Vijaya Bharathi.A.S.

Abstract Classics Others

2.5  

Vijaya Bharathi.A.S.

Abstract Classics Others

ವಧು ಬೇಕು ವಧು

ವಧು ಬೇಕು ವಧು

3 mins
398


ನವೀನ್ ಗೆ ಈ ಜನವರಿಗೆ ಮೂವತ್ತೈದು ತುಂಬಿದಾಗ, ರಾಮರಾವ್ ಗೆ ಯೋಚನೆಯಾಯಿತು. ಸತತವಾಗಿ ಒಂದು ವರ್ಷದಿಂದ ನವೀನ್ ನ ವಧುವಿಗಾಗಿ ಪ್ರಯತ್ನ ಪಡುತ್ತಲೇ ಇದ್ದಾರೆ. ಮ್ಯಾರೇಜ್ ಬ್ಯೋರೋಗೆ ಅಲೆದಲೆದು ಸಾಕಾಗಿ ಹೋಗಿತ್ತು. ನವೀನ್ ವಯಸ್ಸಿಗೆ ತಕ್ಕಂತೆ ವಧುಗಳು ಸಿಕ್ಕುವುದೇ ಕಷ್ಟವಾಗಿತ್ತು. ಇದುವರೆಗೂ ಮಗಳಿಗೆ ತಕ್ಕ ವರನನ್ನು ಹುಡುಕಿದ್ದಾಯಿತು. ಈಗ ಮಗನಿಗೆ ಶುರು ಮಾಡಿದ್ದರು. ಎಪ್ಪತ್ತರ ಹರೆಯದ ರಾಮರಾವ್ ಗೆ ತುಂಬಾ ಸಾಕಾಗಿತ್ತು. ವರಾನ್ವೇಷಣೆಗಿಂತಲೂ ವಧುವಿನ ಅನ್ವೇಷಣೆ ಕಷ್ಟವೆಂಬತಾಗಿತ್ತು.

ಇತ್ತೀಚೆಗೆ ಹೆಣ್ಣು ಮಕ್ಕಳ ನಿರೀಕ್ಷೆ ಅತಿಯಾಗಿ, ಬಿ.ಇ. ಓದಿದ ಹುಡುಗನಿಗೂ ತಮ್ಮದೇ ಕಂಡೀಷನ್ ಗಳನ್ನು ಹಾಕುತ್ತಿದ್ದರು. ಜಾತಕಾನುಕೂಲವಾಗಿ ವಧು ವರರ ಭೇಟಿಯಾದ ಮೇಲೆ, ವಧುವಿನ ಬೇಕುಗಳ ಪಟ್ಟಿಯನ್ನು

ನೋಡಿದಾಗ, ರಾಮರಾವ್ ದಂಗಾಗಿ ಹೋಗುತ್ತಿದ್ದರು.


'ಹುಡುಗನ ಮನೆಯ ಡೈಮೆನ್ಶನ್ ನಿಂದ ಹಿಡಿದು, ಮನೆಯಲ್ಲಿರುವ ಸದಸ್ಯರುವರೆಗೂ ಕೇಳಿ ತಿಳಿದುಕೊಂಡು, ತಂದೆ ತಾಯಿಯರ ಜೊತೆ ಇರುವ ಜಾಯಿಂಟ್ ಫ್ಯಾಮಿಲಿ ಬೇಡ, ವರನಿಗೆ ಯಾವ ಗ್ರೇಡ್ ಸಂಬಳವಿದೆ? ಮದುವೆಯಾದ ನಂತರ ವಿದೇಶಕ್ಕೆ ಹೋಗುವ ಸಾಧ್ಯತೆ ಇಲ್ಲವಾದರೆ ಬೇಡ, ಸಂಪ್ರದಾಯ ಶಾಸ್ತ್ರ ಪೂಜೆ ಪುನಸ್ಕಾರ ಅಂತ ಒದ್ದಾಡಲಾಗುವುದಿಲ್ಲ,.... ಹೀಗೆ ನೂರಾರು ಕಂಡಿಷನ್ ಗಳನ್ನು ಹಾಕುವ ವಧುಗಳನ್ನು ನೋಡಿ ನೋಡಿ, ಕಡೆಗೆ ನವೀನ್ ತನಗೆ ಮದುವೆಯೇ ಬೇಡ ಎನ್ನುತ್ತಿದ್ದಾನೆ.


ಅಯ್ಯೋ, ಮಗಳಿಗೆ ತುಂಬಾ ಕಷ್ಟಪಟ್ಟು ಹುಡುಕಿ , ಅವಳಿಗೆ ಸ್ವಲ್ಪ ತಿಳುವಳಿಕೆ ಹೇಳಿ, ಇದ್ದಿದ್ದರಲ್ಲಿಯೇ ಅನುಕೂಲವಾದ ಸಂಬಂಧ ನೋಡಿದ್ದಾಯಿತು. ಮಗಳ ಮದುವೆಯಾಗುವ ತನಕ ಮಗನಿಗೆ ಮಾಡುವುದು ಬೇಡವೆಂದು ನಿರ್ಧರಿಸಿದ್ದರಿಂದ, ಮಗನಿಗೂ ವಯಸ್ಸು ಮುಂದೆ ಹೋಯಿತು. ಯಾಕೋ ಇತ್ತೀಚಿಗೆ ತಮ್ಮ ಮನೆಗೆ ತಕ್ಕಂತಹ ವಧುವನ್ನುಹುಡುಕುವುದೇ ಕಷ್ಟವಾಗಿದೆ. ಮಗನ ಮದುವೆ ಆದರೆ ಸಾಕೆನಿಸಿದೆ. 'ರಾಮರಾವ್ ಗೆ ಚಿಂತೆ ಹೆಚ್ಚುತ್ತಿತ್ತು.


ಕಡೆಗೊಂದು ದಿನ ರಾಮರಾವ್ ನವೀನ್ ನನ್ನು ಕರೆದು, ವೃತ್ತಪತ್ರಿಕೆಗಳಲ್ಲಿ ಜಾಹೀರಾತು ನೀಡುವಂತೆ ಹೇಳಿದರು.

ನವೀನ್ ಗೂ ತುಂಬಾ ಬೇಸರವಾಗಿತ್ತು. ಕಡೆಗೆ ತನಗೆ ಸರಿಯಾದ ಜೋಡಿಗಾಗಿ "ವಧು ಬೇಕಾಗಿದ್ದಾರೆ"ಎಂಬ ಜಾಹೀರಾತು ನೀಡಿದ.

ಈ ಜಾಹೀರಾತು ನೋಡಿ, ಕಾಂಟಾಕ್ಟ್ ಮಾಡಿದ ಹುಡುಗಿಯರಲ್ಲಿ, ಬಹುತೇಕ ಡೈವೋರ್ಸಿಗಳೇ ಇದ್ದರು.

ಅವನಿಗೆ ಮತ್ತೆ ಹೆದರಿಕೆ. ಈಗಾಗಲೇ ಡೈವೊರ್ಸ್ ಆಗಿರುವುದನ್ನು ನೋಡಿದರೆ, ನಾಳೆ ತನ್ನನ್ನು ಬಿಟ್ಟು ಹೋಗುವುದಿಲ್ಲವೆಂಬ ಗ್ಯಾರಂಟಿ ಏನು? ಎಂದು ಯೋಚಿಸಿ ಜಾಹೀರಾತಿಗೆ ಬಂದಿದ್ದ ಎಲ್ಲರನ್ನೂ ತಿರಸ್ಕರಿಸಿದ.


ಮಗನ ಮದುವೆಯ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿ ಕೊಂಡಿದ್ದ ನವೀನ್ ಅಮ್ಮ ರಾಧಾಳಿಗೆ ತುಂಬಾ ಬೇಜಾರಾಗಿ ಹೋಗಿತ್ತು. ಯಾಕೋ ನಗರದಲ್ಲಿರುವ ವಧುಗಳು ಬೇಡಿಕೆಗಳ ಪಟ್ಟಿಗಳನ್ನು ನೋಡಿದರೆ, ಇವರ ತಂಟೆಯೇ ಬೇಡವೆನಿಸುತ್ತದೆ ಎಂದು ಯೋಚಿಸಿ, ತಮ್ಮ ದೂರದ ಸಂಬಂಧಿ ಶಾರದಾಳ ಮಗಳನ್ನು ಮಗನಿಗೇಕೆ ಕೇಳಬಾರದು? ಎಂದು ಯೋಚಿಸಿ, ಅವರ ಸೋದರತ್ತೆ ಮಗಳು ಶಾರದಳಿಗೆ ಫೋನ್ ಮಾಡಿ, ಅವಳ ಮಗಳು ಸೌಮ್ಯಳ ಬಗ್ಗೆ ಕೇಳಿತಿಳಿದುಕೊಂಡರು.


ಶಾರದಾ ತನ್ನ ಮಗಳಿಗೆ ವರನಿಗಾಗಿ ಪರದಾಡುತ್ತಿರುವುದನ್ನು ರಾಧಳ ಹತ್ತಿರ ಪೇಚಾಡಿಕೊಂಡಿದ್ದನ್ನು ಕೇಳಿದಾಗ, ರಾಧಾಳಿಗೆ

ವಧುವಿನ ವರಾನ್ವೇಷಣೆಯೂ ಎಷ್ಟು ಕಷ್ಟವೆಂಬುದು ಅರಿವಾಯಿತು. ಬಿ.ಎಸ್ಸಿ. ಬಿಎಡ್. ಮಾಡಿ ಹೈಸ್ಕೂಲ್ ನಲ್ಲಿ ಟಿಚರ್ ಆಗಿರುವ ಸೌಮ್ಯಳನ್ನು ಬೆಂಗಳೂರಿನಲ್ಲಿರುವ ಐ.ಟಿ.ಬಿ.ಟಿ.ಯ ‌ಹುಡುಗರು ಒಪ್ಪಿಕೊಳ್ಳುತ್ತಿರಲಿಲ್ಲ. ತನ್ನಂತೇ ಟಿಚರ್ ವೃತ್ತಿಯಲ್ಲಿರುವವರನ್ನು ಸೌಮ್ಯ ಒಪ್ಪುತ್ತಿಲ್ಲವಂತೆ. ಹೀಗಾಗಿ ಮಗಳ ಮದುವೆ ಪೋಸ್ಟ್ ಪೋನ್ ಆಗುತ್ತಿದೆ ಎಂದು ಹೇಳಿದ ಶಾರದಾಳ ಮಾತಿನಿಂದ ರಾಧಾಳಿಗೆ ಆಶ್ಚರ್ಯವಾಯಿತು.


ಒಟ್ಟಿನಲ್ಲಿ ಈಗಿನ ಕಾಲದಲ್ಲಿ ವಧೂವರರ ಮ್ಯಾಚಿಂಗ್ ತುಂಬಾ ಕಷ್ಟ ಸಾಧ್ಯವೇ ಸರಿ ಎಂದುಕೊಂಡರು.

ವಧು ಮತ್ತು ವರ ಇಬ್ಬರೂ ಬೇಕಾದಷ್ಟು ಜನರಿದ್ದರೂ, ಪರಸ್ಪರ ಬೇಡಿಕೆಗಳು ,ಅತಿಯಾದ ನಿರೀಕ್ಷೆಗಳಿಂದ

ಎಷ್ಟೋ ಜನರಿಗೆ ಮೂವತ್ತು ಕಳೆದರೂ ಮದುವೆಯಾಗುತ್ತಿಲ್ಲ ವೆಂಬ ಸತ್ಯದ ಅರಿವಾಯಿತು.


ತಮ್ಮ ಕಾಲದಲ್ಲಿ ಮದುವೆಯ ಬಗ್ಗೆ ವಧುವಿನ ನಿರೀಕ್ಷೆಗಳು ಕಡಿಮೆಯಿದ್ದು, ಬದುಕಿನಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂದು ಮನದಟ್ಟಾಗಿತ್ತು. ಆದರೆ ಇಂದಿನ ಆಧುನಿಕ ಹುಡುಗರಲ್ಲಿ ಮದುವೆ, ಸಂಗಾತಿ ಎಂದರೆ ಏನೇನೋ ಅತಿಯಾದ ನಿರೀಕ್ಷೆಗಳಿರುವುದರಿಂದ ಮದುವೆಯಾಗುವುದು ವಿಳಂಬವಾಗುವುದರ ಜೊತೆಗೆ ಮದುವೆಯ ನಂತರದ ಹೊಂದಾಣಿಕೆಗಳು ಅಸಾಧ್ಯವೆನಿಸಿ, ವಿಚ್ಛೇದನಗಳು ಹೆಚ್ಚುತ್ತಿವೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳ ವಧುಗಳಿಗೆ ನಮ್ಮ ನವೀನ್ ಬೇಡ.

ಒಟ್ಟಿನಲ್ಲಿ ಇಂದು ವಧೂವರರ ಮ್ಯಾಚಿಂಗ್ ತುಂಬಾ ಕಷ್ಟವೇ ಸರಿ ಅಂದುಕೊಂಡರು ರಾಧಾ. ಅವರಿಗೆ ಇದ್ದಕ್ಕಿದ್ದಂತೆ ಅವರ ಕಸಿನ್ ಶಾರದಾಳ ನೆನಪಾಯಿತು.


ಮಲೆನಾಡಿನ ಕಳಸದಲ್ಲಿರುವ ಶಾರದಾಳ ಮಗಳು ಸೌಮ್ಯಳನ್ನೇ ವಿಚಾರಿಸೋಣವೆಂದುಕೊಂಡರು ರಾಧಮ್ಮ. ಕೂಡಲೇ ಶಾರದಾಳಿಗೆ ಫೋನ್ ಮಾಡಿ ಸೌಮ್ಯಳ ಜಾತಕ ಮತ್ತು ಫೋಟೋ ತರಿಸಿಕೊಂಡರು. ನವೀನ್ ಮತ್ತು ಸೌಮ್ಯಳ ಜಾತಕ ಕೂಡಿಬಂದು ಒಮ್ಮೆ

ಕಳಸಕ್ಕೆ ಹೋಗಿ ಸೌಮ್ಯಳನ್ನು ನೋಡಿಕೊಂಡು ಬಂದರು.

ಸೌಮ್ಯಳ ಸೌಂದರ್ಯ ಕ್ಕೆ ನವೀನ್ ಮಾರುಹೋದ. ಮಲೆನಾಡಿನ ದಂತದ ಮೈ ಬಣ್ಣದ ಸುಂದರಿ ಸೌಮ್ಯ ಮೊದಲ ನೋಟದಲ್ಲೇ ನವೀನ್ ಹೃದಯಕ್ಕೆ ಲಗ್ಗೆ ಹಾಕಿದಳು. ಅವಳು ಇಷ್ಟಪಟ್ಟ ಇಂಜಿನಿಯರ್ ಹುಡುಗನೇ ಸಿಕ್ಕಿ ಅದರಲ್ಲೂ ಸಂಬಂಧಿಕರೇ ಆಗಬೇಕಾದವರೆಂಬುದು ಅವಳಿಗೂ ಸಮಾಧಾನ ತಂದಿತ್ತು. ಕಡೆಗೂ ಸೌಮ್ಯ ನವ ವಧುವಾಗಿ ನವೀನ್ ಮುಂದೆ ಮಂಟಪದಲ್ಲಿ ನಿಂತಾಗ, ನೀಳ ಕಾಯದ, ಗೌರವವರ್ಣದ ಗೀರು ಹುಬ್ಬಿನ ,ಬೆಡಗಿಯನ್ನು ನವೀನ್ ಕಣ್ಣು ತುಂಬಿಕೊಳ್ಳುತ್ತಾ, ಮೆಹಂದಿಯ ರಂಗೇರಿದ್ದ ಅವಳ ಕೈಗಳನ್ನು ಹಿಡಿದುಕೊಂಡು ಸಪ್ತಪದಿಗಳನ್ನು ಇಟ್ಟನು.


ರಾಮರಾವ್ ಮತ್ತು ರಾಧಾ ನವ ವಧೂವರರನ್ನು ನೋಡಿ, ಕಣ್ತುಂಬಿಕೊಂಡರು .



Rate this content
Log in

Similar kannada story from Abstract