ಅಂತ್ಯವಿಲ್ಲದ ಕೆಲಸ
ಅಂತ್ಯವಿಲ್ಲದ ಕೆಲಸ
......ಗಾಢನಿದ್ರೆಯಲ್ಲಿ ಜಾರಿದ್ದ ನನಗೆ ಥಟ್ಟನೆ ಅಲರಾಂ ಶಬ್ದ ಕೇಳಿ ಎಚ್ಚರಗೊಂಡಾಗ ಸಮಯ ಬೆಳಿಗ್ಗೆ 5:45 ಆಗಿತ್ತು. ನಿದ್ದೆ ಇನ್ನೂ ಮಾಡಬೇಕಿತ್ತು ಎಂದು ಅನ್ನಿಸಿದರೂ ಏಳಲೇಬೇಕು ಎಂದು ಬೇರೆ ದಾರಿಯಿಲ್ಲದೆ ಏಳಿದೆ.ಅಂದ ಹಾಗೆ ನಾನಿರೋದು ನನ್ನ ಅತ್ತೆ ಮನೆಯಲ್ಲಿ, ಆದರೆ ನನ್ನ ಅಮ್ಮನ ಮನೆ ತುಂಬಾ ನೆನಪಾಗುತ್ತಿತ್ತು.ಮನೆಯಲ್ಲಿ ಅಪ್ಪ ಅಮ್ಮ ತಂಗಿ ತಮ್ಮ ಬಹಳ ನೆನಪಾದರು. ಮುಂಜಾನೆ ಅಮ್ಮ ಎದ್ದೇಳು ಎಂದು ಎಷ್ಟೇ ಕೂಗಿಕೊಂಡರೂ ಇನ್ನೂ ಸ್ವಲ್ಪ ನಿದ್ದೆ ಮಾಡುತ್ತೇನೆ ಎಂದು ಮುಂಜಾನೆ 8 ಗಂಟೆ ಆದರೂ ಎದ್ದೇಳುತ್ತಿರಲಿಲ್ಲ.
ನನ್ನ ಜೀವನದಲ್ಲಿ ಒoದು ಬಾರಿಯೂ ಮನೆಯಲ್ಲಿ ಮುಂಜಾನೆ ಕಾಫಿ ಅಥವಾ ಚಹಾ ಮಾಡಿದ್ದೇ ಇಲ್ಲ.ಆದರೆ ನಂತರದ ಎಲ್ಲ ಕೆಲಸವನ್ನೂ ಮಾಡುತ್ತಿದ್ದೆ ಅಮ್ಮನಿಗೆ ನನ್ನಿಂದಾದಷ್ಟು ಸಹಾಯ ಮಾಡುತ್ತಿದ್ದೆ ಆದರೆ ಬೆಳಗ್ಗೆ ಎದ್ದೇಳಲು ಮಾತ್ರ ನನ್ನಿಂದ ಸಾಧ್ಯವೇ ಇರುತ್ತಿರಲಿಲ್ಲ.
ಇನ್ನೂ ನನ್ನ ತಂಗಿ ಅಂತೂ ನನಗಿಂತ ಮೊದಲೇ ಎದ್ದು ಆದಷ್ಟು ಕೆಲಸವನ್ನು ಮಾಡಿ ಮುಗಿಸುತ್ತಿದ್ದಳು ಮನೆಗೆ ಹಿರಿಯಾಳಾದರೂ ನಾನು ಇನ್ನೂ ಮಲಗಿಯೇ ಇರುತ್ತಿದ್ದೆ.
ಇದನ್ನೆಲ್ಲ ನೆನೆಸಿಕೊಂಡು ಪುನಃ ಮಲಗಿದ್ದ ನನಗೆ ಎಚ್ಚರವಾಗಿದ್ದು ಸಮಯ 6:30 ಆದಾಗ ಯಪ್ಪಾ..... ದೇವರೆ ಎಂದು ದೇವರನ್ನು ನೆನೆಸಿಕೊoಡು ಗಡಿಬಿಡಿಯಲ್ಲಿ ಎದ್ದು ಹೊರಗೆ ಬಂದರೆ ಆಗಲೇ ಅತ್ತೆ ಎದ್ದು ಟಿ.ವಿ ಯಲ್ಲಿ ನ್ಯೂಸ್ ನೋಡುತ್ತಾ ಇರುತ್ತಾರೆ.ಅವರು 6 ಗಂಟೆಗೆಲ್ಲ ಎದ್ದು ವಾಕಿಂಗ್ ಗೆ ಹೋಗಿ ಮನೆಗೆ ಬರುವಾಗ ಹಾಲನ್ನು ತಂದು ಫ್ರಿಜ್ಜಿನಲ್ಲಿ ಇಡುವುದು ಅವರ ದಿನಚರಿ.
ನಾನು ತಡಮಾಡಿ ಎದ್ದರೆ ಅವರ ಒಂದು ತೀಕ್ಷ್ಣನೋಟವೇ ಸಾಕು ನನಗೆಲ್ಲಾ ಅರ್ಥವಾಗುತ್ತಿತ್ತು.
ಆ ನೋಟಕ್ಕೆ ನಾನು ಸಹ ಕಣ್ಸನ್ನೆಯಲ್ಲಿಯೇ ಹೇಗೋ ಅವರಿಗೆ ಸಮಾಧಾನ ಹೇಳಿ ಬೆಳಗಿನ ಸ್ನಾನ ಪೂಜೆ ಇತ್ಯಾದಿಗಳನ್ನೆಲ್ಲ ಮುಗಿಸಿ ನಂತರ ಮೊದಲು ಹೋಗುವುದೇ ಅಡುಗೆ ಮನೆಗೆ.ಮೊದಲು ಚಹಾ ಮಾಡುವುದಕ್ಕಿಟ್ಟು ಹೊರಗಡೆ ಬಂದರೆ ಪೊರಕೆ ನನಗಾಗಿ ಕಾಯುತಿರುತ್ತದೆ.
ಕಾಯುತ್ತಿದ್ದ ಪೊರಕೆಯ ಜತೆಗೆ ಮಾತನಾಡುತ್ತಾ ಅಂಗಳವನ್ನು ಗುಡಿಸಿ ಬರುವಷ್ಟರಲ್ಲೆ ಚಹಾ ಆಗಿರುತ್ತದೆ.
ಚಹಾವನ್ನು ಅತ್ತೆಗೆ ನೀಡಿ ನಮ್ಮೆಜಮಾನರಿಗೆ ನೀಡಿ ನಾನು ಕುಡಿದು ನಂತರ ಮನೆಯನ್ನೆಲ್ಲಾ ಗುಡಿಸಿ ಬಂಡೆಯನ್ನು ಒರೆಸೆ ಮುಂದಿನ ಕೆಲಸ ಶುರು ಮಾಡುತ್ತೇನೆ ನನ್ನ ಮುಂದಿನ ಕೆಲಸ ಪಾತ್ರೆ ಉಜ್ಜುವುದು.
ಪಾತ್ರೆಗಳೋ ಸಿಂಕಿನಲ್ಲಿ ನನ್ನ ಬಗ್ಗೆ ಮಾತನಾಡುತ್ತಾ ಇರುವಂತೆ ಭಾಸವಾಗುತ್ತದೆ.
"ಇನ್ನು ಯಾವಾಗ ಬಂದು ನಮ್ಮನ್ನು ಸ್ವಚ್ಛ ಮಾಡುತ್ತಾಳೋ"?
"ಇವತ್ತು ಯಾಕೋ ಅವಳು ಎದ್ದೇಳುವುದು ಲೇಟ್ ಆಯ್ತು ಅನ್ಸುತ್ತೆ"!
"ಅವರತ್ತೆಯ ಮುಖ ನೋಡಿ ಹೇಗಾಗಿದೆ"
ಇಂತಹ ಮಾತುಗಳನ್ನೇ ಆಡುತ್ತಿರುವಂತೆ ಭಾಸವಾಗುತ್ತದೆ.
ಸಾಕು ಸಾಕು ನನ್ನ ಬಗ್ಗೆ ಮಾತನಾಡಿದ್ದು ಎಂದು ಪಾತ್ರೆಗಳನ್ನು ಸುಧಾರಿಸಿ ಉಜ್ಜಿ ನಂತರ ಬೆಳಗಿನ ಉಪಹಾರಕ್ಕೆ ತಯಾರಿ ಮಾಡಬೇಕು ಅದೂ ಸಹ ಅತ್ತೆ ಹೇಳಿದ ತಿಂಡಿಯನ್ನೇ ಮಾಡಬೇಕು ಅವರ ಆಜ್ಞೆಯನ್ನು ಮೀರುವ ಹಾಗಿಲ್ಲ.
ನಂತರ ಮನೆಯವರಿಗೆಲ್ಲಾ ತಿಂಡಿ ಬಡಿಸಿ ನಾನು ಸ್ವಲ್ಪ ತಿಂದು ಪುನಃ ಇದ್ದಬದ್ದ ಪಾತ್ರಗಳನ್ನು ತೊಳೆದು ಗ್ಯಾಸ್ ಒಲೆ ಮತ್ತು ಗ್ಯಾಸ್ ಕಟ್ಟೆಯನ್ನು ಪ್ರತಿದಿನ ಸ್ವಚ್ಛವಾಗಿ ಒರೆಸಲೇಬೇಕು ಸ್ವಲ್ಪ ವ್ಯತ್ಯಾಸವಾದರೂ ಅತ್ತೆಯಿಂದ ಬೈಗುಳ ಕಟ್ಟಿಟ್ಟ ಬುತ್ತಿ.
ಇಷ್ಟೆಲ್ಲಾ ಮಾಡಿದ ನಂತರದ ನನ್ನ ಮುಂದಿನ ಕಾರ್ಯಕ್ರಮವೇ ಬಟ್ಟೆಗಳನ್ನು ಒಗೆಯುವುದು ವಾಷಿಂಗ್ ಮಿಷನ್ ಇದ್ದರೂ ಸಹ ಕೈಯಿಂದ ಒಗೆದರೆ ಸ್ವಚ್ಛವಾಗುತ್ತವೆ ಎಂಬುದು ನನ್ನ ಅತ್ತೆಯವರ ವಾದ.
ಬಟ್ಟೆಗಳನ್ನು ಸ್ವಚ್ಛವಾಗಿ ಒಗೆದು ಒಣಗಿ ಹಾಕಿ ಬರುವಷ್ಟರಲ್ಲಿ
ಸಮಯ ಸುಮಾರು 12:30 ಆಗಿರುತ್ತದೆ ಈಗ ಮಧ್ಯಾಹ್ನ ಊಟಕ್ಕೆ ತಯಾರಿ ಮಾಡಬೇಕು.
ನಾನೂ ಊಟ ಮಾಡಿ ಪುನಃ ಪಾತ್ರೆಗಳನ್ನು ಉಜ್ಜುವಷ್ಟರಲ್ಲಿ ಸಮಯ 3 ಆಗಿರುತ್ತದೆ ಇದು ನನ್ನ ವಿರಾಮದ ಸಮಯ ಎಂದು ಹೇಳಬಹುದು.
ನಂತರ 3-4 ವರೆಗೆ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಒಗೆದು ಹಾಕಿದ್ದ ಬಟ್ಟೆಗಳು ಒಣಗಿದ್ದರೆ ಅವುಗಳನ್ನು ಮಡಚಿ ಜೋಡಿಸಿ ಬೀರುನಲ್ಲಿಡಬೇಕು.
ಈಗ ಸಂಜೆ, ಪುನಃ ನನ್ನ ಕೆಲಸ ಶುರು ಮನೆಯ ಒಳಗೆ ಮತ್ತು ಹೊರಗಿನ ಅಂಗಳವನ್ನು ಗುಡಿಸಿ ಚಹಾ ಮಾಡಿ ಎಲ್ಲರಿಗೂ ನೀಡಿ ನಾನು ಕುಡಿದು ಪುನಃ ಪಾತ್ರೆ ಉಜ್ಜುವಷ್ಟರಲ್ಲಿ ಸಮಯ ಸುಮಾರು ಸಂಜೆ 6 ಆಗಿರಬಹುದು.
(ಎಷ್ಟು ಸಲ ಪಾತ್ರೆ ಉಜ್ಜುತ್ತೀರಿ ಅಂದುಕೊಳ್ಳುತ್ತೀರಾ ನೋಡಿ ನಮ್ ಹೆಣ್ಮಕ್ಕಳ ದಿನಚರಿ ಹೀಗಿದೆ ಒಂದು ದಿನದಲ್ಲಿ ಇಷ್ಟು ಸಲ ಪಾತ್ರೆಗಳನ್ನು ಉಜ್ಜುವುದಕ್ಕೇ ಸಮಯ ಹೋಗುತ್ತದೆ )
ಈಗ ರಾತ್ರಿ ಊಟವನ್ನು ತಯಾರಿ ಮಾಡುವ ಸಮಯ ನಾವು ಉತ್ತರ ಕರ್ನಾಟಕದವರ ಆದುದರಿಂದ ಪ್ರತಿ ದಿನ ರಾತ್ರಿ ರೊಟ್ಟಿಯನ್ನು ಮಾಡಲೇಬೇಕು ನನ್ನ ಕೈಗಳಂತೂ ನನ್ನನ್ನು ತುಂಬಾ ಬೈದು ಕೊಂಡಿರುತ್ತವೆ. ಏಕೆಂದರೆ ನಾವು ನಮ್ಮ ಎರಡು ಕೈ ಗಳನ್ನು ಬಳಸಿ ರೊಟ್ಟಿಯನ್ನು ತಟ್ಟಿ ಮಾಡುತ್ತೇವೆ. ಜೊತೆಗೆ ರೊಟ್ಟಿಗೆ ಒಪ್ಪುವ ಪಲ್ಯವನ್ನು ಹಾಗೂ ಮನೆಯವರ ಅಭಿರುಚಿಗೆ ತಕ್ಕಂತ ಪಲ್ಯವನ್ನೇ ತಯಾರಿಸಬೇಕು.ಅಂದರೆ ಎಲ್ಲರ ಇಷ್ಟ-ಕಷ್ಟ ಗಳನ್ನು ಅರಿತಿರಬೇಕು.
ಮತ್ತು ನಮ್ಮ ಕಡೆ ರೊಟ್ಟಿ ತಿಂದ ನಂತರ ಅನ್ನವನ್ನು ತಿನ್ನುವ ಅಭ್ಯಾಸವಿದೆ.ಹಾಗಾಗಿ ನಾನು ರಾತ್ರಿ ರೊಟ್ಟಿ,ಪಲ್ಯ, ಅನ್ನ ಸಾರು ಇಷ್ಟನ್ನು ಖಂಡಿತಾ ಮಾಡಲೇಬೇಕು.
ರಾತ್ರಿ ಊಟ ಮಾಡಿ ಮಲಗಿಕೊಳ್ಳುವಷ್ಟರಲ್ಲೇ ಸಮಯ 10 ಆಗಿರುತ್ತದೆ.ಪುನಃ ಮುಂಜಾನೆ ಅದೇ ರಾಗ ಅದೇ ಹಾಡು.
ಇವುಗಳು ಪ್ರತಿದಿನ ಮಾಡುವ ಕೆಲಸಗಳಾದರೆ ಇದರ ಹೊರತು ಇನ್ನೂ ಹಲವಾರು ಕೆಲಸಗಳನ್ನು ಮಾಡಬೇಕು.
ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಮನೆಗೆ ಬೇಕಾದ ದಿನಸಿಯನ್ನು ಖರೀದಿಸುವುದು, ಅಕ್ಕಿ, ಜೋಳ ,ಗೋಧಿ ಇಂತಹ ಧಾನ್ಯಗಳನ್ನು ಹಸನು ಮಾಡಿಕೊಳ್ಳುವುದು,
ಮನೆಯ ಮುಂದಿನ ಕೈತೋಟವನ್ನು ನಿಭಾಯಿಸುವುದು.
ಕರೆಂಟ್ ,ನೀರಿನ ಬಿಲ್ ಗಳನ್ನು ಪಾವತಿಸುವುದು ಮಕ್ಕಳಿಗೆ ಹೋಂವರ್ಕ್ ಮಾಡಿಸುವುದು.ಇಂತಹ ಅನೇಕ ಹೆಚ್ಚಿನ ಕೆಲಸಗಳನ್ನು ಹೆಣ್ಣು ಮಕ್ಕಳು ಮಾಡಬೇಕಾಗುತ್ತದೆ.
ಇಷ್ಟೇ ಅಲ್ಲ ಹೆಣ್ಣು ಮದುವೆಗೂ ಮುಂಚೆ ತನ್ನ ತವರು ಮನೆಯಲ್ಲಿ ಇದ್ದಾಗಲೂ ನಂತರ ಮದುವೆಯಾಗಿ ಗಂಡನ ಮನೆಯಲ್ಲಿದ್ದಾಗ ಮತ್ತು ಯಾವಾಗಲಾದರೂ ಸಂಬಂಧಿಕರ ಮನೆಗೆ ಹೋದಾಗಲೂ ಅವಳು ಜೀವನಪರ್ಯಂತ ಮನೆ ಕೆಲಸವನ್ನು ಮಾಡುತ್ತಲೇ ಇರುತ್ತಾಳೆ ಹೊರತು ಸುಮ್ಮನೆ ಮಾತ್ರ ಕೂರುವುದಿಲ್ಲ.
ಅಬ್ಬಾ...! ಮನೇಲೆ ಇರುವ ನಾನು ಇಷ್ಟು ಕೆಲಸ ಮಾಡುವುದಕ್ಕೆ ಕಷ್ಟ ಆಗುತ್ತದೆ.ಅಂತಹದರಲ್ಲಿ ಹೊರಗಡೆ ಹೋಗಿ ಕೆಲಸ ಮಾಡುವ ಹೆಣ್ಣುಮಕ್ಕಳ ಪಾಡಂತೂ ದೇವರೇ ಬಲ್ಲ.
ಒಂದು ಹೆಣ್ಣು ಇಷ್ಟೆಲ್ಲ ಕೆಲಸ ಮಾಡಿ ಹೊರಗಡೆಯೂ ಕೆಲಸ ಮಾಡಿ ಮಕ್ಕಳನ್ನೂ ಸಂಭಾಳಿಸುತ್ತಾ ಜೀವನ ಸಾಗಿಸುವುದು ಯುದ್ಧ ಮಾಡಿದಂತೆಯೇ ಸರಿ.
ಒಬ್ಬ ಗಂಡಸು ಹೊರಗಡೆ ದುಡಿದು ಮನೆಗೆ ಬಂದ ನಂತರ ವಿಶ್ರಾಂತಿ ತೆಗೆದುಕೊಳ್ಳುಬಹುದು ಆದರೆ ಹೆಣ್ಣಿನ ಜೀವನ ಹಾಗಲ್ಲವಲ್ಲ.!
ಹೆಣ್ಣು ಹೊರಗಡೆ ದುಡಿದು ಮನೆಗೆ ಬಂದ ಮೇಲೂ ಮನೆಯಲ್ಲೂ ವಿಶ್ರಾಂತಿ ತೆಗೆದುಕೊಳ್ಳದೆ ದುಡಿಯುತ್ತಾ ಇರುತ್ತಾಳೆ.
ಇನ್ನು ಕೆಲಸದವರನ್ನು ಮನೆಕೆಲಸಕ್ಕೆ ಇಟ್ಟುಕೊಳ್ಳೋಣ ಎಂದುಕೊಳ್ಳೋಣ ಆದರೆ ಅವರ ಕೆಲಸ ನಮ್ ಹೆಣ್ಮಕ್ಕಳಿಗೆ ಇಡಿಸಬೇಕಲ್ಲ.
ಇದು ಹೆಣ್ಣಿನ ದಿನಚರಿ ಇಷ್ಟೆಲ್ಲಾ ಕೆಲಸ ಮಾಡಿದರೂ ಸಹ ಅವಳನ್ನು ಅರ್ಥ ಮಾಡಿಕೊಳ್ಳದೆ ಅವರ ಕೆಲಸವನ್ನು ಸಾಮಾನ್ಯವೆಂಬಂತೆ ನೋಡುತ್ತಾರೆ ಆದರೆ ಅದನ್ನು ನಾವು ಮಾಡಿದಾಗ ಮಾತ್ರ ಎಷ್ಟು ಕಷ್ಟ ಎಂಬುದು ಗೊತ್ತಾಗುತ್ತದೆ ಇಷ್ಟೆಲ್ಲ ಕೆಲಸಗಳನ್ನು ವಿಶ್ರಾಂತಿಯಿಲ್ಲದೆ ಒಂದರ ನಂತರ ಒಂದರಂತೆ ಮಾಡುವುದು ಖಂಡಿತ ಸಾಮಾನ್ಯ ವಿಷಯವಂತೂ ಅಲ್ಲವೇ ಅಲ್ಲ.
ಇನ್ನೊಂದು ವಿಷಯ ಗಂಡು ಮಕ್ಕಳು ಹೆಣ್ಣು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪೂರ್ಣವಾಗಿ ಸಹಾಯ ಮಾಡದಿದ್ದರೂ ಅಲ್ಪಸ್ವಲ್ಪವಾದರೂ ತನ್ನ ಹೆಂಡತಿಗೋ, ತಾಯಿಗೋ, ಅಕ್ಕನಿಗೋ, ತಂಗಿಗೋ ಸಹಾಯ ಮಾಡಿದರೆ ಅವಳಿಗೂ ಕೆಲಸ ಕಷ್ಟವೆನಿಸುವುದಿಲ್ಲ.
"ಹೆಣ್ಣು ಹುಡುಗಿ ಆಗಿ ನೀನು ಆ ಕೆಲಸವನ್ನು ಮಾಡಬೇಕು".
ಎಂಬ ಭೇದವನ್ನು ದಯವಿಟ್ಟು ಯಾರು ತೋರಿಸಬೇಡಿ ಎಲ್ಲರೂ ಸಮಾನರೇ...
******************
ಧನ್ಯವಾದಗಳು
