STORYMIRROR

Shridevi Patil

Classics Inspirational Others

4  

Shridevi Patil

Classics Inspirational Others

ಇಷ್ಟದೇವತೆ. ಭಾಗ 12.

ಇಷ್ಟದೇವತೆ. ಭಾಗ 12.

2 mins
597


ಗಿರಿಜೆಯು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದಳು ನಿಜ , ಆದರೆ ಅವಳ ನಿರೀಕ್ಷೆ ಈಡೇರುವ ಲಕ್ಷಣಗಳೇನೂ ಕಾಣಲಿಲ್ಲ. ಈಗಂತೂ ಅವಳೂ ಕತ್ತೆ ತರಹ ದುಡಿಯಬೇಕಿತ್ತು. ಎಲ್ಲರ ಚಾಕರಿ ಮಾಡುವ ಆಳಿನಂತಾಗಿದ್ದಳು. ಎದುರು ಮಾತನಾಡುವ ಹಾಗಿಲ್ಲ, ಗಂಡನೋ ಮೂರು ಹೊತ್ತು ಹೊಲ ಹೊಲ ಅನ್ನುತ್ತಾ ಅಲ್ಲೇ ಇರುತ್ತಿದ್ದನು. ಇವಳ ಪಾಡು, ಇವಳ ಗೋಳು ಕೇಳುವವರಿಲ್ಲವೇನೋ ಅನ್ನುವಂತಾಗಿತ್ತು.


ಇತ್ತ ಅತ್ತೆ ಹೊಸ ಕೆಲಸಕ್ಕೆ ಕೈ ಹಾಕಿದ್ದು,ಆ ಕೆಲಸಕ್ಕೆ ತನ್ನಿಬ್ಬರು ಚಿಕ್ಕ ಸೊಸೆಯರೊಡಗೂಡಿ ಬೆಳಗ್ಗೆ ಹೋಗುವುದು ರಾತ್ರಿ ಬರುವುದು ಮಾಡುತ್ತಿದ್ದರು. ಹೀಗೆ ವಾರ , ಹದಿನೈದು ದಿನ, ತಿಂಗಳು ಕಳೆಯತೊಡಗಿತು. ಪಾಪಾ ಅವಳು ತಾನೇ ಒಬ್ಬಳೇ ಏನು ಮಾಡಿಯಾಳು ? ಸುಸ್ತಾದರೂ ಸಹ ಮಾಡಲೇಬೇಕಿತ್ತು. ಹೀಗೆ ಸ್ವಲ್ಪ ದಿನ ಕಳೆಯಲು ಅವಳು ಮತ್ತೆ ತಾಯಿಯಾಗುತ್ತಿರುವುದು ಗೊತ್ತಾಯಿತು. ಅತ್ತೆ, ನೋಡವ್ವ ಈ ಸಲ ನನಗೆ ವಾರಸದಾರ ಬೇಕೇ ಬೇಕು. ಹೆಣ್ಣು ಹೆತ್ತು ಹೆತ್ತು ಇಟ್ಟರೆ ಅವರ ಚಾಕರಿ ಮಾಡೋರ್ಯಾರು? ನನ್ನ ಮಗ ಅವರ ಚಾಕರಿ ಮಾಡ್ಕೋತಾ ಕುಂತ್ರ, ಅವಗ ಹೆಗಲಿಗೆ ಹೆಗಲು ಕೊಡಾಕ ಒಬ್ಬ ಪುತ್ರ ಬ್ಯಾಡನು ಅಂತ ಬೈಯುತ್ತಿದ್ದರು.


ಅವಳು ಸಹ ತಡೆದು, ತಡೆದು , ಕೋಪದ ಕಟ್ಟೆ ಒಡೆದು ಇವತ್ತು ಹರಿಯತೊಡಗಿತ್ತು. ಅತ್ತೆವ್ವಾರ, ಅದೆನ್ ನನ್ನ ಕೈಯಾಗ್ ಐತೆನು ಹೇಳ್ರಿ? ಹಂಗೇನಾದ್ರ ಇದ್ದಿದ್ರ ಇಷ್ಟ ಸಲ ನಿಮ್ಮ ಕಡೆ ಹೇಳಿಸ್ಕೊಂತಿರಲಿಲ್ಲ , ಜೊತೆಗೆ ಇಷ್ಟು ಬೈಸ್ಕೊತಾನು ಇರಲಿಲ್ಲ. ನೀವು ಒಬ್ರು ಹೆಣ್ಣ ಮಗಳು ಅದಿರಿ, ಸ್ವಲ್ಪ ತಿಳಿದು ನೋಡ್ರಿ ಅಂತ ದನಿ ಏರಿಸಿ ಮಾತಾಡಿ ಬಿಟ್ಟಿದ್ದಳು.


ಅತ್ತೆಗೆ ಪಿತ್ತ ನೆತ್ತಿಗೆ ಏರಿಯಾಗಿತ್ತು. ಏನವಾ ನಂಗ್ ಹೊಳ್ಳಿ ಮಾತಾಡಷ್ಟು ಕಲಕೊಂಡ ಬಂದಿ ಬಿಡು ಮತ್ತ ಈ ಸಲ ಊರಿಗೆ ಹೋದಾಗ. ಇರಲಿ ನೋಡ್ಕೊಂತನಿ, ಟೈಂ ಬರಲಿ, ಮಗ ರಾತ್ರಿ ಹೊಲದಿಂದ ಬರ್ಲಿ ಐತಿ ನಿನಗ್ ಅನ್ಕೊಂತಾ ಹೊರಗ ಕುಂತಿರೋ ಮಾವನ ಮುಂದ ಇಲ್ಲ ಸಲ್ಲದ ಹೇಳಾಕ ಶುರು ಮಾಡಿದ್ಲು.


ರಾತ್ರಿ ಆತು, ಶಂಭು ಬಂದ. ಬರೋದ ತಡ ಇಲ್ಲದ ಅವ್ವ ಶುರು ಹಚ್ಚಿಕೊಂಡ್ಲು. ಮೊದಲ ಬೋರಿನ ಮೋಟಾರ್ ಕೆಟ್ಟು ತಲಿನೂ ಕೆಟ್ಟ ಹೋಗಿತ್ತು . ಆಗ ಅವ ಹೇಳಿದ್ದ ಕೇಳಿ ತಲಿ ಗಿರ್ ಅಂದು, ಗಿರಿಜೆ ಜೊತೆಗೆ ಜಗಳ ಮಾಡಿ, ಒಂದೆರಡು ಏಟು ಜೋರಾಗಿ ಹೊಡದೆ ಬಿಟ್ಟನು. ಪಾಪ ಅವಳು ತಾನೇ ಏನು ಮಾಡಿಯಾಳು? ಹೊಡಿಸಿಕೊಂಡು ಹೋಗಿ ಅಳುತ್ತಾ ಮಲಗಿದಳು,ಗರ್ಭಿಣಿ ಬೇರೆ,ಊಟನೂ ಇಲ್ಕ ಏನೂ ಇಲ್ಲ.. ಕರೆದು ನೀಡುವವರು ಯಾರು?


ಹೀಗೆ ದಿನ ಕಳೆಯಲು ,ಅವಳಿಗೆ ಒಂಬತ್ತು ತಿಂಗಳು ಮುಗಿಯಲು ಬಂದಿತ್ತು. ಅತ್ತೆ ಒಟ್ಟ ತಲೆ ಕೆಡಿಸಿಕೊಳ್ಳದೆ ತಾನಾಯಿತು,ತನ್ನ ಓಡಾಟವಾಯಿತು ಅಂತ ಇದ್ದು ಬಿಟ್ಟಳು.


ಕಳೆದ ಬಾರಿ ತಾನೇ ಬಾಣಂತನ ಮಾಡಿಸಿದ್ದಳು. ಈ ಬಾರಿ ಯಾವುದನ್ನು ಮಾಡಲು ಯೋಚನೆ ಮಾಡಲಿಲ್ಲ. ಪಟೇಲಪ್ಪ ಮಾತಾಡಲು ಬಂದರೆ ಆತನ ಬಾಯಿಯನ್ನೂ ಕೂಡ ಮುಚ್ಚಿಸಿ ಬಿಡುತ್ತಿದ್ದಳು. ಹೀಗಾಗಿ ಹೆರಿಗೆ ನೋವು ಶುರುವಾದಾಗ ತಾನೇ ಕಷ್ಟ ಪಟ್ಟು ನೀರು ಕಾಯಿಸಿ ಇಟ್ಟುಕೊಂಡು, ಒಂದು ಕುಡುಗೋಲನ್ನು ತೊಳೆದು ವರೆಸಿ ಹಸನ ಮಾಡಿಟ್ಟುಕೊಂಡು ( ಹೊಕ್ಕಳ ಬಳ್ಳಿ ಕತ್ತರಿಸಿಕೊಳ್ಳಲು) ನೋವು ಅನುಭವಿಸುತ್ತಿದ್ದಳು.


ಅಂದರೆ ತನ್ನ ಹೆರಿಗೆಯನ್ನು ತಾನೇ ಮಾಡಿಕೊಂಡರಾಯಿತೆಂದು ಯೋಚನೆ ಮಾಡಿಕೊಂಡಿದ್ದಳು..


ಮುಂದಿನ ಭಾಗದಲ್ಲಿ ಅವಳ ಹೆರಿಗೆ ಹೇಗಾಯಿತು? ಯಾರು ಹೆರಿಗೆ ಮಾಡಿಸಿಕೊಂಡರು ಅಂತ ನೋಡೋಣ.....






Rate this content
Log in

Similar kannada story from Classics