ಕುಡುಕ ಗಂಡ
ಕುಡುಕ ಗಂಡ


ಕುಡುಕ ಗಂಡ ಸಿಕ್ಕಾನಂತ ಅವ್ವ ಕಣ್ಣೀರಿಟ್ಟಳು
ಕುಡುಕನಾದರೇನು ಅವ್ವ ಅವ ನಂಗೆ ಒಪ್ಪುವ
ಬಿಸಿ ಮುದ್ದೆ ಬಾಯಿಗೆ ಇಡದೇ ಅವ ವುಂಣ್ಣೊಗಿಲ್ಲ
ದುಡಿವ ಮೈಗೆ ಬಿಸಿ ಎಣ್ಣೆ ಬೇಕಂತಾನ
ಕಳ್ಳನಲ್ಲ ಮಳ್ಳನಲ್ಲ ಕಲಿತ ಚಟ ಬಿಡಂಗಿಲ್ಲ
ಹೊತ್ತು ಹೋಗುವ ಮುನ್ನ ಮನಿಗೆ ಬಂದಾನ
ಬಂಗಲಿ ಇಲ್ಲ ಅಂದರು ಅಂಬಲಿಗೆ ಬಡವಿಲ್ಲ
ಹಬ್ಬ ಹರಿದಿನ ಹೆಂಡಾನ ಮರೀತಾನ
ದೊಡ್ಡ ದೊಡ್ಡ ಮನಿ ಕಟ್ಟಿಕೊಂಡ ಜನವ
ಕಂಡೀನಿ ನಾನು, ಅವರು ಬೀಗುತ ಕುಡಿತಾರ
ನನ್ನ ಗೌಡ ತೂಗುತ ಕುಡಿತಾನ, ಅಟೆ ಯಾ
ಅವ್ವ ನೀ ಬಿಟ್ಟು ಬಿಡು ಮಗಳ ಚಿಂತೀಯ
ಕುಡಿದರಾ ಕುಡಿಯಲಿ ಕಡಿವರೆಗೂ ಜೊತೆ ಇರಲಿ
ಜೋತು ಬಿದ್ದರೂ, ಚಾಚು ತಪ್ಪದೆ ಮಾಡುತಾನ
ಒಲ್ಲೆ ಎನ್ನದೆ ಮಲ್ಲಿ ಹೂವ ಮುಡಿಸ್ಯಾನೆ
ಪಾಲಿಗೆ ಬಂದದ್ದು ಬಿಡೆನು ನಾನು ಒದ್ದು
ಚಿಂತಿ ಯಾಕೆ ನನ್ನವ್ವ ,ಕೊಟ್ಟ ಹೆಣ್ಣು ಕುಲಕೆ ಹೊರಗೆ
ನನ್ನ ಅವನ ಒಲವು ಕಾಣೆ ಕೊನೆವರೆಗೆ