Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಸಿನಿಮಾ ಸಂತೋಷ

ಸಿನಿಮಾ ಸಂತೋಷ

2 mins
5


ನಾವು ಚಿಕ್ಕವರಿದ್ದಾಗ ಅಂದರೆ ಅರವತ್ತರ ದಶಕದಲ್ಲಿ
ಮಕ್ಕಳನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗುವುದು ಮಹಾ ಅಪರಾಧ ವೆಂಬಂತೆ ನಮ್ಮ ಮನೆಯ ಹಿರಿಯರು ಸಿನಿಮಾ ಎಂದು ಏನಾದರೂ ಮಾತನಾಡಿದರೆ ಸಿಡಿದೇಳುತ್ತಿದ್ದರು.  ಏಕೆಂದರೆ ಮಕ್ಕಳು ಸಿನಿಮಾ ನೋಡಿ ಹಾಳಾಗಿ ಹೋಗುತ್ತಾರೆ ಎಂಬ ಭಯ ಹಿರಿಯರಿಗೆ ಇತ್ತು.ಹೀಗಾಗಿ ನಾವು ಮನೆಯಲ್ಲಿ ದೊಡ್ಡವರೆದುರು ಸಿನಿಮಾ ಅನ್ನುವ ಪದವನ್ನೇ ಎತ್ತುತ್ತಿರಲಿಲ್ಲ.
ಯಾವುದಾದರೂ ಮಕ್ಕಳ ಸಿನಿಮಾ ಬಂದರೆ ಮಾತ್ರ ಅದನ್ನು ತೋರಿಸಲು ಕರೆದುಕೊಂಡು ಹೋಗುತ್ತಿದ್ದರು. ಕೆಲವು ಸಿನಿಮಾಗಳಿಗೆ ಶಾಲೆಯಿಂದಲೂ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಕಡೆಗೂ ನಾನು
ನನ್ನ ಹತ್ತನೇ ವಯಸ್ಸಿನಲ್ಲಿ ಶಾಲೆಯಿಂದ ನಮ್ಮ  ಟೀಚರ್ಸ್ ಜೊತೆ , ಚಲನಚಿತ್ರ ಮಂದಿರದಲ್ಲಿ ನಾನು  ನೋಡಿದ ಸಿನಿಮಾ "ನಮ್ಮ ಮಕ್ಕಳು".    ಈ ಚಲನಚಿತ್ರ ಆಗಿನ ಕಾಲದಲ್ಲಿ  ತುಂಬಾ ಹೆಸರು ಮಾಡಿತ್ತು. ಪ್ರತಿ ಮಕ್ಕಳೂ ಸಹ ಆ ಚಲನಚಿತ್ರ ನೋಡಿ, ತಮ್ಮ ಜೀವನದಲ್ಲಿ ಕಲಿಯುವುದಿದೆ ಎಂದು ಹೇಳಿ, ಎಲ್ಲಾ ಶಾಲೆಗಳಿಂದಲೂ ಮಕ್ಕಳನ್ನು ಆ ಚಲನಚಿತ್ರಕ್ಕೆ
ಕರೆದುಕೊಂಡು ಹೋಗುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ. ಹಾಗಾದರೆ ಆ ಚಲನಚಿತ್ರದ ವಿಶೇಷವೇನು?

1969ರಲ್ಲಿ ಆರ್ ನಾಗೇಂದ್ರ ರಾವ್ ನಿರ್ದೇಶನದಲ್ಲಿ ಮತ್ತು  ಹರಿಣಿಯವರ ನಿರ್ಮಾಪಕತ್ವ ದ ಆ ಚಲನಚಿತ್ರ
ದಲ್ಲಿ, ಅಶ್ವಥ್‌ ಮತ್ತು ಪಂಡರೀಬಾಯಿ ಯವರು ಮೂರು ಮಕ್ಕಳ ತಂದೆ ತಾಯಿ ಯು ಪಾತ್ರ ನಿರ್ವಹಿಸಿದ್ದ ಈ ಚಲನಚಿತ್ರದಲ್ಲಿ, ದುಡ್ಡಿಗಾಗಿ ತನ್ನ ತಂದೆಯ ಎದುರು  ಹಠ ಮಾಡುತ್ತಿದ್ದ ತನ್ನ ಮೊದಲ ಮಗನಿಗೆ, ಅವನ ಅಪ್ಪ, ಮನೆಯ ಜವಾಬ್ದಾರಿಯ ಕಷ್ಟ ಗಳ ಬಗ್ಗೆ ತಿಳಿಯುವಂತೆ ಮಾಡಲು,,ಹತ್ತು ವರ್ಷದ ತನ್ನ ಮೊದಲ ಮಗನಿಗೆ ಮನೆಯ ಹಣ ಕಾಸಿನ ಜವಾಬ್ದಾರಿಯನ್ನು ಕೊಟ್ಟು, ಒಂದು ತಿಂಗಳು ಮನೆಯನ್ನು ನಿರ್ವಹಣೆ ಮಾಡಲು ಹೇಳಿದಾಗ, ಆ ಮಗನಿಗೆ ಹಣದ ಬೆಲೆ ಏನೆಂಬುದು ಅರಿವಾಗಿ, ತನಗೆ ತನ್ನ ಅಪ್ಪನ ಬಗ್ಗೆ ಇದ್ದ ಅಸಮಾಧಾನ, ಸಿಟ್ಟು, ಕಡಿಮೆಯಾಗಿ, ಅಪ್ಪನ ಸ್ಥಾನದ ಕಷ್ಟ ಸುಖಗಳು ಅರ್ಥವಾಗಿ, ಕಡೆಗೆ ಅಪ್ಪ ನಲ್ಲಿ ಕ್ಷಮೆ ಕೇಳುತ್ತಾನೆ. ಆ ಒಂದು ತಿಂಗಳಲ್ಲಿ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಲು ಒದ್ದಾಡುತ್ತಿದ್ದ ಆ ಹುಡುಗ ,ತನ್ನ ಚಿಕ್ಕ ವಯಸ್ಸಿನ ಮಗ ಕಷ್ಟ ಪಡುವುದನ್ನು ನೋಡಿ, ಮನದೊಳಗೇ ಕರಗುತ್ತಿದ್ದ ಅಪ್ಪ, ಮಗನನ್ನು ನೋಡಿ ಕಣ್ಣೀರು ಹಾಕುತ್ತಾ ಇದ್ದ ಅಮ್ಮ, ಎಲ್ಲವೂ ಮನೆ ಮುಟ್ಟುವಂತೆ ಇತ್ತೆಂಬುದು ಇಂದಿಗೂ ನನ್ನ ಸ್ಮೃತಿ ಪಟಲದಲ್ಲಿ ಉಳಿದಿದೆ.
ವಿಶೇಷವಾಗಿ ಅದರಲ್ಲಿ ಬರುವ ಒಂದು ಹಾಡು
"ನಿನ್ನೊಲುಮೆ ನನಗಿರಲಿ ತಂದೆ ಕೈ ಹಿಡಿದು ನೀ ನಡೆಸು ಮುಂದೆ
ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು
ಈ ಮನೆಯು ಎಂದೆಂದೂ ನಗುವಂತೆ ನೀ ಮಾಡು " ಅನ್ನುವ ಒಂದು ಗೀತೆಯಂತೂ ಎಂದೂ ಮರೆಯದ ಹಾಡಾಗಿ ನನ್ನ ಮನದಲ್ಲಿ ಉಳಿದು ಬಿಟ್ಟಿದೆ.
ಆ ಸಿನಿಮಾ ಮುಗಿಸಿ ಹೊರಬಂದಾಗ, ಅತ್ತು ಅತ್ತು  ನಮ್ಮ ಕಣ್ಣೆಲ್ಲಾ ಕೆಂಪಗಾಗಿದ್ದವು. ಇದೊಂದು ಮನ ಕರಗಿಸುವ ಭಾವನಾತ್ಮಕ ಚಲನಚಿತ್ರ ವಾಗಿತ್ತು.

ನನ್ನ ಬಾಲ್ಯದಲ್ಲಿ ಸಿನಿಮಾ ನೋಡಿದಾಗ ಅನುಭವಿಸಿದ ಸಣ್ಣ ಸಂತೋಷ ಇಂದಿಗೂ ಹಸಿಯಾಗಿಯೇ ಉಳಿದಿದೆ.

ವಿಜಯಭಾರತೀ.ಎ.ಎಸ್.



Rate this content
Log in

Similar kannada story from Abstract