ರಕ್ತಸಿಕ್ತ ಹೃದಯದ ಚೂರುಗಳು
ರಕ್ತಸಿಕ್ತ ಹೃದಯದ ಚೂರುಗಳು
ಮೋಹವೆಂಬುದು ಮಾಯೆ
ದ್ರೋಹವೆಂಬುದು ಛಾಯೆ
ಮಾಯೆ ಮೋಡಿ ಮಾಡಲು
ಛಾಯೆ ಎಂದಿಗೂ ಕಾಣಿಸದು!!
ಕಣ್ಣಲೇ ಹೃದಯ ದೋಚುವ
ಮಾಯಾಂಗನೇ ಹೇಳು ನೀ
ದೋಚಿ ನನ್ನೆದೆಯೊಳಗೆ ಪ್ರವೇಶ
ಪಡೆದೆಯೋ ನೀ ಮೋಹನ!!
ದೋಚಿದ ಹೃದಯವ ಆಡಿಸಿ
ಕಾಡಿಸಿ ಬಳಸಿ ನೋಯಿಸಿ
ಎಸೆಯುವುದೇ ನಿನ್ನ ಮೋಜಿನ
ಬಚ್ಚಿಟ್ಟ ಮೋಹದ ರಹಸ್ಯವೇನು?
ಕನಸಿನ ತೋಟದಲಿ ಹೂಗಳನೆಲ್ಲ
ಕಿತ್ತುಹಾಕಿ ಮುಳ್ಳನು ಬಿಟ್ಟು
ಹೋಗುವುದೇ ನಿನ್ನ ಮುಖ್ಯ
ಕರ್ತವ್ಯದ ಶ್ರೇಷ್ಠ ಕಾಯಕವೇನು?
ಮಾಯೆಯಿಂದ ಕಾರ್ಮೋಡ ಸರಿದು
ಬೆಳಕು ಹರಿಯಲು ಹಾಸಿದೆ
ಒಡಲು ತುಂಬಿದ ರಕ್ತಸಿಕ್ತ
ಹೃದಯದ ಸಾವಿರ ಚೂರುಗಳು!!