ಪ್ರೇಮ ನಿವೇದನೆ
ಪ್ರೇಮ ನಿವೇದನೆ
ಮೂರು ವರ್ಷಗಳಿಂದ ರಾಧಳನ್ನು ಪ್ರೀತಿಸುತ್ತಿದ್ದ ಮಾಧವ, ತನ್ನ ಪ್ರೇಮ ನಿವೇದನೆಗಾಗಿ ಸಮಯ ಕಾಯುತ್ತಲೇ ಇದ್ದ. ಎಷ್ಟೋ ಬಾರಿ ಹೂಗುಚ್ಛ ಹಿಡಿದುಕೊಂಡು ಅವಳ ಮುಂದೆ ಹೋಗಿ ನಿಂತು
ತನ್ನ ಪ್ರೇಮವನ್ನು ಹೇಳಿಕೊಂಡು, ಅವಳಿಗೆ ತನ್ನ ಮೇಲೆ ಇರುವ ಪ್ರೀತಿಯನ್ನು ತಿಳಿದುಕೊಂಡು ಬಿಡಬೇಕೆಂದು ಸಿದ್ಧತೆ ಮಾಡಿಕೊಂಡು, ತನ್ನ ಗಂಟಲನ್ನು ಸರಿಪಡಿಸಿಕೊಳ್ಳುತ್ತಾ, ಇನ್ನೇನು ತನ್ನ ಪ್ರೇಮ ನಿವೇದನೆ ಮಾಡಿಕೊಂಡು ಬಿಡಬೇಕು ಎನ್ನುವ ಹೊತ್ತಿಗೆ, ಏನಾದರೊಂದು ಅಡಚಣೆಗಳು ಅವನಿಗೆ ಎದುರಾಗುತ್ತಿದ್ದವು.ಇತ್ತ ಮನೆಯಲ್ಲಿ ತನ್ನ ಮದುವೆಗಾಗಿ ಹೆಣ್ಣಿನಹುಡುಕಾಟದಲ್ಲಿದ್ದ ಅಮ್ಮ, ದಿನಕ್ಕೊಂದು ಹುಡುಗಿಯ ಫೋಟೋ ಹಿಡಿದು ಅವನನ್ನು ಮದುವೆಗೆ ಒಪ್ಪಿಸಲು ಪ್ರಯತ್ನ ಮಾಡುತ್ತಿದ್ದರು.
ಆದರೆ ಮಾಧವ ತನ್ನ ಪ್ರೀತಿಯನ್ನು ರಾಧಳೊಂದಿಗೆ ಹೇಳಿಕೊಳ್ಳಲೂ ಆಗದೆ, ಮನೆಯಲ್ಲಿ ನೋಡುತ್ತಾ ಇರುವ ಹುಡುಗಿಯರಲ್ಲಿ ಯಾರನ್ನೂ ಒಪ್ಪಿಕೊಳ್ಳಲು ಮನಸ್ಸಿಲ್ಲದೆ, ಸುಮ್ಮನೆ ಮದುವೆಯನ್ನು ಮುಂದೂಡುತ್ತಲೇ ಇದ್ದಾಗ, ಮಾಧವನ ತಾಯಿಗೆ ಅನುಮಾನ ಶುರುವಾಯಿತು. ಕಡೆಗೆ ಅವರು ಮಗನ ಆಯ್ಕೆಯ ಹುಡುಗಿಯೇ ತಮ್ಮ ಸೊಸೆಯಾಗಿ ಒಪ್ಪಿಕೊಳ್ಳುತ್ತೇನೆ ಎಂದು ಮಗನಿಗೆ ಭರವಸೆ ಕೊಟ್ಟಾಗ, ಮಾಧವ ತನ್ನ ಪ್ರೀತಿಯ ವಿಷಯವನ್ನು ತಾಯಿಗೆ ತಿಳಿಸಿದ. ಹಾಗಾದರೆ ಇನ್ನು ತಡಮಾಡುವುದು ಬೇಡವೆಂದು ಅವನ ತಾಯಿ ಮಗನನ್ನು ಆದಷ್ಟು ಬೇಗ ರಾಧಳ ಹತ್ತಿರ ಪ್ರೇಮ ನಿವೇದನೆ ಮಾಡಿಕೊಳ್ಳುವಂತೆ ಒತ್ತಾಯಿಸಿದರು.
ತಾಯಿಯ ಬೆಂಬಲ ದೊರಕಿದ ನಂತರ, ಮಾಧವನಿಗೆ ತುಂಬಾ ಧೈರ್ಯ ಬಂದು, ಪ್ರೇಮಿಗಳ ದಿನಾಚರಣೆ ಯಂದು ತನ್ನ ಪ್ರೀತಿಯನ್ನು ರಾಧಳೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿ, ಅವಳನ್ನು ಅಂದು ಭೇಟಿ ಮಾಡಲು ಹೊರಟ.
ಅಂದು ಮಾಧವ ಆಫೀಸ್ ಗೆ ಹೋದ ಕೂಡಲೇ, ಸಾಯಂಕಾಲದ ಪ್ರೋಗ್ರಾಂ ಅನ್ನು ಅವಳಿಗೆ ತಿಳಿಸಲು ಅವಳ ಸೀಟ್ ಹತ್ತಿರ ಹೋದಾಗ, ರಾಧಿಕಾಳ ಕೈಯಲ್ಲಿದ್ದ ಸ್ವೀಟ್ ಡಬ್ಬವನ್ನು ನೋಡಿ ಅವನಿಗೆ ಆಶ್ಚರ್ಯವಾಯಿತು. ಇವನನ್ನು ನೋಡುತ್ತಲೇ, ರಾಧಾ, ಇವನು ಮುಂದೆ ಸ್ವೀಟ್ ಬಾಕ್ಸ್ ಹಿಡಿದು, ತನ್ನ ಎಂಗೇಜ್ಮೆಂಟ್ ವಿಷಯ ತಿಳಿಸಿದಾಗ, ಮಾಧವನ ಕೈಯಲ್ಲಿದ್ಧ ಪೇಡಾ ಕೆಳಗೆ ಬಿದ್ದು ಹೋಗಿತ್ತು.
ಅವಳಿಗೆ ಕಂಗ್ರಾಟ್ಸ್ ಹೇಳುವುದನ್ನೂ ಮರೆತು, ಭಾರವಾದ ಹೃದಯದಿಂದ ನಿಧಾನವಾಗಿ ತನ್ನ ಸೀಟ್ ನಲ್ಲಿ ಬಂದು ಕುಳಿತ.
