Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi

Classics Inspirational Others

4  

Vijaya Bharathi

Classics Inspirational Others

ದೇವಕಿ ಕಂದ

ದೇವಕಿ ಕಂದ

4 mins
228



ಸೆರೆಮನೆಯ ಕತ್ತಲಕೋಣೆಯಲ್ಲಿ ಕೈ ಕಾಲುಗಳಿಗೆ ಹಾಕಿದ್ದ ಸರಪಳಿಗಳನ್ನು ನೋಡುತ್ತಾ ದೇವಕಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಪಕ್ಕದಲ್ಲಿದ್ದ ವಸುದೇವ

ಅವಳನ್ನು ಸಮಾಧಾನ ಪಡಿಸುತ್ತಲೇ ಇದ್ದ. ಕಾವಲುಗಾರರು ಬಾಗಿಲು ತೆಗೆದು ಇಬ್ಬರಿಗೂ ಊಟವನ್ನಿತ್ತು, ತಮ್ಮ ಕೆಲಸ ಮುಗಿಯಿತೆಂಬಂತೆ

ಬೀಗ ಜಡಿದು,ಹೊರಗೆ ಹೊರಟರು. ವಸುದೇವ ತಮಗೆ ತಂದಿಟ್ಟಿದ್ದ ಊಟವನ್ನು ತೆಗೆದುಕೊಂಡು ಬಂದು, ದೇವಕಿಯ ಮುಂದೆ ಹಿಡಿದು,

ಅಳುತ್ತಲೇ ಇದ್ದ ಅವಳ ಬಾಯಿಗೆ ಬಲವಂತವಾಗಿ ತುತ್ತುಗಳನ್ನುಇಟ್ಟು ತಿನ್ನಿಸುತ್ತಿದ್ದ. ಮಹಾ ಪರಾಕ್ರಮಿ, ವೃಷ್ಣಿ ವಂಶದ ಶೂರಸೇನನ ಮಗನಾದ ವಸುದೇವ, ಇಂದು ತನ್ನ ಭಾವಮೈದುನ, ಕಂಸನ ಸೆರೆಯಲ್ಲಿ

ಬಂಧಿಯಾಗಿ, ತುಂಬಾ ಅಸಹಾಯಕನಾಗಿದ್ದಾನೆ.

ತನ್ನ ಹೆಂಡತಿ,ದೇವಕಿಯ ಕಣ್ಣೀರನ್ನೇನೋ ಒರೆಸುತ್ತಿದ್ದನಾದರೂ, ಸೆರೆಯಿಂದ ಬಿಡಿಸಲು ಅವನಿಗೆ ಸಾಧ್ಯವಾಗುತ್ತಿಲ್ಲ. ಆದರೆ ಅವನ ಕಣ್ಣ ಮುಂದೆ ಭರವಸೆಯ ಬೆಳಕು ಯಾವಾಗಲೂ ಕಾಣುತ್ತಿದೆ. ಆಗ್ಗಿಂದ್ದಾಗೆ ಆ ಬೆಳಕನ್ನು ನೆನೆಸಿಕೊಂಡು,ನೆಮ್ಮದಿಯಿಂದ ಇರುವ ಪ್ರಯತ್ನ ಮಾಡುತ್ತಿದ್ದಾನೆ. ಅದನ್ನೇ ದೇವಕಿಗೆ

ಹೇಳುತ್ತ ಸಮಾಧಾನ ಮಾಡುತ್ತಿದ್ದಾನೆ.

"ಹೆದರಬೇಡ ದೇವಕಿ, ನಮ್ಮ ಮಗ ಗೋಕುಲದಲ್ಲಿ ಸುರಕ್ಷಿತವಾಗಿ ಬೆಳೆಯುತ್ತಿದ್ದಾನೆ.ಅವನು ನಮ್ಮನ್ನು ಈ ಸೆರೆಯಿಂದ ಬಿಡುಗಡೆ ಮಾಡಿಯೇ ಮಾಡುತ್ತಾನೆ. ಧೈರ್ಯವಾಗಿರು. ಭಗವಂತನ ಅಶರೀರವಾಣಿಯಲ್ಲಿ ನಂಬಿಕೆ ಇಡೋಣ, ದುಷ್ಟ ಕಂಸನ ಕೊನೆಗಾಲ ಬಂದೇ ಬರುತ್ತದೆ."

ದೇವಕಿಯ ಬೆನ್ನು ತಡವುತ್ತಾ, ಅವಳನ್ನು ಸಂತೈಸುತ್ತಿದ್ದಾನೆ. ಆದರೆ ಆ ತಾಯಿಯ

ಸಂಕಟ ಇವನಿಗೆ ಹೇಗೆ ತಾನೆ ಅರ್ಥವಾದೀತು?ತಾನೆ ಹೆತ್ತ ಆರು ಮಕ್ಕಳನ್ನುತನ್ನ ಕೈಯ್ಯಾರೆ ಕಟುಕನಿಗೆ ಕೊಟ್ಟು, ಆ ಮಕ್ಕಳ ರೋದನವನ್ನು ಹೇಗೆ ತಾನೆ

ಮರೆತಾಳು? ಏಳನೇ ಮಗು ಗರ್ಭದಲ್ಲಿದ್ದಾಗಲೇ ಗರ್ಭಪಾತವಾಯಿತು.ಇನ್ನು ಎಂಟನೇ ಮಗುವಾಗಿದ್ದನ್ನು ಸರಿಯಾಗಿ ನೋಡಲೇ ಇಲ್ಲ,ವಸುದೇವನು ನೀಡುತ್ತಿದ್ದ ತುತ್ತನ್ನು ಹಿಂದಕ್ಕೆ ಸರಿಸಿದಳು. ಅವಳಿಗೆ ಅವನ ಭರವಸೆಯ

ಮಾತುಗಳಲ್ಲಿ ನಂಬಿಕೆ ಬರಲಿಲ್ಲ.

" ನೀವು ಏನಂದಿರಿ? ನನ್ನ ಎಂಟನೇ ಗರ್ಭದಲ್ಲಿ ಜನಿಸಿದ ಮಗು ಹೆಣ್ಣಲ್ಲವೆ? ನನ್ನ ಅಣ್ಣ ಪಾಪಿ ಕಂಸ, ಅದು ಹೆಣ್ಣು ಮಗುವೆಂದೂ ಲೆಕ್ಕಿಸದೆ ನನ್ನ ಕೈಯ್ಯಿಂದ ಕಿತ್ತುಕೊಂಡು ಹೋಗಲಿಲ್ಲವೆ?. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಏಳು ಮಕ್ಕಳು ನನ್ನ

ಕಣ್ಣುಗಳೆದುರಿಗೇ ಹೊರಟುಹೋದವು.ನಾನೆಂತಹ ನಿರ್ಭಾಗ್ಯೆ, ?ನನ್ನ ಒಡಲು ಬರಿದಾಗಿಹೋದವಲ್ಲ? ಆದರೂ ಇಷ್ಟು ಸಂಕಟದಲ್ಲಿಯೂ ಇನ್ನೂ ಬದುಕಿದ್ದೇನಲ್ಲ,ಇದರ ಬದಲು, ಅಂದು ನನ್ನ ಮದುವೆಯಾದ ದಿನ,ಕಂಸನ ರಥದಲ್ಲಿ ಮದುವಣಗಿತ್ತಿಯಾಗಿ ಬರುತ್ತಿದ್ದಾಗ , ನನ್ನ ಎಂಟನೇ ಗರ್ಭದಿಂದ ಅವನ ಮೃತ್ಯುಎಂದು ಅಶರೀರವಾಣಿ ನುಡಿದ ಕ್ಷಣವೇ ನನ್ನನ್ನು ಕೊಲ್ಲಲು ಹೊರಟಿದ್ದ ನನ್ನ ಅಣ್ಣನನ್ನು ನೀವು ತಡೆಯದೇ ಇದ್ದಿದ್ದರೆ,ಇಂದು ನಾನು ಇಷ್ಟು ಸಂಕಟ ಪಡಬೇಕಾಗಿರಲಿಲ್ಲ. ಅಂದೇ

ನಾನು ಸತ್ತಿದ್ದರೆ ಎಷ್ಟೋ ಚೆನ್ನಾಗಿತ್ತು.ಇದು ನನ್ನ ಯಾವ ಜನ್ಮದ ಕರ್ಮದ ಫಲವೋ?"

ದೇವಕಿಯ ಕರುಳು ಕತ್ತರಿಸುವಂತಹ ರೋದನವನ್ನು ನಿಲ್ಲಿಸಬೇಕಾದರೆ ವಸುದೇವನಿಗೆ

ಸಾಕಾಗಿ ಹೋಯಿತು.

ಅತ್ತೂ ಅತ್ತೂ ಸುಸ್ತಾಗಿ ಹೋದ ಅವಳನ್ನು ತನಗೊರಗಿಸಿಕೊಂಡು ,ಆ ದಿನ ರಾತ್ರಿ

ನಡೆದ ಘಟನೆಯನ್ನು ಹೇಳುತ್ತಾ,ಅವಳನ್ನು ಸಮಾಧಾನ ಮಾಡುತ್ತಿದ್ದನು.

" ದೇವಕಿ, ಅಂದು ನಿನ್ನ ಗರ್ಭದಿಂದ ಜನಿಸಿದ ಎಂಟನೇ ಮಗುವನ್ನು ಯೋಗಮಾಯೆಯ

ಆದೇಶದಂತೆ, ಗೋಕುಲದಲ್ಲಿ ನಂದ ಗೋಪನ ಹೆಂಡತಿ ಯಶೋದೆಯ ಬಳಿಯಲ್ಲಿ

ಮಲಗಿಸಿ, ಅವಳು ಆಗತಾನೆ ಹಡೆದಿದ್ದ,ಹೆಣ್ಣುಮಗುವನ್ನು ಇಲ್ಲಿಗೆ ತಂದು ನಿನ್ನ ಪಕ್ಕ ಮಲಗಿಸಿದೆ.ನಿನಗೂ ಮತ್ತು ಯಶೋದೆಗೂ ಆಯಾಸದಿಂದ ನಿದ್ರೆ ಬಂದಿದ್ದರಿಂದ,ನಿಮಗೆ ಇದು ಗೊತ್ತಾಗಲೇ ಇಲ್ಲ. ಇದೊಂದು ದೈವೀಲೀಲೆ. ಎಲ್ಲವೂ ಕ್ಷಣಮಾತ್ರದಲ್ಲಿ ಹೂವಿನ ಸರ ಎತ್ತಿದಂತೆ

ನಡೆದು ಹೋಯಿತು. ನಮ್ಮ ಎಂಟನೇ ಮಗ ಗೋಕುಲದಲ್ಲಿ ಸುರಕ್ಷಿತವಾಗಿ ಇದ್ದಾನೆ.

ಅವನು ನಿನ್ನ ಅಣ್ಣ ದುರಾತ್ಮ ಕಂಸನನ್ನು ಸಂಹರಿಸಿ ನಮ್ಮನ್ನು ಈ ಸೆರೆಯಿಂದ ಬಿಡಿಸಿಯೇ ತೀರುತ್ತಾನೆ. ಗುರು ಗಾರ್ಗರ ನುಡಿಗಳು ಎಂದೂ ಸುಳ್ಳಾಗದು. ಅಷ್ಟೇ ಅಲ್ಲ,ನಿನಗೆ ಗರ್ಭಪಾತವಾದ ಏಳನೇ ಗರ್ಭವು ರೋಹಿಣಿಯಲ್ಲಿಮೊಳಕೆಯೊಡೆದು, ಬಲರಾಮನಾಗಿ ಸುರಕ್ಷಿತವಾಗಿ ಬೆಳೆಯುತ್ತಿದ್ದಾನೆ. ಇನ್ನು ಮುಂದೆ ನೀನು ದುಃಖ ಪಡುವ ಅಗತ್ಯವಿಲ್ಲ.

ಧೈರ್ಯವಾಗಿರು"

ವಸುದೇವನ ಮಾತುಗಳನ್ನು ಆಲಿಸಿದ ದೇವಕಿಗೆ ಆಶ್ಚರ್ಯವಾಗುತ್ತದೆ. ಹಾಗಾದರೆ ನನ್ನ ಕಂದನನ್ನು ಒಮ್ಮೆ ನೋಡಬೇಕು ಅಂತ ಅವಳ ತಾಯಿ ಹೃದಯ

ಸಂಭ್ರಮಿಸುತ್ತದೆ. ಕಣ್ಣುಗಳಲ್ಲಿ ನೋವು ಕರಗಿ ಹೊಳಪು ಹೊಮ್ಮುತ್ತದೆ.ಹೇಗಿದ್ದಾನೋ ಆ ನನ್ನ ಕಂದ?ಒಮ್ಮೆಯಾದರೂ ಅವನು ಬೆಳೆಯುತ್ತಿರುವುದನ್ನು ನೋಡುವ ಭಾಗ್ಯವಾದರೂ ನನಗೆಲ್ಲಿದೆ?

"ಆರ್ಯಪುತ್ರ,ನಾನು ಒಂದು ಬಾರಿಯಾದರೂ ಉಳಿದಿರುವ ನನ್ನ ಒಂದೇ ಒಂದು

ಕುಡಿಯನ್ನು ಕಣ್ಣಾರೆ ನೋಡಬೇಕು.ನನ್ನ ಅಣ್ಣ ಕಂಸ ಹೀಗೇಕೆ ಕ್ರೂರಿಯಾದ?ಮದುವೆಯಾದ ಮೊದಲ ದಿನದಿಂದಲೂ ನಿರಂತರವಾಗಿ ಈ ಸೆರೆವಾಸವೇ ನಮಗಾಯಿತಲ್ಲ,ಆ ನನ್ನ ಕಂದ ಕೃಷ್ಣ ಎಂದು ಬರುತ್ತಾನೆ? ಅಬ್ಬ, ಅವನ ಬಾಲ್ಯದ ಆಟಗಳನ್ನು

ಕಣ್ಣಾರೆ ಕಂಡು ಅನುಭವಿಸುತ್ತಿರುವ ಆ ಯಶೋದೆ ಎಷ್ಟು ಪುಣ್ಯವಂತೆ? ಕೃಷ್ಣ ನೀನು ಹೇಗಿದ್ದೀಯೋ? ನಾನು ನಿನ್ನನ್ನು ನೋಡಬೇಕು ಕಂದ."

ದೇವಕಿ ಒಂದೇ ಸಮನೆ ಪ್ರಲಾಪಿಸುತ್ತಿದ್ದಾಗ,ವಸುದೇವ

"ದೇವಕಿ ಅವನನ್ನು ನಾವು ಈಗ ನೋಡಲಾಗುವುದಿಲ್ಲ.ಸ್ವಲ್ಪ ಸಮಯ ಕಾಯಬೇಕು.

ಭರವಸೆಯನ್ನು ಕಳೆದುಕೊಳ್ಳಬೇಡ. ಈಗ ಮಲಗೋಣ."

ಹೆಂಡತಿಯನ್ನು ಸುಧಾರಿಸಿ ಸಾಕಾಗಿದ್ದ ವಸುದೇವನಿಗೆ ನಿದ್ರೆ ಹತ್ತಿತು.ಆದರೆ ದೇವಕಿಗೆ

ನಿದ್ರೆಯ ಸುಳಿವೇ ಇಲ್ಲ. ಅವಳು ಕುಳಿತುಕೊಂಡೇ ಇದ್ದಳು.ಅವಳ ಮನಸ್ಸಿನ ತುಂಬಾ ತನ್ನ ಕರುಳ ಕುಡಿಯದೇ ಕನಸು. ಅಲ್ಲಿಯೇ ಇದ್ದ ಒಂದು ದಿಂಬನ್ನು ಕೃಷ್ಣನೆಂದು ಭಾವಿಸುತ್ತಾ,ಅದಕ್ಕೆ ಲಾಲಿ ಹಾಡುತ್ತಾ, ಅದನ್ನು ತಟ್ಟುತ್ತಾ ಹುಚ್ಛಿಯಂತೆ ಆಡುತ್ತಿದ್ದಾಗ,ವಸುದೇವನ ಕರುಳು ಚುರಕ್ ಅನ್ನುತ್ತಿತ್ತು. ದೇವಕಿಯ ಈ ಪರಿಸ್ಥಿತಿಯನ್ನು ನೋಡುತ್ತಿದ್ದ ಸೆರೆಮನೆಯ ಕಾವಲುಗಾರರೂ ಕಣ್ಣೀರಿಡುತ್ತಿದ್ದರು.

ಆದರೆ ದೇವಕಿ ಕಂಡ ದ್ದೇ ಬೇರೆ. ಅವಳಿಗೆ ಮಾತ್ರ ಅವಳ ಕಂದ ನಿಜವಾಗಿಯೂ ಕಾಣಿಸಿಕೊಂಡು

ತಾಯಿಯ ಆಸೆಯನ್ನು ಪೂರೈಸಿದ್ದ. ಅವಳು ಕೃಷ್ಣನನ್ನು ಕಣ್ಣಾರೆ ಕಂಡು ಅವನನ್ನು

ಮುದ್ದಾಡುತ್ತಿದ್ದಳು. ಇದೊಂದು ಹೆತ್ತ ಕರುಳ ಅನಿರ್ವಚನೀಯ ಅನುಬಂದ.ಆದರೆ ಬೇರೆಯವರ

ಕಣ್ಣಿಗೆ ದೇವಕಿ ದಿಂಬನ್ನು ಮುದ್ದಿಸುವಂತೆ ಕಾಣುತ್ತಿತ್ತು. ಈ ತಾಯಿ ಮಗನ ಬಂಧನ ಬೇರೆಯವರಿಗೆ ಹೇಗೆ ಸಾಧ್ಯವಾಯಿತು?

ನಂದಗೋಕುಲದಲ್ಲಿ,ತೊಟ್ಟಿಲಲ್ಲಿ ಮಲಗಿದ್ದ ಪುಟ್ಟ ಕೃಷ್ಣನಿಗೆ ತನ್ನ ತಾಯಿಯ ಅಳು ಕೇಳಿಸಿತ್ತು.

ಸೆರೆಮನೆಯಲ್ಲಿ ದೇವಕಿ ಅಳುವಾಗ ಅಲ್ಲಿ ಪುಟ್ಟ ಕಂದ ಕೃಷ್ಣನೂ ಅಳುತ್ತಿದ್ದನು.ಅಮ್ಮನ ದುಃಖವನ್ನು ಅರಿತ ಆ ಪುಟ್ಟ ಶಿಶು ಹೆತ್ತಮ್ಮನ ಮಡಿಲನ್ನು

ಸೇರಿ, ಅವಳ ದುಃಖವನ್ನು ಕಡಿಮೆ ಮಾಡುತ್ತಿತ್ತು.ಕರುಳ ಕುಡಿಗಾಗಿ ದೇವಕಿ ಸಂಕಟ

ಪಡುತ್ತಿದ್ದರೆ, ಹೆತ್ತ ಅಮ್ಮನ ದುಃಖವನ್ನು ಕಡಿಮೆ ಮಾಡಲು ಮಗು ಓಡೋಡಿ ಬರುತ್ತಿತ್ತು. ಇದೊಂದು ಅಮ್ಮ ಮಗುವಿನ ಕರುಳ ಸಂಬಂಧ ವಲ್ಲದೆ ಮತ್ತೇನು?

ಹಾಗೇ ದೈವಿಕ ಅನುಬಂಧವೂ ಇದಾಗಿತ್ತು.

ಹೀಗೆ ತನ್ನ ಹೆತ್ತ ಅಮ್ಮ ಹಾಗೂ ಅಪ್ಪನಿಗೆ ಭರವಸೆಯ ಬೆಳಕಾದ ಕೃಷ್ಣ ಗೋಕುಲದಲ್ಲಿ

ತನ್ನ ಬಾಲ ಲೀಲೆಗಳಿಂದ ಯಶೋದೆಯನ್ನೂ ತೃಪ್ತಿ ಪಡಿಸುತ್ತಿದ್ದ. ನವನೀತ ಚೋರ,ಗೋಪೀ

ಜನ ಪ್ರಿಯ, ಕಳ್ಳ ಕೃಷ್ಣ ತನ್ನ ವಿಪರೀತ ತುಂಟಾಟಗಳಿಂದ,ಯಶೋದೆಯನ್ನು, ರೇಗಿಸುತ್ತಿದ್ದ,

ನಗಿಸುತ್ತಿದ್ದ ,ಅಳಿಸುತ್ತಿದ್ದ, ತನ್ನ ಬಾಯಿಯಲ್ಲಿ ವಿಶ್ವರೂಪವನ್ನೇ ತೋರಿಸಿದ ವಿಶಿಷ್ಟ ಶಿಶು.

ತೊಟ್ಟಿಲಲ್ಲಿರುವಾಗಲೇ ಪೂತನಿಯನ್ನು ಕೊಂದ ಅಧ್ಬುತ ಕಂದ ,ನಂತರ ಶಕಟಾಸುರ,ಬಕಾಸುರ,

ಅಘಾಸುರ,ಮುಷ್ಟಿಕ,ಚಾಣೂರರನ್ನು ಮುಗಿಸಿದ ಮಗು,.

ಮುಂದೆ ಅವನ ಅದ್ಭುತ ಲೀಲೆಗಳುಗೋಕುಲದಲ್ಲಿ ನಡೆಯುತ್ತಿದ್ದರೂ,ದೇವಕಿ ಸೆರೆಯಲ್ಲಿದ್ದುಕೊಂಡೆ

ಎಲ್ಲವನ್ನು ತನ್ನ ಒಳಗಣ್ಣಿನಿಂದ ನೋಡುತ್ತ, ಅವನ ವೇಣುಗಾನವನ್ನು ಒಳಗಿವಿಯಿಂದ ಕೇಳುತ್ತಾ,

ಅವನ ಬರುವಿಕೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು.ಅವಳ ಕಂದ ಗೋಕುಲದಲ್ಲಿ ಬೆಳೆಯುತ್ತಿದ್ದರೂ ,

ಹೆತ್ತ ಅಮ್ಮ ದೇವಕಿ ಸಂಕಟ ಪಟ್ಟಾಗಲೆಲ್ಲಾ, ಅವಳ ಬಳಿಗೆ ಓಡಿ ಬರುತ್ತಿದ್ದ. ಈ ತಾಯಿ ಮಕ್ಕಳ ದೈವಿಕ

ಅನುಬಂಧ ಹೊರಕಣ್ಣಿಗೆ ಕಾಣುವಂತದ್ದಾಗಿರಲಿಲ್ಲ.

ಕೃಷ್ಣ ಬೆಳೆದು ದೊಡ್ಡವನಾದಾಗ, ಮಥುರಾ ನಗರದ ದೊರೆ ಕಂಸನ ಪರಿಚಯವಾಗುತ್ತ ಹೋಯಿತು. ತನ್ನ ಹೆತ್ತ ತಂದೆ ತಾಯಿಯನ್ನು ಸೆರೆಯಲ್ಲಿಟ್ಟಿರುವ ಕಂಸ ತನ್ನ ಸ್ವಂತ ಸೋದರಮಾವನೆಂಬುದೂ ತಿಳಿಯಿತು. ಒಮ್ಮೆ ಕಂಸನ ಆದೇಶದ ಮೇರೆಗೆ ,ಕೃಷ್ಣ ಬಲರಾಮರು ಮಥುರೆಗೆ ಹೋಗಿ, ಕಂಸನನ್ನು ನೋಡಿದರು. ತನ್ನ ಶತ್ರುವನ್ನು ಮುಗಿಸಬೇಕೆಂದು ಕಂಸ ಕೃಷ್ಣನನ್ನು ಕೊಲ್ಲುವ ಪ್ರಯತ್ನ ಮಾಡಿದ್ದರೆ, ಲೊಕೋದ್ಧಾರಕನ ಉಪಾಯವೇ ಬೇರೆಯಾಗಿತ್ತು.

ಕೊನೆಗೂ ಸೋದರಮಾವ ಕಂಸನನ್ನು ಕೊಂದ ಕೃಷ್ಣ ಬಲರಾಮರು, ತಮ್ಮ ಹೆತ್ತವರನ್ನು ಸೆರೆಯಿಂದ

ಬಿಡಿಸಿ,ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು.ಎಷ್ಟೋ ವರ್ಷಗಳ ನಂತರ ಮಕ್ಕಳನ್ನು ನೋಡಿದ ಅವರಿಬ್ಬರೂ ಪರಮಾನಂದವನ್ನು ಅನುಭವಿಸಿದರು.

ತಾಯಿ ದೇವಕಿಯ ಕಣ್ಣುಗಳು ತುಂಬಿರುವುದನ್ನುನೋಡಿ,ಕೃಷ್ಣ ಅವಳಲ್ಲಿ ಕ್ಷಮೆ ಕೋರಿದ್ದನು.

"ಅಮ್ಮ, ನಾನು ನಿನ್ನ ಗರ್ಭದಲ್ಲಿ ಕುಳಿತು,ನಿನಗೆ ಈ ಕಾಲುಗಳಿಂದ ಒದ್ದು, ಉದರದಲ್ಲೆಲ್ಳಾ

ಸುತ್ತಾಡಿ ಎಷ್ಟೊಂದು ಹಿಂಸೆ ಕೊಟ್ಟಿದ್ದನಲ್ಲ, ಅದಕ್ಕಾಗಿ ನನ್ನನ್ನು ಕ್ಷಮಿಸಿಬಿಡು ತಾಯಿ.

ನನ್ನ ದೆಸೆಯಿಂದ ನೀನು ನಿತ್ಯ ದುಃಖಿಸುತ್ತಿದ್ದರೂ ನಿನ್ನನ್ನು ಈ ಸೆರೆಯಿಂದ ಬಿಡಿಸುವುದು

ಇಷ್ಟು ತಡವಾಯಿತಲ್ಲ, ತಂದೆ ತಾಯಿಯರಾದ ನಿಮಗೆ ಮಕ್ಕಳ ಪಾಲನೆಯ ರೂಪವಾದ ಯಾವ

ಆನಂದ ಸಿಗಬೇಕಾಗಿತ್ತೋ ಅದನ್ನು ನಾವು ನಿಮಗೆ ಕೊಡಲಾಗಲಿಲ್ಲ.ನೀವು ನಿತ್ಯವೂ ಕಂಸನ

ಭಯದಿಂದ ಕಾಲ ಕಳೆಯಬೇಕಾಯಿತು.ಅಮ್ಮ ನಮ್ಮನ್ನು ಕ್ಷಮಿಸಿಬಿಡಿ"

"ಮಗು, ನನ್ನ ಪೂರ್ವಜನ್ಮದ ಕರ್ಮಫಲಗಳಿಗಾಗಿ ಈ ರೀತಿ ಶಿಕ್ಷೆ ಅನುಭವಿಸಬೇಕಾಯಿತಾದರೂ,

ಸಾಧು ಸಂತರಿಗೆ ಕಂಟಕನಾಗಿದ್ದ ನನ್ನ ಅಣ್ಣನ ಸಂಹಾರವಾಗಬೇಕಾಗಿತ್ತು. ಅದಕ್ಕಾಗಿ ನಾನು

ನಿನ್ನಿಂದ ದೂರವಾಗಬೇಕಾದ ಪರಿಸ್ಥಿತಿ ಬಂತು. ಇನ್ನಾದರೂ ನೀನು ನನ್ನನ್ನು ಬಿಟ್ಟು ಎಲ್ಲಿಯೂ

ಹೋಗಬೇಡ ಕೃಷ್ಣ" ದೇವಕಿ ಗದ್ಗದಳಾಗುತ್ತಾಳೆ.

ಅವಳಿಗೆ ಎಲ್ಲವೂ ಅಯೋಮಯವಾಗಿ ಕಾಣುತ್ತಿದೆ. ಕೃಷ್ಣ ನನ್ನುಒಂದೇ ಸಮನೆ ದಿಟ್ಟಿಸುತ್ತಿದ್ದಾಳೆ.ಅವಳ ಮಾತೃ ಹೃದಯ ತುಂಬಿ ಹೋಗಿದೆ.

ಕಿಶೋರಾವಸ್ಥೆಯಲ್ಲಿದ್ದ ತನ್ನ ಮುದ್ದು ಕಂದ ಕೃಷ್ಣನನ್ನುಕಣ್ಣಾರೆ ಕಂಡ ದೇವಕಿಗೆ ಆನಂದವಾಗುತ್ತದೆ.

ಅವನದು ಎಂತಹ ರೂಪ?ಏನು ಆಕರ್ಷಣೆ? ಪೀತಾಂಬರಧಾರಿ,ಕಸ್ತೂರಿ ತಿಲಕ,ತಲೆಯಲ್ಲಿ ನವಿಲುಗರಿ,ಕೈಯಲ್ಲಿ ಕೊಳಲು,ನೀಲಮೇಘಶ್ಯಾಮ,ಅಬ್ಬಾ, ನನ್ನ ಕಂದ ಇಷ್ಟು ಸುಂದರನೆ? .

ಅವನನ್ನು ಬಾಚಿ ತಬ್ಬಿಕೊಳ್ಳುತ್ತಾಳೆ. ಹೆತ್ತ ಮಗನ ಮುಖವನ್ನು ಎಷ್ಟೋ ವರ್ಷಗಳ ನಂತರ ನೋಡುತ್ತಿರುವ ಅವಳು, ಅವನನ್ನು ಬಿಗಿಯಾಗಿ ಹಿಡಿದು,ಮುತ್ತಿನ ಮಳೆಗರೆಯುತ್ತಿದ್ದಾಳೆ.

ಇಂದಿಗೆ ತನ್ನ ಬದುಕು ಸಾರ್ಥಕವಾಯಿತೆಂದು ಹರ್ಷಿಸುತ್ತಿದ್ದ, ಅವಳ ಕಣ್ಣುಗಳಿಂದ

ಆನಂದ ಭಾಷ್ಪ ಜಿನುಗುತ್ತಿರುತ್ತದೆ.ಅವಳು ಮಗನನ್ನು ತನ್ನ ತೆಕ್ಕೆಯಿಂದ ಹೊರಹೋಗದಂತೆ ಬಿಗಿಯಾಗಿ ಅಪ್ಪಿಕೊಂಡಿಯೇ ಇದ್ದರೆ,ಬಹಳ ವರ್ಷಗಳ ನಂತರ, ದೊರೆತಿರುವ ಹೆತ್ತ ತಾಯಿಯ ಆಲಿಂಗನ ಸೌಖ್ಯವನ್ನು ಕೃಷ್ಣನೂ ಅನುಭವಿಸುತ್ತಿದ್ದಾನೆ.



Rate this content
Log in

Similar kannada story from Classics