ಮಂಜಿನ ಹನಿಯೊಂದಿಗೆ ಮುತ್ತಿನ ಬಾಲೆ
ಮಂಜಿನ ಹನಿಯೊಂದಿಗೆ ಮುತ್ತಿನ ಬಾಲೆ
ಚುಮು ಚುಮು ಚಳಿಯಲಿ
ಭಾಸ್ಕರನ ಎಳೆಬಿಸಿಲ ಸ್ಪರ್ಶವು
ಹಿತವೆನಿಸಿ ಮಂಜಿನ ಹನಿಗೆ
ಬಿದ್ದಿರುವ ಮುತ್ತಿನ ಬಾಲೆ ನೀನು!"
ಮುಸ್ಸಂಜೆಯಲಿ ನಡೆಯುವಾಗ
ಸೆಳೆಯುವ ಹೂಗಳ ಘಮಲಿಗೆ
ಸುಮ್ಮನೆ ಕಳೆದುಹೋಗುವ
ಬಾಳ ಹೊಳಪಿನ ನಕ್ಷತ್ರ ನೀನು!!
ನೀನಿಡುವ ಪ್ರತಿ ಹೆಜ್ಜೆಯ
ಗೆಜ್ಜೆ ಸಪ್ಪಳದ ದನಿಯಲ್ಲಿ
ನನ್ನೇ ಮರೆತು ನಿನ್ನೆದೆಯಲ್ಲಿ
ಬೆರೆತುಹೋದ ಜೊತೆಗಾರ ನಾನು!!
ನನ್ನ ಪ್ರತಿ ಕಣ್ಣೀರಿನ ಹನಿಯು
ಒಂದೊಂದಾಗಿ ಬೀಳುತಿರಲು
ನಸುನಗೆಯಲ್ಲೂ ಮೆಲ್ಲನೆ ಇಣುಕಿ
ನೋಡುವ ಕಥೆಗಾರ ನಾನು!!
ಉಸಿರಾಡುವ ಗಾಳಿಯಲ್ಲಿ
ನರನಾಡಿಗಳಲಿ ಹರಿಯುತ
ಬೆರೆತು ನನ್ನ ಉಸಿರಾಗಿರುವ
ಜೀವದ ಗೆಳತಿ ನೀನು!!
ತನುವಿಗೆ ತಂಪನ್ನು ನೀಡಿ
ಆಕರ್ಷಣೆಯ ಸೋಗಿನಲಿ
ಮನಕೆ ಆಹ್ಲಾದ ಕೊಡುವ
ತುಂತುರು ಮಳೆಹನಿ ನೀನು!!

