ಮುಖವಾಡ
ಮುಖವಾಡ
ನಗಲೇ ಬೇಕು ಸುಮ್ಮನಾದ್ರೂ
ಗೊತ್ತುಗುರಿಯು ಇಲ್ಲದಾಗ್ಲೂ..|
ನಗಲೂ ಶ್ರಮವಿದೆಯಾದ್ರೂ
ಬಚ್ಚಿಡಬೇಕು ನೋವನ್ನು..
ಅಲಂಕಾರದೊಳಗಿನ
ಮುರಿದ ಚೋಪಡಿಯಲಿ ||
ನಗುವ ಬೆಲೆಗಳ ಭೂತಗಳು
ಸಹಸ್ರತುದಿಗಳ ಚುಚ್ಚು ಸಿಡಿಮದ್ದುಗಳು|
ಕಲುಷಿತವಾದ ಜಲದೇವತೆಗಳು
ಗಾಳಿಯ ವಿಷಸರ್ಪಗಳು ||
ಹಾಹಾಕಾರದೊಳು ಪ್ರತಿಭಟನೆಗಳು
ಅಣಬೆಗಳಂತೆ ಅಲ್ಲಲ್ಲಿ |
ಭರವಸೆ ಮುಖವಾಡ ಹುಸಿಮಾತುಗಳು
ನಿರ್ಧರಿಸಿರುವ ಕೇರಿಗಳಲ್ಲಿ ||
ಕಾಲು ಮುರಿದ ಕೌಶಲವು
ಖಾಸಗಿವಲಯದಲ್ಲಾಕಳಿಸುತ್ತಿರಲು |
ರಾಷ್ಟಿಯತೆಯ ಮುಖವಾಡ
ಮನುನಿರ್ಧಾರ ಉರಿಯುತ್ತಿರಲು ||
ಶ್ರೀಮಂತಿಕೆ ಎಂಬ ಬಿಂಬ
ನೋವಮೇಲೆ ನಲಿವ ಹೊದಿಕೆ |
ಬೂಟುಗಾಲ ಗಟ್ಟಿಕಂಬ
ಗುಲಾಮಗಿರಿಯ ಬಳ್ಳಿ ಹೊದಿಕೆ ||
ರಸ್ತೆ ಬದಿಯ ಕಂದನಳಲು
ಅನ್ನಕ್ಕಾಗಿ ನಿರೀಕ್ಷೆಯೊಡಲು |
ಶಕ್ತಿಯಿಲ್ಲದಿದ್ದರೂನೂ
ಬೆನ್ನುಬಾಗುವಷ್ಟು ನೋವು ||
ಊರ ತುಂಬಾ ಹಬ್ಬದಬ್ಬರ
ಗಾಯದೊಳಗಿನ ಹಣದುಬ್ಬರ |
ಬಡಕಲಮ್ಮನ ದೇಹಕ್ಕೊಂದು
ಶ್ರೀಮಂತಿಕೆಯ ಸೀರೆಯಬ್ಬರ ||
ಕಾಂಕ್ರೀಟು ಕಾಡಿನೊಳಗೆ
ಕೇಳದಂತ ಗ್ರಾಮ್ಯಗಾನ |
ಹುಸಿಧರ್ಮದಬ್ಬರದಲೀ
ಬಡಕಲಾದ ಮನುಜಗಾನ ||
