ಹರೆಯದ ಪ್ರೀತಿ
ಹರೆಯದ ಪ್ರೀತಿ
ರಾಜ್ ಮತ್ತು ಸ್ನೇಹ ಇಬ್ಬರು ಡಿಗ್ರಿಯಲ್ಲಿ ಸಹಪಾಠಿಗಳಾಗಿದ್ದು ಒಂದೇ ಕಾಲೇಜಿಗೆ ಸೇರಿದವರು. ಸ್ನೇಹ ಶ್ರೀಮಂತ ಮನೆಯ ಕುಡಿಯಾದರೆ, ರಾಜ್ ಮಧ್ಯಮ ವರ್ಗದ ಮನೆಯವ. ಇಬ್ಬರಿಗೂ ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲ. ಆದರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವುದೆಂದರೆ ಎಲ್ಲಿಲ್ಲದ ಆಸಕ್ತಿ. ಹೀಗೆ ಅಲ್ಲಲ್ಲಿ ಭೇಟಿಯಾಗುತ್ತಿದ್ದರಿಂದ ಕ್ರಮೇಣ ಅವರ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗತೊಡಗಿತು....!
ಈಗಂತೂ ಸ್ನೇಹಾಳಿಗೆ ರಾಜ್ ನನ್ನು ಬಿಟ್ಟಿರಲು ಒಂದು ನಿಮಿಷವೂ ಆಗುತ್ತಿರಲಿಲ್ಲ. ಸಂಜೆಯ ಹೊತ್ತು ಅವನು ಕಾಲೇಜಿನ ಸಮೀಪವೇ ಇರುವ ಜಿಮ್ ಗೆ ಸೇರಿಕೊಂಡ ಎಂದು ತಾನೂ ಸೇರಿಕೊಂಡಳು. ಇಲ್ಲಿಯೂ ಅವರಿಬ್ಬರ ಪ್ರೀತಿ, ಸಲುಗೆ ಮುಂದುವರೆದಿತ್ತು. ದೇಹ ದಂಡಿಸುವ ಬದಲು ಇವರಿಬ್ಬರ ಅನವಶ್ಯಕ ಮಾತು, ಪ್ರೇಮ ಸಲ್ಲಾಪಗಳೇ ಹೆಚ್ಚಾಗಿರುತ್ತಿತ್ತು. ಇದನ್ನು ಗಮನಿಸಿದ ಜಿಮ್ ಟ್ರೈನರ್ ಗಳು "ಗಮನವಿಟ್ಟು ವ್ಯಾಯಾಮ ಮಾಡಿ. ಫಿಟ್ ಆಗಬೇಕಲ್ಲವೇ...?" ಎಂದು ಪದೇ ಪದೇ ಹೇಳುತ್ತಿದ್ದರೂ, ಇವರು ತಮ್ಮದೇ ಪ್ರೇಮ ಲೋಕದಲ್ಲಿ ಪ್ರಣಯ ಪಕ್ಷಿಗಳಾಗಿ ವಿಹರಿಸುತ್ತಿದ್ದರು!!
ಪ್ರೀತಿಯಲ್ಲಿ ಬಿದ್ದಿದ್ದರೂ ರಾಜ್ ಓದನ್ನು ಅಷ್ಟೇನೂ ಕಡೆಗಣಿಸಿರಲಿಲ್ಲ. ಸಾಧ್ಯವಾದಷ್ಟು ಓದುತ್ತಾ ಫಸ್ಟ್ ಕ್ಲಾಸ್ ನಲ್ಲಿ ಬರುವಂತೆ, ಇಲ್ಲ ಪಾಸಾದರೂ ಆಗುವಂತೆ ನೋಡಿಕೊಳ್ಳುತ್ತಿದ್ದ. ಆದರೆ ಸ್ನೇಹಾಳ ಸ್ಥಿತಿಯೇ ಬೇರೆ..! ಅವಳಿಗೆ ರಾಜನ ಪ್ರೀತಿಯೇ ಪ್ರಪಂಚವಾಗಿಬಿಟ್ಟಿತ್ತು. ಅದರಲ್ಲಿ ತಾನು ಹಾಯಾಗಿ ವಿಹರಿಸುತ್ತಿದ್ದೇನೆ ಎಂಬ ಭಾವದಲ್ಲಿ ಸದಾ ಮೊಬೈಲ್ ನಲ್ಲಿ ಬ್ಯುಸಿ. ಬರೀ ಪ್ರೇಮ ಸಂದೇಶಗಳ ವಿನಿಮಯ, ಫೋಟೋ, ವಿಡಿಯೋ ಕಳಿಸುವುದು, ಸೋಶಿಯಲ್ ಮೀಡಿಯಾದಲ್ಲಿ ಕಾಲ ಕಳೆಯುವುದು... ಹೀಗೆ!!
ಪರೀಕ್ಷೆಗಳ ರಿಸಲ್ಟ್ ಬಂದಾಗ ರಾಜ್ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದರೆ, ಸ್ನೇಹ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಳು. ಆದರೆ ಅವಳಿಗೇನೂ ಇದರ ಬಗ್ಗೆ ವ್ಯಥೆ ಇಲ್ಲ. ಹೇಗಿದ್ದರೂ ಕೈಯಲ್ಲಿ ಅಪ್ಪ ಕೊಡುವ ಪಾಕೆಟ್ ಮನಿ ದುಡ್ಡಿದೆ. ಮನಸ್ಸಿನಲ್ಲಿ ರಾಜ್ ಬಗ್ಗೆ ಅಗಾಧವಾದ ಪ್ರೀತಿಯಿದೆ....! ಇನ್ನೇನಿದ್ದರೂ ನಮ್ಮಿಬ್ಬರ ಮದುವೆಯೊಂದೇ ಬಾಕಿ ಎಂದು ಕನಸು ಕಾಣುತ್ತಿದ್ದಳು...!!
ರೂಮಿಗೆ ಬಂದ ಅಪ್ಪಅಮ್ಮನನ್ನು ನೋಡಿ ತನ್ನ ಕನಸಿನ ಲೋಕದಿಂದ ಎಚ್ಚೆತ್ತಳು ಸ್ನೇಹ. "ಹಾಂ ಅಪ್ಪ, ಹೇಳಿ ಅಮ್ಮ ಏನು ಬಂದಿದ್ದು?" ಎಂದಳು. "ಸ್ನೇಹ ಏನಾಯ್ತು ನಿನ್ನ ಎಕ್ಸಾಮ್ ರಿಸಲ್ಟ್?" ಎಂದು ಕೇಳಲು, "ಎರಡು ಸಬ್ಜೆಕ್ಟ್ಗಳಲ್ಲಿ ಫೇಲ್ ಆಗಿದ್ದೇನೆ. ಆದರೆ ಖಂಡಿತವಾಗಿ ಅದನ್ನು ಮುಂದಿನ ಸಾರಿ ಕ್ಲಿಯರ್ ಮಾಡುತ್ತೇನೆ" ಎಂದಳು. ಎಲ್ಲವನ್ನು ಕೇಳಿಸಿಕೊಂಡ ಅವಳ ತಂದೆ "ಸ್ನೇಹ ಇಂದಿನಿಂದ ನೀನು ಜಿಮ್ ಗೆ ಹೋಗುವುದು ಬೇಡ. ಕಾರಣ ನಿನಗೂ ಗೊತ್ತಿದೆ ಅನಿಸುತ್ತೆ...!" ಎಂದರು.
ತಡಬಡಾಯಿಸುತ್ತಾ ಸ್ನೇಹ "ಏಕೆ ಅಮ್ಮ, ಅಪ್ಪನಿಗೆ ಏನಾಗಿದೆ? ವ್ಯಾಯಾಮ ಮಾಡೋಣ ಎಂದು ಹೋದರೆ, ಇವರೇಕೆ ಅದಕ್ಕೂ ಕಡಿವಾಣ ಹಾಕುತ್ತಿದ್ದಾರೆ?" ಎಂದು ಕೇಳಿದಳು. "ಹರೆಯದ ಪ್ರೀತಿಯ ಬಗ್ಗೆ ಎಚ್ಚರವಿರಲಿ ಸ್ನೇಹ...!! ನಮಗೆ ನಿನ್ನ ರಾಜ್ ನ ಪ್ರೀತಿಯ ವಿಷಯ ಇತ್ತೀಚಿಗಷ್ಟೇ ಗೊತ್ತಾಯಿತು. ಅಪ್ಪನ ಪರಿಚಯದ ಗೆಳೆಯರೊಬ್ಬರು ಈ ಬಗ್ಗೆ ನಮ್ಮಲ್ಲಿ ಹೇಳಿದರು. ಅವರು ನೀವಿಬ್ಬರೂ ಜಿಮ್ ನಲ್ಲಿ ಹರಟುತ್ತಾ ಇದ್ದುದ್ದನ್ನು ನೋಡಿದರಂತೆ. ಇಷ್ಟೇ ಅಲ್ಲದೆ ನಿನ್ನ ನೋಟ್ ಬುಕ್ ಕೊನೆಯ ಪೇಜ್ ಗಳಲ್ಲಿ, ನೀನು ರಾಜ್ ಗೆ ಬರೆದಿದ್ದ ಪ್ರೇಮ ಸಂದೇಶಗಳನ್ನ ಓದಿದೆ. ಹಾಗಾಗಿ ಹೇಳುತ್ತಿದ್ದೇನೆ ಕೇಳು ಮಗಳೇ....! ಚೆನ್ನಾಗಿ ಓದಿ ಕಲಿತು, ಒಂದೊಳ್ಳೆಯ ಸ್ಥಾನಕ್ಕೆ ಏರು. ಆಗ ಖಂಡಿತವಾಗಿ ನಾವೇ ಮುಂದೆ ನಿಂತು ನಿಮ್ಮಿಬ್ಬರ ಮದುವೆ ಮಾಡಿಸುತ್ತೇವೆ!!" ಎಂದರು.
ಎಲ್ಲವನ್ನು ಕೇಳಿ ಶಾಕ್ ಆದ ಸ್ನೇಹ ಅವರಿಬ್ಬರ ನೋವಿನ ಮಾತಿನ ಮಧ್ಯೆಯೂ, ತನ್ನ ಬಗ್ಗೆ ಇದ್ದ ಅಭಿಮಾನ ಮತ್ತು ಕಾಳಜಿಯನ್ನು ಕಂಡು ಕಣ್ತುಂಬಿ ಬಂತು. "ಹೌದು ಎಲ್ಲರ ತಂದೆ ತಾಯಿಯು ಹೀಗೆಯೇ ಇರುವುದಿಲ್ಲ. ಪ್ರೀತಿ ಪ್ರೇಮ ವಿಷಯ ಗೊತ್ತಾಯಿತು ಎಂದ ತಕ್ಷಣ ಸರಿಯಾಗಿ ಬೈದು, ಯಾರೊಂದಿಗೋ ಮದುವೆ ಮಾಡಿ ಸಾಗಿ ಹಾಕಿಬಿಡುತ್ತಾರೆ...! ಆದರೆ ನನ್ನ ತಂದೆ ತಾಯಿ ಹರೆಯದ ಪ್ರೀತಿಯು ಬೇಡವೆಂದರೇ ವಿನಃ, ರಾಜ್ ನನ್ನು ಮರೆತು ಬಿಡು ಎನ್ನಲಿಲ್ಲ...! ಈ ವಿಷಯವನ್ನು ನಾಳೆಯೇ ರಾಜ್ ಗೆ ಹೇಳಿ, ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ" ಎಂದು ಮಲಗಿದಳು.
ಮಾರನೇ ದಿನ ಎಂದಿನಂತೆ ತನ್ನ ಪ್ರೇಯಸಿಯನ್ನು ಮಾತನಾಡಿಸಲು ರಾಜ್ ಉತ್ಸುಕನಾಗಿದ್ದರೆ, ಸ್ನೇಹಾಳಲ್ಲಿ ಏನೋ ಒಂದು ಹೊಸ ಬದಲಾವಣೆ...! ಯಾವಾಗಲೂ ರಾಜ್ ಎಂದು ಅಂಟಿಕೊಳ್ಳಲು ಬರುತ್ತಿದ್ದ ಸ್ನೇಹ, ಇಂದು ದೂರದಿಂದಲೇ "ಹಾಯ್" ಎಂದಳು. ಹತ್ತಿರ ಬಂದು "ರಾಜ್ ಸಂಜೆ ಸಿಗೋಣ. ಈಗ ಕ್ಲಾಸ್ ಅಟೆಂಡ್ ಮಾಡೋಣ" ಎಂದಳು. "ಇದೇನಾಯ್ತು ಇವಳಿಗೆ? ಯಾವಾಗಲೂ ಕ್ಲಾಸ್ ಬಂಕ್ ಮಾಡಿ, ಎಲ್ಲಾದರೂ ಸುತ್ತುವುದಕ್ಕೆ ಹೋಗೋಣ ಎನ್ನುತ್ತಿದ್ದವಳು, ಈಗೇನಾಯಿತು..!" ಎಂದುಕೊಂಡನು.
ಸಂಜೆ ಸಿಕ್ಕಾಗ "ಯಾಕೆ ಸ್ನೇಹ, ಎರಡು ವಿಷಯಗಳಲ್ಲಿ ಫೇಲ್ ಆದೆ ಎಂಬ ಬೇಸರವೇ...? ಬಿಡು ಅದಕ್ಕೇಕೆ ಇಷ್ಟು ಚಿಂತೆ? ನೀನೇನು ಹುಡುಗರಂತೆ ದುಡಿಯಬೇಕೆ..! ಹಾಯಾಗಿ ನನ್ನನ್ನು ಮದುವೆಯಾಗಿ, ಮುಂದೆ ಮಕ್ಕಳನ್ನು ನೋಡಿಕೋ. ಅಷ್ಟು ಸಾಕು...!" ಎಂದನು. "ಇಲ್ಲಾ ರಾಜ್. ಮೊದಲು ನಾವಿಬ್ಬರೂ ಜೀವನದಲ್ಲಿ ಸೆಟಲ್ ಆಗೋಣ. ಆಮೇಲೆನಿದ್ದರೂ ಮದುವೆ, ಮಕ್ಕಳು ಎಲ್ಲಾ. ಇನ್ನೂ ನಾವಿಬ್ಬರು ಮೊದಲನೇ ವರ್ಷದ ಡಿಗ್ರಿಯಲ್ಲಿದ್ದೇವೆ. ಈಗಲೇ ಬೇಡದಿರುವ ಚಿಂತೆಗಳು ಏಕೆ..? ನನ್ನ ಅಪ್ಪ ಅಮ್ಮನಿಗೂ ನಮ್ಮಿಬ್ಬರ ಪ್ರೀತಿಯ ವಿಷಯ ಗೊತ್ತಾಗಿದೆ. ಆದರೂ ಸಹ ಅವರು ನಮ್ಮ ಪರವಾಗಿಯೇ ಇದ್ದಾರೆ. ಫಸ್ಟ್ ಜೀವನದಲ್ಲಿ ಸೆಟಲ್ ಆಗಿ, ನಂತರ ನಾವೇ ನಿಂತು ಮದುವೆ ಮಾಡಿಸುತ್ತೇವೆ..!" ಎಂದರು.
ರಾಜ್ ಗೆ ಸ್ನೇಹಾಳ ಪೋಷಕರಿಗೆ ವಿಷಯ ಗೊತ್ತಾಗಿದೆ ಎಂದು ತಿಳಿದು ಗಾಬರಿಯಾದರೂ, ಅವಳು ಹೇಳಿದ ವಿಷಯವನ್ನು ಕೇಳಿ ಸಮಾಧಾನಗೊಂಡನು. "ಸರಿ ಸ್ನೇಹ, ನೀನು ಹೇಳಿದಂತೆ ಆಗಲಿ!! ನೀನು ನನ್ನವಳಾಗಿಯೇ ಇರುತ್ತೀಯ ಎಂದರೆ, ನಾನು ಏನು ಬೇಕಾದರೂ ಮಾಡುತ್ತೇನೆ" ಎಂದು ವಿಶ್ವಾಸದಿಂದ ಹೇಳಿದನು.
*************************************
"ರೋಷಿನಿ ಸ್ನಾನವಾಯಿತಾ? ಇನ್ನು ಎಷ್ಟು ಹೊತ್ತು..? ತಿಂಡಿ ತಿನ್ನುವಿಯಂತೆ ಬಾ. ಕಾಲೇಜಿನಲ್ಲಿ ಟೆಸ್ಟ್ ನಡೆಯುತ್ತಿದೆ ಎಂದೆ. ಆದರೆ ಮೂರು ಹೊತ್ತೂ ಮೊಬೈಲಿನಲ್ಲೇ ಮುಳುಗಿರುತ್ತೀಯಾ...!" ಎಂದು ಬಡಬಡಿಸುತ್ತಾ ಬಾಗಿಲನ್ನು ತಟ್ಟಿದರು ರೋಷಿನಿ ತಾಯಿ. "ಹೂಂ ಕಣಮ್ಮ ನಾನು ರೆಡಿ", ಎಂದು ತನ್ನ ಸ್ನೇಹಿತನಿಗೊಂದು ಗುಡ್ ಮಾರ್ನಿಂಗ್ ಮೆಸೇಜ್ ಕಳಿಸಿ, ರೂಮಿನ ಬಾಗಿಲನ್ನು ತೆರೆದಳು ರೋಷಿನಿ...!
ಕೂಲಂಕುಷವಾಗಿ ದಿಟ್ಟಿಸಿದ ರೋಷಿನಿ ತಾಯಿ ಸ್ನೇಹ, "ರೋಷಿನಿ ಮೊದಲು ಓದು. ನಂತರ ಪ್ರೀತಿ ಗೀತಿ ಇತ್ಯಾದಿ ಎಲ್ಲಾ...!! ಹರೆಯದ ಪ್ರೀತಿಯ ಬಗ್ಗೆ ಎಚ್ಚರವಿರಲಿ. ನಾನು ಮತ್ತು ನಿಮ್ಮಪ್ಪ ಒಂದು ಕಾಲದಲ್ಲಿ ಹೀಗೆಯೇ ಪ್ರೀತಿಯಲ್ಲಿ ಮೈಮರೆತಿದ್ದೆವು...! ಆದರೆ ಅಂದು ನಾವು ಸಂಯಮದಿಂದ ನಮ್ಮ ಪೋಷಕರು ಹೇಳಿದ ಮಾತುಗಳನ್ನು ಕೇಳಿ, ಮುಂದಿನ ಜೀವನದ ಬಗ್ಗೆ ಯೋಚಿಸಿದ್ದರಿಂದ ಇಂದು ನಿನ್ನ ತಂದೆ ಬ್ಯಾಂಕ್ ಅಧಿಕಾರಿಯಾದರೆ, ನಾನು ಫ್ಯಾಶನ್ ಡಿಸೈನರ್ ಆಗಿದ್ದೇನೆ...! ಹರೆಯದ ಪ್ರೀತಿಗೆ ನಾವು ಬಲಿಯಾಗಿದ್ದರೆ, ಇಂದು ಇಂತಹ ಉತ್ತಮವಾದ ಜೀವನವನ್ನು ನಡೆಸಲು ಖಂಡಿತವಾಗಿ ಸಾಧ್ಯವಾಗುತ್ತಿರಲಿಲ್ಲ. ಅಷ್ಟೇಕೆ ನೀನೂ ಇರುತ್ತಿರಲಿಲ್ಲ...!!" ಎಂದು ಪ್ರೀತಿಯಿಂದಲೇ ಮಗಳನ್ನು ಎಚ್ಚರಿಸಿದರು ಸ್ನೇಹ.
ಪಕ್ಕದ ರೂಮಿನಲ್ಲಿ ಕುಳಿತು ಇವರಿಬ್ಬರ ಮಾತುಗಳನ್ನ ಆಲಿಸುತ್ತಿದ್ದ ರೋಷಿನಿ ತಂದೆ ರಾಜ್ , "ಅಬ್ಬಾ ಎಲ್ಲಾ ಕಾಲಚಕ್ರದ ಮಹಿಮೆ...! ಅಂದು ಸ್ನೇಹಾಳ ತಾಯಿ ಮಗಳಿಗೆ ಬುದ್ಧಿವಾದ ಹೇಳಿದರೆ, ಇಂದು ತಾಯಿಯ ಸ್ಥಾನದಲ್ಲಿ ನಿಂತಿರುವ ಸ್ನೇಹ ತನ್ನ ಮಗಳಿಗೆ ಬುದ್ಧಿವಾದ ಹೇಳುತ್ತಿದ್ದಾಳೆ...!! ಇದಲ್ಲವೇ ನಿಜವಾದ ಪ್ರೀತಿ...?!" ಎಂದುಕೊಂಡರು.

