪಾರ್ಕಿಂಗ್ ಕಡೆ ತಿರುಗಿದ ಬಾಸ್ ಬಗ್ಗೆ ಕೊಂಚ ಅಸೂಯೆ, ಕೋಪ ಎರಡೂ ಆಯಿತು. 


ಬನ್ನಿ , ಬಸ್ ಸ್ಟಾಪ್ ತನಕ ಡ್ರಾಪ್ ಮಾಡ್ತೀನಿ ಅಂತ ಒಂದು ಮಾತು ಫಾರ್ಮೆಲಿಟೀಗೂ ಹೇಳೋಲ್ಲವಲ್ಲಾ..ಎಂತಾ ಆಸಾಮಿ.ಎಂದು ಮನದಲ್ಲೇ ಕುಟುಕುತ್ತಾ ಮೇಯಿನ್ ಗೇಟಿನತ್ತ ಸರಸರನೆ ಹೆಜ್ಜೆ ಹಾಕಿದಳು.


ಆ ಸೆಕ್ಯೂರಿಟಿ ಗಾರ್ಡ್ ಒಬ್ಬ ನನಗೆ ದಿನಾ ತಲೆನೋವೆ. ಅವಳು ಸ್ವಲ್ಪ ಬರೋದು ತಡವಾದರೂ ಕಾಯದ ಆಸಾಮಿ ಗೇಟಿಗೆ ಬೀಗ ಜಡಿದು ಎಲ್ಲೋ ಪರಾರಿ ಆಗಿ, ಹೊರಹೋಗಲು ಚಡಪಡಿಸುವ ಸಂಧ್ಯಾಳ ಪಾಡು ಹೇಳ ತೀರದು. ಎಲ್ಲೆಲ್ಲಿ ಹುಡುಕೋದು ಅವನನ್ನು, ಬೀಗ ತೆಗೆಯಲು ದುಂಬಾಲು ಬೇರೆ. ಸಾರಿ ಬೇರೆ ಕೇಡು...ಇದು ದಿನಾ ನಡೆಯುವ ಗೋಳು ಆಕೆಯದು. 

ಸಧ್ಯ ಗೇಟು ತೆರೆದಿತ್ತು. ಅವನತ್ತ ಬಲವಂತದ ಮುಗುಳುನಗೆ ಬೀರಿ, ಗೇಟಿಂದ ಹೊರಬಂದು ಬದುಕಿದೆ ಜೀವವೇ ಎನ್ನುತ್ತ ಬಲಕ್ಕೆ ತಿರುಗಿ ಬಸ್ ಸ್ಟಾಪಿನತ್ತ ಹೆಜ್ಜೆ ಹಾಕಿದಳು. 


ಆಗಲೇ ಸಂಜೆ ಆವರಿಸಿ ಮೋಡ ಕವಿದಂತೆ ಕತ್ತಲಾಗಿತ್ತು. ಮಳೆ ಬರುವ ಸೂಚನೆ. 

ಕೊಂಚ ಪರ್ಲಾಂಗು ದೂರ ನಡೆದಾಗ ಅಲ್ಲೊಂದು ಎಳನೀರು ಮಾರುವಾತನ ಗಾಡಿ ಕಂಡಿತು. 

ಯಾಕೋ ಬಾಯಾರಿದಂತೆ ಅನಿಸಿ, ಎಳನೀರಿನ ಗಾಡಿಯ ಬಳಿ ಬಂದಳು. ಆ ಗಾಡಿಯವನು, ಕುಡಿದು ಬಿಸಾಡಿದ್ದ ಸಿಪ್ಪೆಗಳನ್ನೆಲ್ಲಾ ಚೀಲದಲ್ಲಿ ತುಂಬಿ ಅಲ್ಲೇ ಇದ್ದ ಸಣ್ಣ ಟೆಂಪೋ ಒಂದಕ್ಕೆ ರವಾನಿಸುವಲ್ಲಿ ನಿರತನಾಗಿದ್ದ. 

ಒಂದು ಒಳ್ಳೆ ಗಂಜೀ ಇರುವಂತ ಕಾಯಿ ಕೊಡಪ್ಪಾ ಎಂದಳು. 

ಹೂಂ ಕಣವ್ವಾ..ಒಸೀ ಇರಿ ಬಂದೆ..ಎನ್ನುತ್ತ ಆ ತುಂಬಿದ ಚೀಲವನ್ನು ಎತ್ತಲು ಹೆಣಗುತ್ತಿದ್ದ.


 ಅವಳಿಗೆ ಅಯ್ಯೋ ಎನಿಸಿ, ಸಹಾಯ ಮಾಡುವ ಮನಸಾಗಿ , ಹೆಗಲಲ್ಲಿದ್ದ ಬ್ಯಾಗನ್ನು ಗಾಡಿಯ ಮೇಲಿರಿಸಿ ಕೈ ಜೋಡಿಸಿದಳು. 

ಸಲೀಸಾಗಿ ಮೂಟೆ ಟೆಂಪೋ ಸೇರಿತು. ಗಾಡಿಯವನು ಅವಳಿಗೆ ಧನ್ಯವಾದಗಳನ್ನರ್ಪಿಸಿದ. 

ಅವಳಿಗೂ ಖುಷಿಯಾಯ್ತು. ಸರಿ, ತನ್ನ ಯತಾವತ್ತಾದ ಕತ್ತಿ ತೆಗೆದು ಎಳನೀರು ಕೊಚ್ಚಲು ಶುರುವಾದ. 

ಅವಳು ತನ್ನ ಬ್ಯಾಗನ್ನು ಹೆಗಲಿಗೇರಿಸಲು ಅತ್ತಿತ್ತ ನೋಡುತ್ತಾಳೆ. ಬ್ಯಾಗು ಕಾಣಲಿಲ್ಲ. 

ಗಾಭರಿ ಆಗಿ, ಅಯ್ಯೋ ನನ್ನ ಬ್ಯಾಗೆಲ್ಲಿ ? ಯಾರು ಒಯ್ದರು? ಎನ್ನುತ ಹುಡುಕಾಡಿದಳು..ಎಲ್ಲೂ ಕಾಣಲಿಲ್ಲ. ಅಯ್ಯೋ ಎಂತ ಗತಿ ಈಗ, ನನ್ನ ಎಲ್ಲಾ ಡಾಕ್ಯೂಮೆಂಟುಗಳೂ , ಹಣದ ಪರ್ಸೂ ಅದರಲ್ಲೇ ಇದೆ. ಏನು ಮಾಡೋದು..

ಗಾಡಿಯವನಿಗೂ ಗಾಭರಿ. 

ಎಲ್ಲಿಟ್ರೀ ಮೇಡಂ ಅವರೇ? ನೋಡಿಕೋಬಾರದಿತ್ತಾ..? ದಾರೀಲಿ ಹೋಗೋ ಬರೋ ಜನ..ಬಹಳ ಇದ್ದಾರೆ..ಅಂತ ಕನಿಕರ ಬೇರೆ ತೋರಿಸಿದ..

ಅವಳ ಆತಂಕ ಬೇರೆಯೇ ಇತ್ತು. ಮನೆಯ ಬೀಗ, ಹಣ ಇಲ್ಲದೇ ಮನೇಗೆ ಹೇಗೆ ಹೋಗೋದು...ಥೂ! ಈ ಹಾಳಾದ್ ಎಳನೀರಿನ ಗಾಡಿ ಹತ್ತಿರ ಬರಲೇ ಬಾರದಿತ್ತು..

ಎಲ್ಲಾ ಕಡೆ ತಿರುತಿರುಗಿ ಹುಡುಕಾಡಿದಳು. 

ಯಾರಾದರೂ ತನ್ನ ಕೆಂಪು ಬಣ್ಣದ ಬ್ಯಾಗನ್ನು ಹಿಡಿದು ನಡೆಯುವವರನ್ನು..ಉಹೂಂ...ಏನೂ ಉಪಯೋಗವಿಲ್ಲ..

ಇನ್ನಷ್ಟು ಮುಂದೆ ನಡೆದಳು...ಅಕ್ಕ ಪಕ್ಕ ದಾರಿಯುದ್ದಕ್ಕೂ ರಸ್ತೆ ಬದಿಯ ಅಂಗಡಿಗಳು. ಗಿಜಿಗಿಜಿ ಜನ. ಸಂಧಿಗೊಂದಿಯೆಲ್ಲಾ ಜಾಲಾಡಿದಳು..ಎಲ್ಲೂ ಕಾಣಲಿಲ್ಲ.


 ಅಲ್ಲೊಂದು ಕಲ್ಲಿನ ಮೇಲೆ ಒಂದು ಬ್ಯಾಗು ಗೋಚರಿಸಿತು. ಹತ್ತಿರ ಹೋಗುವಷ್ಟರಲ್ಲಿ, ಅಲ್ಲೇ ಪಾನೀಪೂರಿ ತಿಂತಿದ್ದ ಮಹಿಳೆ ಅದನ್ನೆತ್ತಿ ಬಗಲಿಗೇರಿಸಿದ್ದಳು. ಥೂ! ಕರ್ಮ ಅದು ಅವಳದಾ..ಎನ್ನುತ್ತಾ ಹಾಗೇ ಎಷ್ಟು ದೂರ ನಡೆದಳೋ ಕಾಣೆ..

ಕತ್ತಲಾಗಿ ಹನಿ ಉದುರಲು ಶುರುವಾಯ್ತು..

ಏನು ಮಾಡಲಿ, ಮನೇಗೆ ಹೇಗೆ ಹೋಗೋದು ..ಕೈಯಲ್ಲಿ ಒಂದು ಪೈಸಾ ಕೂಡಾ ಇಲ್ಲಾ..ಫೋನ್ ಮಾಡೋಣಾ ಅಂದ್ರೆ ಫೋನ್ ಕೂಡಾ ಬ್ಯಾಗಲ್ಲೇ ಉಳಿದು ಹೋಗಿದೆ. ಪಬ್ಲಿಕ್ ಬೂತ್ಗೆ ಹೋಗಿ ಮಾಡಲು ಹಣವಿಲ್ಲಾ..ಎಂತಾ ಪರಿಸ್ಥಿತಿ ಬಂತಪ್ಪಾ...ಎಂದು ಆತಂಕಗೊಂಡಳು..


ಅವಳ ವ್ಯಾನಿಟೀ ಬ್ಯಾಗಲ್ಲಿ, ಆಫೀಸ್ ಐಡಿ, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್ ಬುಕ್, ಎಟಿಎಮ್ ಕಾರ್ಡು, ಪ್ಯಾನ್ ಕಾರ್ಡು, ಆಧಾರ್ ಕಾರ್ಡು ಎಲ್ಲಾ ಇತ್ತು. ದಸೆರಾ ಹಬ್ಬದ ಸಮಯ ಬ್ಯಾಂಕುಗಳು ರಜ ಇರೋದರಿಂದ ಬೆಳಿಗ್ಗೆ ಎಟಿಯಮ್ ನಿಂದ ಡ್ರಾ ಮಾಡಿದ ನಾಲ್ಕು ಸಾವಿರ ಹಣ ಬೇರೆ ಇತ್ತು. ಸಾಲದಕ್ಕೆ ಹೊಸಾ ಆಂಡ್ರಾಯಿಡ್ ಫೋನ್ ಬೇರೆ. ಅದರಲ್ಲಿರೋ ಬರೋ ಕಾಂಟ್ಯಾಕ್ಟ್ ನಂಬರ್ಗಳನ್ನು ಎಲ್ಲೂ ಕಾಪೀ ಮಾಡಿರದ ಕಾರಣ, ನಂಬರ್ಗಳು ನೆನಪಲಿಲ್ಲ. ಆಫೀಸಿಗೆ ಸಂಭಂದಿಸಿದ ಎಷ್ಟೊಂದು ನಂಬರ್ಗಳು ಅದರಲ್ಲಿ..


ಏನು ಮಾಡೋದು..ಯಾರು ತಗೊಂಡರೋ ಅವರನ್ನು ಶಪಿಸುತ್ತಾ..ಇನ್ನೂ ಹುಡುಕುವುದರಲ್ಲೇ ಇದ್ದಳು. ಅವಳ ಮುಖದಲ್ಲಿ ಆತಂಕ, ಭಯ ಎರಡೂ ಎದ್ದು ಕಾಣುತ್ತಿತ್ತು.


 ಎದುರಿಗೆ ಒಬ್ಬ ಸೈಕಲ್ ಮೇಲೆ ಬರುತ್ತಿದ್ದ. ಗಾಭರಿಯಾಗಿ ನಿಲ್ಲಿಸಿದ. ಏನಮ್ಮಾ..ಎಲ್ಲಿಗೆ ಹೋಗಬೇಕು..? ಎಂದ..ಅವನ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿ, ಆಹ್ಹಾ..! ಇಲ್ಲೇ..ಎಲ್ಲೋ..ಬಸ್ ಸ್ಟಾಂಡಿಗೆ..ಎಂದಳು...

ಅವನು ...

ಇದೇ ರಾಗೀ ಗುಡ್ಡದ ಬಸ್ ಸ್ಟಾಂಡು..ಮುಂದಕ್ಕೆ ಹೋದರೆ ಬಲಕ್ಕೆ ತಿರುಗಿ ಅಂದು ಮುಂದೆ ಹೋದ..


ಅಯ್ಯೋ..! ರಾಗೀ ಗುಡ್ಡಾನಾ..?ನಾನ್ಯಾಕೆ ಈ ಕಡೆ ಬಂದೆ?..

ನಮ್ಮ ಮನೆ ಈ ಕಡೆ ಅಲ್ಲ..ದಾರಿ ತಪ್ಹೋಯ್ತಾ..?

ಎಂದು ತಲೆ ಕೆರೆದುಕೊಂಡು ..ಹಿಂದಕ್ಕೆ ಬಂದಳು..


ಅಲ್ಲೊಂದು ಕೆಂಪು ಬಸ್ಸು ಬಂದು ಪಕ್ಕದಲ್ಲೇ ನಿಂತಿತು...

ಸರ್ರನೇ ಹತ್ತೇಬಿಟ್ಟಳು...ಒಂದೇ ಒಂದು ಸೀಟು ಖಾಲೀ ಇತ್ತು. ಕಿಟಕೀ ಪಕ್ಕ ಹೋಗಿ ಕೂತಳು..ತಣ್ಣನೆ ಗಾಳೀಲಿ ಕೂದಲೆಲ್ಲಾ ಹಾರಾಡಿತು..ಸ್ವಲ್ಪ ಹಾಯೆನಿಸಿತು...

ಕಂಡಕ್ಟರ್ ಬಂದು ಟಿಕೇಟ್ ಟಿಕೇಟ್ ಎಂದಾಗ ಮುಚ್ಚಿದ ಕಣ್ತೆರೆದು ಗಾಭರಿಯಲ್ಲಿ, ಪರ್ಸ್ ಕಳೆದೋಗಿದೆ. ನನ್ನ ಬಳಿ ಹಣ ಇಲ್ಲ, ಈ ಉಂಗರ ತಗೋಳಿ ಅಂತ, ತನ್ನ ಬೆರಳಲ್ಲಿದ್ದ ಉಂಗುರ ತೆಗೆದು ಕೊಟ್ಟಳು..ಅವಳ ಪಕ್ಕದಲ್ಲಿ ಕುಳಿತಿದ್ದ ದಡೂತಿ ಆಸಾಮೀ ಇವಳನ್ನೇ ಕೆಕ್ಕರಿಸಿ ನಕ್ಕಂತೆ ನೋಡಿದ. ಕಂಡಕ್ಟರ್ ತಲೆ ಕೆರೆದುಕೊಳ್ಳುತ್ತಾ, ಅಷ್ಟೊಂದು ಹಣ ನನ್ನ ಬಳಿಯಿಲ್ಲ ತಾಯಿ..ನೀವು ಸರಿಯಾದ ಚೇಂಜ್ ಕೊಡಿ ಅಂದ. 

ಇವಳು ಕಂಗಾಲಾಗುತ್ತಾಳೆ..ಏನು ಮಾಡೋದು..ತೋಚಲಿಲ್ಲ. 

ಇಲ್ಲೇ ಇಳ್ಕೊಳಮ್ಮಾ..ಎಲ್ಲಾದರೂ ಚೇಂಜ್ ತನ್ನಿ..ಬೇರೇ ಬಸ್ಸಲ್ಲಿ ಬನ್ನಿ..ಹೋಗಿ ಹೋಗಿ..ಅಂದ..


ಥೂ! ಎಂತ ಅವಮಾನ..ಯಾಕಾದರೂ ಪರ್ಸ್ ಕಳೀತೋ..ನನ್ನ ಪ್ರಾರಬ್ಧ! ಎನ್ನುತಾ ಬಸ್ನಿಂದ ಕೆಳಗಿಳಿದಳು..

ಹೇಗಪ್ಪಾ ಮನೇಗೆ ಹೋಗೋದು..

ಮಕ್ಕಳು ಬೇರೆ ಮನೆಗೆ ಬಂದು ಕಾಯ್ತಿರ್ತಾರೆ..

ಮಕ್ಕಳ ನೆನಪು ಬಂದೊಡನೆ ಕಣ್ಣಲ್ಲಿ ನೀರು ಬಂತು..

ಆತುರ ಕಾತುರ..ಎಲ್ಲಾ ಒಟ್ಟಿಗೇ ..

ಒಂದು ಕ್ಷಣ, ರಸ್ತೆ ನಿರ್ಜನವಾದಂತೆ , ಕತ್ತಲು ಆವರಿಸಿದಂತೆ, ತಾನು ಒಂಟಿಯಾಗಿ ಅಲೆಯುತ್ತಿರುವಂತೆ ಭಾಸವಾಯಿತು. ಕತ್ತಲೆಂದರೆ ಹೆದರದವಳು ಈಗ ನಖಶಿಕಾಂತ ಬೆವರಿದಳು. ಕಳ್ಳರ ಬಗ್ಗೆ ಮೊದಲ ಬಾರಿಗೆ ನಡುಕವುಂಟಾಯಿತು. ಜೋರಾಗಿ ಹೆಜ್ಜೆ ಹಾಕುತ್ತಾ ಕಾಲ್ನಡಿಗೆಯಲ್ಲೇ ಮನೆ ತಲುಪಲು ಶುರುಮಾಡಿದಳು..

ಅಷ್ಟರಲ್ಲಿ, ಒಬ್ಬಾತ ಓಡಿ ಹೋಗೋದು ಕಂಡಿತು. ಅವನ ಹಿಂದೆ ಪೋಲಿಸ್ ಪೇದೆಯೊಬ್ಬ ಹಿಂಬಾಸುತಿದ್ದ. ಮುಂದೆ ಇದ್ದವನನ್ನು ಹಿಡಿಯುವ ಆತುರ. ಆ ಮುಂದಿದ್ದ ವ್ಯಕ್ತಿ ಇವಳ ಕಡೇಗೆ ಬರುತ್ತಿದ್ದದ್ದು ಕಂಡಿತು.. ಅವಳು ಸಾವರಿಸಿ ನಿಂತಳು. ಅವನ ಕೈಯಲ್ಲಿ ತನ್ನದೇ ಕೆಂಪು ವ್ಯಾನಿಟೀಬ್ಯಾಗು..ಆಶ್ಚರ್ಯ, ಆನಂದ ಒಟ್ಟಿಗೇ ಆಯಿತು...

ಅಷ್ಟರಲ್ಲಿ, ಆತ ತನ್ನ ಕೈಲಿದ್ದ ಬ್ಯಾಗನ್ನುಇವಳ ಮೇಲೆ ಎಸೆದು ಪರಾರಿಯಾದ. ಪೋಲಿಸನಿಂದ ತಪ್ಪಿಸಿಕೊಳ್ಳುವಾತುರ ಅವನಿಗೆ...

ಇವಳಿಗೋ ಎಲ್ಲಿಲ್ಲದ ಸಂತಸ. ಅಬ್ಬಾ! ಇದು ಅದೃಷ್ಟ ಅಂದರೆ. ದೇವರು ದೊಡ್ಡವನು..ಎಂದುಕೊಳ್ಳುವಷ್ಟರಲ್ಲಿ ಆ ಪೋಲಿಸ್ ಪೇದೆ ಇವಳ ಬಳಿ ಬಂದು..ಕೊಡಮ್ಮಾ ಇಲ್ಲಿ, ಅದು ಅವನು ಕದ್ದ ಮಾಲು..ಸ್ಟೇಶನ್ಗೆ ಒಯ್ಯಬೇಕು ಅಂದ..

ಅವಳು ಹೌಹಾರಿದಳು..ಇದು ನಂದೇ ಸರ್..ಸಂಜೆಯಿಂದ ಹುಡುಕ್ತಿದೀನಿ ಅಂದಳು. ಕದ್ದು ಓಡಿಹೋದವನನ್ನು ಹಿಡೀರಿ ಬೇಗ ಎಂದಳು..

ಭಲೇ ಹುಡುಗೀ ಕಣೇ ನೀನು..ಈಗಷ್ಟೇ ಅವನು ಎಸೆದು ಹೋದ ಬ್ಯಾಗು ನಂದೂ ಅಂತೀಯಲ್ಲಾ...ಎಷ್ಟು ಧೈರ್ಯ ನಿಂಗೆ..? 

ಅಯ್ಯೋ! ನಿಜವಾಗ್ಲೂ, ನನ್ನ ಮಾತು ನಂಬಿ ಪ್ಲೀಜ್, ಇದು ನಂದೇ...ನೋಡಿ ಬೇಕಾದರೆ, ಡಾಕ್ಯೂಮೆಂಟುಗಳಿವೆ ಇದರಲ್ಲಿ...ಎಲ್ಲಾ ನಂದೇ..ಎಂದು ಅಂಗಲಾಚಿದರೂ ಬಿಡದೇ ಕೈಲಿದ್ದ ಬ್ಯಾಗನ್ನು ಕಸಿದುಕೊಂಡ. ಅವಳಿಗೆ ಅಳು ಬಂತು. ಗೋಗರೆದರೂ ಪ್ರಯೋಜನವಾಗಲಿಲ್ಲ..ಅವನು ಪೋಲಿಸ್ ಸ್ಟೇಶನ್ಗೆ ಬಂದು ಕಂಪ್ಲೇಂಟು ಕೊಡು ಬೇಕಿದ್ರೆ ಎನ್ನುತ್ತಾ...ಹೊರಟೇ ಬಿಟ್ಟಾ..

ಆ ಬ್ಯಾಗು ನಂದೇ ಸರ್..ಪ್ಲೀಜ್ ನಂಬಿ..ಪ್ಲೀಜ್ ನಂಬೀ.....‌


ತಕ್ಷಣ ಎಚ್ಚರ ಆಯಿತು ಮಾರಾಯ್ರೆ...ಮೈಯೆಲ್ಲಾ ಬೆವೆತುಹೋಗಿತ್ತು. ಎದ್ದು ಮೊದಲು ಚೆಕ್ ಮಾಡಿದ್ದು, ನನ್ನ ಕೆಂಪು ಬ್ಯಾಗು ಇದೆಯಾ ಇಲ್ವಾ ಅಂತ..ಹಹಹ!

ಥೋ! ಎಂತಾ ಭಯಂಕರ ಕನಸು ಅಂತೀನೀ..ಆ ಪೋಲಿಸ್ ಪೇದೆ ಎದುರಿಗೆ ಸಿಕ್ಕರೆ ಏನು ಮಾಡ್ತೀನೋ ಕಾಣೆ..ಅಂತೂ ನಿದ್ದೆ ಹಾಳಾಯ್ತು....😢


Rate this content
Log in

Similar kannada story from Horror