ಆ ಸಂಭ್ರಮದ ದಿನಗಳು ಇನ್ನೆಂದು…*
ಆ ಸಂಭ್ರಮದ ದಿನಗಳು ಇನ್ನೆಂದು…*
ನೋವು-ನಲಿವನ್ನು ಈ ಜೀವನ ಸಾಕಷ್ಟು ಕಂಡಿದೆ. ನೋವಲ್ಲಿ ಉಂಟಾದ ವೇದನೆ, ನಲಿವಲ್ಲಿ ಉಂಟಾದ ಸಂತಸಗಳು ಹೊಸದೊಂದು ಹಾದಿಗೆ ನಾಂದಿಯಾಗಿವೆ, ಇಲ್ಲ ಕಾಲದ ಲೀಲೆಯಲ್ಲಿ ಮರೆಯಾಗಿಹೋಗಿವೆ. ಆದರೂ ಇವುಗಳಲ್ಲಿ ಕೆಲವೊಂದನ್ನು ಮಾತ್ರ ಯಾಕೋ ಸದಾ ನೆನೆಯಬೇಕೆಂಬ ಬಯಕೆ.
ಕಾಲೇಜು ಜೀವನವೆಂದಮೇಲೆ ಅಲ್ಲಿ ಮೋಜು-ಮಸ್ತಿಗೇನು ಬರವೇ… ಗೆಳೆಯರೊಂದಿಗೆ ಸೇರಿ ಆಡುವ ಆಟ, ಜೊತೆಯಲ್ಲಿ ಕೂತು ಮಾಡುವ ಊಟ, ಕೆಲವೊಮ್ಮೆ ಸಿಟ್ಟು ಕೆಲವೊಮ್ಮೆ ಪೆಟ್ಟು ಹೀಗೆ ಕಾಲೇಜು ಕ್ಯಾಂಪಸ್‌ನ ಲೀಲೆಗಳಿಗೆ ಲೆಕ್ಕವಿಲ್ಲ. ಸಿಸಿ ಕ್ಯಾಮೆರಾದ ಎದುರು ಪೋಸ್ ಕೊಡುವುದೆಲ್ಲಾ ನಮ್ಮ ಸಾಮಾನ್ಯ ಚಟುವಟಿಕೆಗಳ ಭಾಗವೇ ಆಗಿತ್ತು.
ಇನ್ನು ಕಾಲೇಜ್ ಎಂದಕೂಡಲೇ ಅಧ್ಯಾಪಕರನ್ನು ನೆನೆಯದೇ ಇರಲು ಹೇಗೆ ಸಾಧ್ಯ. ಅವರ ಪ್ರೀತಿಯ ಮಾತುಗಳು, ಸರಳ ನಡತೆಗಳು ನನ್ನನ್ನು ತುಂಬಾನೇ ಪ್ರಭಾವಿಸಿವೆ. ಶಿಸ್ತು, ಧೈರ್ಯವನ್ನು ಮನದೊಳಗೆ ತುಂಬಿದ ಎನ್.ಸಿ. ಸಿ ಯನ್ನು ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಲ್ಲಿ ಸಿಗುತ್ತಿದ್ದ ಪನಿಷ್ಮೆಂಟ್ಗಳು, ಸುಡುಬಿಸಿಲಿನಲ್ಲಿ ಮಾಡುವ ಪರೇಡ್, ಸಂಜೆ ಸಿಗುತ್ತಿದ್ದ ಉಪಹಾರಗಳು ನೆನಪಾಗುತ್ತಿವೆ. ಇವೆಲ್ಲವನ್ನು ಒಮ್ಮೆ ನೆನೆದಾಗ ಆ ದಿನಗಳು ಎಷ್ಟು ಸುಂದರ, ಸುಮಧುರ ಎಂಬುದು ಅರಿವಾಗುತ್ತದೆ.
ನೆನಪುಗಳು ನಮ್ಮೊಳಗಿನ ಭಾವನೆಗಳ ಸಂಗಮ. ನೆನಪಿಸಿಕೊಳ್ಳುತ್ತಾ ಹೋದಂತೆ ರೋಮಾಂಚನವಾಗುತ್ತದೆ. ಅದೇ ದಿನಗಳು ಕಣ್ಣ ಮುಂದೆ ಬಂದಂತೆ ಭಾಸವಾಗುತ್ತದೆ. ನೆನೆದಷ್ಟು ಖುಷಿ ಕೊಡುವ, ಸಂತಸ ಉಣಬಡಿಸುವ ಈ ನೆನಪುಗಳು ಅದೆಷ್ಟು ಅಮೂಲ್ಯ ಅಲ್ಲವೇ…ದೇವರೇ, ಇನ್ನಾದರೂ ಈ ಸಂದಿಗ್ಧ ಪರಿಸ್ಥಿತಿಯಿಂದ ಪಾರುಮಾಡಿ ಸುಸ್ಥಿತಿಯನ್ನು ಮರುಕಳಿಸುವಂತೆ ಮಾಡು.
