Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ವಂಶೋದ್ಧಾರಕ

ವಂಶೋದ್ಧಾರಕ

3 mins
311


 


ಮೂರು ಹೆಣ್ಣು ಮಕ್ಕಳ ನಂತರ ನಾಲ್ಕನೆಯ ಮಗು ಗಂಡಾದಾಗ, ರಾಮರಾವ್ ಹಾಗೂ ರಮಾದೇವಿಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಅಂತೂ ಇಂತೂ ತಮ್ಮ ಮನೆಯ ವಂಶೋದ್ಧಾರಕ ಬಂದನೆಂದು ಇಬ್ಬರಿಗೂ ತುಂಬಾ ಸಂತೋಷವಾಗಿತ್ತು. ಮೊದಲ ಮಗು ಹೆಣ್ಣಾದಾಗ ಮಹಾಲಕ್ಷ್ಮಿ ಬಂದಳೆಂದು ಖುಷಿ ಪಟ್ಟ ಅವರಿಬ್ಬರೂ ಅವಳಿಗೆ ಮಹಾಲಕ್ಷ್ಮಿ ಎಂದೇ ಹೆಸರಿಟ್ಟಿದ್ದರು. ಮೂರು ವರ್ಷಗಳ ನಂತರ ಮತ್ತೊಂದು ಹೆಣ್ಣು ಮಗು ಹುಟ್ಟಿದಾಗ, ಗಂಡು ಮಗುವನ್ನು ಬಯಸಿದ್ದ ಅವರಿಗೆ ನಿರಾಸೆಯಾಗಿತ್ತು. ಆದರೂ ತಮ್ಮ ಮಗುವೆಂಬ ಮಮತೆ ಅವರಲ್ಲಿ ಉಕ್ಕಿ ಹರಿದು ಮಮತಾ ಎಂದು ನಾಮಕರಣ ಮಾಡಿದ್ದರು. ಎರಡು ಮಕ್ಕಳಾದ ಮೇಲೆ ಸಾಕೆಂದು ಸುಮ್ಮನಾಗೋಣವೆಂದು ಕೊಂಡಿದ್ದ ರಾಮರಾವ್ ದಂಪತಿಗಳಿಗೆ ತಮ್ಮ ವಂಶ ಉದ್ದಾರವಾಗದೇ ಹಾಗೇ ಉಳಿದುಬಿಡುತ್ತದೋ ಎಂಬ ಹತಾಶೆ ಕಾಡತೊಡಗಿ ಮತ್ತೊಂದು ಮಗುವಿಗೆ ಧೈರ್ಯವಾಗಿ ತಯಾರಾದರು.

ಈ ಬಾರಿಯೂ ಹೆಣ್ಣು ಮಗುವೇ ಆದಾಗ ರಾಮರಾವ್ ಮತ್ತು ರಮಾದೇವಿ ಇಬ್ಬರಿಗೂ ತುಂಬಾ ನೋವಾಯಿತು.

ವಂಶೋದ್ಧಾರಕ ಬೇಕೆಂದು ಒಂದರ ಹಿಂದೆ ಒಂದರಂತೆ ಮೂವರು ಹೆಣ್ಣು ಮಕ್ಕಳು ಹುಟ್ಟಿದಾಗ, ಅವರ ಜವಾಬ್ದಾರಿಯೂ ಹೆಚ್ಚಾಗಿ, ಸ್ವಲ್ಪ ಚಿಂತೆಯೂ ಆಯಿತು. ಮೂರನೇ ಮಗುವಿಗೆ ಮುಕ್ತ ಎಂದು ಹೆಸರಿಟ್ಟಿದ್ದರು. ಮೂರು ಹೆಣ್ಣು ಮಕ್ಕಳಿದ್ದರೂ ಆ ದಂಪತಿಗಳಿಗೆ ಗಂಡು ಮಗನಿಲ್ಲದ ಕೊರಗು ಕಾಡುತ್ತಲೇ ಹೋಗಿತ್ತು. ಜ್ಯೋತಿಷಿಗಳ ಬಳಿ ತಮ್ಮ ಜಾತಕಗಳನ್ನು ತೋರಿಸಿ, ತಮಗೆ ಪುತ್ರ ಸಂತಾನ ಯೋಗವಿದೆಯೆ? ಎಂದು ಕೇಳಿದಾಗ, ಒಂದಿಬ್ಬರು ಜ್ಯೋತಿಷಿಗಳು ಖಂಡಿತ ಪುತ್ರ ಯೋಗವಿದೆ ಎಂದಾಗ, ಮತ್ತೆ ಮತ್ತೊಂದು ಸಂತಾನಕ್ಕೆ ಪ್ರಯತ್ನಿಸಿದರು.

ಅಂತೂ ಇಂತೂ ಮೂರು ಹೆಣ್ಣು ಮಕ್ಕಳ ನಂತರ ಈಗ ಗಂಡು ಮಗುವಾದಾಗ ಆ ದಂಪತಿಗಳ ಸಂಭ್ರಮ ಹೇಳತೀರದಾಯಿತು.

ವಂಶೋದ್ಧಾರಕ ಮಗನಿಗೆ ನಾಮಕರಣ, ಅನ್ನಪ್ರಾಶನ, ಚೌಲ ಎಲ್ಲವೂ ಅದ್ಧೂರಿಯಾಗಿ ನೆರವೇರಿಸಿದರು. ತಮ್ಮ ಮಗನಿಗೆ "ಮನು"ಎಂದು ಹೆಸರಿಟ್ಟರು ರಾಮರಾವ್. ಮಗನನ್ನು ಅಂಗೈಯಲ್ಲಿ ಇಟ್ಟು ಮುಂಗೈ ಮುಚ್ಚಿ ಸಾಕತೊಡಗಿದರು. ಮೂರು ಹೆಣ್ಣು ಮಕ್ಕಳು ಒಂದು ತೂಕವಾದರೆ, ಮಗನಿಗೇ ಬೇರೆ ತೂಕ. ಮೂರು ಹೆಣ್ಣು ಮಕ್ಕಳಿಗೆ ಇದ್ದ ನೀತಿ, ಶಿಸ್ತು ನಿಯಮಗಳು ಮಗನಿಗೆ ಇರುತ್ತಿರಲಿಲ್ಲ. ನಾಲ್ಕು ಮಕ್ಕಳೂ ಬೆಳೆದು ದೊಡ್ಡವರಾದರು. ಮಗನನ್ನು ಎಲ್ಲರೂ ಮುದ್ದಿನಿಂದ ನೋಡಿ, ಅವನು ಕೇಳಿದ್ದನ್ನು ಒಂದು ಕ್ಷಣದಲ್ಲಿ ತಂದು ನೀಡುತ್ತಿದ್ದರು. ಹೀಗಾಗಿ ಆ ಮಗ ಹಠಮಾರಿಯಾದ. ಹೆಣ್ಣು ಮಕ್ಕಳಿಗೆ ಎಸ್.ಎಸ್.ಎಲ್.ಸಿ.ವರೆಗೆ ಓದಿಸಿದ ರಾಮರಾವ್ ಅವರ ಓದನ್ನು ಅಷ್ಟಕ್ಕೇ ನಿಲ್ಲಿಸಿ, ಮನೆಗೆಲಸಗಳನ್ನು ಚೆನ್ನಾಗಿ ಕಲಿಯುವಂತೆ ಹೇಳಿದಾಗ, ಹೆಣ್ಣು ಮಕ್ಕಳಿಗೆ ತುಂಬಾ ಬೇಸರವಾಯಿತು. ತಂದೆಯ ತಾರತಮ್ಯದಿಂದ ಮನನೊಂದು ಸುಮ್ಮನಾದರು. ಆದರೆ ಅವರ ಕೊನೆಯ ಹೆಣ್ಣು ಮಗಳು ಮುಕ್ತ ಮಾತ್ರ ತಾನು ಮುಂದೆ ಓದಲೇಬೇಕೆಂದು ಹಠ ಹಿಡಿದು ಕುಳಿತಾಗ, ಅವಳನ್ನು

ಕಾಲೇಜಿಗೆ ಸೇರಿಸಲೇಬೇಕಾಯಿತು ರಾಮರಾವಗೆ.

ಮಹಾಲಕ್ಷ್ಮಿ ಮತ್ತು ಮಮತಾ ಇಬ್ಬರಿಗೂ ಹದಿನೆಂಟು ತುಂಬಿದ ಕೂಡಲೇ ಅನುಕೂಲಸ್ಥರ ಮನೆಗೆ ಕೊಟ್ಟು ವಿವಾಹವನ್ನೂ ಮಾಡಿ ಮುಗಿಸಿದರು. ಈಗ ಮುಕ್ತಾ ಮತ್ತು ಮನು ಇಬ್ಬರೇ ಮನೆಯಲ್ಲಿ. ತನ್ನ ತಂದೆ ಮತ್ತು ತಾಯಿ ಇಬ್ಬರೂ ಮನು ಏನೇ ತಪ್ಪು ಮಾಡಿದರೂ ಅವನ ಪರವಾಗಿ ನಿಲ್ಲುತ್ತಿದ್ದಾಗ, ಅವರ ಪುತ್ರ ವ್ಯಾಮೋಹವನ್ನು ಕಂಡು , ಮುಕ್ತ ಎದುರು ವಾದಿಸುತ್ತಿದ್ದಳು. ಆಗೆಲ್ಲಾ ರಾಮರಾವ್ ಮತ್ತು ರಮಾದೇವಿ ಇಬ್ಬರೂ ಮುಕ್ತಾ ಳ ಬಾಯಿ ಮುಚ್ಚಿಸುತ್ತಿದ್ದರು.


ಮುಂದೆ ರಾಮರಾವ್ ವಂಶೋದ್ಧಾರಕ ತನಗೆ ಹೇಗೆ ಬೇಕೋ ಹಾಗೆ ಬೆಳೆಯುತ್ತಾ, ಅಪ್ಪನಿಂದ ಹಣ ವಸೂಲಿ ಮಾಡುತ್ತಾ ಗೂಂಡಾಗಿರಿ ಮಾಡುತ್ತಾ ಹೋದ. ಮಗನಿಗೆ  ಉನ್ನತ ಶಿಕ್ಷಣ ಕೊಡಿಸುವ ಮಹದಾಸೆಯನ್ನು ಹೊತ್ತಿದ್ದ ರಾಮರಾವಗೆ ಮನು ಎಸ್.ಎಸ್.ಎಲ್.ಸಿ.ಯಲ್ಲೇ ಮೂರು ನಾಲ್ಕು ಬಾರಿ ಫೇಲ್ ಆಗಿ ತನ್ನ ವಿದ್ಯಾಭ್ಯಾಸವನ್ನು ಅಷ್ಟಕ್ಕೇ ಮೊಟಕುಗೊಳಿಸಿ , ಮನಸೋಇಚ್ಛೆ ಇರತೊಡಗಿದಾಗ, ರಾಮರಾವಗೆ ಪಶ್ಚಾತ್ತಾಪವಾಗತೊಡಗಿತು. ತರಗತಿಗೇ ಮೊದಲನೆಯವರಾಗಿ ಚೆನ್ನಾಗಿ ಓದುತ್ತಿದ್ದ ತಮ್ಮ ಇಬ್ಬರು ಹೆಣ್ಣುಮಕ್ಕಳು ಮಹಾಲಕ್ಷ್ಮಿ ಮತ್ತು ಮಮತಾ ಕಾಲೇಜಿಗೆ ಸೇರುತ್ತೇವೆ ಎಂದು ಇನ್ನಿಲ್ಲದ ಹಾಗೆ ಕೇಳಿಕೊಂಡರೂ, ಹೆಣ್ಣು ಮಕ್ಕಳಿಗೇಕೆ ಕಾಲೇಜು ವಿದ್ಯಾಭ್ಯಾಸವೆಂದು ಅವರನ್ನು ಮುಂದೆ ಓದಿಸಲಿಲ್ಲ. ಆದರೆ ತಮ್ಮ ವಂಶೋದ್ಧಾರಕ ಮಗ ಮನುವನ್ನು ತುಂಬಾ ಓದಿಸಿದರೆ, ಅವನು ಒಳ್ಳೆಯ ಕೆಲಸ ಹಿಡಿದು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಭ್ರಮೆಯಲ್ಲಿ ಇದ್ದ ರಾಮರಾವ್ಗೆ ಈಗ ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು.

"ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?" ಈಗ ಮಗ ಮನು ತನಗೆ ತೋಚಿದ ರೀತಿಯಲ್ಲಿ ಬದುಕುತ್ತಿದ್ದ. ವಿದ್ಯೆಯಿಲ್ಲ, ಕೆಲಸವಿಲ್ಲ, ಮದುವೆ ಹೇಗೆ ಆಗುತ್ತದೆ? ಗೊತ್ತು ಗುರಿಯಿಲ್ಲದೆ ಅಪ್ಪನ ದುಡ್ಡಿನಲ್ಲಿ ಎಲ್ಲೆಂದರಲ್ಲಿ ತಿರುಗುತ್ತಿದ್ದ. ಮಗನನ್ನು ನೋಡುವಾಗ ರಾಮರಾವ್ ಖಿನ್ನರಾಗುತ್ತಿದ್ದರು.

ಮುಂದೆ ಮೂರನೇ ಮಗಳು ಮುಕ್ತ ಇಂಜಿನಿಯರಿಂಗ್ ಕೋರ್ಸ್ ಮುಗಿಸಿ, ಒಳ್ಳೆಯ ಕೆಲಸಕ್ಕೆ ಸೇರಿದಾಗ, ರಾಮರಾವ್ಗೆ ತುಂಬಾ ಸಮಾಧಾನವಾಯಿತು. ಅವರು ವಂಶೋದ್ಧಾರಕ ಬೇಕೆಂಬ ಏಕೈಕ ಆಸೆಯಿಂದ, ಮಗನನ್ನು ಪಡೆದು, ಕೇವಲ ಪುತ್ರ ವ್ಯಾಮೋಹದಿಂದ ಮಗನನ್ನು ಅವನಿಚ್ಚೆಯಂತೆ ಬೆಳೆಯಲು ಬಿಟ್ಟಿದ್ದು ತಮ್ಮ ತಪ್ಪಾಯಿತು ಎಂದು ಪಶ್ಚಾತ್ತಾಪ ಪಡುತ್ತಿದ್ದರು .

"ಕುವರನಾದೊಡೆ ಬಂದ ಗುಣವೇನದರಿಂದ

ಕುವರಿಯಾದೊಡೆ ಕುಂದೇನು ?

ಇವರೀರ್ವರೊಳೇಳ್ಗೆ ಪಡೆದವರಿಂದ

ಸವನಿಪುದು ಇಂತಹ ಪರ ಸೌಖ್ಯ " ಈ ಮಾತಿನ ಅರ್ಥ ಅವರಿಗಾಗಿತ್ತು.

ನಿಜ ನಮ್ಮ ಸಮಾಜದಲ್ಲಿ ಗಂಡು ಮಕ್ಕಳಿಗೇಕೆ ಹೆಚ್ಚುಗಾರಿಕೆ ?



Rate this content
Log in

Similar kannada story from Abstract