ಧಾಳಿ
ಧಾಳಿ
ಧಾಳಿ
ಅಂದು ಹೊಸ ಪ್ರಾಜೆಕ್ಟ್ ನಲ್ಲಿ ಬಿಜ಼ಿಯಾಗಿದ್ದ ಬಾನುವಿಗೆ ಹೊತ್ತು ಹೋಗಿದ್ದುದೇ ತಿಳಿಯಲಿಲ್ಲ. ಎಲ್ಲವೂ ಒಂದು ಘಟ್ಟಕ್ಕೆ ಬರುವ ವೇಳೆಗೆ ರಾತ್ರಿ ಹತ್ತು ಗಂಟೆಯಾಗಿ ಹೋಗಿತ್ತು. ಅಕ್ಕ ಪಕ್ಕ ಕಣ್ಣಾಡಿಸಿದಳು.ಎಲ್ಲಾ ಸಿಸ್ಟೆಮ್ ಗಳು ಆಫ್ ಆಗಿ ಹೋಗಿ ಕುರ್ಚಿಗಳು ಖಾಲಿಯಾಗಿದ್ದವು. ಹೊರಗಡೆ ಬಾಗಿಲಿನಲ್ಲಿ ಸೆಕ್ಯೂರಿಟಿ ಒಬ್ಬ ಆಫೀಸ್ ಬಾಗಿಲು ಹಾಕಲು ಕಾಯುತ್ತಿದ್ದ. ಗಡಬಡಿಸಿ ಎದ್ದ ಬಾನು, ತನ್ನ ಸಿಸ್ಟೆಮ್ ಆಫ್ ಮಾಡಿ, ವ್ಯಾನಿಟಿ ಬ್ಯಾಗ್ ತೆಗೆದುಕೊಂಡು ಮನೆಗೆ ಹೊರಟಳು.
ಗಾಡಿ ಸ್ಟಾಂಡ್ ಕಡೆ ಬಂದು ತನ್ನ ಹೋಂಡಾ ಆಕ್ಟಿವ್ ತೆಗೆದು, ಸ್ಟಾರ್ಟ್ ಮಾಡಿದಳು. ಯಾಕೋ ಎಷ್ಟು ಕಿಕ್ ಹೊಡೆದರೂ ಗಾಡಿ ಸ್ಟಾರ್ಟ್ ಆಗದೇ ಹೋದಾಗ,
ರಸ್ತೆಗಿಳಿದು ಒಂದು ಕ್ಯಾಬ್ ಹಿಡಿಯುವ ವೇಳೆಗೆ ಹನ್ನೊಂದರ ಹತ್ತಿರ ಆಗಿ ಹೋಗಿತ್ತು. ಒಳಗೊಳಗೆ ಅತ್ಯಂತ ಭಯವಿದ್ದರೂ ಹೊರಗೆ ಧೈರ್ಯವಾಗಿದ್ದವಳಂತೆ ತೋರಿಸಿಕೊಳ್ಳುತ್ತಾ, ಕ್ಯಾಬ್ ಹತ್ತಿದಳು. ತನ್ನ ಮನೆಯ ವಿಳಾಸವನ್ನು ಕ್ಯಾಬ್ ಬುಕ್ ಮಾಡುವಾಗಲೇ ಮೊಬೈಲ್ ನಲ್ಲಿ ಹಾಕಿದ್ದರಿಂದ ನಿಶ್ಚಿಂತೆಯಂತೆ ಕಣ್ಣು ಮುಚ್ಚಿ ಕುಳಿತಳು. ಅವಳ ಆಫೀಸ್ ನಿಂದ ಮನೆಗೆ ಸುಮಾರು ಒಂದೂವರೆ ಘಂಟೆಯ ದೂರವಿದ್ದುದ್ದರಿಂದ ಹಾಗೇ ಕಣ್ಣುಮುಚ್ಚಿ ಸೀಟಿಗೊರಗಿದಳು. ಅವಳ ಮನಃಪಟಲದಲ್ಲಿ ಅಂದು ಆಫೀಸ್ ನಲ್ಲಿ ನಡೆದ ಘಟನೆಗಳು ಹಾದು ಹೋದವು.
"ಸ್ವಲ್ಪ ಕಿರಿ ಕಿರಿ ಮಾಡುವ ಮ್ಯಾನೇಜರ್ ಕಿರಣ್,ಐದು ಘಂಟೆಯ ವೇಳೆಗೆ ಬಾನುವನ್ನು ಕರೆದು ಒಂದು ಹೊಸ ಪ್ರಾಜೆಕ್ಟ್ ಬಗ್ಗೆ ಚರ್ಚೆ ಮಾಡುತ್ತ ಕುಳಿತು, ಅದರ ಬಗ್ಗೆ ಕೆಲವು ಡಾಟಾಗಳನ್ನು ಇಂದೇ ಸಿದ್ಧಗೊಳಿಸುವಂತೆ ಹೇಳಿದಾಗ, ಬಾನುವಿಗೆ ತುಂಬಾ ಕೋಪ ಬಂದರೂ ಅದನ್ನು ಅವನೆದುರು ತೋರಿಸಿಕೊಳ್ಳದೆ, ಸುಮ್ಮನೆ ಕತ್ತಾಡಿಸಿ ಹೊರ ಬಂದಿದ್ದಳು. ಅವಳಿಗೆ ಅವಳ ಪ್ರಾಜೆಕ್ಟ್ ಮ್ಯಾನೇಜರ್ ಕಿರಣ್ ಬಿಸಿ ತುಪ್ಪದಂತಾಗಿದ್ದ. ಅವನು ಹೇಳಿದ ಕೆಲಸಗಳನ್ನು ಮಾಡದಿದ್ದರೆ, ಬಾನುವಿನ ಕೆಲಸಕ್ಕೇ ಕುತ್ತು ಬರುತ್ತಿತ್ತು. ಇಂದಿನ ಪರಿಸ್ಥಿತಿಯಲ್ಲಿ
ಕೆಲಸವನ್ನು ಕಳೆದುಕೊಳ್ಳಲೂ ಆಗುವುದಿಲ್ಲ. ಹೀಗಾಗಿ ಅವನು ಹೇಳಿದಷ್ಟು ಕೆಲಸವನ್ನು ಮಾಡಲೇ ಬೇಕಾದ ಪರಿಸ್ಥಿತಿ ಬಾನುವಿನದು. ಎಲ್ಲವನ್ನೂ ಮುಗಿಸಿ ಹೊರಡಲು ಇಷ್ಟು ಹೊತ್ತಾಗಿಯೇ ಹೋಯಿತು. ಜೊತೆಗೆ ಗಾಡಿ ಬೇರೆ ಸ್ಟಾರ್ಟ್ ಆಗಲಿಲ್ಲ. ಮನೆಗೆ ಫೋನ್ ಮಾಡಿ ಹೇಳಿದಾಗ ಅಮ್ಮನಿಂದ ಬೈಗುಳದ ಸುರಿಮಳೆ ಬೇರೆ. ಪಾಪ, ಅವಳಿಗೂ ಆತಂಕ ಇದ್ದೇ ಇರುತ್ತದೆ. ಆದರೆ ನಮ್ಮ ಕೆಲಸ ಅಂತಹುದು. ಸಧ್ಯ, ಸುರಕ್ಷಿತ ವಾಗಿ ಮನೆ ತಲುಪಿದರೆ ಸೇರಿದರೆ ಸಾಕು. "
ಇದ್ದಕ್ಕಿದ್ದಂತೆ ಕ್ಯಾಬ್ ನಿಂತಾಗ, ಗಾಬರಿಯಿಂದ ಕಣ್ಣು ಬಿಟ್ಟಳು.
"ಏನಾಯಿತು?" ಬಾನು ಕೇಳಿದಾಗ,
"ಯಾಕೋ ಪ್ರಾಬ್ಲಂ ಆಗಿದೆ .ನೋಡಬೇಕು."ಡ್ರೈವೆರ್ ಕೆಳಗಿಳಿದು, ಬ್ಯಾನೆಟ್ ತೆಗೆದ.
ಬಾನುವಿಗೆ ಹೆದರಿಕೆಯಿಂದ ಹೃದಯ ಬಾಯಿಗೆ ಬಂದ ಹಾಗಾಯಿತು. ಹತ್ತು ನಿಮಿಷ ಕಳೆಯಿತು, ರಿಪೇರಿ ಕೆಲಸ ನಡೆದೇ ಇದ್ದಾಗ, ಬಾನುವಿಗೆ ಸಹನೆ ಮೀರಿತು.
"ಏನಾಯಿತು? ಬೇಗ ರಿಪೇರಿ ಮಾಡಿ, "ಒಮ್ಮೆ ಅಸಹನೆಯಿಂದ ಕೂಗಿದಳು.
"ಮೇಡಂ, ನಾನು ಸುಮ್ಮನೆ ನಿಂತಿಲ್ಲ, ಚೆಕ್ ಮಾಡುತ್ತಿದ್ದೀನಲ್ಲ?" ಒಮ್ಮೆ ಅವಳನ್ನು ದುರುಗುಟ್ಟಿ ನೋಡಿದಾಗ, ಬಾನು ಥರಥರನೆ ಹೆದರಿದಳು.ಕೆಂಡದುಂಡೆಯಂತಿದ್ದ ಅವನ ಕಣ್ಣುಗಳನ್ನು ನೋಡಿ, ಅವಳಿಗೆ ಭಯವಾಗತೊಡಗಿತು. "ಈಗಾಗಲೇ ಹನ್ನೊಂದೂವರೆ ಅಗಿದೆ. ಏನು ಮಾಡೋದು? ಈ ಮನುಷ್ಯನನ್ನು ನೋಡಿದರೆ ಯಾಕೋ ಸರಿಯಿಲ್ಲವೆನಿಸುತ್ತದೆ, ನಾನು ಇನ್ನೊಂದು ಕ್ಯಾಬ್ ಹಿಡಿಯುವುದು ಒಳ್ಳೆಯದು" ಆಲೋಚಿಸಿದ ಬಾನು,ಮರುಕ್ಷಣವೇ ಮತ್ತೊಂದು ಕ್ಯಾಬ್ ಗೆ ಬುಕ್ ಮಾಡಿ ,ಕಾಯುತ್ತಾ ನಿಂತಳು.
ಒಂದೆರಡು ನಿಮಿಷಗಳು ಕಳೆದಿರಬೇಕು, ಹಿಂದಿನಿಂದ ಬಂದ ಆ ಕ್ಯಾಬ್ ಡ್ರೈವರ್, ಅವಳ ಬಾಯಿಯನ್ನು ಗಟ್ಟಿಯಾಗಿ ಅದುಮಿ, ಅವಳನ್ನು ಕಾರಿನೊಳಗೆ ತಳ್ಳಿ ,ಅವಳು ಕೂಗದಂತೆ ಬಾಯಿಗೆ ಬಟ್ಟೆ ತುರುಕಿ, ಕಾರ್ ಸ್ಟಾರ್ಟ್ ಮಾಡಿಯೇ ಬಿಟ್ಟ. ತುಂಬಾ ರಭಸವಾಗಿ ಹೊರಟ ಕಾರು, ಅರ್ಧ ಗಂಟೆಯ ನಂತರ ಒಂದು ಕಡೆ ನಿಂತಿತು. ಕೈಯಲ್ಲಿ ಗನ್ ಹಿಡಿದ ಕ್ಯಾಬ್ ಡ್ರೈವೆರ್ ಅವಳಿಗೆ ತೋರಿಸಿ, ಒಂದು ಬಿಲ್ಡಿಂಗ್ ಒಳಗೆ ಕರೆದೊಯ್ಯುತ್ತಿದ್ದ. ಮಹಾನಗರದಲ್ಲಿ ಮಧ್ಯರಾತ್ರಿಯಾದರೂ ಜನಗಳು ಓಡಾಡುತ್ತಲೇ ಇದ್ದರು. ಅದರೆ ಅವಳು ಬಾಯ್ತೆರೆದು ಕೂಗಲೂ ಆಗದೆ, ತನ್ನ ಕೈಯ್ಯಲ್ಲಿರುವ ಕರವಸ್ತ್ರವನ್ನು ಬೀಸುತ್ತಾ ಅಲ್ಲಲ್ಲೇ ನಿಂತಿದ್ದ ಜನರನ್ನು ತನ್ನ ಸಹಾಯಕ್ಕೆ ಯಾಚಿಸಿದಳು. ಕೆಲವರಿಗೆ ಏನೆಂದು ಅರ್ಥವಾಗಲಿಲ್ಲ. ಅರ್ಥವಾದವರಿಗೆ ತಮಗೇಕೆ ಬೇಡದ ಉಸಾಬಾರಿ ಎಂದು ಸುಮ್ಮನೆ ನಿಂತಿದ್ದರು. ಆ ದುಷ್ಟನಿಂದ ತಪ್ಪಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಮಾಡಿದ ಬಾನು, ಕಡೆಗೆ ಅವನಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದಾಗ, ಅವಳನ್ನು ಬಿಗಿಯಾಗಿ ಹಿಡಿದುಕೊಂಡ ಆ ದುರಾಚಾರಿ, ಒಂದು ಬಿಲ್ಡಿಂಗ್ ಒಳಕ್ಕೆ ಎಳೆದುಕೊಂಡು ಹೋದ. ಜನರೆಲ್ಲರೂ ನೋಡುತ್ತಿದ್ದರು. ಆದರೆ ಯಾರೂ ಏನೂ ಮಾಡಲಿಲ್ಲ. ಹೆದರಿಕೊಂಡು ಜಾಗ ಖಾಲಿ ಮಾಡತೊಡಗಿದರು.
ಇತ್ತ ಮನೆಯಲ್ಲಿ ಇವಳಿಗಾಗಿ ಕಾದು ಕಾದು ಸೋತು ಹೋಗಿದ್ದ ಬಾನುವಿನ ತಾಯಿ ಸುನಂದ, ಮಗಳಿಗಾಗಿ ಪರಿತಪಿಸತೊಡಗಿದರು. ಮಗಳ ಫೋನ್ ರಿಂಗ್ ಆಗುತ್ತಿತ್ತು,ಉತ್ತರ ಬರುತ್ತಿರಲಿಲ್ಲ. ಕಡೆಗೆ ಪಕ್ಕದ ಮನೆಯ ಹುಡುಗ ಸುಮಂತ್ ನನ್ನು ಕರೆದುಕೊಂಡು , ಪೋಲಿಸ್ ಸ್ಟೇಷನ್ ಕಡೆ ಹೊರಟಳು. ಅಲ್ಲಿ ಹೋದರೆ, ಡ್ಯೂಟಿಯ ಮೇಲಿದ್ದವರೆಲ್ಲರೂ ತಮ್ಮ ಲೋಕದಲ್ಲಿ ತಾವು ತೇಲಾಡುತ್ತಿದ್ದುದನ್ನು ನೋಡಿದ ಸುನಂದಳಿಗೆ ಸೋಮೇಶ್ವರ ಶತಕದ ಸಾಲುಗಳು ನೆನಪಾದವು.
"ಧರೆ ಬೀಜಂಗಳ ನುಂಗೆ ಬೇಲಿ ಹೊಲಮೆಲ್ಲಮಂ ಮೇದೊಡಂ
ಗಂಡ ಹೆಂಡಿರನತ್ಯುಗ್ರದಿ ಶಿಕ್ಷಿಸಲ್ ಪ್ರಜೆಗಳಂ ಭೂಪಾಲಕಂ ಭಾಧಿಸಲ್
ತರುವೇ ಪಣ್ಗಳ ಮೆಲ್ಗೆ ಮಾತೆ ವಿಷಮಂ ಪೆತ್ತರ್ಭಕಂಗೂಡಿಸಲ್
ಹರ ಕೊಲ್ಲಲ್ ಪರ ಕಾಯ್ವನೇ? ಹರ ಹರಾ ಶ್ರೀ ಚನ್ನ ಸೋಮೇಶ್ವರ "
ಪ್ರಜೆಗಳ ರಕ್ಷಣೆಯ ಜವಾಬ್ದಾರಿ ಹೊತ್ತು, ಸದಾ ಜಾಗರೂಕರಾಗಿರಬೇಕಾದ ಆರಕ್ಷಕರು, ಹೀಗೆ ಯಾವುದೋ ಸ್ವಪ್ನ ಲೋಕದಲ್ಲಿ ತೇಲಾಡುತ್ತಿರುವುದನ್ನು ಕಂಡು ,ಸುನಂದಳಿಗೆ ತುಂಬಾ ಬೇಜಾರಾಯಿತು. ಕಡೆಗೂ ಒಬ್ಬ ನನ್ನು ಎಬ್ಬಿಸಿ, ಮಗಳ ಬಗ್ಗೆ ದೂರು ನೀಡಿ ಹೊರ ಬಂದರು.ಆ ಹೊತ್ತಿನಲ್ಲಿ ದೂರು ತೆಗೆದುಕೊಳ್ಳಲೂ ಹಿಂಜರಿದ ಅವರಿಗೆ ಪರಿಸ್ಥಿತಿಯನ್ನು ವಿವರಿಸಿ, ಹೇಗೋ ಮಾಡಿ ದೂರು ದಾಖಲಿಸಿ ಬಂದಳು.ಇಂದಿನ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅವಳಿಗೆ ತುಂಬಾ ನೋವಾಯಿತು. ಸ್ನಾತಕೋತ್ತರ ಪದವೀಧರಳಾಗಿದ್ದ ಸುನಂದ ,ಮಗಳನ್ನು ಹುಡುಕುವುದರಲ್ಲಿ ಸಕ್ರಿಯಳಾದಳು.
ಆ ರಾತ್ರಿಯೆಲ್ಲಾ ಆತಂಕದಲ್ಲೇ ಕಳೆದ ಸುನಂದ,
ಬೆಳಗಾಗುವುದನ್ನೇ ಕಾಯುತ್ತಿದ್ದಳು.
ಬೆಳ್ಳಂಬೆಳಗ್ಗೆ ಬಾಗಿಲು ತೆಗೆದು ನೋಡಿದಾಗ, ಮನೆಯ ಮುಂದೆ ಪ್ರಾಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಗಳನ್ನು ನೋಡಿ ಅವಳಿಗೆ ಉಸಿರೇ ನಿಂತು ಹೋಯಿತು.
ಮೈಮೇಲಿನ ಬಟ್ಟೆ ಅಸ್ಥವ್ಯಸ್ಥವಾಗಿ, ತುಟಿಗಳಿಂದ ರಕ್ತ ಒಸರುತ್ತಿದ್ದು, ಮುಖ ದ ಮೇಲೆಲ್ಲಾ ಪರಚಿದ ಗುರುತುಗಳನ್ನು ಕಂಡು, ಸುನಂದ ಏನಾಗಿರಬಹುದೆಂದು ಊಹಿಸಿದಳು.. ಅವಳ ಹೆಗಲಲ್ಲಿ ಮೂಕಸಾಕ್ಷಿಯಾಗಿ ನೇತಾಡುತ್ತಿದ್ದ ವ್ಯಾನಿಟಿ ಬ್ಯಾಗ್ ಅನ್ನು ಒಳಗಿರಿಸಿ, ಪಕ್ಕದ ಮನೆಯವರ ಸಹಾಯ ಕೋರುತ್ತ, ಮಗಳ ಪಕ್ಕ ಕುಳಿತಳು . ಗಂಡಸು ದಿಕ್ಕಿಲ್ಲದ ಆ ಮನೆಯಲ್ಲಿ, ಮುಂದೇನು ಮಾಡುವುದೆಂದು ಅವಳಿಗೆ ತೋಚದಿದ್ದಾಗ, ಪಕ್ಕದ ಮನೆಯ ಸುಮಂತ್ ನನ್ನು ಕರೆದುಕೊಂಡು ಬಂದು, ಬಾನುವನ್ನು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋದಳು.
ಬಾನುವಿನ ದೇಹದ ಮೇಲೆ ಅತೀವ ಘಾಸಿಯಾಗಿತ್ತು. ಜೊತೆಗೆ ಅತ್ಯಾಚಾರ ನಡೆದ ಗುರುತುಗಳೂ ಎದ್ದು ಕಾಣುತ್ತಿದ್ದವು. ಪೋಲೀಸ್ ಕೇಸ್ ಆಗದೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೆಂದಾಗ,
ಸುನಂದ ತಾನು ಕೆಲಸ ಮಾಡುತ್ತಿದ್ದ ಆಫೀಸ್ ನ ವಕೀಲರ ಸಹಾಯ ಪಡೆದುಕೊಂಡು, ಮಗಳನ್ನು ಆಸ್ಪತ್ರೆಗೆ ದಾಖಲಿಸಿದಳು.ಮಗಳ ಈ ರೀತಿಯ ಕೆಟ್ಟ ಪರಿಸ್ಥಿತಿ ಯನ್ನು ನೋಡಿ ಸುನಂದ ಕಂಗಾಲಾದಳು.
ಅವಳ ಯೋಚನೆ ಈ ಸ್ವತಂತ್ರ ಭಾರತದ ಸಾಮಾಜಿಕ ವ್ಯವಸ್ಥೆಯ ಕಡೆಗೆ ಹರಿದು ಅವಳಿಗೆ ಎಲ್ಲಿಲ್ಲದ ಕೋಪ ಬಂದಿತು. ಆದರೆ ಬಡವನ ಕೋಪ ದವಡೆಗೆ ಮೂಲ ಎಂಬಂತಾಗಿತ್ತು. ಹೆಣ್ಣುಮಗಳೊಬ್ಬಳಿಗೆ ರಕ್ಷಣೆ ಎಂಬುದುಇಲ್ಲವಾಗಿದೆ. ಶೋಷಿತ ಹೆಣ್ಣುಮಗಳ ಕಷ್ಟಕ್ಕೆ ಕೈಜೋಡಿಸುವವರೂ ಇಲ್ಲವೆಂದ ಮೇಲೆ ಸ್ವತಂತ್ರ ಭಾರತದಲ್ಲಿ ನೆಮ್ಮದಿ ಎಲ್ಲಿದೆ? ಗಾಂಧೀಜಿಯ ಕನಸಿನ ಭಾರತ ಎಲ್ಲಿ ಹೋಯಿತು?ಅಯ್ಯೋ ನನ್ನ ಮಗಳೇ ಶೋಷಿತಳಾದಳಲ್ಲ? ಆ ದುಷ್ಟನನ್ನು ಬಿಡಬಾರದು. ಅವನಿಗೆ ಹೇಗಾದರೂ ಶಿಕ್ಷೆಯನ್ನು ಕೊಡಿಸಿ,ನನ್ನ ಮಗಳಿಗೆ ನ್ಯಾಯ ದೊರಕಿಸಬೇಕು. ಅಂತಹ ದುಃಖದ ಸಮಯದಲ್ಲೂ ಅವಳ ವಿವೇಚನೆ ಜಾಗೃತವಾಗಿತ್ತು.
ಸತತವಾಗಿ ನಾಲ್ಕು ದಿನಗಳು ಜೀವನ್ಮರಣದ ನಡುವೆ ಹೋರಾಟ ನಡೆಸಿ,ಕಡೆಗೂ ಬಾನು ಹೋಗಿಯೇ ಬಿಟ್ಟಾಗ, ಸುನಂದಳ ಗೋಳು ಹೇಳತೀರದಾಯಿತು.
ಬಹಳ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು
ಬಹಳ ಕಷ್ಟದಿಂದ ಮಗಳನ್ನು ಬೆಳೆಸಿ, ಈಗ ಒಂದು ಒಳ್ಳೆಯ ಸ್ಥಿತಿಗೆ ಬಂದಿದ್ದ ಅವಳಿಗೆ, ಈಗ ಮಗಳನ್ನೂ ಕಳೆದುಕೊಂಡು ಜೀವನವೇ ಬೇಡವೆನಿಸುವಂತಾಗಿತ್ತು.
ಅದರೆ ಅವಳ ಒಳಗಿನ ಛಲ ಅವಳನ್ನು ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಲೇ ಬೇಕೆಂಬ ಹಠ ಮೂಡಿತು. ತನ್ನ ಮಗಳಿಗಾದ ಹಿಂಸೆ ಬೇರೆ ಯಾವ ಹೆಣ್ಣು ಮಕ್ಕಳಿಗೂ ಬರಬಾರದೆಂದು ತೀರ್ಮಾನಿಸಿದಳು.
ತನ್ನ ಮಗಳಿಗಾದ ಅನ್ಯಾಯದ ಮೂಲವನ್ನು ಆನ್ವೇಷಣೆ ಮಾಡುತ್ತಾ ಹೋದಾಗ ಮೊದಲಿಗೆ ಬಾನುವಿನ ವ್ಯಾನಿಟಿಬ್ಯಾಗ್ ಸಾಧನವಾಯಿತು. ಬಾನುವಿನ ಮೇಲಾದ ಧಾಳಿಗೆ ಆ ವ್ಯಾನಿಟಿ ಬ್ಯಾಗ್ ನೊಳಗಿದ್ದ ಅವಳ ಮೊಬೈಲ್ ಮೂಕ ಸಾಕ್ಷಿಯಾಗಿ ನಿಂತಿತು.
ಬಾನು ಅಂದು ಬುಕ್ ಮಾಡಿದ ಕ್ಯಾಬ್ ಡೀಟೈಲ್ಸ್ ಅವಳ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದ್ದರಿಂದ, ಸುನಂದಳಿಗೆ ಮುಂದಿನ ಕಾರ್ಯಗಳಿಗೆ ಸಹಾಯವಾಯಿತು. ತಾನು ಕೆಲಸ ಮಾಡುತ್ತಿದ್ದ, ಲಾಯರ್ ಆಫೀಸ್ ನ ಸೀನಿಯರ್ ವಕೀಲರ ಒತ್ತಾಸೆಯಿಂದ ಮಗಳ ಸಾವಿಗೆ ಕಾರಣರಾದ ಅಪರಾಧಿಗಳನ್ನು ಹಿಡಿದು , ಕೇಸ್ ಮುಂದುವರಿಸಿದಳು. ಅಪರಾಧಿಯನ್ನು ಹುಡಿಕಿ ಕಟಕಟೆಯಲ್ಲಿ ನಿಲ್ಲಿಸುವ ವೇಳೆಗೆ ಬಾನು ಹೋಗಿ ಆರು ತಿಂಗಳುಗಳಾಗಿ ಹೋದವು.
ಜೊತೆಜೊತೆಗೆ ಬಾನು ಕೆಲಸ ಮಾಡುತ್ತಿದ್ದ ಕಂಪನಿಯ
ಪ್ರಾಜೆಕ್ಟ್ ಮ್ಯಾನೆಜರ್ ವಿರುದ್ಧ, ಹೆಣ್ಣು ಮಕ್ಕಳನ್ನು ಕೆಲಸದ ಅವಧಿ ಮುಗಿದ ಮೇಲೂ ನಿಲ್ಲಿಸಿಕೊಂಡಿದ್ದಷ್ಟೇ ಅಲ್ಲದೆ, ಅವಳನ್ನು ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಹೊರದಿದ್ದ ತಪ್ಪಿಗೆ ಕೇಸ್ ದಾಖಲಿಸಿದಳು.
ಹೀಗೆ ಪೋಲೀಸ್, ಆಸ್ಪತ್ರೆ, ಕೋರ್ಟ್ ಗಳಿಗೆ ಅಲೆದಲೆದು
ಸೋತು ಸುಣ್ಣವಾದಳು ಸುನಂದ. ಬಾನು ಸತ್ತು ವರ್ಷ ಕಳೆಯುತ್ತಾ ಬಂದರೂ ನ್ಯಾಯ ಸಿಗುವ ಭರವಸೆಯೇ ಇರಲಿಲ್ಲ. ಸುನಂದಳ ಹೋರಾಟ ಮುಂದುವರೆದಿತ್ತು.
ಕಡೆಗೂ ಎರಡು ವರ್ಷಗಳ ನಂತರ ಸುನಂದಳಿಗೆ ಮಗಳ ಸಾವಿನ ನ್ಯಾಯ ದೊರಕಿತು. ಅಪರಾಧಿಗೆ ಜೀವಾವಧಿ ಶಿಕ್ಷೆಯಾಯಿತು. ಕಂಪನಿಯ ಮ್ಯಾನೆಜರ್ ಕಿರಣ್ ಗೆ ಸರಿಯಾದ ವಾರ್ನಿಂಗ್ ಜೊತೆಗೆ ಪೆನಲ್ಟಿ ಯನ್ನು ನ್ಯಾಯಾಲಯ ನಿಗಧಿಸಿತ್ತು .
ಸುನಂದಳಿಗೆ ಕೋರ್ಟ್ ನಲ್ಲಿ ಜಯ ಲಭಿಸಿ ದ್ದರೂ, ಮಗಳ ನ್ನು ಕಳೆದುಕೊಂಡ ನೋವು ,ಯಾವ ಗೆಲುವಿನಿಂದಲೂ ಕಡಿಮೆಯಾಗಲಿಲ್ಲ, ಏಕಾಂಗಿಯಾದ ಜೀವನದಿಂದ ಬೆಂದು ಹೋಗಿದ್ದ ಸುನಂದ, ಮುಂದೆ ಸಮಾಜಕ್ಕೆ ಏನಾದರೂ ಒಂದು ಒಳ್ಳೆಯದನ್ನು ಮಾಡಬೇಕೆಂಬ ಸದುದ್ಧೇಶದಿಂದ ,
"ನವಶಕ್ತಿ ಅಬಲಾಶ್ರಮ" ವನ್ನು ಸ್ಥಾಪಿಸಿ, ಬಾನುವಿನಂತೆ ಅತ್ಯಾಚಾರಕ್ಕೊಳಗಾಗಿ ಸಮಾಜದಿಂದ ತಿರಸ್ಕೃತರಾದ ಅನಾಥ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿ, ಅವರಲ್ಲಿ ಅತ್ಮವಿಶ್ವಾಸವನ್ನು ತುಂಬಿ ಸಬಲರನ್ನಾಗಿಸಿ, ಬದುಕುವ ಉತ್ಸಾಹವನ್ನು ತುಂಬಿಸುವ ಕೆಲಸ ಮಾಡುತ್ತಿದ್ದಳು.
ಸುನಂದಳಿಂದ ಸ್ಥಾಪಿತವಾದ
"ನವಶಕ್ತಿ ಅಬಲಾಶ್ರಮ"ವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯಾಗುತ್ತಾ ಬಂದು,ಎಷ್ಟೋ ಜನ ಅಸಹಾಯಕ ಮಹಿಳೆಯರಿಗೆ ಆಶ್ರಯ ತಾಣವಾಗಿತ್ತು.ಆಶ್ರಮದ ಈ ರೀತಿಯ ಒಳ್ಳೆಯ ಬೆಳವಣಿಗೆಯನ್ನು ನೋಡುತ್ತಾ, ಸುನಂದಳು ಆ ಆಶ್ರಮದ ಎಲ್ಲಾ ಹೆಣ್ಣು ಮಕ್ಕಳಲ್ಲೂ ತನ್ನ ಮಗಳು ಬಾನುವನ್ನು ಕಾಣುತ್ತಾ,ತೃಪ್ತಿಯಿಂದ ಬದುಕು ಸಾಗಿಸುತ್ತಿದ್ದಳು.ಒಬ್ಬ ಮಗಳನ್ನು ಕಳೆದುಕೊಂಡರೂ ನೂರಾರು ಹೆಣ್ಣು ಮಕ್ಕಳಿಗೆ ತಾಯಿಯಾಗಿ ,ಅಮ್ಮನೆಂದು
ಕರೆಸಿಕೊಳ್ಳೂವಾಗ ಅವಳು ಧನ್ಯತೆಯನ್ನು ಅನುಭವಿಸುತ್ತಿದ್ದಳು.
ವಿಜಯಭಾರತೀ.ಎ.ಎಸ್.
