ಚೈತ್ರ ಚೈತ್ರ

Comedy

4.4  

ಚೈತ್ರ ಚೈತ್ರ

Comedy

ಅಜ್ಜಿಯ ಕಿವುಡು.

ಅಜ್ಜಿಯ ಕಿವುಡು.

2 mins
6.7K


ಕಿವುಡಜ್ಜಿಗೆ ಸೌಂಡ್ ಎಂದರೆ ಆಗದು! ಮೆಲ್ಲಗೆ ಮಾತನಾಡಿದರೆ ಕೇಳಿಸದು, ಜೋರಾಗಿ ಕಿರುಚಿದರೆ 'ನನಗೇನು ಕಿವುಡ' ಎಂದು ಕೇಳುವುದು, ಮರಿ ಸೊಸೆ ಶಬ್ಧ ಮಾಡದೇ ಪೂಜೆ ಮಾಡಿದರೆ ' ಈಗಿನ ಕಾಲದ ಹೆಣ್ಣು ಮಕ್ಳು ಪೂಜೆ ಗೀಜೆ ಎಲ್ಲಿ ಮಾಡ್ತಾವೆ ' ಎಂದು ರೇಗುವುದು, 

ಜೋರಾಗಿ ಶಬ್ಧ ಮಾಡಿಕೊಂಡು ಪೂಜೆ ಮಾಡಿದರೆ! 

' ಹಾಹಾಹಾ ಹೆಂಗೆ ದಡಬಡ ಅಂತಾಳೆ ನೋಡು ಸೊಕ್ಕು ಸೊಕ್ಕು' ಎಂದು ಹಲ್ಲುಗಿಂಜುವುದು, ತರಕಾರಿ ಮಾರುವವಳು ಬಂದಳೇನೇ ಎಂದು ಕಿವಿನ ಕಿಟಕಿ ಹೊರಗಿಟ್ಟು ಕೇಳುವುದು, 'ಥೊ, ಈ ಹೈಕ್ಳು ಆರನ್ ಮಾಡದೆ ಗಾಡಿ ಓಡುಸ್ತಾವೆ' ಎಂದು ಅಣುಕಿಸುವುದು. 


"ಅಜ್ಜಿ ನಿಂಗೆ ಕಿವಿ ಕೇಳಲ್ಲ " ಎಂದು ಯಾರಾದರು ಜೋರಾಗಿ ಹೇಳಿದರೆ , 

'ನಂಗೆ ಕಿವಿಕೇಳಕ್ಕಿಲ್ಲ ಅಂತೀಯ, ನಿನ್ ಇಡೀ ವಂಶಕ್ಕೆ ಕಿವಿ ಕೇಳಿಸಲ್ಲ ಕಂಡಿದ್ದೀನ್ ಬಾ...." ಎಂದು ಮನೆ ಮಂದಿಗೆಲ್ಲಾ ಶಾಪ ಹಾಕುವುದು. 


" ಇತ್ತೀಚಿಗೆ ಕುಟ್ಟೋ ಕಲ್ಲು ಸರಿಯಾಗಿ ಕೆಲ್ಸ ಮಾಡ್ತಾ ಇಲ್ಲ ತತ ಬೇರೇದು... " ಎಂದು ಕುಟ್ಟಾಣಿ ಸೌಂಡ್ ಮಾಡ್ತಾ ಇಲ್ಲ ಎಂದು ಅದನ್ನು ಬದಲಾಯಿಸುವುದು.


ಮನೆ ಹೆಣ್ ಮಕ್ಕಳು ಗಲ್ ಗಲ್ ಗೆಜ್ಜೆ ಹಾಕಿಕೊಂಡು ಓಡಾಡಬೇಕು, ಅದು ಬಿಟ್ಟು ಸೌಂಡು ಬರದ ಗೆಜ್ಜೆ ಹಾಕಿಕೊಂಡರೆ ಏನ್ ಚೆನ್ನಾಗಿರುತ್ತೆ. ಎನ್ನುವುದು. 


ಈ‌ ಟೀ.ವಿ ನೂ ಸೌಂಡ್ ಕಡಿಮೆ ಮಾಡಿಕೊಂಡು ಕೇಳ್ತಾರಲ್ಲ, ಇವರಿಗೆಲ್ಲ ಏನ್ ಬಂದೈತೆ ದೊಡ್ಡ ರೋಗ. ಮನೆಲಿ ಇರೋದು ಐದನೇ ಕ್ಲಾಸು ಓದೊ ಮಕ್ಳು, ಆ ಸೊಸೆ ಮಾರಾಯ್ತಿ ಏನೊ ಬಾರಿ ಐ.ಪಿ.ಎಸ್ ಓದಿಸುವವಳ ಹಾಗೆ ಆಡ್ತಾಳೆ. ಸೌಂಡ್ ಜಾಸ್ತಿ ಕೊಡಮ್ಮಿ ಅಂದ್ರೆ ' ಇದ್ರಾಗೆ ಇಷ್ಟೆ ಸೌಂಡ್ ಇಕ್ಕಿರದು' ಎಂದು ವಾದಾ ಬೇರೆ ಮಾಡ್ತಾಳೆ ಸಣುಕ್ಳಿ. ಎಂದು ಪಕ್ಕದ ಮನೆಯವರಿಗೆ ಕಂಪ್ಲೇಟು ನೀಡುವುದು. 


ಅಲ್ಲ ಕಣಜ್ಜಿ ನಿಂಗೆ ವಯಸ್ಸಾಯ್ತು, ಕಿವಿ ಕಣ್ಣು ಡ್ಯಾಮೇಜ್ ಆಗಿರ್ತಾವೆ ಅದನ್ನು ನೋಡಿಕೊಳ್ಳೊದು ಬಿಟ್ಟು ಊರೊರಿಗೆಲ್ಲ ಬೈಯ್ತೀಯಲ್ಲ. ಎಂದರೆ! 


ಅದೇನೊ ಬಿಡು ಊರಿನವರಿಗೆ ನಾನು ಯಾವಾಗಲು ಒಳ್ಳೆದನ್ನೆ ಬಯಸುತ್ತೀನಿ. ಆದರೂ ಈ ಜನ ನನ್ನ ಮಾತನಾಡುಸುವಾಗ, ಕಿವಿ ಬಡ್ಡೆಗೆ ಬರ್ತಾವೆ ಬಡ್ಡಿತವ್ವು. ನನ್ನೇನು ಕಿವುಕವ್ವ ಅಂತ್ಕೊಂಡಾರ ಏನು? ನಿಶಬ್ದವಾಗಿ ನಡೆದುಕೊಂಡು ಹೋಗ್ತಾ ಇರ್ವಾರ್ವೆ, ನನ್ನ ಕಂಡ್ರೆ ಸಾಕು, ಕಿವಿ ಬಡ್ಡೆಗೆ ಬಂದು ಏನಜ್ಜಿ ಉಂಡಾ, ಏನಜ್ಜಿ ಕೇಳುಸ್ತಾ, ಏನಜ್ಜಿ ಎಲ್ಲಿಗ್ಗೊಂಟೆ, ಅಂತಾವೆ ಮುಂಡೇವು. ಅನ್ನೊದ?...


ಈ ಅಜ್ಜಿಗೆ ತಾನು ಕಿವುಡಾಗಿರೋದು ತಿಳಿವಲ್ದು, ಈ ಊರಿಗೆ, ಈ ಜನಕ್ಕೆ ಏನೊ ಆಗಿದೆ ಎಂದು ಬೈದುಕೊಳ್ಳುತ್ತೆ‌. ಏನೇ ಆಗಲಿ ಕಿವಿ ಕೇಳಲ್ಲ ಅಂತ ಪಕ್ಕದಲ್ಲಿ ಯಾರಾದರು ಈ ಅಜ್ಜಿನ ಬೈದುಕೊಂಡರು, 


" ಒಳ್ಳೆದಾಯ್ತು ಬಿಡು, ನಮ್ ಕಾಲದಾಗೆ ಇಷ್ಟು ಸೆಕೆ ಇರ್ಲಿಲ್ಲ, ನೀವೆಲ್ಲ ಏನ್ ಪಾಪ ಮಾಡಿದ್ರೋ ಏನೊ, ನಂದೇನೊ ಹೋಗೊ ಕಾಲ. ಅಲ್ಲ ಕಣ್ರಲ್ಲ ಮಾತಾಡ್ ಮಾತಾಡ್ತೀಯ ಸ್ವಲ್ಪ ಸೌಂಡ್ ಇಟ್ಟು ಮಾತಾಡಬೇಕು ತಾನೆ, ಈ ಹೈಕ್ಲಿಗೆ ಯಾರ್ ಬುದ್ದಿ ಹೇಳ್ತಾರೆ ತತ ಎಲೆ ಅಡ್ಕೆ ಯಾ? ಅಲ್ಲ ಕಣ್ರುಲ, ವಾರದಿಂದೆ ರಾತ್ರಿಯೆಲ್ಲ ಆ ಹಾಳಾದ್ ಬೆಕ್ಕು ಸೌಂಡು ಮಾಡ್ತಾ ಇತ್ತು, ಮೂರ್ ನಾಲ್ಕು ದಿನದಿಂದ ಅದೂ ನಿಶಬ್ದವಾಗಿದೆ ಅಂತೀನಿ. ಅದ್ ಎಲ್ಲಿಗೋತೊ ಏನೊ, ಅಲ್ಲಿ ನೋಡೊ ಆ ಪ್ಯಾಟೆ ಹುಚ್ಚ ಕಿವಿಗೆ ದಾರ ನೇತಾಕಿಕೊಂಡು ಓಡಾಡ್ತಾ ಇದಾನೆ. ಒಂದು ತಮಾಷೆ ಗೊತ್ತ, ಮೊನ್ನೆದಿನ, ಲೋ ಪುಟ್ಕೋಸಿ ಪ್ಯಾಟೆ ಹುಡ್ಗನೇ ಎಂದು ಕೂಗುದ್ರೆ, ' ಏನಜ್ಜಿ ಹೊಗಳುದ್ಯಾ' ಎಂದು ಹೇಳೊದೆ. ಕಿವುಡ ನನ್ ಮಗ ಅವನು ಕಿವಿನೇ ಕೇಳಕಿಲ್ಲ ಅಂತೀನಿ. " ಎಂದು ಬಡಬಡ ಮಾತನಾಡಿತು. 


" ಅಜ್ಜಿ ಆ ಪ್ಯಾಟೆ ಹುಡ್ಗನಿಗೂ ನಿಂಗು ಒಳ್ಳೆ ಜೋಡೆ ಆಗ್ತೈತೆ ಬಿಡು... ಪ್ರೆಂಡ್ ಮಾಡ್ಕಾ" ಎಂದಿದ್ದಕ್ಕೆ ಏನು ಕೇಳಿಸಿಕೊಂಡಿತೋ ಏನೊ ಅಜ್ಜಿ ನಾಚಿಕೊಂಡು ಹೋಗೇ ಬಿಟ್ತು. " (ನಿಂದು ಅಜ್ಜನದು ಒಳ್ಳೆ ಜೋಡಿ ಎಂದುಕೋಳಿಸಿಕೊಂಡಿರಬೇಕೇನೊ? ಗೊತ್ತಾಗಲಿಲ್ಲ.!! ) 


" ಈ ಜಗತ್ತೇ ನಿಶಬ್ದ ಆಗೇತಲ್ಲ ಏನ್ ಬಡ್ದೈತೆ ಇದಕ್ಕೆ, ಯಾವುದೊ ಹೊಸ ವೈಯರಸ್ಸು ಒಕ್ಕರಿಸಿರಬೇಕು.. ಕೇಡಗಾಲ ಕೇಡಗಾಲ .. " ಎಂದು ದಿನಕಳೆದರೂ ಗೊಣಗುತ್ತಲೇ ಇತ್ತು ಅಜ್ಜಿ. 


Rate this content
Log in

Similar kannada story from Comedy