ಸಾಹಸ ಪ್ರವಾಸ
ಸಾಹಸ ಪ್ರವಾಸ
ದಿನ ೧೮
ವಿಷಯ: ಪ್ರವಾಸ
ಎಸ್ಸೆಸ್ಸೆಲ್ಸಿ ಓದುತ್ತಿರುವ ವೆಂಕಿ, ನಾಣಿ, ಕಿಟ್ಟಿ ಮೂರು ಜನರೂ ಚಡ್ಡಿ ದೋಸ್ತ್ ಗಳು. ಆ ಮೂವರಿಗೂ ಪ್ರವಾಸ ಹೋಗುವುದೆಂದರೆ ಅತಿ ಉತ್ಸಾಹ.
ಒಂದೆರಡು ಮೂರು ದಿನಗಳು ರಜ ಸಿಕ್ಕಿದರೂ ಸಾಕು ಹತ್ತಿರದ ಕಾಡು ಮೇಡು ಗುಡ್ಡ ಬೆಟ್ಟ ಅಲೆಯಲು ಶುರುಮಾಡುತ್ತಾ, ಮನೆಯವರಿಂದ ಬೈಗುಳ ತಿನ್ನುತ್ತಿದ್ದರು.
ಅವರಿಗೆ ಪರೀಕ್ಷೆ ಮುಗಿದು ರಜ ಬಂದಾಗ, ಒಂದು ದೊಡ್ಡ ಪ್ರವಾಸಕ್ಕೆ ಪ್ಲಾನ್ ಮಾಡಿ, ಉತ್ತರ ಪ್ರದೇಶ ದ ಕೇದಾರನಾಥ ಹಾಗೂ ಬದರೀನಾಥ ದ ಕಡೆಗೆ ಪ್ರವಾಸ ಹೊರಟರು.
ಮನೆಯವರನ್ನು ಒಪ್ಪಿಸಿ ಅವರು ಹೊರಡುವ ವೇಳೆಗೆ ಅವರಿಗೆ ಸಾಕು ಸಾಕಾಯಿತು.
ಅಂತೂ ಇಂತೂ ಮೇ ಕೊನೆಯ ವಾರದಲ್ಲಿ ದೆಹಲಿಗೆ ಹೊರಡುವ ಟ್ರೈನ್ ಹತ್ತಿಯೇ ಬಿಟ್ಟರು. ದೆಹಲಿಯಲ್ಲಿ ಈ ಮೂವರೂ ಇಳಿದಾಗ, ಅವರಿಗೆ ಉಳಿದುಕೊಳ್ಳವ ವ್ಯವಸ್ಥೆ ಯಾಗಿರಲಿಲ್ಲ. ಯೂತ್ ಹಾಸ್ಟೆಲ್ ಕಡೆಯಿಂದ ಹೇಳಿಸಿದ್ದ ರೂಂ ಅನ್ನು ಬೇರೆಯವರಿಗೆ ಕೊಟ್ಟು ಬಿಟ್ಟರೆಂಬ ವಿಷಯ ಗೊತ್ತಾದಾಗ ವೆಂಕಿಗೆ ಸ್ವಲ್ಪ ಗಲಿಬಿಲಿಯಾಯಿತು. ಆದರೆ ನಾಣಿ ಮತ್ತುಕಿಟ್ಟಿ ಅವನಿಗೆ ಧೈರ್ಯ ತುಂಬಿ, ರೈಲ್ವೇ ಸ್ಟೇಷನನಲ್ಲೇಎಲ್ಲವನ್ನೂ ಮುಗಿಸಿಕೊಂಡು ಹರಿದ್ವಾರದ ಟ್ರೈನ್ ಹತ್ತಿದರು. ಹರಿದ್ವಾರದ ಒಂದು ಮಠದಲ್ಲಿದ್ದು ಅಲ್ಲಿನ ಉಚಿತವಾದ ಊಟ ತಿಂಡಿಗಳನ್ನು ಮಾಡಿಕೊಂಡು, ಮುಂದಿನ ಪ್ರವಾಸಕ್ಕೆ ತಯಾರಾಗುತ್ತಿದ್ದರು. ಬದರೀನಾಥಗೆ ಒಂದು ಕ್ಯಾಬ್ ಮಾಡಿಕೊಂಡು ಹೊರಟ ಮೂವರೂ ಹಿಮಾಲಯದ ಸೌಂದರ್ಯವನ್ನುಕಣ್ತುಂಬಿಕೊಳ್ಳುತ್ತಾ, ಸಂತೋಷದಿಂದ ಕೂಗುತ್ತಾ ಸಾಗಿದರು.
ಜೋಶಿಮಠದ ಹತ್ತಿರ ಬಂದಾಗ ಇದ್ದಕ್ಕಿದ್ದಂತೆ ಲ್ಯಾಂಡ್ ಸ್ಲೈಡ್ಗಳಾಗಿ, ಅಲ್ಲೇ ಎರಡು ಗಂಟೆಗಳು ಹೆಲ್ಡ್ ಅಪ್ ಆದಾಗ ಕ್ಯಾಬ್ ನಿಂದಿಳಿದು ಸುತ್ತಲಿನ ಪ್ರಕೃತಿಯನ್ನು ನೋಡುತ್ತಾ ಸ್ವಲ್ಪ ಅಲ್ಲಲ್ಲೇ ಸುತ್ತಾಡಿದರು. ಆ ಮೂವರೂ ಕೊರಕಲಿನಲ್ಲಿ ಕೆಳಗಿಳಿಯುವ ಸಾಹಸ ಮಾಡಿದಾಗ, ಅವರ ಪಕ್ಕದಲ್ಲೇ ದೊಡ್ಡ ಬಂಡೆಯು ಉರುಳಿದಾಗ ಮೂವರೂ ಹೆದರಿ ಮೇಲಕ್ಕೆ ಬರುವಾಗ, ಅವರು ಆಸರೆಗಾಗಿ ಹಿಡಿದ ಬಂಡೆಗಳೂ ಅಲ್ಲಾಡತೊಡಗಿತು. ಕೆಳಗಡೆ ಪ್ರಪಾತ, ಒಂದು ಹೆಜ್ಜೆ ಜಾರಿದರೂ ಕೆಳಕ್ಕುರುಳುವುದೇ ಸರಿ.
ಮುಂದೆ ಮುಂದೆ ಮೇಲಕ್ಕೆ ಹತ್ತುತ್ತಿದ್ದ ಕಿಟ್ಟಿ ,ನಾಣಿ ಮತ್ತು ವೆಂಕಿಗೆ ದಾರಿ ತೋರಿಸುತ್ತ ಸಾಯಂಕಾಲ ನಾಲ್ಕು ಗಂಟೆಗೇ ಸುತ್ತಲೂ ಕತ್ತಲು ಕವಿಯ ತೊಡಗಿದಾಗಎಲ್ಲರೂ ಬದುಕಿದೆಯಾ ಬಡಜೀವವೇ ಎಂದು ಏರುತ್ತಾ ಕಡೆಗೆ ಕ್ಯಾಬ್ ಹತ್ತಿರ ಬಂದು ಸೇರಿದರು.ರಾತ್ರಿ ಎಂಟು ಗಂಟೆಯಾದರೂ ಮುಂದಿನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್ ಸಿಗಲೇ ಇಲ್ಲ. ಅಂದು ರಾತ್ರಿ ಅಲ್ಲೇ ಕ್ಯಾಬ್ ನಲ್ಲೇ ಕುಳಿತು ಎಲ್ಲರೂ ಕಾಲು ಕಳೆದರು.
ಮಾರನೇ ದಿನ ಹನ್ನೊಂದು ಗಂಟೆಗೆ ರೋಡ್ ಕ್ಲಿಯರ್ ಆಗಿರುವ ಸುದ್ದಿ ಬಂದ ತಕ್ಷಣ ಅವರ ಪ್ರಯಾಣ ಮುಂದುವರೆಯಿತು.
ಬದರೀನಾಥನ ದರ್ಶನ, ಬಿಸಿನೀರಿನ ತೊಟ್ಟಿಯಲ್ಲಿ ಸ್ನಾನ, ವ್ಯಾಸಗುಹೆ, ಎಲ್ಲವನ್ನೂ ನೋಡಿಕೊಂಡ ವೆಂಕಿ ನಾಣಿ ಕಿಟ್ಟಿ ಮೂವರೂ ಕೇದಾರನಾಥ ಕ್ಕೆಹೊರಟರು. ಅಲ್ಲಿಗೂ ಮೂವರೂ ಕಾಲು ನಡಿಗೆಯಲ್ಲೇ ಹೋಗಿ, ದರ್ಶನ ಪಡೆದು, ಅಲ್ಲಿಯೇ ಒಂದು ದಿನ ಉಳಿದುಕೊಂಡು,ಸುತ್ತಲಿನ ಹಿಮಾಲಯಸೌಂದರ್ಯವನ್ನು ನೋಡಿ, ಕುಣಿದು ಕುಪ್ಪಳಿಸಿ ಮತ್ತೆ ಹರಿದ್ವಾರದ ಕಡೆ ಹೊರಟರು. ಹೀಗೆ ಈ ಮೂವರೂ ಗೆಳೆಯರು ಅನೇಕ ಸಾಹಸಗಳನ್ನು ಮಾಡುತ್ತಾ, ತಮ್ಮ ಪ್ರವಾಸ ವನ್ನು ಮುಗಿಸಿ ಮನೆಗೆ ಮರಳಿ ಬಂದಾಗ, ಮಕ್ಕಳ ಮುಖವನ್ನು ನೋಡಿ ಅವರ ತಂದೆ ತಾಯಿಯರಿಗೆ ತುಂಬಾ ಖುಷಿಯಾಯಿತು. ಇಷ್ಟು ಸಣ್ಣ ವಯಸ್ಸಿನಲ್ಲೇ ದೊಡ್ಡವರ ಸಹಾಯವಿಲ್ಲದೆ ಕೇದಾರನಾಥ ಬದರೀನಾಥ ಪ್ರವಾಸವನ್ನು ಮುಗಿಸಿಕೊಂಡು ಸುರಕ್ಷಿತವಾಗಿ ಮನೆಗೆ ಬಂದರಲ್ಲಾ ಎಂಬ ಸಮಾಧಾನ ಮನೆಯ ಹಿರಿಯರಿಗೆ ಆಗಿತ್ತು.
