manjula g s

Abstract Inspirational Others

4  

manjula g s

Abstract Inspirational Others

ಸಾಕ್ಷಾತ್ಕಾರ

ಸಾಕ್ಷಾತ್ಕಾರ

2 mins
362


ಶೀರ್ಷಿಕೆ:- ಸಾಕ್ಷಾತ್ಕಾರ

"ಏನಿದೆ ನನ್ನ ಬಳಿ ಈಗ...?? ಬಯಸಿದ್ದೆಲ್ಲವೂ ಕಣ್ಣ ಮುಂದೆ ಇದ್ದರೂ ಯಾವುದೂ ನನಗೆ ಬೇಡವಾಗಿದೆ! ಇಷ್ಟು ದಿನ ಇದೇ ಸಂಪತ್ತು ಸಿರಿಯ ಹಿಂದೆ ನಾನು ಓಡಿದ್ದೇನೆ, ಹಾಗೆ ಓಡುವಾಗ ಹಿಂದೆ ಮುಂದೆ ನೋಡಲೇ ಇಲ್ಲ...... 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ' ತುಡಿವ ಮನಕ್ಕೆ ಲಗಾಮು ಹಾಕದೆ ಆಸೆಯ ಹುಚ್ಚು ಕುದುರೆಯ ಹಿಂದೆ ಓಡಿದ್ದೇ..... ಓಡಿದ್ದು! 

ಸುಸ್ತಾಯ್ತೀಗ....... ನಿಂತು ಹಿಂದಕ್ಕೊಮ್ಮೆ ತಿರುಗಿ ನೋಡಿದರೆ, ನನ್ನ ಹಿಂದೆ ಯಾರು ಇಲ್ಲ! ಸುತ್ತಲೂ ನೋಡಿದೆ...... ಅರೆ! ನಾನಷ್ಟೇ ಬಂದಿದ್ದೇನೆ. ಹಿಂದೊಮ್ಮೆ ನನ್ನ ಮುಂದಿದ್ದ ನನ್ನ ಗಮ್ಯವನ್ನು ನಾನೀದಿನ ತಲುಪಿದ್ದೇನೆ ನಿಜ! ಆದರೆ ಒಂಟಿಯಾಗಿ. 


ಓಡುವ ಮಜದಲ್ಲಿ ಅಕ್ಕಪಕ್ಕ ಗಮನಿಸಲೇ ಇಲ್ಲ. ಹಿಂದೆಯಂತೂ ಯಾರು ಬರುತ್ತಿರುವರು? ಎಂಬ ಪ್ರಜ್ಞೆಯೇ ಇರಲಿಲ್ಲ ಬಿಡಿ.... ಹಿಂದೆ ನನ್ನೊಂದಿಗೆ ನನ್ನ ಕುಟುಂಬ ಇದೆ.... ನನ್ನ ಬಿಟ್ಟು ಅದು ಎಲ್ಲಿ ಹೋಗುವುದು? ನಾನು ದುಡಿಯುತ್ತಿರುವುದೆಲ್ಲಾ ಅವರಿಗಲ್ಲವೇ..... ಎಂಬ ಭ್ರಮೆಯಲ್ಲಿಯೇ ಓಡಿದೆ. 


ಹೌದು! ಇತ್ತಲ್ಲವೇ ನನ್ನೊಂದಿಗೆ ನನ್ನ ಕುಟುಂಬ. ಅದು ಯಾವಾಗ ನನ್ನನ್ನು ಬಿಟ್ಟು ನಿಂತುಬಿಟ್ಟಿತು! ಓಡಿ ಬಂದ ದಾರಿಯ ಹಿಂದಿನ ಮೈಲುಗಲ್ಲುಗಳನ್ನು ಒಂದೊಂದನ್ನೇ ಈಗ ನೆನಪಿಸಿಕೊಳ್ಳುವ ಸಮಯ..... ಕಾಣುತ್ತಿದೆ...... ಬಹಳ ಹಿಂದಿನ ಮೈಲುಗಲ್ಲಿನಲ್ಲಿ ನನ್ನ ಕುಟುಂಬದ ಮೂಲ.... ಅಂದರೆ ನನ್ನ ತಂದೆ ತಾಯಿ. ನಂತರ ಅವರೇ ಮೆಚ್ಚಿ ನನಗೆ ಮಡದಿಯಾಗಿ ತಂದ ನನ್ನ ಹೆಂಡತಿ. ಇಜ್ಜೋಡಿನ ನಮ್ಮಿಬ್ಬರ ದಾಂಪತ್ಯಕ್ಕೆ ಹುಟ್ಟಿದ ನಮ್ಮಿಬ್ಬರ ಮಕ್ಕಳು.... ಎಲ್ಲರೂ ಇದ್ದರು. 


ಓಹೋ..... ಈಗ ಅರಿವಾಗುತ್ತದೆ.... ನಾನು ಯಾರ್ಯಾರನ್ನು ಎಲ್ಲೆಲ್ಲಿ ಬಿಟ್ಟಿರುವೆ ಎಂದು. ಒಂಟಿತನದಲ್ಲಿ ಆತ್ಮ ಸಾಕ್ಷಾತ್ಕಾರವಾಗುತ್ತಿದೆ. ನನ್ನ ಸಂಪಾದನೆಯ ವೇಗದಲ್ಲಿ ಮೊದಮೊದಲನೆಯ ಮೈಲುಗಲ್ಲುಗಳಲ್ಲಿ ತಂದೆ ತಾಯಿಯನ್ನು ಕಡೆಗಣಿಸಿ ಅಲ್ಲೇ ಬಿಟ್ಟು ಸಾಗಿಬಿಟ್ಟಿದ್ದೇನೆ; ಪಾಪ! ನಡುದಾರಿಯಲ್ಲಿ ವಯಸ್ಸನ್ನು ಲೆಕ್ಕಿಸದೆ ಬಿಟ್ಟು ಬಂದಾಗ, ಅವರಿಗೆ ಅವರ ಸೊಸೆ ಆಸರೆಯಾಗ ಹೊರಟಾಗ ಸ್ವಲ್ಪ ದಿನದಲ್ಲೇ ಅವಳನ್ನೂ ಕಾಲಕಸವಾಗಿಸಿ ನಾನು ಮಾತ್ರ ಮುಂದೆ ಸಾಗಿ ಬಿಟ್ಟಿದ್ದೇನೆ! ಅಪ್ಪ ಅಮ್ಮನನ್ನು ದಾಟಿದ ಕೆಲವೇ ಮೈಲುಗಲ್ಲುಗಳಲ್ಲಿ ಅವಳ ನೆರಳು ನನಗೀಗ ಅಸ್ಪಷ್ಟವಾಗಿ ಕಾಣುತ್ತಿದೆ. 


ಅಜ್ಜಿ ತಾತ ಮತ್ತು ಅಮ್ಮನ ಮಡಿಲಿನಲ್ಲಿ ಸೊಂಪಾಗಿ ಬೆಳೆದ ನನ್ನ ಮಕ್ಕಳು...... ನನ್ನ ದಾರಿಗೆ ಬಂದೇ ಇಲ್ಲ! ಬಿಡಿ..... ಅವರು ನನ್ನ ಹೊರತಾದ ಅವರ ಪ್ರಪಂಚ ಸಂತೋಷವಾಗಿಯೇ ಇದ್ದಂತಿದೆ. 


ಓಡುವ ಹುಚ್ಚು ಕುದುರೆಯಾದ ನನ್ನನ್ನು ನನ್ನ ಹುಚ್ಚಿಗೆ ಎಲ್ಲರೂ ಬಿಟ್ಟುಬಿಟ್ಟಿದ್ದಾರೆ..... ವಿಪರ್ಯಾಸವೆಂದರೆ ನಾನು ಎಲ್ಲರನ್ನು ಬಿಟ್ಟು ಬಂದಿದ್ದೇನೆ ಎಂದುಕೊಂಡಿರುವೆ.... ಆದರೆ ಅವರೇ ನನ್ನನ್ನು ಬಿಟ್ಟುಬಿಟ್ಟಿದ್ದಾರೆ ಎಂಬುದು ಈಗ ಸ್ಪಷ್ಟವಾಗುತ್ತಿದೆ.


 ಪೆಟ್ಟು...... ನನ್ನ ಅಹಂ ಈಗ ಪೆಟ್ಟು ಬೀಳುತ್ತಿದೆ! ಎಲ್ಲವನ್ನು ಸಂಪಾದಿಸಿದ ನನಗೆ ಎಲ್ಲರೂ ನನ್ನಡಿಗೆ ಬಾಳುತ್ತಾರೆ.... ಈ ಲೋಕವೇ ನನ್ನ ಅಂಗೈಯಲ್ಲಿ ಇರುತ್ತದೆ ಎಂಬ ನನ್ನ ಭ್ರಮೆಗೆ ತೆರೆ ಬಿದ್ದಾಯ್ತು! ಹಣದಿಂದ ಏನು ಬೇಕಾದರೂ ಕೊಳ್ಳಬಹು ಎಂದುಕೊಂಡರೆ ಅದು ತಪ್ಪು! ಹಣದಿಂದ ಸಂಬಂಧಗಳನ್ನು, ಪ್ರೀತಿ, ಮಮತೆ, ವಾತ್ಸಲ್ಯ, ಕುಟುಂಬ ಮತ್ತು ಬಹು ಮುಖ್ಯವಾಗಿ ಕಾಲವನ್ನು ಕೊಳ್ಳಲಾಗದು ಎಂಬ ಕಟು ಸತ್ಯ ಈಗ ಅನಿವಾರ್ಯವಾಗಿ ನಾನು ಜೀರ್ಣಿಸಿಕೊಳ್ಳಲೇಬೇಕು. 

ಏಕೆಂದರೆ ನನ್ನ ಬಳಿ ಈಗ ಅವ್ಯಾವು ಇಲ್ಲ! ಆದರೆ ನಾನು ಬಿಟ್ಟು ಬಂದ ಹಾದಿಯಲ್ಲಿ ಅವೇ ಒಗ್ಗೂಡಿ ನನ್ನ ಕುಟುಂಬದಲ್ಲಿ ನೆಲೆಸಿದಂತಿವೆ. 


ನನಗೆ ಈಗ ಗೊತ್ತಾಗುತ್ತಿದೆ..... ನನ್ನವರು ಯಾರೂ ನನಗಾಗಿ ನಾನಿರುವಲ್ಲಿಗೆ ಬರುವುದಿಲ್ಲ...... ಇಂದು ನನಗೆ ಬೇಕಾದ ಹಿಡಿ ಪ್ರೀತಿಗಾಗಿ ನಾನೆ ನನ್ನ ಹಮ್ಮು ಬಿಮ್ಮನ್ನು ಬಿಟ್ಟು ಮತ್ತೆ ಅವರಲ್ಲಿಗೆ ಹೋಗಬೇಕು! ಏಕೆಂದರೆ ಮುದ್ದು ರಾಮನ ಮುಕ್ತಕದಲ್ಲಿ ಹೇಳಿಲ್ಲವೇ....

ತಿಳಿಯ ಬಯಸುವ ನೀನು ಹೋಗು ಗುರುವಿನ ಅಡಿಗೆ ನದಿಗಲ್ಲ ನೀರಡಿಕೆ, ಜಲದಾಹ ನಿನಗೆ 

ಹರಿವ ತೊರೆ ಕರೆಯುವುದೆ ಪಯಣಿಗನ ತನ್ನಡೆಗೆ?

ಸಾಗು ನೀ ನದಿಯತ್ತ ಮುದ್ದು ರಾಮ! ಎಂದು. 

ನನ್ನ ಕುಟುಂಬ ಒಂದು ವಾತ್ಸಲ್ಯ ಭರಿತ ಸಾಗರ! ಅಲ್ಲಿನ ಒಂದೊಂದು ಸದಸ್ಯರೂ ಒಂದೊಂದು ಒಲವ ನದಿಯಾಗಿ ಸದಾ ಸಾಗರವನ್ನು ಪುಷ್ಕಳವಾಗಿ ಇಡುವವರು! ನಾನು ಅವರ ಪಾಲಿಗೆ ಕೇವಲ ದಾರಿಹೋಕನಾಗಿಬಿಟ್ಟೆ. ಈಗ ನನ್ನ ಅಗತ್ಯ ಅವರಿಗಿಲ್ಲ. ಬಹುಶಃ ಅದಕ್ಕೆ ಕಾರಣವೂ ನಾನೇ..... ಬೇಕಾದ ಸಮಯದಲ್ಲಿ ಅವರನ್ನು ಕಾಪಿಡಡದೆ ಅವರ ಪಾಲಿಗೆ ನನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬಿಟ್ಟಿರುವೆ. ನಾನು ಬಿಟ್ಟ ಲೋಕದಲ್ಲಿ ಬೆಳೆದ ಮಕ್ಕಳು..... ಈಗ ಅವರೇ ಸಮರ್ಥರು! ನಾನು ಅಸಹಾಯಕ.... ನನಗೆ ಬೇಕಾದನ್ನು ಹುಡುಕಿಕೊಂಡು ಓಡಿದ ದಾಹ ತೀರಿಸಿಕೊಳ್ಳಲು ನಾನೇ ಅವರ ಬಳಿ ಹೋಗಬೇಕು.... ಹೋಗುವೆ......! ಸಾಕ್ಷಾತ್ಕಾರವಾದ ಮೇಲೆ ಮಾಡಬೇಕಾದ ಮೊದಲ ಕೆಲಸ ಅದಲ್ಲವೇ"....??

(-------- ಸಂಪಾದನೆಯ ಹುಚ್ಚು ಕುದುರೆಯ ಹಿಂದೆ ಕುಟುಂಬಗಳನ್ನು ಬಿಟ್ಟು ಓಡುವ ಎಲ್ಲಾ ಓಟಗಾರರಿಗೆ ಅರ್ಪಿತ) 


ಧನ್ಯವಾದಗಳು...


Rate this content
Log in

Similar kannada story from Abstract