ಶರಶಯ್ಯೆ
ಶರಶಯ್ಯೆ
ಮಂಚದ ಮೇಲೆ ಮಲಗಿಕೊಂಡು ಸೂರನ್ನು ದಿಟ್ಟಿಸುತ್ತಿದ್ದ ಎಪ್ಪತ್ತರ ಹರಯದ ಮಂಜಯ್ಯನವರ ಕಣ್ಣಂಚಿನಿಂದ ನೀರು ಜಿನುಗುತ್ತಿತ್ತು. ಈಗ ಆರು ತಿಂಗಳುಗಳಿಂದಲೂ ಅವರಿಗೆ ಮಲಗಿದ್ದಲ್ಲಿಯೇ ಮಲಗಿರಬೇಕಾಗಿರುವ ಪರಿಸ್ಠಿತಿ ಬಂದುಬಿಟ್ಟಿದೆ. ಮಲಗಿದ ಕಡೆಯೇ ಊಟ, ನಿದ್ರೆ,ಬೆಡ್ ಪ್ಯಾನ್,ಎಲ್ಲವೂ ನಡೆಯುತ್ತಿದೆ. ಇತ್ತೀಚೆಗೆ ಬೆಡ್ ಸೋರ್ ಬೇರೆ. . ಮನೆಯ ಯಜಮಾನ ಹಾಸಿಗೆ ಹಿಡಿದಾಗಿಲಿನಿಂದ ಹೆಂಡತಿ,ಮಗ, ಸೊಸೆ, ಮೊಮ್ಮಕ್ಕಳಾದಿಯಾಗಿ ಎಲ್ಲರೂ ಆ ಹಿರಿಯ ಜೀವದ ಸೇವೆಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಆದರೆ ಹೀಗೆ ಎಲ್ಲರಿಂದಲೂ ಸೇವೆಯನ್ನು ಪಡೆದುಕೊಳ್ಳುತ್ತಿರುವ ಮಂಜಯ್ಯ ನವರಿಗೆ ಬಹಳ ಮುಜುಗರವಾಗಿ, ಒಮ್ಮೊಮ್ಮೆ ತಮ್ಮಈ ಪರಿಸ್ಥಿತಿಗಾಗಿ ಒಬ್ಬರೇ ಕಣ್ಣೀರಿಡುತ್ತಿರುತ್ತಾರೆ.ಅವರ ದೇಹದಭಾಗಗಳು ನಿಶ್ಶಕ್ತಗೊಂಡಿವೆ.ಆದರೆ ಅವರ ಮನಸ್ಸು ಅನುಗಾಲವೂ ತಮ್ಮ ಈ ಅಸಹಾಯಕತೆಗಾಗಿ ಪರಿತಪಿಸುತ್ತಲೇ ಇರುತ್ತದೆ.
ಇಂದೇಕೋ ಅವರು ತುಂಬಾ ಖಿನ್ನರಾಗಿದ್ದಾರೆ.ತಮ್ಮ ಅಸಹಾಯಕ ಪರಿಸ್ಥಿತಿಯ ಬಗ್ಗೆ ಅವರೊಳಗೇ ಮನ ಮಂಥನ ನಡೆಯುತ್ತಿದೆ.
" ನಾನು ಈ ರೀತಿ ಹಾಸಿಗೆ ಹಿಡಿದು ಮಲಗಿ ಆರು ತಿಂಗಳುಗಳೇ ಕಳೆದು ಹೋಯಿತು,ಇನ್ನೂ ಎಷ್ಟುದಿನಗಳು ಈ ರೀತಿ ಜೀವಚ್ಚವದಂತೆ ಮಲಗಿರಬೇಕು? ಹೋ ದೇವರೆ, ಈ ಶರಶಯ್ಯೆಯ ಹಿಂಸೆ ಸಾಕಾಗಿದೆ,ನನಗೆ ಮುಕ್ತಿ ನೀಡು , ಮನೆಯವರೆಲ್ಲಾ ನನ್ನ ಸೇವೆಯನ್ನು ಅದೆಷ್ಟು ಶ್ರದ್ಧೆ ಭಕ್ತಿಗಳಿಂದ ಮಾಡುತ್ತಿದ್ದಾರೆ.ನಿಜಕ್ಕೂ ಅಂತಹ ಉತ್ತಮ ಸಂಸ್ಕಾರದ ಹೆಂಡತಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂನನಗೆ ದೊರಕಿರುವುದು ನನ್ನ ಪುಣ್ಯ,ಆದರೆ ನಾನು ಅವರಿಗಾಗಿ ಮಾಡಬೇಕಾದ ಕೆಲಸ ಬಾಕಿ ಉಳಿದಿದೆ. ಅವರು ನನಗಾಗಿ ಇನ್ನೂ ಎಷ್ಟು ಕಾಲ ಹೀಗೇ ಕಷ್ಟ ಪಡಬೇಕೋ ?ಪಾಪ, ಸ್ವಲ್ಪವೂ ಬೇಸರ ಪಟ್ಟುಕೊಳ್ಳದೇ ನನ್ನ ಎಲ್ಲಾ ಸೇವೆಗಳನ್ನೂ ಮಾಡುತ್ತಿದ್ದಾರೆ. ದೇವರೇ ಅವರೆಲ್ಲರನ್ನೂ ಚೆನ್ನಾಗಿ ಕಾಪಾಡು. ಇಷ್ಟು ದೊಡ್ಡ ಮನೆ, ಹತ್ತು ಎಕರೆಗಳಷ್ಟು ಹೊಲ ಗದ್ದೆ ತೋಟಗಳು, ತೋಟದ ಮನೆ,ಎಲ್ಲವೂ ನನಗೆ ನನ್ನ ಮಾವನವರು ತಮ್ಮ ಮಗಳ ಜೊತೆ ನೀಡಿದ ಬಳುವಳಿ.ನಾನು ಹುಟ್ಟಿದಾಗ ನಮ್ಮ ಅಪ್ಪನಿಗೆ ಕಡು ಬಡತನ, ಯಾವುದೋ ಒಂದು ಚಿಕ್ಕಬಾಡಿಗೆ ಮನೆಯಲ್ಲಿದುಕೊಂಡು, ಜ್ಯೋತಿಷ್ಯ ಹೇಳಿಕೊಂಡು ಪೌರೋಹಿತ್ಯ ಮಾಡಿಸುತ್ತಾ,ಬರುವ ಅಲ್ಪ ಸ್ವಲ್ಪಆದಾಯದಲ್ಲೇ , ಮೂರು ಜನ ಮಕ್ಕಳನ್ನು ಬಹಳ ಕಷ್ಟಪಟ್ಟು ಒಂದು ಹಂತಕ್ಕೆ ತಂದು ನಿಲ್ಲಿಸುವ ಹೊತ್ತಿಗೆ ಅವರು ತಮ್ಮ ಜೀವನದಿಂದ ನಿರ್ಗಮಿಸಿದ್ದರು.
ನನ್ನ ಅಣ್ಣಂದಿರಿಬ್ಬರೂ ಜೀವನಕ್ಕಾಗಿ ಪಟ್ಟಣ ದ ಕಡೆ ಮುಖ ಮಾಡಿದಾಗ, ನಾನು ನನ್ನ ತಾಯಿಯೊಂದಿಗೆ ಈ ಹಳ್ಳಿಯಲ್ಲೇ ಉಳಿಯಬೇಕಾಯಿತು. ನನ್ನ ತಾಯಿಯನ್ನು ಸುಖವಾಗಿ ನೋಡಿಕೊಳ್ಳಬೇಕೆಂದು ಫಣತೊಟ್ಟ ನಾನು, ಆ ಊರಿನ ಸಾಹುಕಾರರಾದ ಚನ್ನಪ್ಪಯ್ಯ ನವರ ಮನೆಯ ವ್ಯವಹಾರ ನೋಡಿಕೊಳ್ಳುವ ಮ್ಯಾನೆಜರ್ ಆಗಿ ಕೆಲಸಕ್ಕೆ ಸೇರಿ,ಅವರಿಂದ ಎಲ್ಲ ಕೆಲಸ ಕಲಿತು ಪಕ್ಕ ವ್ಯವಹಾರಸ್ಥನಾದೆ. ಅವರಿಗೆ ಎಷ್ಟು ಹತ್ತಿರವಾದೆನೆಂದರೆ, ಅವರು ನನ್ನನ್ನು ಸಂಪೂರ್ಣವಾಗಿ ನಂಬಿ, ಅವರ ಎಲ್ಲಾ ವ್ಯವಹಾರಗಳ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಮೇಲೇ ಹೊರಿಸಿಬಿಟ್ಟಿದ್ದರು. ಅವರಿಗೊಬ್ಬ ಮಗಳು,ಹೆಸರು ಸುಗುಣಾ.ನೋಡಲು ಲಕ್ಷಣವಾಗಿದ್ದರೂ ,ತುಂಬಾ ಕಪ್ಪು,ವಿದ್ಯೆ ಹತ್ತಲಿಲ್ಲ, ತಾಯಿಯಿಲ್ಲದ ಅವಳು,ಮನೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ಆದರೆ ಅವಳನ್ನು ಮದುವೆಯಾಗಲು ಯಾರೂ ಮುಂದೆ ಬರದಿದ್ಡಾಗ, ಸಾಹುಕಾರರು ಒಂದು ದಿನ ನನ್ನನ್ನು ಕರೆದು ,ಅವರ ಮಗಳು ಸುಗುಣಳನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಾಗ ಅವರೆಗೆ ಎದುರಾಡುವ ಧೈರ್ಯವಾಗದೆ, ಮನಸ್ಸಿಲ್ಲದ ಮನಸ್ಸಿನಿಂದ ನನ್ನ ಒಪ್ಪಿಗೆ ಯನ್ನು ಕೊಟ್ಟೆ,ಮನೆಗೆ ಬಂದು ಅಮ್ಮನಲ್ಲಿ ವಿಷಯ ಹೇಳಿದಾಗ, ಅಮ್ಮನಿಗೆ ಸ್ವಲ್ಪ ಬೇಸರವೇ ಆಯಿತು. ಅಮ್ಮನಿಗೂ ಸಹ ಇಬ್ಬಗೆಯೆ ಹೊಯ್ದಾಟವೇ.
’’ನೋಡಲು ತುಂಬಾ ಸುಂದರವಾಗಿದ್ದ ತನ್ನ ಮಗನಿಗೆ ಕೃಷ್ಣ ವರ್ಣದ ಹುಡುಗಿಯ ಜೋಡಿ ಏನು ಚಂದ ?”ಎಂಬಮಾತೃ ಸಹಜ ಮೋಹಒಂದು ಕಡೆ,"ಸಾಹುಕಾರರು ತಮ್ಮ ಸಿರಿವಂತಿಕೆಯಿಂದ ತನ್ನ ಮಗನನ್ನು ತನ್ನಿಂದ ದೂ ರ ಮಾಡಿಬಿಟ್ಟರೆ?" ಎಂಬ ಭಯ ಮತ್ತೊಂದುಕಡೆ , ಅಮ್ಮನನ್ನು ಕಾಡಿತು. ಕಡೆಗೆ,ತಮ್ಮ ಬಡತನದ ಕಾಲದಲ್ಲಿ ಕೆಲಸ ಕೊಟ್ಟು ಸಹಾಯ ಮಾಡಿದ ಸಾಹುಕಾರರ ಮಗಳು ತಮ್ಮ ಮನೆಗೆ ಲಕ್ಷ್ಮಿಯಾಗಿ ಬರುತ್ತಾಳಲ್ಲ ಎಂಬ ಸಮಾಧಾನದಿಂದ ಅಮ್ಮನೂ ನನ್ನ ಮದುವೆಗೆ ಒಪ್ಪಿಗೆ ನೀಡಿದ್ದಳು." ಋಣಾನುಬಂಧರೂಪೇಣ ಪಶು ಪತ್ನಿ ಸುತಾಲಯಃ"ಎಂಬ ಮಾತನ್ನು ಎಲ್ಲರೂ ಒಪ್ಪಲೇಬೇಕಾಯಿತು. ಸುಗುಣ ನಮ್ಮ ಮನೆ ಬೆಳಗಿದಳು. ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳದಿದ್ದರೂ ಸಹ ಅವಳು ನಮ್ಮ ಮನೆಗೆ ಹೊಂದಿಕೊಂಡು ಹೋಗುತ್ತಿದ್ದಳು್.ಇದನ್ನು ಕಂಡು,ನಮ್ಮಮ್ಮನ ಆತಂಕ ದೂರವಾಗಿ, ಸಮಾಧಾನ ವಾಯಿತು.ಏಕೆಂದರೆ ಅಮ್ಮನ ಇನ್ನಿಬ್ಬರು ಸೊಸೆಯಿಂದರು ಅವಳನ್ನು ತಮ್ಮ ಮನೆಗೆ ಸೇರಿಸುತ್ತಲೇ ಇರಲಿಲ್ಲ. ಅಮ್ಮ ತನ್ನ ಕೊನೆಗಾಲದಲ್ಲಿ ನೆಮ್ಮದಿಯಿಂದ ಪ್ರಾಣ ಬಿಡುವಂತಾದುದು ಈ ಸುಗುಣಳಿಂದಲೆ.ಮಗಳ ಸುಖ ಸಂಸಾರವನ್ನು ನೋಡಿ,ತೃಪ್ತರಾಗಿದ್ದ ನಮ್ಮ ಮಾವನವರು ತಮ್ಮ ಎಲ್ಲಾ ಆ ಸ್ತಿಯನ್ನು ನನ್ನ ಹೆಸರಿಗೆ ಮಾಡಿಆಸ್ತಿಪತ್ರಗಳನ್ನು ನನ್ನ ಕೈಯಲ್ಲಿಟ್ಟು ಕಣ್ಮುಚ್ಚಿದರು.ಅಂದಿನಿಂದ ನಾನು ಈ ಊರಿನ ಸಾಹುಕಾರನೆನಿಸಿ,ಇಂದಿನವರೆಗೂ ನಾನು ಅವರ ಎಲ್ಲಾ ಆಸ್ತಿಗಳನ್ನೂಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದೇನೆ. ಇದುವರೆವಿಗೂ ತೋಟ,ತುಡಿಕೆ, ಹೊಲ,ಗದ್ದೆ ,ಬಡ್ಡಿ ವ್ಯವಹಾರ ಅಂತ ಗತ್ತಿನಿಂದ ಆರೋಗ್ಯವಾಗಿ ಘಟ್ಟಿಮುಟ್ಟಾಗಿ,ಸಾಹುಕಾರನೆಂಬ ದರ್ಪದಿಂದ ಓಡಾಡಿಕೊಂಡಿದ್ದನನಗೆ ಈಗ ಈ ಗತಿ ಬಂತಲ್ಲ! ಆ ದಿನ ಏನಾಗಿಹೋಯಿತು?,
ಈಗ ಆರು ತಿಂಗಳ ಹಿಂದೆ ಒಂದು ಮಧ್ಯಾಹ್ನ ತೋಟದ ಕೆಲಸ ಮುಗಿಸಿ ಮನೆಗೆ ಬಂದ ನನಗೆ ಇದ್ದಕ್ಕಿದ್ದಂತೆ ತಲೆ ಸುತ್ತಿದಂತಾಗಿ, ಕಣ್ಣು ಕತ್ತಲಿಟ್ಟು,ಕೈ ಕಾಲುಗಳು ಎಳೆದುಬಿಟ್ಟಾಗ, ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು. ನಾನಾ ರೀತಿಯ ಇನ್ವೆಸ್ಟಿಗೇಶನ್ ಗಳು ಮುಗಿದು,ನೂರಾರು ರೀತಿಯ ಫಿಸಿಯೊತೆರ ಪಿಗಳನ್ನು ಕೊಡಿಸಿದರೂ, ಅವಾವುದೂ ಫಲಕಾರಿಯಾಗದೆ,ಈಗ ಆರು ತಿಂಗಳುಗಳಿಂದಲೂ ಈ ಹಾಸಿಗೆಯ ಮೇಲೆ, ಶರಶಯ್ಯೆಯಲ್ಲಿ ಉತ್ತರಾಯಣವನ್ನು ಕಾಯುತ್ತಾ ಮಲಗಿದ್ದ ಭೀಷ್ಮನಂತೆ ,ಜೀವಚ್ಚವವಾಗಿ ಮಲಗಿದ್ದೇನೆ.ಪಾಪ, ಭೀಷ್ಮ, ಅವನು ಹೇಗೆ ಮಲಗಿದ್ದನೋ? ಅವನನ್ನು ನೆನೆಸಿಕೊಂಡರೆ ಭಯವಾಗುತ್ತದೆ.
ಆ ಭೀಷ್ಮನಾದರೋ ಇಚ್ಚಾಮರಣಿ, ತನ್ನನ್ನು ಕೊಲ್ಲುವ ತಂತ್ರವನ್ನು ತನ್ನ ಮೊಮ್ಮಗ ಅರ್ಜುನನಿಗೆ ತಾನೇ ಹೇಳಿ, ಅವನಿಂದಲೇ ಶರಶಯ್ಯೆಯನ್ನು ಮಾಡಿಸಿಕೊಂಡು, ಉತ್ತರಾಯಣಕ್ಕಾಗಿ ಕಾಯುತ್ತಾ,ಮಲಗಿದ್ದ ಮಹಾಧೀರ. ಶರಶಯ್ಯೆಯ ಬಾಣಗಳಿಂದ ಇಡೀ ದೇಹದಿಂದ ರಕ್ತಸೋರಿಹೋಗುತ್ತಿದ್ದರೂ,ಮೈಯ್ತುಂಬಾ ಗಾಯವಾಗಿದ್ದರೂ , ಶರಶಯ್ಯೆಯಲ್ಲಿ ಮಲಗಿಕೊಂಡೇ ಅಂತಹ ಯಮಯಾತನೆಯಲ್ಲೇ ಕೃಷ್ಣನ ಅಣತಿಯಂತೆ, ತನ್ನ ಮೊಮ್ಮಕ್ಕಳಾದ ಧರ್ಮರಾಯನಿಗೆ ರಾಜಧರ್ಮವನ್ನೂ, ವಿಷ್ಣುಸಹಸ್ರನಾಮವನ್ನೂ ಉಪದೇ್ಶಿಸಿದ ಮುತ್ಸಿದ್ಢಿ.ಆದರೆ ನಾನೇನು ಭೀಷ್ಮನಂತೆ ಇಚ್ಚಾಮರಣಿಯೆ? ಅವನೆಲ್ಲಿ? ನಾನೆಲ್ಲಿ?ಅಬ್ಬ, ಈ ನನ್ನ ಹಾಸಿಗೆಯೇ ನನಗೆ ಶರಶಯ್ಯೆಯಾಗಿದೆ. ನನಗಂತೂ ಈ ರೀತಿಯ ಜೀವನ ಸಾಕಾಗಿಹೋಗಿದೆ.ನನ್ನ ಮೇಲೆ ಆ ಭಗವಂತನ ಕರುಣೆ ಎಂದಿಗೋ?ನನಗೂ ಗೊತ್ತಿಲ್ಲ,ಅಷ್ಟರೊಳಗೆ ಆದಷ್ಟು ಬೇಗ ನನ್ನ ಮನದಾಳದ ಮಾತುಗಳನ್ನು ಮನೆಯವರಿಗೆ ಹೇಳಿಬಿಡಬೇಕು.ಆದರೆ ಹೇಗೆ ಹೇಳುವುದು,? ಸ್ಪಷ್ಟವಾಗಿ ಮಾತನಾಡಲು ಆಗದು,ಬರೆಯಲು ಕೈ ಏಳದು, ಆದರೆ ನನ್ನ ಕಡೆಯ ಮನದ ಮಾತುಗಳನ್ನು ಹೇಗೆ ತಿಳಿಸಲಿ?"
ಮಂಜಯ್ಯನವರ ಮನಮಂಥನ ನಡೆಯುತ್ತಿರುವಾಗಲೇ ಸುಗುಣ ಊಟ ಹಿಡಿದುಕೊಂಡು ಬಂದಾಗ, ಅವಳನ್ನು ನೋಡಿ, ಅವರ ಕಣ್ಣೀರು ಹೆಚ್ಚಾಯಿತು. ನೆನಪುಗಳು ಬಿಚ್ಚಿಕೊಳ್ಳತೊಡಗಿದವು.
"ಕರಿ ಕಲ್ಲಿನಲ್ಲಿ ಕಡೆದ ಸುಂದರೆ ಶಿಲ್ಪದಂತಿರುವ ಸುಗುಣ ಹೆಸರಿಗೆ ತಕ್ಕವಳು.ಸಾಹುಕಾರರ ಋಣಸಂದಾಯಕ್ಕಾಗಿ ಅವಳನ್ನುಮದುವೆ ಮಾಡಿಕೊಂಡರೂ,ನನಗೆ ಸುಗುಣಳನ್ನು ಕಂಡರೆಒಂದು ರೀತಿ ತಿರಸ್ಕಾರ, ಅವಳು ನನಗೆ ಅನುರೂಪಳಾದವಳಲ್ಲಎಂಬ ಅನಿಸಿಕೆ ನನ್ನಲ್ಲಿ ಮನೆಮಾಡಿತ್ತು, ಅವಳನ್ನು ಹೊರಗೆ ಕರೆದುಕೊಂಡು ಹೋಗುವುದಾಗಲೀ, ಅವಳ ಜೊತೆಯಲ್ಲಿ ಯಾವುದಾದರೂ ಮದುವೆ ಮುಂಜಿಗಳಿಗೆ ಹೋಗುವುದಾಗಲೀನನಗೆ ಇಷ್ಟವಾಗುತ್ತಿರಲಿಲ್ಲ, ನಮ್ಮ ಜೋಡಿ ಯನ್ನು ನೋಡಿದವರು ನಮ್ಮ ಬಗ್ಗೆ ಏನಾದರೂ ಮಾತನಾಡ್ಕೊಂಡರೆ? ಎಂಬುದು ನನ್ನ ಭಾವನೆ. ನಾನು ಅವಳನ್ನು ತಿರಸ್ಕರಿಸಿದಷ್ಟೂ ಅವಳು ಗಟ್ಟಿಯಾಗುತ್ತಾ ಹೋದಳು. ನನ್ನ ಬಗ್ಗೆ ಚಕಾರವೆತ್ತುತ್ತಿರಲಿಲ್ಲ.ಅವಳೇಕೆ ಇಷ್ಟು ಒಳ್ಳೇಯವಳು?ಒಮ್ಮೊಮ್ಮೆ ನನಗೆ ಅವಳ ಬಗ್ಗೆ ಕನಿಕರ ಮೂಡುತ್ತಿತ್ತು,ಆದರೆ ಮರುಘಳಿಗೆಯೇ ನನ್ನನ್ನು ನಾನು ಸಮರ್ಥಿಸಿಕೊಳ್ಳುತ್ತಿದ್ದೆ. ನಮ್ಮ ಮದುವೆಯಾಗಿನಾಲ್ಕೈದು ವರ್ಷಗಳು ಕಳೆದರೂ ನಾವು ಒಟ್ಟಿಗೆ ಸೇರಿರಲಿಲ್ಲ. ಅವಳ ಬಗ್ಗೆ ಕನಿಕರ ಮೂಡುತ್ತಿತ್ತೇ ವಿನಾ ಹೆಂಡತಿಯನ್ನು ನೋಡಿದಾಗ ಉಂಟಾಗುವ ಭಾವಗಳು ಏಳುತ್ತಿರಲಿಲ್ಲ. ನಾನು ಅವಳನ್ನು ಹತ್ತಿರ ಸೇರಿಸಲೇ ಇಲ್ಲ. ಅವಳಾದರೋ ನನ್ನನ್ನು ದೇವರ ಸ್ಥಾನದಲ್ಲಿನಿಲ್ಲಿಸಿಬಿಟ್ಟು, ತನ್ನ ಹಕ್ಕನ್ನು ಚಲಾಯಿಸಲೇ ಇಲ್ಲ, ಅದೇನು ಒಳ್ಳೆಯತನವೋ ಅವಳದು, ಆ ದೇವರಿಗೆ ಗೊತ್ತು.ಒಲ್ಲದ ಹೆಂಡತಿಯಾಗಿಯೇ ಹೆಸರಿಗಷ್ಟೆ ನನ್ನ ಜೊತೆ ಸಂಸಾರ ಮಾಡಿಕೊಂಡಿದ್ದಳು. ಸುತ್ತ ಮುತ್ತಲಿನವರೆಲ್ಲಾ ಮಕ್ಕಳ ಬಗ್ಗೆ ನಮ್ಮನ್ನು ಕೇಳತೊಡಗಿದಾಗ, ನಮಗೆ ಉತ್ತರ ಹೇಳಿ ಹೇಳಿ ಸಾಕಾಗುತ್ತಿತ್ತು. ಜೊತೆಗೆ ಉಪ್ಪು ಹುಳಿ ತಿನ್ನುವ ದೇಹದ ಕಾಮನೆಗಳು ನನ್ನನ್ನು ಕಾಡದಿರಲಿಲ್ಲ.ಊರಿನ ಸಾಹುಕಾರನೆಂದ ಮೇಲೆ ಕೇಳಬೇಕೆ? ದುಡ್ಡು ಸೇರಿದಂತೆ ,ಮನಸ್ಸು ಬೇರೇನನ್ನೋ ಬಯಸುತ್ತಿತ್ತು............... ವರುಷಗರುಳುತ್ತಾಹೋದಂತೆ ಸುಗುಣಾಳ ಉತ್ತಮ ಗುಣಗಳು ನನ್ನನ್ನುಕಟ್ಟಿಹಾಕಿತ್ತು.
ಆದರೆ ಕಾಲ ಮಿಂಚಿತ್ತು.ಈಗ ನನ್ನಲ್ಲಿರುವುದು ಪಶ್ಚಾತ್ತಾಪದ ಕಣ್ಣೀರು. ಪಾಪ, ಅವಳು ಒಬ್ಬ ಒಳ್ಳೆಹೆಂಡತಿ,,ಒಳ್ಳೆಯ ಸೊಸೆ, ಒಳ್ಳೆಯ ಮಗಳು. ಕಡೆಗೆ ಈಗ ನನ್ನ ಸೇವೆಯನ್ನೂ ಸಹ ಸಮಾಧಾನದಿಂದ ಮಾಡುತ್ತಿದ್ದಾಳೆ, ಆದರೆ ನಾನು ಅವಳಿಗೆ ಒಳ್ಳೆಯ ಗಂಡನಾಗಲೇ ಇಲ್ಲ. ಒಂದು ಬಾರಿಯೂ ಅವಳು ನನ್ನ ಮುಂದೆ ತನ್ನ ಅಸಮಾಧಾನವನ್ನು ತೋರಿಸಿಕೊಂಡಿಲ್ಲ. ಈಗಲಾದರೂ ಅವಳಲ್ಲಿ ಕ್ಷಮೆ ಕೇಳಿ, ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.” ಹಳೆಯ ನೆನಪುಗಳಿಂದ ಮಂಜಯ್ಯನವರ ಕಣ್ಣುಗಳಿಂದ ನೀರಿಳಿಯುತ್ತಿತ್ತು.
ಇಂದೇಕೆ ಇವರು ಹೀಗೆ ತುಂಬಾ ಉದಾಸವಾಗಿ್ದ್ದಾರೆ ? ಎಂದುಕೊಂಡ ಸುಗುಣ ಅವರ ಬಳಿ ಕುಳಿತು ,ಅವರ ಕೈಗಳನ್ನು ತಮ್ಮ ಕೈಲಿ ಹಿಡಿದುಕೊಂಡು ಸಾಂತ್ವನಗೊಳಿಸುತ್ತಾ ಅವರಿಗೆ ಊಟ ಮಾಡಿಸಿ ಮುಗಿಸಿದರು. ನಂತರ ಮಂಜಯ್ಯನವರು ತಮ್ಮ ಹೆಂಡತಿಯನ್ನು ಕೈ ಸನ್ನೆಯಿಂದ ಹತ್ತಿರಕ್ಕೆ ಕರೆದು ತಮ್ಮ ದಿಂಬಿನ ಕೆಳಗಿದ್ದ ದೊಡ್ಡದಾದ ಒಂದು ಕವರ್ ಅನ್ನು ತೆಗೆದುಕೊಳ್ಳುವಂತೆ ಸೂಚಿಸಿ,, ರಘು ಹಾಗೂ ಪ್ರಭು ಇಬ್ಬರನ್ನೂ ಕರೆಯುವಂತೆ ತಮ್ಮ ತೊದಲು ಮಾತಿನಲ್ಲಿ ಹೇಳಿದಾಗ,ಸುಗುಣ ಆ ಕವರ್ ಅನ್ನು ತೆಗೆದುಕೊಂಡು, ತಮ್ಮಗಂಡು ಮಕ್ಕಳನ್ನು ಕರೆಯಲು ರೂಮಿನಿಂದ ಹೊರಗೆ ಬಂದರು. ಗಂಡು ಮಕ್ಕಳಿಬ್ಬರೂ ಕೆಲಸದಮೇಲೆಹೊರಗಡೆ ಹೋ ಗಿದ್ದುದರಿಂದ, ಅವರು ಮಕ್ಕಳಿಗಾಗಿ ಕಾಯಬೇಕಾಯಿತು. ಇಂದು ಯಜಮಾನರ ಆರೋಗ್ಯದಲ್ಲಿ ಏನೋ ವ್ಯತ್ಯಾಸವಾಗಿರುವುದನ್ನು ಸುಗುಣ ಮನಗಂಡರು.
"ಇಂದೇಕೋ ಗಂಡನ ವರ್ತನೆಯಲ್ಲಿ ಏನೋ ಬದಲಾವಣೆ ಇದೆ, ಅವರ ಮನಸ್ಸಿನಲ್ಲಿ ಏನೋ ಮುಖ್ಯವಾದ ವಿಚಾರವನ್ನು ಎಲ್ಲರಿಗೂ ತಿಳಿಸಬೇಕೆನ್ನುವ ತುಡಿತವಿದೆ. ಏನಿರಬಹುದು? ನನಗೆ ಹಾಗೂ ಅವರಿಗೆ ಮಾತ್ರ ಗೊತ್ತಿರುವ ಅವಳ ವಿಷಯವೆ? ಇಷ್ಟು ವರ್ಷಗಳು ಮುಚ್ಚಿಟ್ಟಿದ್ದ ಆ ರಹಸ್ಯ ಈಗ ಮಕ್ಕಳಿಗೇಕೆ ತಿಳಿಯಬೇಕು? ಅಥವಾ ಆಸ್ತಿಯ ಹಂಚಿಕೆಯದೇ? ಈ ಕವರ್ ನಲ್ಲಿ ಏನಿರಬಹುದು? ನೋಡಿಬಿಡಲೆ? " ಅವರಿಗೂ ಚಿಂತೆಯಾಯಿತು. ಯಾಕೋ ಈ ಸಮಯದಲ್ಲಿ ಆ ಕವರ್ ಅನ್ನು ಒಡೆಯುವುದು ಬೇಡವೆನಿಸಿ,ಅದನ್ನು ತಮ್ಮ ಬೀರುವಿನಲ್ಲಿ ಭದ್ರವಾಗಿಟ್ಟರು. ಹೇಗಾದರೂ ಸರಿ, ರಘು ಹಾಗು ಪ್ರಭುವಿಗೆ ಈಗಲೇ ವಿಷಯ ತಿಳಿಸಿಬಿಡಬೇಕು. ಮಕ್ಕಳ ದಾರಿಯನ್ನು ಕಾಯುತ್ತಾ ಕುಳಿತರು. ಕಡೆಗೂ ಒಂದು ಘಂಟೆ ಕಳೆದ ಬಳಿಕ,ಹೊರಗಡೆ ಹೋಗಿದ್ದ ಗಂಡು ಮಕ್ಕಳಿಬ್ಬರೂ ಮನೆಗೆ ಬಂದ ಕೂಡಲೇ , ಇಂದು ಬೆಳಗ್ಗಿನಿಂದ ಮಂಜಯ್ಯನವರ ಆರೋಗ್ಯದಲ್ಲಿನ ಬದಲಾವಣೆಯನ್ನುತಿಳಿಸಿ, ನಿಮ್ಮ ತಂದೆ ನಿಮ್ಮಿಬ್ಬರನ್ನು ಕರೆಯುವಂತೆ ಹೇಳಿದ್ದಾರೆ, ಮುಂದೆ ಏನು ಕಾದಿದೆಯೋ? ನಡೆಯಿರಿ ಎಲ್ಲರೂ ಹೋಗೋಣ ವೆಂದುಹೇಳುತ್ತ, ಗಂಡು ಮಕ್ಕಳನ್ನು ಹೊರಡಿಸಿಕೊಂಡು ಮಂಜಯ್ಯನವರ
ರೂ ಮಿಗೆ ಹೊರಟಾಗ,ಅವರ ಹಿಂದೆ ಸೊಸೆಯಂದಿರೂ ಹಾಗೂ ಮಕ್ಕಳೂ ಸಹ ಅವರನ್ನು ಹಿಂಬಾಲಿಸಿದರು.ಇವರು ಮಂಜಯ್ಯನವರ ರೂಮಿನೊಳಕ್ಕೆ ಬಂದಾಗ, ಮಂಜಯ್ಯನವರು ನಿದ್ರೆಗೆ ಜಾರಿದ್ದರಿಂದ,ಎಲ್ಲರೂ ಅವರ ಮಂಚದ ಸುತ್ತಲೂ ನಿಂತುಕೊಂಡು, ಅವರು ಎಚ್ಚರವಾಗುವುದನ್ನೇ ಕಾಯುತ್ತಾ ನಿಂತರು.
ಅತ್ತ,ಸುಗುಣ ರೂಮಿನಿಂದ ಹೊರಗೆ ಹೋದ ಕೂಡಲೇ ,ಮಂಜಯ್ಯನವರ ಯೋಚನೆ ಸುಕನ್ಯಾಳ ಕಡೆ ಹರಿಯಿತು.
"ಅವಳದು ಅದೆಂತಹ ರೂಪ, ಅದಕ್ಕಲ್ಲವೇ ನಾನು ಮನಸೋತದ್ದು. ಅವಳ ಭೇಟಿಯೂ ಒಂದು ವಿಚಿತ್ರ ರೀತಿಯ ಸನ್ನಿವೇಶದಲ್ಲಿ ಆದದ್ದಲ್ಲವೆ? ಸುಗುಣಳಿಂದ ದೂರವುಳಿದಿದ್ದ ನನಗೆ, ದಿನವೂ ಅವಳ ಪಕ್ಕದಲ್ಲಿ ಮಲಗಿಕೊಳ್ಳುವುದಕ್ಕೂ ಮುಜುಗರವೆನಿಸಿ, ಎಷ್ಟೋ ರಾತ್ರಿಗಳನ್ನು ನಾನು ತೋಟದ ಮನೆಯಲ್ಲಿ ಕಳೆಯುತ್ತಿದ್ದೆ. ಅಂತಹುದೇ ಒಂದು ರಾತ್ರಿ,ತೋಟದ ಭಾವಿಗೆ ಯಾರೋ ಹಾರಿಬಿದ್ದ ಶಬ್ದಕ್ಕೆ ನಾನು ಹೊರಬಂದು ನೋಡಿದಾಗ, ಕತ್ತಲಲ್ಲಿ ಏನೆಂದು ಕಾಣದೆ, ಹತ್ತಿರದಲ್ಲೇ ಇದ್ದ ದೊಡ್ಡ ಟಾರ್ಚ್ ತಂದು ಭಾವಿಗೆ ಬಿಟ್ಟಾಗ, ಅಲ್ಲೊಂದು ಹೆಂಗಸಿನ ದೇಹ ಮುಳುಗಿ ಮುಳುಗಿ ತೇಲಿ ತೇಲಿ ತೊಳಲಾಡುವುದನ್ನು ಕಂಡ ನಾನು ಹಿಂದೆ ಮುಂದೆ ನೋಡದೆ, ಭಾವಿಯೊಳಗೆ ಧುಮುಕಿ, ಆ ಹೆಣ್ಣು ಮಗಳನ್ನುರಕ್ಷಿಸಿದ್ದು, ನಂತರ ಅವಳೊಬ್ಬಳು ಭಗ್ನಪ್ರೇಮಿಯೆಂದು ತಿಳಿದಾಗ, ಅವಳನ್ನು ಸಾಂತ್ವನಗೊಳಿಸಿ, ಅವಳಿಗೆ ತೋಟದ ಮನೆಯಲ್ಲೇ ಆಶ್ರಯ ನೀಡಿದ್ದು, ಬರಬರುತ್ತಾ, ಆ ಸುಂದರಿಯತ್ತ ನನ್ನ ಮನಸ್ಸೂ ಚಂಚಲವಾಗಿ, ಮೆಲ್ಲ ಮೆಲ್ಲನೆ ಅವಳೊಂದಿಗೆ ಸಮಯ ಕಳೆಯುತ್ತಾ, ಕಳೆಯುತ್ತಾ, ಕಡೆಗೆ ಅವಳೂ ನನ್ನಲ್ಲಿ ಅನುರಕ್ತಳಾದಾದದ್ದು,ನಂತರ ಇಬ್ಬರೂ ಗಂಡ ಹೆಂಡಿರಂತೆಯೇ ಒಡನಾಡುತ್ತಿದ್ದುದು,ನಮ್ಮಿಬ್ಬರ ವಿಷಯ ಸುಗುಣಾಳಿಗೆ ಗೊತ್ತಾದದ್ದು,ಗಂಡನನ್ನು ಎದುರು ಹಾಕಿಕೊಳ್ಳಲಾಗದೆ, ನನ್ನ ಹಾಗೂ ಸುಕನ್ಯಾಳ ಸಂಬಂಧವನ್ನು ಬಲವಂತವಾಗಿ ಒಪ್ಪಿಕೊಂಡಿದ್ದು, ಇದರ ಪರಿಣಾಮವಾಗಿ, ರಘು,ಪ್ರಭು ಹುಟ್ಟಿದ್ದು,ಪ್ರಭು ಹುಟ್ಟುವಾಗ ಹೆರಿಗೆಯೆ ಸಮಯದಲ್ಲಿ ತೀರಿಕೊಂಡಾಗ, ಇಬ್ಬರು ಸಣ್ಣ ಸಣ್ಣ ಮಕ್ಕಳನ್ನು ತನ್ನ ಮಡಿಲಲ್ಲಿ ಹಾಕಿಕೊಂಡು ಸುಗುಣ ಬೆಳೆಸಿದ್ದು, ಕಡೆಗೆ ಇಬ್ಬರೂ ಮಕ್ಕಳಿಗೆ ತನ್ನ ಸ್ವಂತ ಅಮ್ಮಯಾರೆಂಬುದೇ ತಿಳಿಯಲೇ ಇಲ್ಲ. ಅವರಿಬ್ಬರೂ ಸುಗುಣಾಳನ್ನೇ ತಮ್ಮ ಅಮ್ಮ ಅಂತ ತಿಳಿದುಕೊಂಡಿದ್ದಾರೆ. ಪಾಪ, ಸುಗುಣಳು ಮಕ್ಕಳನ್ನು ತುಂಬಾ ಮುದ್ದಿನಿಂದ ಬೆಳೆಸಿದಳು,ನಿಜವಾಗಿಯೂ ನನ್ನಿಂದ ಅವಳಿಗೆಷ್ಟು ಅನ್ಯಾಯವಾಗಿದೆ. ಆದರೆ ಅದನ್ನು ಈಗ ಸರಿಮಾಡಲಾದೀತೆ? ನನ್ನ ತಪ್ಪನ್ನು ಇಂದು ಎಲ್ಲರೊಂದಿಗೂ ಹೇಳಿಬಿಡಬೇಕೆನಿಸಿದೆ.
ಇಂದು ಇದುವರೆಗೂ ಮುಚ್ಚಿಟ್ಟ ಈ ಸತ್ಯವನ್ನು ಎಲ್ಲರೊಂದಿಗೂ ಹೇಳಿ,ನಾನು ಹಗುರವಾಗಬೇಕು. ಬೆಳಗ್ಗಿನಿಂದಲೂ ಒಂದೇ ಸಮನೆ ಯೋಚನೆ ಮಾಡಿ ಆಯಾಸಗೊಂಡಿದ್ದ ಮಂಜಯ್ಯನವರಿಗೆ ಇದೀಗ ಕಣ್ಣಿಗೆ ಜೊಂಪು ಹತ್ತಿದಂತಾಗಿ,ನಿದ್ರೆಗೆ ಜಾರಿದರು.ನಿದ್ರೆಯಿಂದ ಎಚ್ಚರವಾಗಿ ಕಣ್ಣು ಬಿಟ್ಟಾಗ, ಮಂಜಯ್ಯನವರಿಗೆ ತಮ್ಮ ಸುತ್ತಲೂ ನಿಂತಿರುವ ಹೆಂಡತಿ, ಮಕ್ಕಳು ಸೊಸೆಯಿಂದರನ್ನು ನೋಡುತ್ತಾ,ಕಣ್ಣುಗಳು ತುಂಬಿದವು.ಒಬ್ಬಬ್ಬರನ್ನೇ ದೃಷ್ಟಿಸುತ್ತಾ ಬಂದರು. ’ಹೆಂಡತಿ ಸುಗುಣ ನಿಜಕ್ಕೂಗುಣಗಳ ಗಣಿ, ನನ್ನಿಂದ ಅವಳಿಗೆ ಸುಖ ಸಿಗಲಿಲ್ಲ, ಅವಳುಕ್ಷಮಿಸುವಳೊ ಇಲ್ಲವೋ? ಹೆಂಡತಿಯನ್ನು ನೋಡುತ್ತ ಬಿಕ್ಕಿದರು.ನಂತರ ಮೊದಲ ಮಗ ರಘು,ಎಲ್ಲಾ ನನ್ನ ಪಡಿಯಚ್ಚು, ತುಂಬಾ ವಿನಮ್ರ,ಬುದ್ಧಿವಂತ, ನನ್ನ ನಂತರ ಈ ಆಸ್ತಿಯನ್ನು ಚೆನ್ನಾಗಿ ಕಾಪಾಡಿಕೊಳ್ಳಬಲ್ಲ, ಅವನನ್ನು ಕಣ್ತುಂಬಿಕೊಂಡರು, ಮುಂದೆ ನಿಂತಿರುವ ಎರಡನೆ ಮಗ ಪ್ರಭು,ತುಂಬಾ ಹಠಮಾರಿ ಆದರೂ ಒಳ್ಳೆಯವನು, ಬುದ್ಧಿವಂತ,ಇವನು ಎಲ್ಲಾ ಸುಕನ್ಯಳ ಪಡಿಯಚ್ಚು,’ ನಂತರ ಹತ್ತಿರದಲ್ಲೇ ಇದ್ದ ಸೊಸೆಯಂದಿರನ್ನುದಿಟ್ಟಿಸಿದರು.ಅವರಿಬ್ಬರೂ ಸಹ ಒಳ್ಳೆಯಹೆಣ್ಣುಮಕ್ಕಳು,ಪಕ್ಕದಲ್ಲಿದ್ದಮೊಮ್ಮಕ್ಕಳು,’ಇಂತಹ ಮುದ್ಡಾದ ಸಂಸಾರವನ್ನು ನಾನು ಬಿಟ್ಟುಹೋಗಬೇಕಲ್ಲ’, ವ್ಯಾಮೋಹ ಕಾಡಿತು. ಮರುಕ್ಷಣವೇ, ತಮ್ಮ ಪರಿಸ್ಥಿತಿಯ ಅರಿವಾಯಿತು. ’ಈ ಸಂಸಾರವನ್ನು ಬಿಟ್ಟುಹೋಗದಿದ್ದರೆ, ಹೀಗೆ ಹಾಸಿಗೆಯಲ್ಲೇ ಕೊಳೆಯಬೇಕು,ನನ್ನಿಂದ ಇವರಿಗೆಲ್ಲ ಎಷ್ಟುಹಿಂಸೆ, ನನಗಾದರೂ ಎಂತಹ ನರಕ ಯಾತನೆ, ಬೇಡ ಇನ್ನು ಈ ಜೀವನ ಸಾಕು,ದೇವರೇ ನನಗೆ ಬೇಗ ಮುಕ್ತಿ ನೀಡು.’ಅವರಿಗೆದುಃಖ ಉಮ್ಮಳಿಸಿತು. ಮಕ್ಕಳಿಗೆ ಗಾಬರಿಯಾಗಿ ಮಂಜಯ್ಯನವರ ಇಕ್ಕೆಲಗಳಲ್ಲೂ ಕೂತರು .ಅಪ್ಪನ ಕೈ ಹಿಡಿದು ಪರಿಪರಿಯಾಗಿ ಸಾಂತ್ವನಹೇಳಿದರು. ಸ್ವಲ್ಪ ಸಮಯದ ನಂತರ ದೊಡ್ಡ ಮಗನ ಕಡೆ ತಿರುಗಿ ಏನೋ ಹೇಳಬೇಕೆಂದು ತಡವರಿಸುತ್ತಾರೆ,ಆದರೆ ಮಾತೇ ಹೊರಳುತ್ತಿಲ್ಲ.ಇನ್ನು ಸ್ವಲ್ಪ ಸಮಯದ ನಂತರ ಚಿಕ್ಕ ಮಗನ ಕಡೆ ಕಣ್ಣು ಹೊರಳಿಸಿ, ಮಾತನಾಡಲು ಪ್ರಯತ್ನಿಸುತ್ತಾರೆ,ನಾಲಿಗೆ ಹೊರಳುತ್ತಿಲ್ಲ. ನಂತರ ಹೆಂಡತಿಯ ಕಡೆ ತಿರುಗಿ ಮನೆಯೆಲ್ಲಾ ತೋರಿಸುತ್ತ, ಏನೋ ಹೇಳಲು ಹೊರಡುತ್ತಾರೆ,ಬಾಯಿ ಬರುತ್ತಿಲ್ಲ,ಕಡೆಗೆ ಅವರಿಗೆ ತುಂಬಾ ಆಯಾಸವಾಗಿ, ಮೈ ಕೈ ಬೆವರತೊಡಗಿದಾಗ, ಚಿಕ್ಕ ಮಗ ಡಾಕ್ಟರ್ ಗೆ ಫೋನ್ ಮಾಡಲು ಹೊರಗೆ ಓಡಿದಾಗ,.ಸುಗುಣ ಗಂಡನ ಬಳಿಯಲ್ಲೆ ಕುಳಿತರು. ನಂತರ ದೊಡ್ಡ ಮಗನ ಕಡೆ ನೋಡುತ್ತಾ ಇರುವಾಗ, ಅವನು ಅವರ ಕಿವಿಯಲ್ಲಿ"ಅಪ್ಪ, ನೀವೇನೂ ಚಿಂತೆ ಮಾಡಬೇಡಿ,ನಾನು ಎಲ್ಲರನ್ನೂಚೆನ್ನಾಗಿ ನೋಡಿಕೊಳ್ಳುತ್ತೇನೆ." ಎಂದು ಹೇಳಿದ ಕೂಡಲೇ ಮಂಜಯ್ಯನವರ ಮುಖದಲ್ಲಿ ತೃಪ್ತಿಯರಳಿ, ಒಂದು ಬಾರಿ ದೊಡ್ಡದಾಗಿ ಕಣ್ಣುಬಿಟ್ಟು, ಮತ್ತೆ ಮುಚ್ಚಿಕೊಂಡರು.
ಡಾಕ್ಟರ್ ಬಂದು ನೋಡುವ ವೇಳೆಗೆ ಎಲ್ಲಾ ಮುಗಿದುಹೋಗಿತ್ತು. ಅವರು, ಮಂಜಯ್ಯನವರ ಮರಣವನ್ನುದೃಡ ಪಡಿಸಿದರು. ಆದರೆ ಅವರೊಳಗೆ ಹುದಿಗಿದ್ದ ರಹಸ್ಯ ಅವರೊಂದಿಗೇ ಭಸ್ಮವಾಯಿತು.ಗಂಡನಿದ್ದೂ ಇಲ್ಲದಂತೆಯೇ ಬಾಳಿದ ಸುಗುಣಾಳಿಗೆ ಮಂಜಯ್ಯನವರ ಬಗ್ಗೆ ನಿರ್ಲಿಪ್ತ ಭಾವವಿದ್ದರೂ, ಸಾಮಾಜಿಕವಾಗಿ ತನ್ನನ್ನು ಮೂವತ್ತು ವರ್ಷಗಳಿಗೂ ಮೀರಿ ,ತನಗೆ ರಕ್ಷಣೆ ಕೊಟ್ಟಿರುವ ಬಗ್ಗೆ ಭಾವನಾತ್ಮಕ ನಂಟು,, ತನ್ನ ಬಾಳ ಸಂಗಾತಿಯ ಮರಣದಿಂದ ತುಂಬಾ ಸಂಕಟ ಪಟ್ಟರು.
ಗಂಡನ ಉತ್ತರಾದಿ ಕ್ರಿಯೆಗಳೆಲ್ಲಾ ಮುಗಿದ ಮೇಲೆ ಒಂದು ದಿನ ಸುಗುಣ ಆ ಕವರ್ ಅನ್ನು ಒಡೆದು ನೋಡಿದಾಗ, ಅದರಲ್ಲಿ ಆಸ್ತಿಪತ್ರಗಳಿದ್ದು, ಮಂಜಯ್ಯನವರ ಪಾಲಿಗೆ ಅವರ ಮಾವನವರ ಕಡೆಯಿಂದ ಬಂದಿದ್ದ ಎಲ್ಲಾ ಆಸ್ತಿಯನ್ನೂ ಸುಗುಣಳ ಹೆಸರಿಗೇ ಮಾಡಿಬಿಟ್ಟಿರುವ ವಿಲ್ ಅದಾಗಿತ್ತು.ಅದರ ಜೊತೆಗೆ ತಮ್ಮ ಸ್ವಯಾರ್ಜಿತ ಆಸ್ತಿಗಳನ್ನು ತಮ್ಮ ಇಬ್ಬರು ಗಂಡುಮಕ್ಕಳಿಗೆ ಬರೆದಿದ್ದರು.ಸಣ್ಣ ಕಾಗದದ ಚೀಟಿಯಲ್ಲಿ "ಸುಗುಣ,ನನ್ನನ್ನು ಕ್ಷಮಿಸಿಬಿಡು" ಎಂದು ಬರೆದಿಟ್ಟಿರುವುದನ್ನು ಓದುತ್ತಾ ಸುಗುಣಳ ಕಣ್ಣೂಗಳು ತುಂಬಿಬಂದಿತ್ತು. ಹೊರಗೆ ತೆಗೆದಿದ್ದ ಎಲ್ಲಾ ಪತ್ರಗಳನ್ನೂ ಕವರ್ ಒಳಗೆ ತುಂಬಿ ಮತ್ತೆ ಬೀರುವಿನಲ್ಲಿ ಭದ್ರವಾಗಿ ಸೇರಿಸಿದಳು. ಅಂದೇ ಅವಳು ಒಂದು ನಿರ್ಧಾರಕ್ಕೆ ಬಂದಳು.ಮಕ್ಕಳಿಬ್ಬರನ್ನೂ ಕರೆದು, ಅವರ ನಿಜವಾದ ತಾಯಿಯ ಬಗ್ಗೆ ತಿಳಿಸಿ, ತಮ್ಮ ತಂದೆಯ ಹೊಯ್ದಾಟವನ್ನು ವಿವರವಾಗಿ ತಿಳಿಸಿ,ಅವರು ಅವರಿಬ್ಬರಿಗೂ ಬರೆದಿಟ್ಟಿದ್ದ ಆಸ್ತಿ ಪತ್ರಗಳನ್ನು ನೀಡುತ್ತ,
" ಇಷ್ಟು ವರ್ಷಗಳು ನಿಮ್ಮ ತಂದೆ ನಿಮ್ಮಿಂದ
ಮುಚ್ಚಿಟ್ಟಿದ್ದ ರಹಸ್ಯವನ್ನು ನಾನು ಇಂದು ಬಿಚ್ಚಿಟ್ಟಿದ್ದೇನೆ. ಇನ್ನು ಮುಂದೆ ನಿಮಗೆ ಹೇಗೆ ತೋರುತ್ತದೋ ಹಾಗೆ ಮಾಡಿ" ಎಂದು ಹೇಳುತ್ತಾ, ತನ್ನ ರೂಮಿಗೆ ಓಡಿಹೋಗಿ,ಬಿಕ್ಕಿ ಬಿಕ್ಕಿ ಅಳುತ್ತಿದ್ದಾಗ, ಅವಳ ಹಿಂದೆಯೇ ಓಡಿಕೊಂಡು ಬಂದ ರಘು ಹಾಗೂ ಪ್ರಭು ಇಬ್ಬರೂ ಸುಗುಣಾಳ ಅಕ್ಕ ಪಕ್ಕದಲ್ಲಿ ಕುಳಿತುಕೊಂಡು,ಅವಳನ್ನು ಸಮಾಧಾನ ಮಾಡುತ್ತ, "ಅಮ್ಮ, ನಮ್ಮನ್ನು ಹೆತ್ತಿರುವ ಆ ತಾಯಿ ಯಾರೋ ನಮಗೆ ಇದುವರೆಗೂ ಗೊತ್ತಿಲ್ಲ.ನಮ್ಮನ್ನು ಹುಟ್ಟಿದಾಗಿನಿಂದ ಇಲ್ಲಿಯತನಕ ನಮ್ಮನ್ನು ಸಾಕಿ ಸಲಹಿ ಬೆಳೆಸಿರುವ ನೀವೇ ನಮ್ಮ ತಾಯಿ . ನಾವಿಬ್ಬರೂ ನಿಮ್ಮನ್ನು ಬಿಟ್ಟೂ ಎಲ್ಲಿಗೂ ಹೋಗುವುದಿಲ್ಲ.ಮದುವೆಯಾದರೂ ಬ್ರಹ್ಮಚಾರಿಣಿಯಾಗಿ ಜೀವನ ನಡೆಸಿದ ನೀವೊಬ್ಬರು ಮಹಾಮಾತೆ.ನಮ್ಮ ದೇಶದ ಇತಿಹಾಸದಲ್ಲಿ ನಿಮ್ಮಂತಹವರು ಬೆರಳೆಣಿಕೆಯೆಷ್ಟೆ ಸಿಗುವುದು.ನಿಮ್ಮ ಮೇಲಿನ ಗೌರವ ನಮಗೆ ಇನ್ನೂ ಹೆಚ್ಚಾಗಿದೆ.ಆದರೆ ನಮಗೆ ಇಂದು ಅಪ್ಪನಮೇಲೆ ತುಂಬಾ ಸಿಟ್ಟು ಬರುತ್ತಿದೆ. ನಿನ್ನಂತಹ ಹೆಂಡತಿಯನ್ನು ನೋಯಿಸಿಬಿಟ್ಟರಲ್ಲ! ನೀವು ಹೇಗೆ ಇದನ್ನೇಲ್ಲಾ ಸಹಿಸಿಕೊಂಡಿರೆಂಬುದೇ ನಮಗೆ ಆಶ್ಚರ್ಯ. ದಯವಿಟ್ಟು ಇನ್ನು ಮುಂದೆ ನೀವು ಯಾವುದಕ್ಕೂ ಕಣ್ಣೀರು ಹಾಕಕೂಡದು" ಎಂದು ಹೇಳುತ್ತ ಸುಗುಣಳ ಕಂಬನಿಯನ್ನು ತಮ್ಮ ಕೈಗಳಿಂದ ತಡೆಯುತ್ತಿದ್ದಾಗ, ಸುಗುಣಾ ಇಬ್ಬರು ಮಕ್ಕಳನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ಅವರ ಬೆನ್ನನ್ನುನೇವರಿಸುತ್ತಿದ್ದಳು .
ತಾಯಿ ಮಕ್ಕಳ ಈ ವಾತ್ಸಲ್ಯವನ್ನು ಇಬ್ಬರು ಸೊಸೆಯಂದಿರೂ ಹಾಗೂ ಮೊಮ್ಮಕ್ಕಳು ಕಣ್ತುಂಬಿಕೊಳ್ಳುತ್ತಿದ್ದರು.
