STORYMIRROR

Ranjitha Ranju

Tragedy Inspirational Children

3  

Ranjitha Ranju

Tragedy Inspirational Children

ಅಮ್ಮ ಎಂಬ ಅದ್ಭುತ !

ಅಮ್ಮ ಎಂಬ ಅದ್ಭುತ !

1 min
621

ಮೈನೆರೆದು ವರುಷ ಕಳೆದರೂ ಹುಡುಗರೊಂದಿಗೆ ಗೋಲಿ,ಚಿನ್ನಿ ಆಡುತ್ತಿದ್ದ ನನ್ನ ಕಪಿಚೇಷ್ಟೆಯ ಸಹಿಸಲಾಗದೆ ಪೊರಕೆ ಪೂಜೆ ಮಾಡಿ ಮತ್ತೆ ಮೀನು ಸಾರು ಮುದ್ದೆ ಬಡಿಸುತ್ತಿದ್ದ ನನ್ನಮ್ಮನ ಪ್ರೀತಿ ಆಕಾಶಕ್ಕೂ ಅಗಲದ್ದು!

ಇದ್ದೊಂದು ಚೆಂದದ ಸೀರೆ ಹರಿದು ರವಿಕೆ ಲಂಗ ಹೊಲಿಸಿದ್ದಳು ಕೋಲಾಟಕ್ಕೆಂದು ಪಾಪ,ಎಷ್ಟೋ ಬಾರಿ ನನ್ನ ಕುಣಿತ ನೋಡಲು ಬಾರದಿದ್ದರೂ ಬೆನ್ನುಲಾಬಾಗಿ ನಿಂತ ಅವಳ ಸ್ಫೂರ್ತಿ ಉಸಿರೆರೆವ ಗಾಳಿಗೂ ಮೀರಿದ್ದು!

ಮಾತು ಕಲಿಸಿದ್ದ ಮರೆತು ನಾಲಿಗೆ ಶಕ್ತಿ ಪ್ರದರ್ಶಿಸಿದ್ದೂ ಇದೆ ಅಂದು, ಸೋಮಾರಿಯಾಗಿ ಆ ಸಣಕಲು ಶರೀರಕ್ಕೆ ನೆರವಾಗದಿದ್ದರೂ ಸುಮ್ಮನಾಗುತ್ತಿದ್ದಳು ಇನ್ನೂ ಚಿಕ್ಕವಳೆಂದು,ಅವಳ ಮಾನವತೆ ತಿಳಿನೀರಿಗೂ ಪರಿಶುದ್ಧವಾದದ್ದು!


ನಗುತ್ತಾ ನಗಿಸುತ್ತಾ ದೇಹಿ ಎಂದವರಿಗೆ ಕೈತುಂಬಾ ಕೊಡುವ ದಾನಗುಣವ ಊರೇ ಹೊಗಳುತ್ತಿತ್ತು,ಮೆಲ್ಲಗೆ ನಮ್ಮ ಅಂಗಡಿಗೆ ಬಂದು ಚುಡಾಯಿಸುತ್ತಿದ್ದ ಹುಡುಗರ ಉಗಿದು ಅಟ್ಟುತ್ತಿದ್ದ ಆ ಕೋಪ ಉರಿವ ಅಗ್ನಿಗೆ ಸಮವಾಗಿತ್ತು!

ಕಾಯಿಲೆ ಇಡೀ ದೇಹವ ಸುಡುತ್ತಿದ್ದರೂ ನೋವ ನುಂಗಿದಳು,ನೋವಲ್ಲೇ ಹುಟ್ಟಿ, ನೋವಲ್ಲೇ ಬೆಳೆದು, ನೋವಲ್ಲೇ ಸತ್ತು ಬಾಲ್ಯದಲ್ಲೇ ನನಗೆ ಶಾಶ್ವತ ನೋವು ಕೊಟ್ಟು ಹೋದ ಅವಳ ತ್ಯಾಗ ಭೂಮಿತಾಯಿಗೂ ಮಿಗಿಲಾದದ್ದು !

ಇರಬೇಕಿತ್ತು ನನ್ನಮ್ಮ ನಾ ಸೋತಾಗ ಸಂತೈಸಲು,ಗೆದ್ದಾಗ ಹರ್ಷಿಸಲು ಈ ತಬ್ಬಲಿ ಕಂಗಳು ಇಂದಿಗೂ ಕಾಯುತಿದೆ ಸಿಕ್ಕರೆ ದುಃಖದ ಹನಿಗಳ ಜಾರಿಸಿ ನಿಟ್ಟುಸಿರ ಬಿಡಲೆಂದು ಅರಿವಿದ್ದರೂ ಆಕೆ ಮತ್ತೆಂದೂ ಬಾರಳೆಂದು!


Rate this content
Log in

Similar kannada poem from Tragedy