ಒಲವಿನ ಕಂತುಗಳು
ಒಲವಿನ ಕಂತುಗಳು
ಇಂತಿಷ್ಟು ಅಂತಾ ಕಂತಿನಲ್ಲಾದರೂ
ಒಂದಿಷ್ಟು ಪ್ರೀತೀನ ನನಗೇಂತ
ಬಿಟ್ಟು ಹೋಗ್ಬೇಕಿತ್ತು ನೀನು..
ಅಖಾಡಕ್ಕಿಳಿದ ಮೇಲೆ ಇಕ್ಕಟ್ಟಿಗೆ
ಸಿಲುಕಿದನುಭವ ನಿನಗಷ್ಟೇ ತಾನೆ..
ನನ್ನ ಬಗ್ಗೆ ತಾತ್ಸಾರವಷ್ಟೆ..
ಮಕಾಡೆ ಮಲಗಿದ್ದ ಆಸೆಗಳಿಗೆ
ಸಹಕಾರವಿತ್ತು ಎಬ್ಬಿಸಿದ್ದೂ ಅಲ್ಲದೇ
ಕಡೆಗೆ ಕೈಕೊಟ್ಟು ಹೋದೆಯಲ್ಲಾ..
ಜರತಾರೀ ಕೇಳಲಿಲ್ಲ, ಬಂಗಾರ ಬೇಕಿಲ್ಲ
ಸಿಂಗಾರವೊಂದೂ ನಾ ಬಯಸಲಿಲ್ಲ
ಇದ್ದಂತೆ ನೀ ಚೆಲುವೆಯೆಂದೆಯಲ್ಲಾ..
ರಾಧೆ ಒಲವಿಗೂ ನನ್ನ ಪ್ರೇಮಕೂ
ಸರಿಸಮವಿತ್ತೆಂದು ನೀ ಕೃಷ್ಣನಾಗಿದ್ದೆ..
ಅಂತೆಯೇ ದೂರ ಸರಿದದ್ದಾ..?
ಕಂಬಗಳಿಗೂ ಗೊತ್ತು ನಮ್ಮ ಮೌನ
ಇಂಬುಗೊಟ್ಟಾವು ಹಗಳಿರುಳು ನನಗೆ
ಅಂಬಿಲ್ಲದೇ ಇರಿದಷ್ಟೇ ನೋವೆನಗೆ
ಇನ್ನೊಮ್ಮೆ ಮರೆತಾದರೂ ಸಿಕ್ಕಾಗ
ನೆನಪಿರಲಿ ನಮ್ಮಿಬ್ಬರ ಅಂತರಂಗದ
ಸುಪ್ತಮಾತುಗಳ ಸುಂದರ ಕವಿತೆ...

