ಹುಚ್ಚನಾಗಿದ್ದೇನೆ
ಹುಚ್ಚನಾಗಿದ್ದೇನೆ


ಕಾರ್ಪಣ್ಯ ಕರಗಿಸಿ ಸ್ವರ್ಗವನು ಸೃಷ್ಟಿಸುವೆನೆಂದು
ನೋವಿಲ್ಲದ ವೈಭವದ ಬದುಕು ಅರಳುವುದೆಂದು
ಗಂಟೆಗಟ್ಟಲೆ ಗರ್ಜನೆಯ ಭಾಷಣದ ಮಳೆ ಸುರಿಸಿ
ಹೊಸ ಬದುಕಿನ ಹಾದಿಯ ಆಸೆತೋರಿ
ಗುಡುಗಿದ ನಾಯಕನ ನಿಜಗುಣವ ಕಂಡು ಬೆಚ್ಚಿ ನಡುಗುತ್ತಿದ್ದೇನೆ..
ಜಾತಿ, ಧರ್ಮಗಳ ಸಂಕೋಲೆಯನು ನಿಬಂಧಿಸುವೆನು
ಮೌಢ್ಯದ ಗೋಡೆಯನು ಒದ್ದೋಡಿಸುವೆನು
ಸುಭದ್ರ ನಾಡು ಎಲ್ಲರಿಗಾಗಿ ಎಂದು
ಆಶ್ವಾಸನೆಗಳ ವಚನಕೊಟ್ಟು ಮೈಮರೆತ ದ್ರೋಹಿಯ ಕಂಡು
ಮನದ ನೇತ್ರಾಗ್ನಿ ಉರಿದು ಕವನಾಗಿ ನರಳುತ್ತಿದ್ದೇನೆ..
ಮಾತು ಮಾತಿಗೂ ಸಂಸ್ಕಾರದ ಉಪದೇಶ ಊದಿದವನು
ಸಚ್ಚರಿತ ಸಂದೇಶಗಳು ಉಸಿರಾಗಿಸಿ ಎಂದವನು
ಲೆಜ್ಜೆಗೆಟ್ಟ ಮಾತುಗಳನಿಂದು ಬಾಯ್ತುಂಬ ಹರಿಬಿಡುತಿರಲು
ಊರೆಲ್ಲ ಮತಿಗೆಟ್ಟವರೆ ಮಿತಿ ಮೀರಿ ಕುಣಿಯುತಿರಲು
ಬಣ್ಣದ ಮಾತಿಗೆ ಬೆರಗಾಗಿ ಮತಹಾಕಿದ ನಾನಿಂದು ಹುಚ್ಚನಾಗಿದ್ದೇನೆ..
ತ್ಯಾಗ ಬಲಿದಾನ ಐಕ್ಯತೆಯ ಮಂತ್ರ ಪಠಿಸಿದವನು
ಸರಳ ಜೀವನವೇ ಸಾಕ್ಷಾತ್ಕಾರವೆಂದವನು
ನಾಡ ಋಣ ತೀರಿಸಲು ಕರೆ ನೀಡಿ
ಯೋಗಿಯಂತೆ ಬಿಂಬಿಸಿಕೊಂಡವನು
ಬಡವರ ಅನ್ನಕ್ಕೆ ಕನ್ನ ಹಾಕಿರಲು
ಜನರ ತೆರಿಗೆ ಭಕ್ಷಣೆ ಮಾಡುತ ಅಟ್ಟಹಾಸ ಮೆರೆತಿರಲು
ನಾನು ಮಂಗನಾಗಿದ್ದೇನೆ ..
ಅಸುರನಿಗೆ ಜಯಕಾರ ಹಾಕಿದ ತಪ್ಪಿಗೆ
ಮಾಯದ ಮಾತುಗಳಿಗೆ ಮರುಳಾದ ಚಿತ್ತಕ್ಷೋಭೆಗೆ
ಸುಯೋಗದ ನಾಡು ಕನಸು ಕಂಡ ಮೂರ್ಖತೆಗೆ
ಗಾಂಪಾರನ ಕೋಟೆಯೊಳಗೆ ಹುಚ್ಚನಾಗಿ ರೋದಿಸುತ್ತಿದ್ದೇನೆ..
ಬೆಚ್ಚಿ ಬೆವರುತ್ತಾ ಮೋಸದ ಜ್ವಾಲಾಮುಖಿಗೆ ಬಿದ್ದಿದ್ದೇನೆ..
ಹರಿವ ಕಣ್ಣೀರಿಗೆ ಮುಕ್ತಿ ದೊರೆಯುವುದೆ?
ಜನತಂತ್ರ ಉಸಿರಾಡುವುದೆ?