ಚೈತೃ ಚೈತ್ರ

Drama

3.8  

ಚೈತೃ ಚೈತ್ರ

Drama

ದರ್ಪಣ ಸುರಭಿ

ದರ್ಪಣ ಸುರಭಿ

5 mins
349


"ಸರ್ಪ್ರೈಸ್ ಅಂತೆ, ಈ ಕತ್ತಲೆಯಲ್ಲಿ , ಪರಿಚಯವೇ ಇಲ್ಲದ ಜಾಗಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ಮನುಷ್ಯ ಯಾಕೆ ಇಷ್ಟು ವಿಚಿತ್ರ, ಬೆಳಗ್ಗೆ ತಿಂಡಿಗೆ ಮುದ್ದೆ ಬೇಕಂತೆ ರಾತ್ರಿ ಊಟಕ್ಕೆ ಉಪ್ಪಿಟ್ಟು ಬೇಕಂತೆ!. ಎಷ್ಟು ಉಲ್ಟಾ ಆಸಾಮಿ ಇವ. ಇವತ್ತು ನನ್ನ ಹುಟ್ಟು ಹಬ್ಬ ಎಂಬುದನ್ನು ಮರೆತು ಹೋಗಿದ್ದಾರೆ ಎನಿಸುತ್ತದೆ. ಮರೆಗುಳಿ! " "ಮಹಾರಾಣಿಯವರು, ನನ್ನ ಜಪ ಮಾಡಿದ್ದು ಮುಗಿದಿದ್ದರೆ, ಕಾರಿನಿಂದ ಇಳಿದು ಬರ್ತೀರ! " "ಬರ್ತೀನಿ ಇನ್ನೆಲ್ಲಿಗೆ ಹೋಗಲಿ ಮಾರಾಯ, ಕಾರಿನಲ್ಲಿ ಕುಳಿತು ಕುಳಿತು ಬೆನ್ನು ನೋವು ಬಂದಿದೆ."


ಆಕಾಶ ನೀಲಿ ಬಣ್ಣದ ಸೀರೆಯುಟ್ಟಿದ್ದ‌ ಸುರಭಿ ಕೆಳಗಿಳಿದಳು. ಸುತ್ತ ಕಣ್ಹಾಯಿಸಿದಳು, ಆಸಾಮಿ ಪುನಃ ಮಾಯವಾಗಿದ್ದ.

" ಅಲ್ಲಾ ಇವನೇನು ಜಾದುಗಾರನಾ! ಇಲ್ಲ ಮಾಯಗಾರನ, ಶತೃರವರ ಕಥೆಯಲ್ಲಿ ಬರುವ ಶತೃ ಪಾತ್ರದಂತೆ ಜಾದು ಮಾಡುತ್ತಾನಲ್ಲ! ನಾನೇನಾದರು ಅಪ್ಪಿ ತಪ್ಪಿ ಅರ್ಧ ಮನುಷ್ಯ, ಅರ್ಧ ಮೋಹಿನಿಯಂತಹ ವ್ಯಕ್ತಿನ ಪ್ರೀತಿಸಿಬಿಟ್ಟೆನಾ!.... ಎಲ್ಲಿ ಹೋದ್ರು ಇವ್ರು..... " ಸುರಭಿ ಗೊಣಗುತ್ತ ನಿಂತಿದ್ದಳು. ಹಿಂದಿನಿಂದ ಇವಳನ್ನು ನೋಡುತ್ತಾ, ನಗುತ್ತಾ ನಿಂತಿದ್ದ ದರ್ಪಣ್. " ಜಾದುಗಾರನು ಅಲ್ಲ ಮಾಯಗಾರನು ಅಲ್ಲ, ಹಿಂದೆ ತಿರುಗಿದ್ದರೆ ಕಾಣುತ್ತಿದ್ದೆ. ಯಾವಾಗಲೂ ಹೀಗೆ ವಟ ವಟ ಎನ್ನದಿದ್ದರೆ ಸಮಧಾನ ಇಲ್ಲ ಅಲ್ಲವ! " ಎಂದು ಕಾರಿನ ಹಿಂಬದಿಯ ಡಿಕ್ಕಿ ತೆಗೆದು, ಕುಳಿತುಕೊಂಡ ಕಾಲು ಇಳಿಬಿಟ್ಟು. ಸುರಭಿ ಇವನ ಎದುರು ಬಂದು ನಿಂತು, ದುರುಗುಟ್ಟಿ ಕಿವಿಹಿಂಡಿದಳು. " ಬಿಡೆ ಶೂರ್ಪಣಕಿ...... " " ಇದು ಸರ್ಪ್ರೈಸ್ ಹಾ...... " ಎನ್ನುತ್ತಾ ಪಕ್ಕದಲ್ಲಿ ಕುಳಿತು ದರ್ಪಣ್ ಹೆಗಲಿಗೆ ತಲೆಹಿಟ್ಟಳು. " ಆ ದೇವರು ಮಗುವಿಗೇಕೆ ಮಗುವೆಂದು ನಿರ್ಧಾನ ಮಾಡಿದ್ದಾನೆ ಎನಿಸುತ್ತದೆ. " ಎಂದ ಸುರಭಿಯ ಕಣ್ಣು ತುಂಬಿತ್ತು. " ಸಂತೋಷದ ಗಳಿಕೆಯಲ್ಲಿ, ಆ ಮಾತು ಬೇಡ ಸುಬ್ಬಿ. ಆ ದೇವರು ಇದ್ದಾನೆ ಅದಕ್ಕಿಂತ ಹೆಚ್ಚು ನನ್ನಮ್ಮ ಇದ್ದಾರೆ ನಿನ್ನ ಜೊತೆ. ಯಾಕಿಷ್ಟು ತಲೆ ಕೆಡಿಸಿಕೊಳ್ಳುವೆ. " ಎಂದು ಸುರಭಿಯನ್ನು ಮಡಿಲಲ್ಲಿ ಮಲಗಿಸಿಕೊಂಡ ದರ್ಪಣ್. " ದಡ್ಡು, ಅತ್ತೆ ಈ ಕುರಿತು ಏನು ಹೇಳುವುದಿಲ್ಲ, ಆದರೆ ಅವರಿಗು ಆಸೆ ಇರುತ್ತದೆ ಅಲ್ಲವ ಮೊಮ್ಮಕ್ಕಳು ಬೇಕೆಂದು. ಅವರು ನನ್ನನ್ನು ಸಮಧಾನ ಮಾಡುವ ಮಾತುಗಳಲ್ಲೇ ಗೊತ್ತಾಗುತ್ತದೆ, ಅವರು ನಮ್ಮ ಮಗುವಿನ ನಿರೀಕ್ಷೆಯಲ್ಲಿದ್ದರು ಎಂದು. ನಾನು ಯಾಕೆ ಎಲ್ಲರಿಗು ನಿರಾಸೆ ಮಾಡ್ತೀನಿ?. ನನ್ನ ಮದುವೆ ಸಮಯದಲ್ಲಿ ಹೆತ್ತವರಿಗು ನಿರಾಸೆ ಮಾಡಿದೆ. ನಿನ್ನ ಮದುವೆ ಆದೆ ಪ್ರೀತಿಸಿ. ಈಗ ಮತ್ತೊಂದು ರೀತಿಯಲ್ಲಿ ನಿರಾಸೆ, ಎಲ್ಲವೂ ನನ್ನಿಂದ. " " ಸುಬ್ಬಿ, ಹಾಗೆಲ್ಲ ಅಂದುಕೊಳ್ಳಬೇಡ! ಅತ್ತೆ ಮಾವರಿಗೆ ನಾನೆಂದರೆ ಇಷ್ಟವಿಲ್ಲವೇನೊ! ಆದರೂ ಅಳಿಯ ಎಂಬ ಮಮತೆಗೆ ಕಡಿಮೆ ಇಲ್ಲ. ಹಳೆಯದ್ದನ್ನು ಮರೆತಿದ್ದಾರೆ ಅವರು ಕೂಡ , ನಾನು ಕೂಡ!. " " ದಡ್ಡು, ಎಲ್ಲಾ ಸಂಕಟಗಳು ದೂರ ಆಯ್ತು ಎನ್ನುವಷ್ಟೆಲ್ಲೆ ನನಗೆ ಈ ರೀತಿ ಆಯ್ತು. ಆಕ್ಸಿಡೆಂಟ್ ಆಗಿ ಒಂದು ವರ್ಷ ಆಯ್ತು, ದೇಹದ ನೋವು ಮರೆಯಾಯ್ತು. ಈಗ ನಾನೊಬ್ಬಳು ವ್ಯರ್ಥ ಹೆಣ್ಣು ಎಂಬ ಕಹಿ ಸತ್ಯ ಪ್ರತಿಕ್ಷಣ ನೋಯಿಸುತ್ತಲಿದೆ. " ಬಿಕ್ಕಿಳಿಸಿದಳು, ವರ್ಷದ ಹಿಂದೆ ಬೈಕ್ ರೈಡಿಂಗ್ ಮಾಡುವಾಗ ಬ್ರೇಕ್ ಹಿಡಿತಕ್ಕೆ ಸಿಗದೇ ಅಪಘಾತವಾಗಿತ್ತು. ನೂರಾರು ಕೆಜಿ ತೂಕದ ಆ ಬೈಕ್ ಇವಳ ಮೇಲೆ ಉರುಳಿ ಉರುಳಿ ಬಿದ್ದಿದ್ದರಿಂದ, ಇವಳ ಉದರಕ್ಕೆ ಬಲವಾದ ಪೆಟ್ಟಾಗಿತ್ತು.


ಸುರಭಿ ಆಸ್ಪತ್ರೆ ಸೇರಿದ ಮೇಲೆ ಗೊತ್ತಾದ ವಿಚಾರ ಹೊಟ್ಟೆಯಲ್ಲಿ ಒಂದು ತಿಂಗಳ ಮಗು ಸಮೇತ ಗರ್ಭಕೋಶವೇ ಹರಿದಿತ್ತು ಎಂಬುದು. ಗಮನಿಸದೇ ಸುರಭಿ ತಪ್ಪು ಮಾಡಿದ್ದಳು. ಆ ಸಮಯದಲ್ಲಿ ಸುರಭಿ ಪಟ್ಟ ನೋವು ಸಂಕಟ ಯಾರಿಗೂ ಹೇಳಲಾಗದಷ್ಟು , ಯಾರು ಕೇಳಲಾಗದಷ್ಟು. ದರ್ಪಣ್‌‌ನ ತಾಯಿ, ಸುರಭಿಯನ್ನು ಸ್ವತಃ ಮಗಳಂತೆ ನೋಡಿಕೊಂಡಿದ್ದರು, ಪರಿಣಾಮವಾಗಿ ಸುರಭಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಿತ್ತು.


ಆದರೆ ಯಾವಾಗಲೂ ಕಾಡುವ, ಕಣ್ಮರೆಯಾದ ತಾಯ್ತನ, ಹಾಗೂ ಸುರಭಿ ಹೋದ ಕಡೆಯಲ್ಲೆಲ್ಲಾ ಕೇಳಿಬರುವ ಮಾತುಗಳನ್ನು ಕೇಳಿ ಸಹಿಸಲಾರದೆ ಕೊರಗುತ್ತಿದ್ದಳು. ದರ್ಪಣ್ ಎಷ್ಟೇ ಪ್ರಯತ್ನ ಪಟ್ಟರು ಜನರಾಡುವ ಮಾತುಗಳನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಅದರಿಂದಾಗಿ ದರ್ಪಣ್ ಹೊಸದೊಂದು ಆಲೋಚನೆಯೊಂದಿಗೆ ಸುರಭಿಯ ಹುಟ್ಟು ಹಬ್ಬದಂದು ಮರೆಯಲಾಗದ ಉಡುಗೊರೆ ಕೊಡಲು ನಿರ್ಧರಿಸಿದ್ದ. " ಸುಬ್ಬಿ...... ನಿದ್ರೆ ಬಂತಾ....! " " ನಿದ್ರೆ ಹೇಗೆ ಮಾಡ್ಲಿ! ಇವತ್ತು ನನ್ನ ಹುಟ್ಟಿದಬ್ಬ ಅಲ್ವಾ..... ಸರ್ಪ್ರೈಸ್ ಬೇರೆ ಇದೆ. ಹೇಗೆ ನಿದ್ದೆ ಬರುತ್ತೆ.! " ಎಂದಳು, ದರ್ಪಣ್ ನಸುನಕ್ಕು ಅವಳ ಕೆನ್ನೆ ಹಿಂಡಿದ. ಗಡಿಯಾರದ ಮುಳ್ಳು ಹನ್ನೆರಡು ಗಂಟೆ ತೋರಿಸಿದಾಗ, ಮಡಿಲಲ್ಲಿ ಮಲಗಿದ್ದ ಸುರಭಿಯನ್ನು ಎಬ್ಬಿಸಿ ಶುಭಾಶಯ ತಿಳಿಸಿದ. " you are my strength ದಡ್ಡು.... " ಎಂದಳು ಸುರಭಿ. " ಸರಿ..... ಇಷ್ಟು ದಿನ ನಿನ್ನನ್ನು ಪ್ರೀತಿಸಿದೆ, ಇನ್ನೂ ಈ ಪ್ರೀತಿಗೊಂದು ಅರ್ಥ ಕೊಡುವ ಸಮಯ. ಸುಬ್ಬಿ, ಯಾವತ್ತು ನೀನು ಅಳಬಾರದು, ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಬಾ ನಮ್ಮ ಬಾಳಿನ ಮೊದಲ ಪಯಣ ಈಗ ಶುರುಮಾಡೋಣ. " ಎಂದು ಹೇಳಿ ದರ್ಪಣ್ ಕಾರಿನಲ್ಲಿ ಕುಳಿತ. " ಇದೇನ ಸರ್ಪ್ರೈಸ್...... ಇಷ್ಟು ದೂರ ಬರುವುದು ವಿಶ್ ಮಾಡುವುದು. " ನಗುತ್ತಾ ಸುರಭಿ ಕಾರಲ್ಲಿ ಕುಳಿತಳು. ಸುರಭಿ ನಿದ್ರೆಗೆ ಜಾರಿದಳು. ದರ್ಪಣ್ ಕಾರು ಚಲಾಯಿಸಿದ. " ಗಂಟೆ ಆರು, ಸೊಂಬೇರಿ ಎದ್ದೇಳು!..... " ಸುರಭಿಯನ್ನು ಎಬ್ಬಿಸಿದ. ಮೈಮುರಿಯುತ್ತಾ ಕಣ್ಬಿಟ್ಟ ಹುಡುಗಿ ಎದುರು ನಿಂತಿದ್ದವರನ್ನು ನೋಡಿ ಓಡಿ ಹೋಗಿ ತಬ್ಬಿದಳು.

" ಅಮ್ಮಾ...... ಅಪ್ಪಾ...... " " ಸುರಭಿ...... ಹೇಗಿದ್ದೀಯ! " ಸುರಭಿಯ ತಾಯಿ ಮುದ್ದಾಡಿದರು. " ಅದೇನು ಅಂತ ಪ್ರಶ್ನೆ ಕೇಳುತ್ತೀಯೇ, ಅಳಿಯಂದ್ರು ಇರುವಾಗ ಚೆನ್ನಾಗಿಯೇ ಇರುತ್ತಾಳೆ." ಎಂದರು ಇವಳ ತಂದೆ.


ದರ್ಪಣ್‌ನನ್ನು ಪ್ರೀತಿಸುವ ವಿಚಾರವನ್ನು ಸುರಭಿ ಮನೆಯಲ್ಲಿ ಹೇಳಿದಾಗ ಮೊದಲು ತಕರಾರು ಎತ್ತಿದ್ದೆ ಇವಳ ತಂದೆ. ಸುರಭಿ ಕಷ್ಟದಲ್ಲಿದ್ದಾಗ ಅವಳನ್ನು ನೋಡಿಕೊಂಡ ರೀತಿಯನ್ನು ಕಣ್ಣಾರೆ ನೋಡಿ, ದರ್ಪಣ್ ನಂತಹ ಹುಡುಗನನ್ನು ಸ್ವತಃ ನಾವೇ ಹುಡುಕ್ಕಿದ್ದರು ಸಿಗುತ್ತಿರಲಿಲ್ಲ ಎಂದುಕೊಂಡು, ಹಿಂದೆ ಆಡಿದ್ದ ಮಾತುಗಳಿಗೆ ಪಶ್ಚತಾಪ ಪಟ್ಟಿದ್ದರು. ದರ್ಪಣ್ ಮೇಲೆ ಗೌರವ, ಪ್ರೀತಿ, ಅಭಿಮಾನ ಹೆಚ್ಚಾಗಿತ್ತು. " ಅಪ್ಪ ಅಮ್ಮ ನೀವಿಬ್ಬರು ಇಲ್ಲಿ ಏನು ಮಾಡ್ತಾ ಇದ್ದೀರಿ.... " " ಇವತ್ತು ನಿನ್ನ ಹುಟ್ಟಿದ ದಿನ ಅಲ್ವೇನೆ! ಹಾಗಾಗಿ ಅಳಿಯಂದ್ರು ಎಲ್ಲರನ್ನೂ ಒಟ್ಟು ಸೇರಿಸಿದ್ದಾರೆ. ನಿನ್ನ ಅತ್ತೆಯೂ ಇನ್ನೇನು ಬರ್ತಾರೆ. " ಸುರಭಿಯ ತಾಯಿ ಗಿರಿಜರವರು ಹೇಳಿದರು. " ಹೊ ಹೊ.... ಇದಾ ವಿಚಾರ! ದಡ್ಡು.... ಇದೇನ ನಿನ್ನ ಸರ್ಪ್ರೈಸ್.... " ಖುಷಿಯಲ್ಲಿ ಕುಣಿದಾಡಿದಳು ಸುರಭಿ. " ಸರಿ ಬನ್ನಿ ..... ಎಲ್ಲರು.... " ಎಂದು ದರ್ಪಣ್ ಕಾರಿನ ಬಳಿ ಹೊರಟ. ಸುರಭಿ ತನ್ನ ತಂದೆ ತಾಯಿಯ ಜೊತೆ ಮಾತನಾಡುತ್ತಾ ಖುಷಿಯಲ್ಲಿದ್ದಳು. ಸುರಭಿ‌ ಮರಳಿ ಮಗುವಾಗಿದ್ದಳು, ದರ್ಪಣ್ ಕಾರನ್ನು ಒಂದು ಆಶ್ರಮದ ಎದುರು ನಿಲ್ಲಿಸಿದ. ಎಲ್ಲರು ಕೆಳಗಿಳಿದರು....

" ಏನಪ್ಪಾ ದರ್ಪಣ್, ದೇವಸ್ಥಾನಕ್ಕೆ ಎಂದು ಹೇಳಿ ಇಲ್ಲಿಗೆ ಕರೆದುಕೊಂಡು ಬಂದಿದ್ದೀಯ! " ಗಿರಿಜಾರವರ ಪ್ರಶ್ನೆ.

"ಅತ್ತೆ ಇದು ಕೂಡ ದೇವಸ್ಥಾನನೆ ಅಲ್ವಾ.... " ನಗುಮೊಗದಿಂದ ಉತ್ತರಿಸಿದ. ಸುರಭಿ ಮೌನವಾಗಿ ಎದುರಿದ್ದ ಆಶ್ರಮವನ್ನು ನೋಡುತ್ತ ನಿಂತಳು. ದರ್ಪಣ್ ಸುರಭಿಯ ಕೈಹಿಡಿದು ಒಳ ಕರೆದುಕೊಂಡು ಹೊರಟ.

" ದಡ್ಡು...... "

" ಉಶ್... "

ಎದುರು ದರ್ಪಣ್ ರವರ ತಾಯಿ ನಿಂತಿದ್ದರು, ಸುರಭಿಯನ್ನು ತಬ್ಬಿಕೊಂಡು ಅವಳಿಗೆ ಶುಭಾಶಯ ತಿಳಿಸಿದರು. ಇವರಿಬ್ಬರನ್ನು ನೋಡುತ್ತಿದ್ದ ಸುರಭಿಯ ಹೆತ್ತವರು ಭಾವುಕರಾಗಿದ್ದರು. " ಅತ್ತೆ ನೀವು ಇಲ್ಲಿ..... " " ಹು..... ನನಗೂ ನಿನಗೂ ಇದ್ದ ಕೊರತೆಗೆ ಅಂತ್ಯ ಇಂದು. " ಎಂದರು ದರ್ಪಣ್‌ನ ತಾಯಿ. ಅವರ ಮಾತನ್ನು ಎರಡು ಮೂರು ಬಾರಿ ಗಮನಿಸಿದಳು, ಸುರಭಿಯ ಮನಸ್ಸಿಗೆ ತಕ್ಷಣ ಹೊಳೆಯಿತು, ಕಣ್ಣೀರು ಉಕ್ಕಿತು, ದರ್ಪಣ್‌ನನ್ನು ಬಿಗಿಯಾಗಿ ಹಿಡಿದಳು.

" ದಡ್ಡು ನಿಜನಾ... ಇದೇನ ಸರ್ಪ್ರೈಸ್.... ನನಗೆ ಗೊತ್ತಾಯ್ತು...... " ಎಂದಳು. " ಸುಬ್ಬಿ, ಇವತ್ತು ಎರಡು ಮಕ್ಕಳಿಗೆ, ನಾವಿಬ್ಬರು ತಂದೆ-ತಾಯಿ ಆಗುತ್ತಿದ್ದೀವಿ. " ಎಂದನು ದರ್ಪಣ್. ಸುರಭಿಯ ಖುಷಿಗೆ ಪಾರವೇ ಇರಿಲಿಲ್ಲ. ಎಲ್ಲರು ಆಶ್ರಮದ ಆಫೀಸಿನ ಒಳ ಹೋದರು. " ತಂದೆ, ತಾಯಿ‌ ಇಬ್ಬರು ಇಲ್ಲಿ ಬಂದು ಕುಳಿತುಕೊಳ್ಳಿ, ದತ್ತು ಸ್ವೀಕಾರಕ್ಕೆ ಸಹಿ ಮಾಡಬೇಕು... " ಎಂದರು ಸರೋಜಿನಿ ರವರು ಆಶ್ರಮದ ಮುಖ್ಯಸ್ಥರು. ಸುರಭಿ ಹಾಗೂ ದರ್ಪಣ್ ಕುಳಿತುಕೊಂಡರು, ಸುರಭಿ ನಡುಗುತ್ತಲೇ ಸಹಿ ಮಾಡಿದಳು. ದರ್ಪಣ್‌ನ ತಾಯಿ, ಸುರಭಿಯ ಮಡಿಲಿಗೆ ಅವಳ ಮಗುವನ್ನು ಕೂರಿಸಿದರು, ಒಂದು ವರ್ಷದ ಹೆಣ್ಣು ಮಗು ಕಿಲಕಿಲ ನಗುತ್ತಾ ಅವಳನ್ನು ತಬ್ಬಿತ್ತು. ಸುರಭಿಯ ಮಮತೆಯ ಕಟ್ಟೆ ಹೊಡೆದು ಬಿಕ್ಕಳಿಸಿದಳು. " ನನ್ನ ಮಗು ನನ್ನ‌ ಮಗು " ಎನ್ನುತ್ತಾ ಮುತ್ತಿನ ಮಳೆಗೈದಳು. ಮತ್ತೊಂದು ಆರು ವರ್ಷದ ಚಿನಕುರಳಿ ಗಂಡು ಮಗು ಎಲ್ಲರನ್ನು ತಳ್ಳಿಕೊಂಡು ಒಳ ಬಂದಿತು. " ಇಲ್ಲಿ ಎಷ್ಟೊಂದು ಜನ ಇದ್ದೀರಲ್ಲ ಇರದರಲ್ಲಿ ನನ್ನ ಅಮ್ಮ ಯಾರು? ಸ್ವಲ್ಪ ನನಗೆ ಪರಿಚಯ ಮಾಡಿಕೊಡಿ " ಎಂದಿತು, ಇವನ ಮಾತಿಗೆ ಎಲ್ಲರು ನಕ್ಕು, ಸುರಭಿಯ ಕಡೆಗೆ ತೋರಿಸಿದರು. ಅವಳ ಬಳಿಗೆ ಹೋದ ಹುಡುಗ. " ಹೊ ನೀವೇನ ನನ್ನ ಅಮ್ಮಾ...... ಇಷ್ಟ ವರ್ಷ ಕಾಯುತ್ತಿದ್ದೆ ನೀವು ಬಂದು‌ ಕರೆದುಕೊಂಡು ಹೋಗ್ತೀರ ಎಂದು. ಯಾಕೆ ಬರಲಿಲ್ಲ.... ಹೋ ಇಷ್ಟು ವರ್ಷ ನನ್ನನ್ನೇ ಹುಡುಕುತ್ತಿದ್ರಾ, ಯಾಕೆ ಅಳ್ತಾ ಇದ್ದೀರ? ನಾನು ಸಿಕ್ಕಿದ್ನಲ್ಲಾ..... " ಎಂದು ತಬ್ಬಿಕೊಂಡ. ಇವನ ಮುಗ್ಧ ಮಾತಿಗೆ ಏನು ಹೇಳಬೇಕೆಂದೇ ತಿಳಿಯದೆ ಸುರಭಿ ಮೂಕಳಾಗಿದ್ದಳು.

" ಇವನು ಮಹಾನ್ ಘಾಟಿ ಹುಡುಗ, ಪ್ರತಿದಿನ ನಿನ್ನಮ್ಮ ಬರ್ತಾರೆ ಎಂದು ನಂಬಿಸಿ ಸಮಧಾನ ಮಾಡುತ್ತಿದ್ವಿ. ಅದಕ್ಕೆ ಹೀಗೆ ಮಾತನಾಡುತ್ತಿದ್ದಾನೆ. " ಎಂದರು ಸರೋಜಿನಿ ರವರು.


ಆಶ್ರಮದಿಂದ, ಮನೆಗೆ ಹೊರಟರು. ಮನೆಗೆ ಮಗುವನ್ನು ಕರೆದುಕೊಂಡು ಬಂದ ಮಗ ಸೊಸೆಗೆ ದೃಷ್ಟಿ ತೆಗೆದು ಒಳ ಬರಮಾಡಿಕೊಂಡರು. ಸುರಭಿ ತನ್ನ ಬಳಿ ಇರುವ ಇಬ್ಬರು ಮಕ್ಕಳನ್ನು ಮುದ್ದಾಡಿ, ಮಾತಾನಾಡಿಸುವುದರಲ್ಲೇ ಮುಳುಗಿ ಹೋಗಿದ್ದಳು. ಹೆಣ್ಣು ಮಗುವಿಗೆ, ಖುಷಿ ಎಂದು, ಗಂಡು‌ ಮಗನಿಗೆ, ಅಮರ್ ಎಂದು ಹೆಸರಿಟ್ಟಳು ಸುರಭಿ. ಅಮರ್ ಯಾವಾಗಲು " ಅಮ್ಮಾ ಅಮ್ಮಾ " ಎಂದು ಸುರಭಿಯ ಹಿಂದ್ ಹಿಂದೆ ಓಡಾಡುತ್ತಿದ್ದ. ನಿಜಕ್ಕು ಇವಳೆ ನನ್ನಮ್ಮ ಎಂದು ನಂಬಿಬಿಟ್ಟ. " ಸುಬ್ಬಿ..... ಹೇಗಿತ್ತು ಸರ್ಪ್ರೈಸ್... ಇನ್ನು ಯಾರು ಕೂಡ ನಮಗೆ ಏನು ಹೇಳುವುದಿಲ್ಲ. ನೀನು ಯಾವಾಗಲೂ ಖುಷಿ ಖುಷಿಯಾಗಿರಬೇಕು. ಒಂದಲ್ಲಾ ಇಬ್ಬರು ಮಕ್ಕಳು ನಮಗೀಗ... " ಎಂದ ದರ್ಪಣ್. " ದಡ್ಡು..... ಏಳೇಳು ಜನ್ಮಕ್ಕೂ ಮರೆಯಲಾಗದ ಉಡುಗೊರೆ ಕೊಟ್ಟೆ. ಯಾವ ಪ್ರೇಮಿಯು ಇಂತಹ ಉಡುಗೊರೆ ಕೊಟ್ಟೀರಲು ಸಾಧ್ಯವಿಲ್ಲ. ನಾ ಹುಟ್ಟಿದ ದಿನವೇ ನನಗೆ ಅಮ್ಮನ ಪದವಿ. ಇಷ್ಟು ದೊಡ್ಡ ಜವಬ್ದಾರಿಯುತ ಉಡುಗೊರೆ ಕೊಡುತ್ತೀಯ ಎಂದು, ಊಹೆ ಕೂಡ ಮಾಡಿರಲಿಲ್ಲ ನಾನು. the best birthday ....... ಐ ಲವ್ ಯು ದಡ್ಡು..... " ಎಂದಳು ಸುರಭಿ. " ಏನು!? ಇವತ್ತು ನಿಂದು ಬರ್ತಡೆನಾ! ಮತ್ತೆ ನನಗೆ ಹೇಳಲೇ ಇಲ್ಲ.... ಬಾ ಇಲ್ಲಿ" ಎಂದು ಕರೆದ ಅಮರ್. ಸುರಭಿ ಅವನನ್ನು ಎತ್ತಿಕೊಂಡಳು, ದರ್ಪಣ್ ಖುಷಿಯನ್ನು ಎತ್ತಿಕೊಂಡ. " ಹ್ಯಾಪಿ ಬರ್ತಡೆ ಟು ಯು ಅಮ್ಮ.... " ಎಂದು ಸುರಭಿಯ ಕೆನ್ನೆಗೆ ಮುತ್ತಿಕ್ಕಿ ತಬ್ಬಿಕೊಂಡ. " ಅಮ್ಮಾ.... ನಾನು ಯಾವಾಗ್ಲು ನಿನ್ ಜೊತೆಯಲ್ಲಿ ಇರ್ತೀನಿ. ಆ ಆಶ್ರಮಕ್ಕೆ ಬಿಡಬೇಡ, ಅಲ್ಲಿ ನನಗೊಬ್ಬನಿಗೆ ಬೇಜಾರು..... " ಎಂದ ಮುಗ್ಧವಾಗಿ. " ನಾನೇಕೆ ನಿನ್ನ‌ ದೂರ ಮಾಡಿಕೊಳ್ಳಲಿ! ನೀನು ಎಂದೆಂದಿಗೂ ಈ ಅಮ್ಮನ ಬಳಿಯೇ ಇರಬೇಕು, ನಾನು ಯಾವತ್ತು ನಿನ್ನನ್ನು ಬಿಟ್ಟು ಹೋಗೊಲ್ಲ. " ಎಂದಳು.


ಅಮರ್, ಸುರಭಿಯ ಹೆಗಲ ಮೇಲೆಯೇ ತಲೆ ಇಟ್ಟು ಮಲಗಿದ್ದ. ಸುರಭಿ ಅವನನ್ನು ಎತ್ತಿಕೊಂಡು ಹಾಗೆ ಕುಳಿತಳು, ದರ್ಪಣ್ ಸುರಭಿಯನ್ನು ನೋಡುತ್ತಲೇ ಇದ್ದ. ಅವಳ ಮನದಲ್ಲಿ ಕೂಡಿಟ್ಟಿದ್ದ ತಾಯ್ತನದ ಪ್ರೀತಿಯನ್ನು ಕಂಡು ಅವನ ಕಣ್ಣು ಒದ್ದೆಯಾದವು.


Rate this content
Log in

Similar kannada story from Drama