ಪ್ರೀತಿ ಎಂಬ ಮಾಯೆ!
ಪ್ರೀತಿ ಎಂಬ ಮಾಯೆ!
ಈ ಪ್ರೀತಿ ಅಂದರೆ ಹಾಗೆ ಅಲ್ವಾ ಯಾರ ಮೇಲೆ ಯಾವಾಗ ಹುಟ್ಟುತ್ತೋ ಎಂದು ಹೇಳಲಾಗದು.ಈ ಪ್ರೀತಿ-ಗೀತಿ ಇದೆಲ್ಲ ನಮಗೆ ಯಾಕೆ ಬೇಕು ಎಂದುಕೊಂಡ ನಮ್ಮ ಕಥಾನಾಯಕಿ ಅನು ಕೊನೆಗೆ ಆಕರ್ಷಣೆ ಎಂಬ ಪ್ರೀತಿಯಲ್ಲಿ ಬಿದ್ದು ಈಜಿ ಬಂದವಳು. ಈ ಪ್ರೇಮಕಥೆ ಸ್ವಲ್ಪ ವಿಚಿತ್ರವೆನಿಸಬಹುದು.
****************
ಅನು ಪಕ್ಕಾ ಹಳ್ಳಿ ಹುಡುಗಿ ಗಾಯಕಿ ಆಗಲೇಬೇಕು ಎಂಬ ಕನಸು, ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕೆಂಬ ಛಲ. ತನ್ನ ವಿದ್ಯಾಭ್ಯಾಸವನ್ನೆಲ್ಲ ಹಳ್ಳಿಯಲ್ಲೇ ಮುಗಿಸಿದ ಅನೂಗೆ ಪದವಿ ಮಾಡುವ ಅವಕಾಶ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ದೊರೆಯಿತು. ಹುಟ್ಟಿನಿಂದಲೂ ತನ್ನ ಜೀವನವನ್ನು ಹಳ್ಳಿಯಲ್ಲೇ ಕಳೆದ ಅನೂಗೆ ಪಟ್ಟಣದಲ್ಲಿರುವ ಕಾಲೇಜು ಸ್ವಲ್ಪ ಹೊಸದೆನಿಸಿತು.ಇನ್ನೂ ಖಾಸಗಿ ಕಾಲೇಜಿನ ಬಗ್ಗೆ ಹೇಳಬೇಕೆ, ವಿದ್ಯಾರ್ಥಿಗಳ ಹಾವ-ಭಾವ,ಉಡುಗೆ ತೊಡುಗೆ, ಮಾತಾನಾಡುವ ಶೈಲಿ,ಇದನ್ನೆಲ್ಲ ನೋಡಿದ ಅನೂಗೆ ಮನಸ್ಸಿನಲ್ಲಿ ಭಯ. ಮೊದಲೇ ಹಳ್ಳಿ ಹುಡುಗಿ ಇಂಗ್ಲಿಷ್ ಮಾತನಾಡುವುದಕ್ಕೆ ಬರುವುದಿಲ್ಲ. ಆದರೆ ಎಲ್ಲರೂ ಪಟಪಟ ಎಂದು ಇಂಗ್ಲಿಷ್ ನಲ್ಲಿ ಮಾತನಾಡುವುದನ್ನು ನೋಡಿ ಇನ್ನೂ ಭಯಭೀತಳಾದಳು.ಕೆಲವು ದಿನ ಅನು ಒಬ್ಬಂಟಿಯಾಗಿ ಇರುತ್ತಿದ್ದಳು ನಂತರ ಪರಿಚಯವಾದದ್ದು ಸೋನು. ಅವಳು ಅನುವಿನ ಮನಸ್ಸನ್ನು ಅರ್ಥ ಮಾಡಿಕೊಂಡು ಅವಳ ಜೊತೆಗೆ ಇರುತ್ತಿದ್ದಳು ಕ್ರಮೇಣ ಅವರು ಉತ್ತಮ ಸ್ನೇಹಿತರಾದರು.
ಕೆಲವು ತಿಂಗಳುಗಳ ನಂತರ ಅನು ಕಾಲೇಜಿಗೆ ಹೊಂದಿಕೊಂಡು ಎಲ್ಲರ ಜೊತೆ ಬೆರೆಯಲು ಶುರುಮಾಡಿದಳು.ಕಾಲೇಜು ವಿದ್ಯಾಭ್ಯಾಸ ಮನೆ ಸ್ನೇಹಿತರು ಇಷ್ಟೇ ಅನೂಳ ದಿನಚರಿಯಾತ್ತು. ಸೋನು ಪ್ರೀತಿಯ ಬಗ್ಗೆ ನಿನ್ನ ಅಭಿಪ್ರಾಯವೇನು ಎಂದು ಅನೂಗೆ ಕೇಳಿದಾಗ ಅದಕ್ಕೆ ಅನು, "ಏನೇನು....!ಪ್ರೀತಿ? ನಮಗೆಲ್ಲ ಪ್ರೀತಿ-ಗೀತಿ ಯಾಕೆ ಅದರ ಗೊಡವೆಯೇ ಬೇಡ". ಆಗ ಸೋನು, ಹಾಗಾದರೆ ನಿನಗೆ ಪ್ರೀತಿಯಲ್ಲಿ ಆಸಕ್ತಿ ಇಲ್ಲ ಅನ್ನು..
ಯೆಸ್!ಎಂದು ಅನು ಉತ್ತರಿಸಿದಳು.
ಪ್ರಥಮ ವರ್ಷದ ಪದವಿ ಮುಗಿಯಿತು ಇಬ್ಬರೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದರು. ಅನು ಒಂದು ದಿನ ಸೋನುಗೆ,ತನ್ನ ಪ್ರೀತಿಯ ವಿಷಯವನ್ನು ತಿಳಿಸಿದಳು.
ಸೋನುಗೆ ಆಶ್ಚರ್ಯವಾಗಿ "ಏನೇ ನಿಜಾನಾ...? ನಿಜ ಹೇಳ್ತಿದಿಯಾ! ಪ್ರೀತಿನಾ ಯಾವತ್ತು ಮಾಡಲ್ಲ,ಅಂತ ಹೇಳಿದ್ದೆ ಆದ್ರೆ ಈಗ ನೋಡಿದ್ರೆ"..... ಈ ತರ ಮಾಡಬಾರದಿತ್ತು ಅನು, ನನಗೇಕೊ ಇದು ತಪ್ಪೆನಿಸುತ್ತದೆ. ಇದು ಪ್ರೀತಿ ಅಲ್ಲ ಕೇವಲ ಆಕರ್ಷಣೆ ಎನಿಸುತ್ತಿದೆ ಯೋಚಿಸಿ ನೋಡು.
ಅನು:ಇಲ್ಲಾ ಸೋನು ಇದು ಪ್ರೀತಿನೇ, ಆಕರ್ಷಣೆ ಅಂತೂ ಅಲ್ಲವೇ ಅಲ್ಲ ನನ್ನನ್ನು ನಂಬು, ನನ್ನ ಭಾವನೆಗಳನ್ನು ಅರ್ಥ ಮಾಡ್ಕೊ ಸೋನು....ನಾನು ನಿನ್ನನ್ನು ಮಾತ್ರ ನಂಬುವುದು ಮತ್ತು ನನ್ನೆಲ್ಲಾ ಭಾವನೆಗಳನ್ನು ನಿನ್ನ ಜೊತೆ ಮಾತ್ರ ಹಂಚಿಕೊಳ್ಳುವುದು.
ಸೋನು:ಅಲ್ಲೇ...!ನೀನು ಯಾರನ್ನ ಪ್ರೀತಿಸ್ತಾ ಇದೀಯಾ ಅಂತ ನಿಂಗೆ ನೆನಪಿದೆಯಾ?
ಅನು: ಹೌದು ನೆನಪಿದೆ ನಾನು ಅವರನ್ನೇ ಪ್ರೀತಿಸ್ತಾ ಇದೀನಿ ಅವರಿಗೆ ಪ್ರೇಮ ಪತ್ರವನ್ನು ಬರೆಯುತ್ತೇನೆ!
ಸೋನು:ಹೇ ಬೇಡ ಪ್ರೀತಿಸ್ತಾ ಇದೀಯ ಅಲ್ವ ಸರಿ. ಆದರೆ ಪತ್ರ ಎಲ್ಲ ಬೇಡ.
ಸೋನುವಿನ ಮಾತನ್ನು ಕೇಳದ ಅನು ತನ್ನ ಪ್ರಿಯತಮನಿಗೆ ಪ್ರೇಮ ಪತ್ರವನ್ನು ತಲಪುವಂತೆ ಮಾಡಿಯೇಬಿಟ್ಟಳು.
ಹೌದು! ಅನು ಯಾರೋ ಹುಡುಗನನ್ನ ಪ್ರೀತಿಸುತ್ತಿದ್ದರೆ ಸೋನು ಅಷ್ಟಾಗಿ ಆಶ್ಚರ್ಯವಾಗುತ್ತಿರಲಿಲ್ಲವೇನೋ ಆದರೆ ಅನು ಪ್ರೀತಿಸಿದ್ದು ತನಗೆ ಪಾಠ ಮಾಡುವ ಶಿಕ್ಷಕರನ್ನೇ....!
ಹೆಸರು ತರುಣ್ ತುಂಬಾ ಒಳ್ಳೆಯ ಶಿಕ್ಷಕರು, ಯಾವಾಗಲೂ ಕನ್ನಡಕವನ್ನು ಧರಿಸಿರುತ್ತಿದ್ದರು. ಮಧ್ಯಮ ವಯಸ್ಸು, ಶ್ವೇತ ಬಣ್ಣವನ್ನು ಹೊಂದಿದ್ದರು ಸರಿಯಾದ ಎತ್ತರ,ಸರಳ ವ್ಯಕ್ತಿ.ಇನ್ನೂ ಆಗಷ್ಟೇ ಮದುವೆ ನಿಶ್ಚಯವಾಗಿತ್ತು ಆದರೆ ಈ ವಿಷಯ ಯಾವ ವಿದ್ಯಾರ್ಥಿಗಳಿಗೂ ತಿಳಿದಿರಲಿಲ್ಲ. ಪಾಠವನ್ನು ಅದ್ಭುತವಾಗಿ ಮಾಡುತ್ತಿದ್ದರು ವಿದ್ಯಾರ್ಥಿಗಳ ಜೊತೆ ಉತ್ತಮ ಸಂಬಂಧವನ್ನು ಹೊಂದಿದವರು. ಎಲ್ಲರನ್ನೂ,ಒಂದೇ ರೀತಿ ಕಾಣುವಂತಹ ಸಹೃದಯಿ ಆಗಿದ್ದರು.
ಎಂದಿನಂತೆ ಅನು ಮತ್ತು ಸೋನು ಕಾಲೇಜಿಗೆ ತೆರಳಿದ್ದರು.ಅಂದು ತರುಣ್ ಸರ್ ಅವರು ತುಂಬ ಒತ್ತಡದಲ್ಲಿರುವಂತೆ ಕಂಡರು. ಇಬ್ಬರೂ ಮಾತನಾಡಿಕೊಂಡರು ಬಹುಶಃ ಸರ್ ಗೆ ಪ್ರೇಮಪತ್ರ ತಲುಪಿರಬಹುದೆಂದು.ಕೆಲವು ದಿನ ಅವರು ಲೋಕದಲ್ಲೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದರು ಅವರ ಮನಸ್ಸಲ್ಲಿ ಒಂದೇ ಪ್ರಶ್ನೆ ಕಾಡುತ್ತಿತ್ತು ಅದೇನೆಂದರೆ ಯಾರೂ ಪತ್ರ ಬರೆದಿರಬಹುದೆಂದು, ಅದು ಅವರ ಮುಖದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು.ಹೀಗೆ ಕೆಲವು ದಿನಗಳು ಕಳೆದವು ನಂತರ ಅನು ಧೈರ್ಯ ಮಾಡಿ ಸರ್ ಗೆ ಫೋನ್ ಮಾಡಿ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಂಡಳು. ಆಗ ಸರ್, ಇದೆಲ್ಲಾ ಆಕರ್ಷಣೆ ಮಾತ್ರ.ನೀನು ಚೆನ್ನಾಗಿ ಓದಿ ಒಳ್ಳೆ ಉದ್ಯೋಗ ಮಾಡಬೇಕು ನಿನಗೆ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ಸಹಾಯವನ್ನು ನಾನು ಮಾಡುತ್ತೇನೆ. ಈ ಪ್ರೀತಿ ಅನ್ನೋದನ್ನ ಬಿಟ್ಟು ನಿನ್ನ ವಿದ್ಯಾಭ್ಯಾಸದ ಕಡೆಗೆ ಗಮನಹರಿಸು ಎಂದು ಬುದ್ಧಿವಾದ ಹೇಳಿದರು.ಆದರೆ ಸರ್ ಗೆ ಅನು ಯಾರೆಂದು ತಿಳಿದೇ ಇರಲಿಲ್ಲ.ಕಾರಣ ಅವಳು ತನ್ನ ಬಗ್ಗೆ ಎಲ್ಲಾ ಮಾಹಿತಿಯನ್ನು ತಪ್ಪಾಗಿ ಹೇಳಿದ್ದಳು.ಕೆಲವು ತಿಂಗಳುಗಳ ನಂತರ ಸರ್ ಗೆ ಮದುವೆ ಆಯಿತು ಈ ಸುದ್ದಿ ಕೇಳಿದ ಅನೂಗೆ ತುಂಬ ಗಾಬರಿಯಾಯಿತು ಕೆಲವು ದಿನ ಅನು ಖಿನ್ನತೆಗೂ ಒಳಗಾಗಿದ್ದಳು.ಆಮೇಲೆ ಹೇಗೋ ಧೈರ್ಯ ತಂದುಕೊಂಡು ಯಥಾಸ್ಥಿತಿಗೆ ಮರಳಿದಳು.
ಪದವಿ ಮುಗಿದೇ ಹೋಯ್ತು ಆದರೆ,ಅನೂಗೆ ತರುಣ್ ಸರ್ ಮೇಲಿನ ಪ್ರೀತಿ ಮಾತ್ರ ಹೋಗಿರಲಿಲ್ಲ. ಬೀಳ್ಕೊಡುಗೆ ಸಮಾರಂಭ ಕೈಗೊಂಡು ವಿದ್ಯಾರ್ಥಿಗಳು ದುಃಖದಿಂದ ಕಾಲೇಜಿಗೆ ವಿದಾಯ ಹೇಳಿದರು.
ಮುಂದಿನ ವಿದ್ಯಾಭ್ಯಾಸಕ್ಕಾಗಿ ಅನು ಮತ್ತು ಸೊನು ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು.ಹೊಸ ಜಾಗ ಹೊಸ ವಾತಾವರಣ, ಹೊಸ ಕಾಲೇಜು, ಆದರೂ ಅನೂಗೆ ತರುಣ್ ಸರ್ ನ ನೆನಪು ತುಂಬಾನೇ ಕಾಡ್ತಾ ಇತ್ತು. ತಡೆಯಲಾರದೆ ಒಂದು ದಿನ ಅನು,ಸರ್ ಗೆ ಫೋನ್ ಮಾಡಿ ನಾನು ನಿಮ್ಮ ವಿದ್ಯಾರ್ಥಿನಿ ಎಂದು ತನ್ನ ಬಗ್ಗೆ ಎಲ್ಲ ಮಾಹಿತಿಯನ್ನು ಸಂದೇಶದ ಮೂಲಕ ತಿಳಿಸಿದಳು.
ಸರ್ ಮಾತ್ರ, ಓಹೋ!ನೀವಾ ಎಂದು ಪ್ರತಿಕ್ರಿಯಿಸಿ ಬೇರೆ ಏನನ್ನೂ ಮಾತನಾಡಲಿಲ್ಲ.
ಎಂದಿನಂತೆ ಅಂದು ಕಾಲೇಜು ಮುಗಿಸಿ ಅನು, ಸೋನು ಮಾತನಾಡುತ್ತಾ ಮನೆಗೆ ಹಿಂದಿರುಗುತ್ತಿದ್ದರು ರಸ್ತೆಯಲ್ಲಿ ದೂರದಿಂದ ದ್ವಿಚಕ್ರವಾಹನದಲ್ಲಿ ಯಾರೋ ಬರುತ್ತಿದ್ದರು ಇದನ್ನು ಗಮನಿಸುತ್ತಿದ್ದ ಅನೂಗೆ ಶಾಕ್ ಕಾದಿತ್ತು.ಅದು ಬೇರೆ ಯಾರೂ ಅಲ್ಲ ತಾನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ತರುಣ್ ಸರ್ .ಅನೂಗೆ ಎದೆ ಬಡಿತ ಜೋರಾಯಿತು.ಜೊತೆಗೆ ಖುಷಿಯೂ ಆಯ್ತು.ಸರ್ ಕೂಡ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ನೇಮಕವಾಗಿದ್ದಾರೆ ಎಂಬ ಸುದ್ದಿ ಕೇಳಿ ತುಂಬಾ ಸಂಭ್ರಮಪಟ್ಟಳು.ದಿನನಿತ್ಯ ಸರ್ ನನ್ನು ಕಣ್ತುಂಬ ನೋಡಿ ಮನಸ್ಸಿನಲ್ಲೇ ಖುಷಿಪಡುತ್ತಿದ್ದಳು.
ವಿದ್ಯಾಭ್ಯಾಸ ಕೂಡ ಮುಗಿಯುತ್ತಾ ಬಂತು ಅನೂಗೆ ಮನೆಯಲ್ಲಿ ಮದುವೆ ನಿಶ್ಚಯ ಮಾಡಿದರು.ಬೇರೆ ದಾರಿಯಿಲ್ಲದೆ ಸಮ್ಮತಿ ಸೂಚಿಸಿದಳು.ಅನು ತಾನು ಮದುವೆ ಆಗುವ ಹುಡುಗನೊಂದಿಗೆ ಮಾತನಾಡಲು ಶುರು ಮಾಡಿದಳು. ಕ್ರಮೇಣ ತರುಣ್ ಸರ್ ನನ್ನು ಮರೆಯುತ್ತಾ ಬಂದಳು. ಆಗ ಅವಳಿಗೆ ಅರ್ಥವಾದದ್ದು ತರುಣ್ ಸರ್ ಮೇಲೆ ಇದ್ದದ್ದು ಪ್ರೀತಿ ಅಲ್ಲ ಕೇವಲ ಆಕರ್ಷಣೆ ಎಂದು,ಅಯ್ಯೋ ನಾನು ಆಕರ್ಷಣೆಯನ್ನೇ ಪ್ರೀತಿಯೆಂದು ನಂಬಿ ನನಗೆ ಮತ್ತು ಸರ್ ಗೆ ಎಷ್ಟೆಲ್ಲ ತೊಂದರೆ ಕೊಟ್ಟೆ.ಅನೂಗೆ ತಾನು ಮಾಡಿದ್ದು ತಪ್ಪೆಂದು ಮನವರಿಕೆಯಾಯಿತು ವಿಷಯವನ್ನೆಲ್ಲ ಸೋನುಗೆ ತಿಳಿಸಿದಳು ಆಗ ಮನಸ್ಸಿಗೆ ನಿರಾಳವಾಯಿತು..
ಈಗ ಅನು ನಡೆದಿದ್ದನ್ನೆಲ್ಲ ಮರೆತು ತನ್ನ ಗಂಡನೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿದ್ದಾಳೆ.

