ಗಂಧರ್ವ ಕನ್ಯೆ
ಗಂಧರ್ವ ಕನ್ಯೆ
ಮದುವೆಯ ವಯಸ್ಸಿಗೆ ಬಂದ ಮಗನಿಗೆ ತಂದೆ ತಾಯಿಯರು ಹೆಣ್ಣು ಗಳನ್ನು ನೋಡುವುದಕ್ಕೆ ಶುರುಮಾಡಿದರು. ಯಾಕೋ ಏನೋ ಹತ್ತಾರು ಹುಡುಗಿಯರನ್ನು ತೋರಿಸಿದರೂ, ಮಗ ಯಾರನ್ನೂ ಒಪ್ಪದೆ,ಒಬ್ಬೊಬ್ಬರಲ್ಲಿ ಒಂದೊಂದು ಕೊಂಕನ್ನು ತೆಗೆದು ತಿರಸ್ಕರಿಸುತ್ತಿದ್ದಾಗ, "ಇವನಿಗೆ ಯಾವ ಗಂಧರ್ವ ಕನ್ಯೆ ಸಿಗಬೇಕೋ ನಮಗಂತೂ ಗೊತ್ತಿಲ್ಲ,ಇವನು ಮೆಚ್ಚಿ ಆರಿಸಿದ ಹುಡುಗಿಯನ್ನು ನಾವು ಒಪ್ಪಿ ಬಿಡೋಣ "ಎಂದು ತಂದೆ ತಾಯಿಯರು ಹೆಣ್ಣಿನ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ಮಗನ ಮೇಲೆ ಹಾಕಿ ,ತೆಪ್ಪಗಾಗಿಬಿಟ್ಟರು.
ಮಗ, ತನ್ನ ಇಷ್ಟದ ಗಂಧರ್ವ ಕನ್ಯೆಗಾಗಿ ಹುಡುಕಾಟ ನಡೆಸಿದ. ಮ್ಯಾರೇಜ್ ಬ್ಯೋರೋಗೆ ಅಲೆದಾಡಿದ.
ಎಷ್ಟೋ ಹುಡುಗಿಯರ ಫೋಟೋಗಳನ್ನು ನೋಡಿ ನೋಡಿ ಬೇಸತ್ತು ಹೋದ. ಒಮ್ಮೆ ಅವನಿಗೆ ಸ್ಥಳ ಬದಲಾವಣೆ ಬೇಕೆನಿಸಿ, ಒಂದು ಸುಂದರ ಗಿರಿಧಾಮಕ್ಕೆ ಏಕಾಂಗಿಯಾಗಿ ಪ್ರವಾಸ ಹೊರಟ.
ಸುತ್ತಲೂ ಗಿರಿಶಿಖರಗಳ ಸಾಲುಗಳು,ಅವುಗಳ ಮೇಲಿನಿಂದ ಜುಳುಜುಳನೆ ಹರಿದು ಬರುವ ಜಲಧಾರೆಗಳು, ಹಸಿರು ವನಸಿರಿಗಳು,
ಗಿರಿ ಶಿಖರಗಳನ್ನು ಮುತ್ತುಕ್ಕಿತ್ತಾ ಸಾಗುವ ನೀಲಮೇಘಗಳು,ನಡುವೆ ಇರುವ ಪ್ರವಾಸಿಗರ ವಿಶ್ರಾಂತಿ ಧಾಮಗಳು, ಅಬ್ಬಾ, ನಿಜಕ್ಕೂ ಇದೊಂದು ಗಂಧರ್ವ ಲೋಕವಿರಬಹುದೇ? ಎಂಬ ಭ್ರಮೆ ಹುಟ್ಟಿಸುವಂತೆ ಇತ್ತು.
ಅವನು ಬಹಳ ಖುಷಿ ಯಿಂದ ಪ್ರತಿದಿನವೂ ಆ ಗಿರಿಧಾಮದಲ್ಲಿ ವಾಯುವಿಹಾರಕ್ಕೆ ಹೋಗುತ್ತಿದ್ದ. ಒಂದು ದಿನ ಅವನಿಗೆ ಇಂಪಾದ ಸುಶ್ರಾವ್ಯ ಸಂಗೀತ ಕೇಳಿಸಿತು. ಯಾರಿರಬಹುದು?ಎಂಬ ಕುತೂಹಲ ಅವನನ್ನು ಕಾಡಿತು. ಮತ್ತೆ ಮರುದಿನವೂ ಅದೇ ಸುಶ್ರಾವ್ಯ ಸಂಗೀತ ಕೇಳಿಸಿತು.
ಅದೊಂದು ಹೆಣ್ಣಿನ ಧ್ವನಿ ಎಂಬುದಂತೂ ಅವನಿಗೆ ಖಚಿತವಾಯಿತು. ಹೀಗೆ ಅನೇಕ ದಿನಗಳು ಅವನಿಗೆ ಮಧುರ ಸಂಗೀತ ಕೇಳಿ ಬರುತ್ತಿದ್ದಾಗ, ಅವನು ಈ ಇನಿದನಿಯ ಒಡತಿಯನ್ನು ಅರಸುತ್ತಾ ನಡೆದ.
ಕಡೆಗೂ ಒಂದು ದಿನ ಒಂದು ಪರ್ಣಕುಟೀರದಂತಿದ್ದ ಮನೆಯೊಳಗಿಂದ ಆ ಮಧುರ ಧ್ವನಿ ಬರುತ್ತಿದ್ದುದನ್ನು ಪತ್ತೆ
ಹಚ್ಚಿ ಅದರ ಒಳಗೆ ಅಡಿಯಿಟ್ಟಾಗ, ಆ ಗಾನ ಗಂಧರ್ವ ಕನ್ಯೆ ಕಾಣಿಸಿಯೇ ಬಿಟ್ಟಳು. ಆ ಕುಟೀರದಲ್ಲಿ ತಾಯಿ ಮಗಳು ಇಬ್ಬರೂ ಇದ್ದಂತೆ ಇತ್ತು. ಕುಟೀರದ ಮಧ್ಯಭಾಗದಲ್ಲಿ ಹಾರ್ಮೋನಿಯಂ ಮೇಲೆ ಬೆರಳಾಡಿಸುತ್ತಾ ಯಾವುದೋ ಆಲಾಪನೆಯಲ್ಲಿ ತಲ್ಲೀನಳಾಗಿದ್ದ ಆ ಯುವತಿ ನಿಜಕ್ಕೂ ಗಂಧರ್ವ ಕನ್ಯೆಯಂತೆಯೇ ಇರುವುದನ್ನು ಕಂಡು ಅವನು ಬೆರಗಾದ.
ಮನೆಯ ಅಡುಗೆ ಕೋಣೆಯಿಂದ ಹೊರಗೆ ಬಂದ ಮಧ್ಯವಯಸ್ಕ ಹೆಂಗಸು " ಯಾರು?" ಎಂದು ಅವನನ್ನು ಪ್ರಶ್ನಿಸಿದಾಗ, ಅವನು ತಾನೊಬ್ಬ ಪ್ರವಾಸಿಗ, ನಗರದಿಂದ ಬಂದಿದ್ದೇನೆ, ಇಲ್ಲಿಂದ ಬರುತ್ತಿದ್ದ ಇನಿದನಿಯನ್ನು ಹುಡುಕುತ್ತಾ ಬಂದೆ ಎಂದು ತನ್ನ ಪರಿಚಯ ಮಾಡಿಕೊಂಡ.
ಇದ್ದಕ್ಕಿದ್ದಂತೆ ಆ ಗಂಧರ್ವ ಕನ್ಯೆ ತಾನು ಹಾಡುವುದನ್ನು ನಿಲ್ಲಿಸಿ, ಮೇಲಕ್ಕೆ ಎದ್ದಾಗ, ಅವಳ ರೂಪಕ್ಕೆ ಅವನು ದಂಗಾಗಿ ಹೋದ. ದಂತದ ಮೈ ಬಣ್ಣದ ನಿರಾಭರಣ ಸುಂದರಿ, ಇಳಿಬಿಟ್ಟ ದೀರ್ಘ ಕೇಶ, ಗೀರು ಹುಬ್ಬು, ಅಗಲವಾದ ಕಣ್ಣುಗಳು, ..... ಅಬ್ಬಾ ಇವಳು ಗಂಧರ್ವ ಕನ್ಯೆಯೇ? ಒಂದು ಕ್ಷಣ ಬೆರಗಾಗಿ ನಿಂತ.
ಆದರೆ ಮರುಕ್ಷಣವೇ ಅವನಿಗೆ ಮತ್ತೊಂದು ಆಶ್ಚರ್ಯ ಇಂತಹ ಮೋಹನಾಂಗಿ ದೃಷ್ಟಿ ಹೀನಳೆಂಬುದು ಅವನಿಗೆ ತಿಳಿದಾಗ, ತುಂಬಾ ನಿರಾಶನಾದ. ಆದರೂ ಅವಳ ಗಾಯನವನ್ನು ಮನಸಾರೆ ಹೊಗಳಿ ,ಆ ದೇವರನ್ನು ಶಪಿಸುತ್ತಾ,ಆ ಕುಟೀರದಿಂದ ಹೊರಬಂದ.
