Shridevi Patil

Abstract Inspirational Others

4  

Shridevi Patil

Abstract Inspirational Others

ಇಷ್ಟದೇವತೆ. ಭಾಗ 11

ಇಷ್ಟದೇವತೆ. ಭಾಗ 11

2 mins
471



ಅತೀ ಸುಂದರವಾಗಿರುವ ಹೆಣ್ಣೊಬ್ಬಳು ಸೊಸೆಯಾಗಿ ಬೇಕಾದ ಇವರಿಗೆ ಮೊಮ್ಮಗಳಾಗಿ ಹೆಣ್ಣೇಕೆ ಬೇಡ ಎಂಬ ವಿಷಯ ತಲೆಯಲ್ಲಿ ಓಡುತ್ತಿದ್ದ ಅವಳಿಗೆ , ತಾನು ಗಂಡನ ಮನೆಗೆ ಹೋಗುವ ದಿನಗಳು ಬಂದಿದ್ದು ಅರಿವಿಗೆ ಬಂದಾಗ ಸ್ವಲ್ಪ ಅಳುಕಾದಂತಾಯಿತು. ಐದು ತಿಂಗಳು ಅವ್ವನ ಮನೆಯಲ್ಲಿದ್ದು ಈಗ ಹೋಗಬೇಕೆಂದರೆ ತುಸು ಭಯ ಬೇಜಾರಾಗುವುದು ಸಹಜವೇ .


ಅಜ್ಜ ತನ್ನ ಮರಿಮೊಮ್ಮಗಳಿಗೆ ತೆಗದ ಕಟ್ಟಿಗೆಯಿಂದ ಸುಂದರವಾದ ತೊಟ್ಟಿಲು ಮಾಡಿಸಿ,ಅದಕ್ಕೆ ಘಿಲ್ ಘಿಲ್ ಎನ್ನುವ ಚಿಕ್ಕ ಗಂಟೆಗಳನ್ನು ಕಟ್ಟಿಸಿ ಸುಂದರವಾಗಿ ಅಲಂಕರಿಸಿದನು. ಇತ್ತ ಗಿರಿಜೆಯ ಚಿಗವ್ವ ಒಂದಿಷ್ಟು ಕುಂಚಿಗೆ ಕುಲಾವಿ ಹೊಲೆದು, ದುಪ್ಪಟ್ಟಿಗಳನ್ನು ಹೊಲೇದು ಮೊಮ್ಮಗಳಿಗೆ ರೇಡಿ ಮಾಡಿದಳು.

ಶ್ರಾವಣ ಮಾಸ ಇದ್ದುದ್ದರಿಂದ ದಿನ ಚೆನ್ನಾಗಿದೆಯೆಂದು ಶುಭ ಸೋಮವಾರದಂದು ಮೊಮ್ಮಗಳನ್ನು ಆಗಮನ ಮಾಡಿಕೊಂಡರು ಪಟೇಲರು. ಮಗಳಿಗೆ ಲಕ್ಷ್ಮಿ ಎಂದು ಹೆಸರಿಟ್ಟರು. ಲಕ್ಷ್ಮಿಯ ಕಾಲ್ಗುಣ ಚೆನ್ನಾಗಿತ್ತು ಅನ್ಸುತ್ತೆ. ಗಿರಿಜೆಯ ಮೈದುನರಿಬ್ಬರು ಕೈ ಹಾಕಿದ ಕೆಲಸಗಳೆರದು ಯಶಸ್ವಿಯಾಗಿದ್ದವು. ಹೀಗಾಗಿ ಹೆಣ್ಣು ಮೊಮ್ಮಗಳಾದರೂ ಪ್ರೀತಿ ಮಾಡುವಂತಾಗಿತ್ತು ಪುಟ್ಟ ಕಂದನ ಕಾಲ್ಗುಣ.


ಹೀಗೆ ದಿನ ಕಳೆಯಲು ಗಿರಿಜೆಯ ಅಜ್ಜನ ಆರೋಗ್ಯ ಹದಗೆಟ್ಟು ಅಜ್ಜ ತೀರಿಹೋದನು. ಅವಳು ಅಂದು ತವರಿನ ದೊಡ್ಡ ಆಧಾರ ಸ್ತಂಭವನ್ನೇ ಕಳೆದು ಕೊಂಡಿದ್ದಳು. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಜ್ಜ ಅಪ್ಪ ಅಮ್ಮನಿಗಿಂತ ಹೆಚ್ಚಾಗಿದ್ದನು.


ದಿನಕಳೆದಂತೆ ಅಜ್ಜನ ಸಾವಿನ ದುಃಖ ಮರೆಯುತ್ತ ಹೋಯಿತು. ಅಷ್ಟರೊಳಗಾಗಿ ಮತ್ತೆ ಎರಡನೇ ಗರ್ಭ ಧರಿಸಿ ಅವಳು ಮತ್ತೊಂದು ಪರೀಕ್ಷೆಗಾಗಿ ಸಿದ್ಧಳಾಗಿದ್ದಳು.



ಮೈದುನರಿಬ್ಬರ ಮದುವೆಯೂ ಆಗಿ, ಅವಳಿಗೆ ಇಬ್ಬರು ಒರಗಿತ್ತಿಯರು ಬಂದಿದ್ದರು. ಸಿಟಿಯವರಾದ ಇಬ್ಬರು ಅಕ್ಕನೊಂದಿಗೆ ಸ್ವಲ್ಪ ಮಾತ್ರ ಹೊಂದಿಕೊಂಡಿದ್ದರು. ಈ ಸಲ ಅತ್ತೆ ಸೀರಿಯಸ್ಸಾಗಿ ಗಂಡು ಮಗುವನ್ನೇ ಹೇರಬೇಕೆಂದು ಒತ್ತಾಯ ಮಾಡುವುದು ಹೆಚ್ಚಾಗಿತ್ತು. ಅದೇನು ಗಿರಿಜೆಯ ಕೈಯಲ್ಲಿದೆಯಾ ಹೇಳಿ?


ಅವಳಂತೂ ಭಯಭೀತಳಾಗಿದ್ದಳು. ಹೆಣ್ಣು ಮಗುವಾದರೆ ಹೇಗೆ ಎಂಬ ಭಯ ಆವರಿಸಿ ತುಂಬಾ ಅಶಕ್ತಳಾಗಿದ್ದು, ಕೆಲಸವನ್ನು ಮಾಡಲೇಬೇಕಿತ್ತು. ಮೂರು ಜನ ಸೊಸೆಯರಾದ ಮೇಲೆ ಅತ್ತೆ ಕೆಲಸದವರನ್ನು ಬಿಡಿಸಿಯಾಗಿತ್ತು.


ಒಟ್ಟಿನಲ್ಲಿ ಬಾಣಂತನ ಆಗುವವರೆಗೂ ದುಡಿದು ಅವಳು ಅದೇ ಮನೆಯಲ್ಲಿ ಮತ್ತೊಂದು ಹೆಣ್ಣು ಮಗುವಿಗೆ ಜನ್ಮವಿತ್ತಳು. ಅತ್ತೆ ತುಂಬಾ ಬೈಯುತ್ತಿದ್ದಳು. ಆರೈಕೆ ಕೂಡ ಮಾಡುವವರಿಲ್ಲದೆ ಅವಳು ಅವ್ವನನ್ನು ನೆನೆಸಿಕೊಳ್ಳುತ್ತ ದಿನಕಳೆಯುತ್ತಿದ್ದಳು. ಹೇಗೋ ಆ ಮಗುವು ಲಕ್ಷ್ಮಿಯೊಂದಿಗೆ ಬೆಳೆಯತೊಡಗಿತು.


ಆದರೆ ಗಿರಿಜೆಗೆ ಆ ಮನೆಯ ಸ್ಥಾನವು ಕೆಲಸಗಾರರ ಸ್ಥಾನದಂತೆ ಕಂಡು ಬರಲಾರಂಭಿಸಿತು. ಸೂಕ್ಷ್ಮವಾಗಿ ಗೊತ್ತಾಗುತ್ತಿದ್ದರೂ ಅವಳು ಯಾರನ್ನೂ ಕೇಳುವಂತಿರಲಿಲ್ಲ. ಯಾರಿಗೂ ಹೇಳುವಂತಿರಲಿಲ್ಲ. ತವರನ್ನು ಹೆಚ್ಚು ಕಡಿಮೆ ಮರೆತ ಹಾಗೆಯೇ ಅತ್ತೆ ವರಸೆ ಶುರು ಮಾಡಿದ್ದರು. ಎರಡನೇ ಮಗು ಹುಟ್ಟಿ ವರ್ಷ ಕಳೆದಮೇಲೆ ತವರಿಗೆ ಹೋಗಿ ಬಂದಿದ್ದಳು.


ಎರಡನೇ ಮಗು ಆದಮೇಲೆ ಮತ್ತೆ ಬೇಗ ತಾಯಿಯಾಗುವ ಲಕ್ಷಣಗಳು ಕಂಡು ಬಾರದಿದ್ದಾಗ ಅತ್ತೆ ಏನೇ ಮಾಡಿಕೊಂಡಿದಿಯಾ ಅಂತೆಲ್ಲಾ ಬೈಯ್ದರು. ಏನಿಲ್ಲ ಅಂದರೂ ನಂಬಲಾರದ ಅತ್ತೆ. ಅವಳು ಬರುಬರುತ್ತಾ ಮೌನಿಯಾದಳು.

ಎರಡನೇ ಮೈದುನನಿಗೆ ಗಂಡು ಮಗು ಹುಟ್ಟಿ,ಆ ಸೊಸೆ ಎಲ್ಲರ ತಲೆ ಮೇಲೆ ಕುಳಿತಾಗಿತ್ತು. ಆದರೆ ಗಿರಿಜೆಯ ಪಾಡು ನೆಲ ಕಚ್ಚಿತ್ತು. ಏನೇ ಆಗಲಿ ಅತ್ತೆ ಸೊಸೆಯರಲ್ಲಿ ಭೇದ ಭಾವ ಮಾಡುತ್ತ ಒಬ್ಬರನ್ನು ಎತ್ತಿ,ಇನ್ನೊಬ್ಬರನ್ನು ಹತ್ತಿಕ್ಕಿ ತಾನು ತುಂಬಾ ಖಡಕ್ಕ ಅಂತಾ ತೋರಿಸಿಕೊಳ್ಳುತ್ತ ಬೀಗುತ್ತಿದ್ದಳು. ಪಾಪ ಗಿರಿಜೆ ಗಂಡು ಮಗುವಿನ ನೀರಿಕ್ಷೆಯಲ್ಲಿ ದಿನಕಳೆಯುವಂತ ಪರಿಸ್ಥಿತಿ ಬಂದಾಗಿತ್ತು.



ಗಿರಿಜೆಗೆ ಗಂಡು ಮಗು ಆಯಿತೋ ಇಲ್ಲವೋ ಅಂತ ಮುಂದಿನ ಭಾಗದಲ್ಲಿ ನೋಡೋಣ...


Rate this content
Log in

Similar kannada story from Abstract