ತಾಯಿಯ ಭವ್ಯ ಕನಸು
ತಾಯಿಯ ಭವ್ಯ ಕನಸು
ಆಕೆ ಮಗಳ ಮದುವೆಯ ಭವ್ಯ ಕನಸನ್ನು ಹೊತ್ತವಳು. ಮಗಳು ಹುಟ್ಟುವ ಮುಂಚೆ ತಾಯಿಯಾಗುವ ಕನಸನ್ನು ಕಂಡಿದ್ದಕ್ಕಿಂತ ಹೆಚ್ಚಿನ ಕನಸು ಮದುವೆ ಕುರಿತು ಕಂಡವಳು. ತಾಯಿಯಾಗಿ ವರದಾ ತನ್ನ ಮಗಳು ಪಲ್ಲವಿಯ ಬದುಕಿನ ಕುರಿತು ಕುಂತರೂ , ನಿಂತರೂ ಚಿಂತಿಸುವ ಕೆಲಸ ಆಕೆಗೆ ದಿನನಿತ್ಯದ ಕೆಲಸಗಳಲ್ಲಿ ಒಂದಾಗಿತ್ತು.
ವರದಾ ಆಗರ್ಭ ಶ್ರೀಮಂತರ ಮನೆಯ ಮುದ್ದು ಮಗಳಾಗಿ ಬೆಳೆದ ರಾಜಕುಮಾರಿ. ಕೈಗೊಂದು , ಕಾಲಿಗೊಂದು ಎನ್ನುವಂತೆ ಮನೆ ತುಂಬಾ ಆಳುಕಾಳುಗಳು. ಕೋಣೆಯಿಂದ ಆಚೆ ಬಂದರೆ ಅಮ್ಮ ಅಪ್ಪ , ಅಣ್ಣಂದಿರು , ಚಿಕ್ಕಪ್ಪ , ಚಿಕ್ಕಮ್ಮಂದಿರು , ಎಲ್ಲರೂ ಪ್ರೀತಿಯ ಮಳೆಗೈಯುವ ಎಲ್ಲರಿಗೂ ಮುದ್ದು ಮುದ್ದು ವರದಾ ಒಂದು ದಿನ ಯಾವ ಊರಿಗಾದರೂ ಹೋದರೆ , ಮನೆಯೆಲ್ಲ ಬಿಕೋ ಎನ್ನುವ ಹಾಗೆ ಇರುತ್ತಿತ್ತು.
ಇಷ್ಟೆಲ್ಲ ಪ್ರೀತಿಯು ಹೊಳೆಯಾಗಿ ಹರಿಯುತ್ತಿರುವಾಗ , ವರದಾಳಿಗೆ ಅದೆಲ್ಲಿ ಪ್ರೀತಿ ಕಮ್ಮಿಯಾಗಿತ್ತೋ , ಶ್ರೀಧರನ ಪ್ರೀತಿಯಲ್ಲಿ ಬಿದ್ದಿದ್ದಳು. ಶ್ರೀಧರನ ಪರಿಚಯವಾದರೂ ಹೇಗಾಯಿತೋ , ಯಾವಾಗ ಆಯಿತೋ ತಿಳಿಯದು. ಇಷ್ಟೆಲ್ಲ ಜನರನ್ನು ದಾಟಿಕೊಂಡು ಆತನ ಪ್ರೇಮಬಂದನದಲ್ಲಿ ಸಿಲುಕಿದ ವರದಾಗೆ ತನ್ನ ಮುಂದಿನ ಭವಿಷ್ಯ ಹೇಗಿರುತ್ತೆ ಎನ್ನುವುದನ್ನು ಆಕೆ ನೀರಿಕ್ಷೆಯನ್ನು ಸಹ ಮಾಡಿರಲಿಲ್ಲ.
ಏಕೆಂದರೆ ಶ್ರೀಧರ್ , ವರದಾಳ ಮನೆಯಲ್ಲಿ ಕೆಲಸ ಮಾಡುವ ಆಳಿನ ಮಗ. ಅದರಲ್ಲೂ ಪದವಿ ಶಿಕ್ಷಣ ಮುಗಿಸಿದ ನಿರುದ್ಯೋಗಿ ಯುವಕ. ಹೇಳಿಕೊಳ್ಳಲು ಅರ್ಧ ಎಕರೆ ಜಮೀನು ಸಹ ಇಲ್ಲದ ಬಡವರ ಮನೆಯ ಹುಡುಗ. ಹೀಗಿದ್ದಾಗ ಆಕೆಯ ಮನೆಯಲ್ಲಿ ವಿಷಯ ಗೊತ್ತಾಗುವ ಹೊತ್ತಿಗೆ , ಆಕೆ ಹಿಂದೆ ಬರಲಾರದಷ್ಟು ಮುಂದೆ ಹೋಗಿದ್ದಳು. ಶ್ರೀಧರ್ ಮತ್ತು ವರದಾ ಒಂದಾಗಿ , ಆಕೆ ಮದುವೆಗಿಂತ ಮುಂಚೆಯೇ ಬಸುರಿಯಾಗಿದ್ದಳು. ಇದರಿಂದ ವರದಾ ಮನೆಯವರು ರೊಚ್ಚಿಗೆದ್ದು ಶ್ರೀಧರ್ ನನ್ನು ಅಟ್ಟಾಡಿಸಿಕೊಂಡು ಹೊಡೆದು ಹಾಕಿಯೇ ಬಿಟ್ಟರು. ವರದಾ ಕಣ್ಣ ಮುಂದೆಯೇ ಆತನ ಜೀವ ಹೋಗುವ ಪರಿಸ್ಥಿತಿ ಬಂದಿತ್ತು. ಪ್ರೀತಿಗೆ ಸೋಲಾಗಿತ್ತು. ಆದರೆ ಶ್ರೀಧರ್ ವರದಾಳಿಗೆ ತಾನು ಸತ್ತರೂ , ತನ್ನ ಪ್ರೀತಿಯ ಕುಡಿ ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ , ಹೆದರಬೇಡ ವರೂ , ಧೈರ್ಯದಿಂದ ಬದುಕು , ನಮ್ಮ ಮಗುವನ್ನು ಚೆನ್ನಾಗಿ ಸಾಕಿ ಬೆಳೆಸು , ನಮ್ಮ ಜೀವನದಂತೆ ನಮ್ಮ ಮಗುವಿನ ಬದುಕಾಗುವುದು ಬೇಡ , ಒಳ್ಳೆಯ ಶಿಕ್ಷಣ ಕೊಡಿಸಿ , ಚೆನ್ನಾಗಿ ಮದುವೆ ಮಾಡು. ಮೇಲೆ ಕುಳಿತು ನಾನು ಆ ಮದುವೆ ನೋಡಿ ಕಣ್ತುಂಬಿ ಕೊಳ್ಳುವೆ ಎಂದು ಹೇಳುತ್ತಾ ಪ್ರಾಣ ಬಿಟ್ಟನು.
ಕಣ್ಣ ಮುಂದಿನ ಶ್ರೀಧರನ ಸಾವು ಕಾಣುತ್ತಲೇ ವರದಾ ಕುಸಿದು ಬಿದ್ದಳು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಎದ್ದು ಮನೆಬಿಟ್ಟು ಹೋಗುವ ಕುರಿತು ಹೇಳಿದಳು. ಮನೆಯವರೆಲ್ಲರೂ ಒಳಗಡೆ ಹೋದರೆ ಹೊರತು ಆಕೆಯನ್ನು ಯಾರು ಬೇಡ ಎಂದು ತಡೆಯಲಿಲ್ಲ.
ಧೈರ್ಯ ಮಾಡಿಕೊಂಡು ವರದಾ ದೂರದ ಊರಿಗೆ ಬಂದು , ಕೂಲಿನಾಲಿ ಮಾಡುತ್ತ ಜೀವನ ಮಾಡುತ್ತಿದ್ದಳು. ಮುದ್ದಾದ ಗೊಂಬೆಯಂತಹ ಹೆಣ್ಣು ಮಗಳು ಹುಟ್ಟಿ , ವರದಾಳಿಗೆ ಬದುಕುವ ಆಸೆ ಹೆಚ್ಚಿಸಿದಳು. ದುಡಿಯುವ ಹುಮ್ಮಸ್ಸು ಹೆಚ್ಚಿಸಿದಳು. ಮಗಳು ಬೆಳೆಯುತ್ತ ಅಮ್ಮನ ಕನಸಿನ ಗೋಪುರವನ್ನು ಬೆಳೆಸಿದಳು. ಶ್ರೀಧರ್ ಹೇಳಿದಂತೆ ಮಗಳಿಗೆ ಉತ್ತಮವಾದ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾದಳು. ಶಿಕ್ಷಣವೇನೋ ಮುಗಿಯಿತು , ಇನ್ನೂ ಗಂಡನ ಕನಸು ತಮ್ಮ ಮಗುವಿನ ಮದುವೆ ಅದೂ ವಿಜೃಂಭಣೆಯಿಂದ ಮಾಡುವುದು.
ಆದರೆ , ಹೇಗೆ ಮಾಡುವುದು? ತಕ್ಕ ವರ ಸಿಗಬೇಕಲ್ಲ , ಜೊತೆಗೆ ಅದಕ್ಕೆ ಹಣ ಹೊಂದಿಸಬೇಕಲ್ಲ , ಇಂತಹ ನೂರೆಂಟು ಪ್ರಶ್ನೆಗಳು ತಲೆಯಲ್ಲಿ ಓಡತೊಡಗಿದವು. ವರದಾಳ ನಸೀಬು ಚೆನ್ನಾಗಿತ್ತು ಅನಿಸುತ್ತೆ , ಭಾಗ್ಯದ ಲಕ್ಷ್ಮಿ ಮನೆ ತನಕ ಹುಡುಕಿಕೊಂಡು ಬಂದಿತ್ತು. ವರದಾಳ ಮಗಳ ಪದವಿ ಶಿಕ್ಷಣದ ರಿಜಲ್ಟ್ ಡಿಸ್ಟಿಂಕ್ಸೆನ್ ನಲ್ಲಿ ಪಾಸಾಗಿದ್ದಕ್ಕೆ ಆಕೆಯ ಫೋಟೋ ಪೇಪರಲ್ಲಿ ಬಂದಿತ್ತು. ಆ ಫೋಟೋ ನೋಡಿಯೇ ಶರ್ಮಾ ಎಂಬ ಫ್ಯಾಮಿಲಿಯವರು ಆಕೆಯ ಅಂದಚೆಂದ , ವಿದ್ಯಾಬುದ್ಧಿಗೆ ಸೋತು ಹೋಗಿದ್ದರು. ತಾವೇ ಹುಡುಕಿಕೊಂಡು ತಮ್ಮ ಇಂಜಿನೀಯರ್ ಪುತ್ರನಿಗೆ ಹೆಣ್ಣು ಕೇಳಲು ಬಂದಿದ್ದರು.
ಮನೆಯ ಪರಿಸ್ಥಿತಿಯನ್ನು ಇದ್ದಂತೆಯೇ ಹೇಳಿದ ವರದಾ, ಮಗಳ ಮದುವೆಯ ಬಗ್ಗೆ ತಾನು ತನ್ನ ಗಂಡ ಕಂಡ ಭವ್ಯ ಕನಸ್ಸನ್ನೂ ಕುರಿತು ಹೇಳಿದ್ದಳು.
ಆಗ ಶರ್ಮಾ ಮನೆಯವರು ಆಕೆಯ ಕನಸಿಗೆ ಗೌರವ ನೀಡಿದ್ದಲ್ಲದೆ , ತಮಗೂ ಒಬ್ಬನೇ ಮಗ ಇರುವುದರಿಂದ ಅವರಾಸೆಯೂ ಅದೇ ಆಗಿತ್ತು. ಹೀಗಿದ್ದಾಗ ಎರಡೂ ಮನೆಯವರು ಮದುವೆಯ ತಯಾರಿ ನಡೆಸಿಯೇ ಬಿಟ್ಟರು.
ವರದಾ ಅಂತೂ ಶ್ರೀಧರನ ಕನಸು ನನಸಾಗುತ್ತಿರುವುದನ್ನು ಕಂಡು ತುಂಬಾ ಖುಷಿ ಪಟ್ಟಿದ್ದಳು. ಆಕಾಶದೆಡೆ ನೋಡಿ ತಾನು , ತನ್ನ ಗಂಡನ ಕನಸನ್ನು ನೆರವೇರಿಸುತ್ತಿದ್ದರನೆಂದು ಕೂಗಿ ಕೂಗಿ ಹೇಳಿದ್ದಳು. ಅಂದು ಮಗಳ ಮದುವೆ ನಡೆಯುತ್ತಿರುವಾಗ ವರದಾ ಶ್ರೀಧರನನ್ನು ನೆನೆಸಿಕೊಂಡು ಅತ್ತಿದ್ದಳು. ಆದರೆ , ವರದಾ ಗಂಡನ ಕನಸನ್ನು ನೆರವೇರಿಸಿದೆನೆಂದು ಅಂದು ಹೆಮ್ಮೆಯಿಂದ ಬೀಗಿದ್ದಳು.
ಅಂದು ಮಗಳಿಗೆ ವರದಾ , ತನ್ನ ಹಾಗೂ ತನ್ನ ಗಂಡ ಶ್ರೀಧರನ ಕನಸು ಮುದ್ದಿನ ಮಗಳ ವಿದ್ಯಾಭ್ಯಾಸ ಹಾಗೂ ಭರ್ಜರಿಯಾಗಿ ಮದುವೆ ಮಾಡುವುದಾಗಿತ್ತೆಂದು ಖುಷಿಯಿಂದ ಹೇಳಿದಳು. ಜೊತೆಗೆ ಅದು ಈಡೇರಿದ್ದಕ್ಕೆ ಆನಂದಭಾಷ್ಪ ಕೂಡ ಹರಿಸಿದ್ದಳು..
