ದ್ವಂದ್ವ
ದ್ವಂದ್ವ
ಎಷ್ಟೋ ಸಲ ಅಂದುಕೊಂಡದ್ದಿದೆ
ಜೀವನ ಇಷ್ಟೇನಾ ?
ಆದರೆಷ್ಟೊ ಸಲ ಬದುಕಿನ ಕನಸ
ಕಟ್ಟಿಕೊಂಡೇ ಎದ್ದಿದ್ದೂ ಇದೆ..
ಆರೋಗ್ಯವೇ ಭಾಗ್ಯ ಎಂದುಕೊಂಡೇ
ದೇಹವೇ ನಶ್ವರ ಎಂಬ
ಸ್ಲೋಗನ್ನೂ ಹಾಡಿದ್ದಿದೆ
ತಡಕಾಡಿದ್ದಿದೆ ಹಣಕ್ಕಾಗಿ
ಸ್ವಲ್ಪ ಸ್ಟೇಟಸ್ಸುಗಾಗಿಯೂ
ಕೊರಗಿದ್ದೂ ಇದೆ
ಪಡೆದವುಗಳೆಲ್ಲವೂ
ಕರಗಿದಾಗ ಮರುಗಿದ್ದಿದೆ
ಅರ್ಥ ಮಾಡಿಕೊಳ್ಳಲು
ಅಪಾರ್ಥವಾಗಿಯೇ ಕಂಡದ್ದಿದೆ
ನಡುವೆ ಒಂದಷ್ಟು ಒಳ್ಳೆತನವ
ಕಂಡು ಹಿಗ್ಗಿದ್ದೂ ಇದೆ
ನಾಟಕರಂಗದ ಮಧ್ಯೆ
ಪಾತ್ರಗಳು ಅರ್ಥವಾಗದೆ
ದ್ವಂದ್ವವಾಗಿದ್ದೂ ಇದೆ
ಗಂಭೀರ ಮೌನಗಳ ಮಧ್ಯೆ
ಅರ್ಥವಿಲ್ಲದ ನಾಲಿಗೆಗಳ
ಕಂಡು ಹೌಹಾರಿದ್ದೂ ಇದೆ
ಬದುಕು ಹೀಗೆ ಎಂದು
ನಿರ್ಧರಿಸುವ ಕಾಲಕೆ
ಕಾಲ ಬದಲಾದದ್ದೂ ಇದೆ
ನನ್ನ ನನಗೇ ಅರ್ಥವಾಗದೆ
ಚಡಪಡಿಸಿದ್ದೂ ಇದೆ
