ಆಷಾಡದ ಮಳೆ
ಆಷಾಡದ ಮಳೆ
ಆಷಾಡದ ಮಳೆ ಸುರಿವಾಗ
ಆಚೆಮನೆಯ ತರುಣಿಯೊಬ್ಬಳು
ತವರಿಗೆ ಮಗುವ ಹೊತ್ತು ಬಂದಳು
ಮಳೆಯೊಳಗೆ ನೆನದು ಬರುವಾಗ
ಕಳೆಯಿಲ್ಲದೆ ಹೀನವಾಗಿರುವ ಮೊಗ
ಕಾಣಸಲಿಲ್ಲ ಅದಾರಿಗೂ ಮಳೆಯ ನಡುವೆ
ಬೇಸರದ ಮೊಗದ ಹಿಂದಿನ ಕಥೆಗಳು
ಮಳೆಯ ರಭಸದೊಳಗೆ ಕಳೆದು ಹೋಗಿವೆ
ಬಣ್ಣದ ಕನಸುಗಳು ಮಳೆಯೊಳಗೆ ಕಾಣೆಯಾಗಿವೆ
ಮಗುವಿನ ಅಳು ಮಳೆಯ ರಭಸದೊಳಗೆ ಸೇರಿಹೋಗಿದೆ
ಅವಳ ಅಕ್ಷಿಗಳಿಂದ ಬಂದ ಬಿಂದುಗಳು
ಮಳೆಯ ನೀರಿನೊಡನೆ ಬೆರೆತುಹೋಗಿವೆ
ಅವಳಿಗೆ ನಾನಿಟ್ಟ ಹೆಸರೇ ಆಷಾಡದ ಮಳೆ
ಮಗುವಿನ ಜೊತೆ ಮೌನವಾಗಿ ರೋದಿಸುವ ಸುಕೋಮಲೆ
ಆಷಾಡದ ಮಳೆಯಲಿ ಮಿಂದ ಸುಮಬಾಲೆ
ಬಂದವಳು ಹಾಗೆಯೇ ತವರಲ್ಲಿ ಸ್ಥಿತಳಾದಳು
ಆಷಾಡದ ಮಳೆಯೇ ಹಾಗೆಯೇ
ಮುಗಿಯದ ಮಹಾ ಕಾದಂಬರಿಯಂತೆ
ಬಗೆಹರಿಯದ ಮಹಾ ಸಮಸ್ಯೆಯಂತೆ
ಅರ್ಥವಾಗದ ಹೆಣ್ಣಿನ ಮನದ ಭಾವಗಳಂತೆ
ಎಂದಿಗೂ ನಿರ್ಲಿಪ್ತವಾಗಿರುವ ಸಂತನಂತೆ.
