Sowjanya Sowju

Abstract Classics Inspirational

4  

Sowjanya Sowju

Abstract Classics Inspirational

ತುಂತುರು ಹನಿಯ ಬಾಲ್ಯದ ನೆನಪು

ತುಂತುರು ಹನಿಯ ಬಾಲ್ಯದ ನೆನಪು

2 mins
226


.....ಸಮಯ ಮುಂಜಾನೆ ಸುಮಾರು 6:30 ಆಗಿರಬಹುದು ಕನಸಿನಲ್ಲೇ ಮುಳುಗಿ ಹೋಗಿದ್ದ ನನಗೆ ಮುಖದ ಮೇಲೆ ಯಾರೋ ನೀರು ಎರಚಿದಂತಾಯ್ತು.

ಅಯ್ಯೋ! ಏನಿದು ಅಂತ ಮನಸ್ಸಿನಲ್ಲೇ, ತಮ್ಮನೊ ಅಥವಾ ತಂಗಿಯೋ ಬೇಕು ಅಂತಾನೆ ತಮಾಷೆಗೆ ನನ್ನ ನಿದ್ದೆಗೆಡಿಸಲು ಈ ಕೆಲಸ ಮಾಡಿರಬಹುದೆಂದೂ, ಕೋಪಗೊಂಡು ಕಣ್ತೆರೆದಾಗ ಯಾರೂ ಇರಲಿಲ್ಲ. ನಂತರ ಗೊತ್ತಾಗಿದ್ದು ಅವು ಮಳೆಹನಿಗಳೆಂದು, ಹೌದು ಕಿಟಕಿಯ ಪಕ್ಕ ಮಲಗಿದ್ದ ನನಗೆ ಮಳೆಹನಿಗಳು ಸುಲಭವಾಗಿ ಮುಖದ ಮೇಲೆ ಬೀಳುತ್ತಿದ್ದವು.


ಛೆ!? ಮಳೇನಾ ಎಂದು ಎದ್ದೇಳಿ ಕಿಟಕಿಯಲ್ಲಿ ಇಣುಕಿದಾಗ ಕಂಡ ಚಿತ್ರಣ ಅಮೋಘಕರ.

ಚುಮುಚುಮು ಚಳಿಯಲ್ಲಿ ಜಿನಿ ಜಿನಿ ಬೀಳುತ್ತಿದ್ದ ಮಳೆ, ಜೊತೆಗೆ ಕೊಂಚವೇ ಕೊಂಚ ಸೂರ್ಯನ ಬಿಸಿಲಿನ ಬಂಗಾರದ ಬಣ್ಣ, ಮಳೆ ನೀರನ್ನು ಹಿಡಿದು ನಿಂತ ಭೂಮಿತಾಯಿ, ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಹುಲ್ಲು ಗಿಡಮರಗಳು, ಜೊತೆಗೆ ಮಣ್ಣಿನ ಸುವಾಸನೆ.

ಆಹಾ!ಎಷ್ಟು ಚೆಂದ. ಸ್ವರ್ಗವೇ ಭೂಮಿ ಮೇಲಿದೆ ಅಂತೆನಿಸೋ ಅನುಭವ. ಇದರ ಜೊತೆಗೆ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ ಜನಗಳ ಸದ್ದು,ಮಳೆಯಲ್ಲೂ ಹಾಲು ಮಾರುವವರು, ಹೂ ಮಾರುವವರು, ಪೇಪರ್ ಹಾಕುವವರು ತಮ್ಮ ಕೆಲಸಕ್ಕೆ ಗೈರುಹಾಜರಾಗಿರಲಿಲ್ಲ.....!

  

ಇದನ್ನೆಲ್ಲಾ ಗಮನಿಸುತ್ತಿದ್ದ ನಾನು ನನ್ನ ಬಾಲ್ಯ ದಿನಕ್ಕೆ ಹೋದೆ ನಮ್ಮ ಬಾಲ್ಯದಲ್ಲಿ ಮಳೆ ಬಂದರೆ ಅದೊಂದು ಸಂಭ್ರಮ, ಸಡಗರ, ಇದ್ದಂತೆ. ಒಟ್ಟಿನಲ್ಲಿ ಮಳೆ ಅಂದರೆ ಹಬ್ಬ. ಮಳೆ ಬಂದರೆ ಸಾಕು ಮಳೆಯಲ್ಲಿ ನೆನೆಯುವ, ಆಟ ಆಡುವ ಕೆಸರಿನಲ್ಲಿ ಕುಣಿಯುವುದು,ಕಾಗದದ ದೋಣಿ ಮಾಡಿ ಬಿಡುವುದು ಎಲ್ಲ ನೆನಪಾಯ್ತು.

ಮಳೆ ಬಂದ ಸಮಯದಲ್ಲಿ ಪಕ್ಷಿಗಳ ಕಲರವ ಮತ್ತು ತಮ್ಮ ಮರಿಗಳನ್ನು ರಕ್ಷಿಸುವ ರೀತಿ ಸುರಕ್ಷತೆ ಜಾಗಕ್ಕೆ ಕರೆದುಕೊಂಡು ಹೋಗುವುದು ತಾಯಿ ಮತ್ತು ಮಕ್ಕಳ ನಡುವಿನ ಉತ್ತಮ ಬಾಂಧವ್ಯವನ್ನು ಸೂಚಿಸುತ್ತದೆ. ಇನ್ನು ಮಳೆಯಲ್ಲೇ ನೆನೆಯುತ್ತಾ ನಮ್ಮದೇ ಹಾಡನ್ನು ಹಾಡುವುದು ಕೆಲವೊಂದು ಸಲ ಅಮ್ಮನಿಂದ ಹಾಡನ್ನು ಹಾಡಿಸಿ ಖುಷಿಪಡುವುದು ಉಚಿತವಾಗಿ ಸಿಗುತ್ತಿದ್ದ ಅದರಲ್ಲೂ ಮಳೆ ಬರುವ ಸಮಯದಲ್ಲಿ ಬೆಂಕಿಯಲ್ಲಿ ಬೇಯಿಸಿದ ಮೆಕ್ಕೆಜೋಳವನ್ನು ತಿಂದರಂತೂ ಆಹಾ! ಅದರ ರುಚಿಯ ಮುಂದೆ ಯಾವ ರುಚಿಯೂ ಇಲ್ಲ ಎಂದೆನಿಸುವುದು ಮಳೆಬೀಳುವ ಸಮಯದಲ್ಲೇ ಬರುತ್ತಿದ್ದ ರೈತನ ಮಿತ್ರ ಬಸವನ ಹುಳು ಇನ್ನಿತರ ಕೀಟಗಳನ್ನು ನೋಡುವುದೇ ನಮಗೆ ಪುಳಕವಾಗಿತ್ತು. ಶಿಕ್ಷಕರು ತರಗತಿಯಲ್ಲಿ ಪಾಠ ಮಾಡುವಾಗ ಮಳೆ ಬಂದರಂತೂ ವಿದ್ಯಾರ್ಥಿಗಳಿಗೆ ಹಬ್ಬವೋ ಹಬ್ಬ ಕಾರಣ ಮಳೆ ಬರುವ ಸದ್ದಿಗೆ ಶಿಕ್ಷಕರು ಪಾಠವನ್ನು ನಿಲ್ಲಿಸುವುದು ನಾವು ಬಾಲ್ಯದಲ್ಲಿರುವಾಗ ಸಾಮಾನ್ಯವಾಗಿತ್ತು. ಮಳೆಯ ಜೋರಾದ ಶಬ್ದಕ್ಕೆ ಶಿಕ್ಷಕರು ಪಾಠವನ್ನು ಮಾಡಲಾರದಂತಹ ಸ್ಥಿತಿ ಹಲವು ಬಾರಿ ಬಂದಿದೆ. 

ಮಳೆ ಬಾರದ ಸಂದರ್ಭದಲ್ಲಿ ಬೇರೆ ದಾರಿ ಇಲ್ಲದೆ ಶಿಕ್ಷಕರ ಪಾಠವನ್ನು ಆಸಕ್ತಿಯಿಲ್ಲದೆ ಕೇಳುತ್ತಿದ್ದೇವೆ ಎಂದು ನಟಿಸುತ್ತಾ, ಕೆಲ ತುಂಟಾಟಗಳನ್ನು, ಗಲಾಟೆ ಮಾಡುತ್ತಾ, ಇರುವ ನಾವು ಮಳೆ ಬಂತೆಂದರೆ ಸಾಕು ಎಲ್ಲರ ಗಮನ ಕಿಟಕಿಯೆಡೆ ಮತ್ತು ಬಾಗಿಲ ಕಡೆಗೆ ಇರುತ್ತಿತ್ತು. ಕೆಲ ಕ್ಷಣ ವಿದ್ಯಾರ್ಥಿಗಳೆಲ್ಲ ಮೌನವಹಿಸಿ ಆಚೆ ನೋಡುವುದಾಗಿತ್ತು. ಅಂದು ಮಳೆಯ ನೆನಪನ್ನು ಮೆಲುಕು ಹಾಕುತ್ತಾ ಅದರ ಬಗೆಗಿನ ಒಲವು ಅನಾಹುತ ಉಪಯೋಗದ ಬಗ್ಗೆ ವಿದ್ಯಾರ್ಥಿಗಳು ಚರ್ಚಿಸುವುದು. ಅಂದು ಮಳೆಯ ಬಗ್ಗೆ ವಿದ್ಯಾರ್ಥಿಗಳ ಪಾಠ ಮತ್ತು ಚರ್ಚೆ ಎಂದರೆ ತಪ್ಪಾಗುವುದಿಲ್ಲ. 

ಇoದಿನ ಕೆಲ ಮಕ್ಕಳು ಮಳೆಯ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಕೇವಲ ಶಾಲೆ, ಪುಸ್ತಕ, ಓದು ಇದೇ ಆಗಿರುತ್ತದೆ. ಮಳೆ ಅಂದರೆ ಸಾಮಾನ್ಯವೆಂಬಂತೆ ಇರುವುದು. ಹಾಗೆಯೇ ಕಾಲವು ಬದಲಾಗಿದೆ. ಮಳೆಯಲ್ಲಿ ನೆನೆದು ಸಂಭ್ರಮ ಪಡುವುದನ್ನೇ ಮಕ್ಕಳು ಮರೆತು ಹೋಗಿದ್ದಾರೆ, ಜೊತೆಗೆ ಆಸಕ್ತಿಯೂ ಇಲ್ಲ.

ರೈತರಿಗಂತೂ ಮಳೆ ಅಂದರೆ,ನೀರೀಕ್ಷೆ , ಭವಿಷ್ಯ , ಸಂಭ್ರಮ, ಮತ್ತು ಭರವಸೆ. ಏಕೆಂದರೆ ಭೂಮಿ ತಂಪಾಗುತ್ತದೆ, ಬೆಳೆ ಹಸಿರಾಗುತ್ತದೆ, ಬದುಕಿನಲ್ಲಿ ಆಸೆ ಹುಟ್ಟಿಸುತ್ತದೆ. ಮನೆಯಲ್ಲಿ ಹಬ್ಬದ ವಾತಾವರಣ ಕೂಡಿರುತ್ತದೆ. ಕೆಲವೊಂದು ಸಲ ರೈತರಿಗೆ ಮಳೆ ದುಃಖವನ್ನೂ ತರುವುದುಂಟು. ಇದರ ಜೊತೆಗೆ ಖುಷಿಯಂತೂ ಖಂಡಿತ ಸಿಗುತ್ತದೆ.  

ಹೀಗೆ ಹಲವಾರು ನೆನಪು, ವಿಷಯಗಳನ್ನು ಮೆಲುಕು ಹಾಕುತ್ತಿರುವಾಗ ಮತ್ತೆ ಅದೇ ಮಳೆಹನಿ ನನ್ನನ್ನು ಎಚ್ಚರಿಸಿತ್ತು ಆಗ ವಾಸ್ತವಕ್ಕೆ ಬಂದೆ. ಹಿಂದೆಯಿಂದ ಯಾರೋ ಬೆನ್ನು ಬಡಿದಂತಾಯಿತು.


ಅರೆ...! ಯಾರಿರಬಹುದೆಂದು ಹಿಂದೆ ತಿರುಗಿ ನೋಡಿದರೆ, ಅಮ್ಮ...... ಕೈಯಲ್ಲಿ ಚಹಾ ಹಿಡಿದು ಮುಗುಳ್ನಗುತ್ತಾ.. "ಏನಮ್ಮಾ ಕಿಟಕಿಯ ಹೊರಗಡೆ ನೋಡುತ್ತಾ ಅಷ್ಟೊಂದು ತಲ್ಲೀನಳಾಗಿದ್ದೀಯಾ?"ಎಂದು ಕೇಳಿದಾಗ, 'ಏನಿಲ್ಲ ಅಮ್ಮಾ ಹಾಗೇ ಸುಮ್ಮನೆ ಎಂದು ಮಂದಹಾಸ ಬೀರಿದೆ.

ಅಬ್ಬಾ! ಒಂದು ಕ್ಷಣ ಬಾಲ್ಯಕ್ಕೆ ಪುನಃ ಹೋಗಿ ಬಂದಂತೆ ಭಾಸ. ಒಂದು ಮಳೆಹನಿ ಇಷ್ಟೆಲ್ಲಾ ನೆನಪಿಸಿತೆ ಎಂದುಕೊಂಡೆ...

ಈ ದಿನಗಳಲ್ಲಿ ಕೆಲವರು ಮಳೆ ಮತ್ತು ಅದರ ಸಂಭ್ರಮ ಮರೆತು ಮಳೆ ಬಂದರೆ ವಿಶೇಷವಲ್ಲವೆಂಬಂತೆ ತಮ್ಮ ಪಾಡಿಗೆ ತಾವು, ತಮ್ಮ ಕೆಲಸ ಆಯ್ತು ಅಂದುಕೊಳ್ಳುವವರೂ ಇದ್ದಾರೆ..ಆದರೆ,

"ಮಳೆಯು ಒಂದು ಭಾವನೆ ಪ್ರಕೃತಿಯ ಸೊಬಗು, ಪ್ರೀತಿ, ಸಂಭ್ರಮ. ಅದನ್ನು ಅನುಭವಿಸಿದರೆ ಏನೋ ಖುಷಿ".

ಧನ್ಯವಾದಗಳು 



Rate this content
Log in

Similar kannada story from Abstract